ಮೈಸೂರು,ಡಿಸೆಂಬರ್,10,2020 : ಇಂದು ಎಲ್ಲಾ ಕ್ಷೇತ್ರಗಳಲ್ಲೂ ವಿಫುಲ ಉದ್ಯೋಗಾವಕಾಶಗಳಿವೆ. ಆದರೆ, ಆ ಉದ್ಯೋಗ ಪಡೆಯಲು ಕೌಶಲ್ಯಯುತ ಅಭ್ಯರ್ಥಿಗಳ ಕೊರತೆಯಿದೆ. ಹೀಗಾಗಿ ಯುವಕರು ಕೌಶಲ್ಯಯುತ ಶಿಕ್ಷಣ ಪಡೆಯುವ ಅಗತ್ಯವಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ಕುಮಾರ್ ತಿಳಿಸಿದರು.
ನಗರದ ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಕಾಲೇಜಿನಲ್ಲಿ ಪದವಿ ವಿಭಾಗಕ್ಕೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅಭಿವಿನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಎಲ್ಲರಿಗೂ ಶಿಕ್ಷಣವನ್ನಾಗಲೀ ಉದ್ಯೋಗವನ್ನಾಗಲೀ ಕೊಡಲು ಸಾಧ್ಯವಿಲ್ಲ. ಸುತ್ತೂರು ಶ್ರೀಮಠ ಒಳಗೊಂಡಂತೆ ಅನೇಕ ಮಠಗಳು ಈ ದಿಸೆಯಲ್ಲಿ ತಮ್ಮ ಅಮೂಲ್ಯ ಸೇವೆ ಸಲ್ಲಿಸುತ್ತಿವೆ. ಸುತ್ತೂರು ಮಠದ ಸಂಸ್ಥೆಗಳಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಿದೆ ಎಂದರು.
ಜೆಎಸ್ಎಸ್ ಕಾಲೇಜು ಇಂದಿನ ಅಗತ್ಯಕ್ಕೆ ತಕ್ಕಂತೆ ವೈವಿಧ್ಯಮಯವಾದ ಅದರಲ್ಲಿಯೂ ಕೌಶಲ್ಯಯುತವಾದ ಕೋರ್ಸುಗಳನ್ನು ನಡೆಸುತ್ತಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಮುಖ್ಯವಾಗಿ ಇಂದಿನ ವಿದ್ಯಾರ್ಥಿಗಳು ಕೌಶಲ್ಯಯುತ ಶಿಕ್ಷಣ ಹೊಂದಿ ಹೊರ ಬರಬೇಕು. ಗುರಿ ಇಟ್ಟುಕೊಂಡು ಅದನ್ನು ಸಾಕಾರಗೊಳಿಸಲು ಶ್ರಮಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಮಾತನಾಡಿ, ರಾಜೇಂದ್ರಶ್ರೀಗಳು ಅಪಾರ ದೂರದೃಷ್ಟಿಯುಳ್ಳವರಾಗಿದ್ದರು. ಸುತ್ತೂರು ಶ್ರೀಮಠ ಇಂದು ಸಲ್ಲಿಸುತ್ತಿರುವ ಕಲೆ, ಸಾಹಿತ್ಯ, ಆಧ್ಯಾತ್ಮ, ಸಾಮಾಜಿಕ, ಆರೋಗ್ಯ ಮೊದಲಾದ ಸೇವಾ ಕ್ಷೇತ್ರಗಳಿಗೆ ಭದ್ರ ಬುನಾದಿ ಹಾಕಿದರು ಎಂದರು.
ಮುಂದಿನ ಕಾಲಘಟ್ಟ ಹಲವು ಬದಲಾವಣೆಗಳಿಗೆ ಸಾಕ್ಷಿಯಾಗಬಹುದು. ಅದಕ್ಕೆ ತಕ್ಕಂತೆ ನೀವೂ ಕೂಡ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದು ಉನ್ನತ ಶಿಕ್ಷಣದಿಂದ ಮಾತ್ರ ಸಾಧ್ಯ. ನಿಮ್ಮಲ್ಲಿರುವ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಾಲೇಜು ಸಮುಚ್ಚಯದ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ, ಪ್ರಾಂಶುಪಾಲ ಡಾ.ಹೆಚ್.ಸಿ.ಹೊನ್ನಪ್ಪ, ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಪ್ರೊ.ಪೂರ್ಣಿಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.