ಬೆಂಗಳೂರು,ನವೆಂಬರ್,30,2023(www.justkannada.in): ಜನರ ಅನುಕೂಲಕ್ಕಾಗಿ ಈ ವರ್ಷ ಹೆಚ್ಚುವರಿಯಾಗಿ 188 ಇಂದಿರಾ ಕ್ಯಾಂಟೀನ್ ಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ಶಾಸಕರ ಭವನ ಆವರಣದಲ್ಲಿ ಸಂತ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಂದಿರಾ ಕ್ಯಾಂಟೀನ್ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಬಗ್ಗೆ ಉತ್ತರಿಸಿ, ಬೆಂಗಳೂರಿನ 225 ವಾರ್ಡ್ ಗಳಲ್ಲಿಯೂ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲಾಗುವುದು. ಇದಲ್ಲದೇ ಅಗತ್ಯವಿರುವೆಡೆ ಕ್ಯಾಂಟೀನ್ ಪ್ರಾರಂಭಿಸಲಾಗುವುದು. ಇಂದಿರಾ ಕ್ಯಾಂಟೀನ್ ಗೆ ಸ್ಥಳದ ಅಭಾವವಿರುವ ಕಡೆ ಮೊಬೈಲ್ ಕ್ಯಾಂಟೀನ್ ಗಳನ್ನು ಸ್ಥಾಪಿಸಲಾಗುವುದು ಎಂದರು.
ಕನಕದಾಸರು -ಸಮಸಮಾಜದ ಕನಸು ಕಂಡಿದ ದಾಸಶ್ರೇಷ್ಠ:
ಕನಕದಾಸರು ಸಮಾಜಸುಧಾರಕರಾಗಿದ್ದರು. ಅವರ ಸಾಹಿತ್ಯದ ಮೂಲಕ ಮನುಷ್ಯತ್ವವನ್ನು ಸಾರಿದರು. ಇಡೀ ಜಾತ್ಯಾತೀತವಾದ, ಮೇಲು ಕೀಳು ಬೇಧಭಾವವಿಲ್ಲದ ಸಮಸಮಾಜ ನಿರ್ಮಿಸಲು ಶ್ರಮಿಸಿದ ವಿಶ್ವಮಾನವ. ರಾಮಧಾನ್ಯ ಚರಿತೆ, ಮೋಹನತರಂಗಿಣಿ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದವರು. ಸಮಾಜದ ತಾರತಮ್ಯ ಹೋಗಲಾಡಿಸಲು ಹೋರಾಡಿದ ದಾಸಶ್ರೇಷ್ಠರ ದಿನವನ್ನು ಸರ್ಕಾರ ಇಂದು ಆಚರಿಸುತ್ತಿದೆ. ಸಾಹಿತ್ಯದ ಮೂಲಕ ತಮ್ಮ ಆದರ್ಶಗಳನ್ನು ಜನರಿಗೆ ತಿಳಿಹೇಳಿ ಜಾಗೃತಿ ಮೂಡಿಸಿದ್ದರು. ಜನರಿಗೆ ಅರ್ಥವಾಗುವ ಸರಳಭಾಷೆಯಲ್ಲಿ ತಮ್ಮ ದಾಸಸಾಹಿತ್ಯವನ್ನು ರಚಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನಾಡಿನ ಎಲ್ಲ ಜನತೆಗೆ ಕನಕದಾಸ ಜಯಂತಿಯ ಶುಭಾಶಯಗಳನ್ನು ಕೋರಿದರು.
ಶಾಸಕ ಬಿ.ಆರ್.ಪಾಟೀಲ್ ಅವರನ್ನು ಮುಖ್ಯಮಂತ್ರಿಗಳು ಭೇಟಿಯಾಗಿರುವ ಬಗ್ಗೆ ಕೇಳಿದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಬಿ.ಆರ್.ಪಾಟೀಲ್ ಅವರೊಂದಿಗೆ ಚರ್ಚಿಸಲಾಗಿತ್ತು, ಅವರು ಅಧಿವೇಶನಕ್ಕೆ ಆಗಮಿಸಲು ಮನವೊಲಿಸಿರುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.
ನಿಮಾನ್ಸ್ ನಲ್ಲಿ ರೋಗಿಗಳಿಗೆ ಸರಿಯಾದ ಚಿಕಿತ್ಸಾ ವ್ಯವಸ್ಥೆಯಿಲ್ಲದೇ ರೋಗಿಯೊಬ್ಬರ ಸಾವು ಸಂಭವಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ನಿಮಾನ್ಸ್ ನಿರ್ದೇಶಕರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
Key words: open-additional -188 Indira Canteens – CM- Siddaramaiah