ಬೆಂಗಳೂರು,ಸೆಪ್ಟಂಬರ್,24,2020(www.justkannada.in): ರಾಜ್ಯ ಸರ್ಕಾರವು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವ ಸಂಬಂಧ ರೈತರು ಹಾಗೂ ರೈತಪರ ಸಂಘಟನೆಗಳು ದಿನಾಂಕ:28.09.2020 ರಂದು ರಾಜ್ಯಾದ್ಯಂತ ಮುಷ್ಕರ ಹಮ್ಮಿಕೊಂಡಿರುವುದು ಮಾದ್ಯಮದ ಮೂಲಕ ತಿಳಿದುಬಂದಿದೆ. ಈ ಮುಷ್ಕರಕ್ಕೆ ಕರ್ನಾಟಕ ರಾಜ್ಯ ಲಾರಿ ಮಾಲೀಕರ ಹಾಗೂ ಏಜೆಂಟ್ಸ್ ಅಸೋಸಿಯೇಷನ್ ಸಹ ಸಂಪೂರ್ಣ ಬೆಂಬಲ ಘೋಷಿಸಿರುವುದಾಗಿ ತಿಳಿದುಬಂದಿದೆ.
ರಾಜ್ಯ ಎಪಿಎಂಸಿ ಕಾಯ್ದೆ ತಿದ್ದುಪಡಿ ತಂದಿರುವುದರಿಂದ ಎಪಿಎಂಸಿ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದಲ್ಲದೇ ಬಹು ರಾಷ್ಟ್ರೀಯ ಕಂಪನಿಗಳು ರೈತರ ಉತ್ಪನ್ನಗಳನ್ನು ಮಾರಾಟ ಮಾಡುವಲ್ಲಿ ಪೈಪೋಟಿ ಏರ್ಪಡಿಸಬಹುದೆಂದು ಅಂದಾಜಿಸಿ ಈ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಸರ್ಕಾರವು ರೈತರ ಹಾಗೂ ವರ್ತಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಬಹುದಿನಗಳ ಬೇಡಿಕೆಯಾದ ಎಪಿಎಂಸಿ ಸೆಸ್ ಶೇ 1.5 ರಿಂದ ಶೇ. 0.35ಗೆ ಇಳಿಸಿದುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಸರ್ಕಾರವು ರೈತರಿಗಾಗಲೀ ಅಥವಾ ವರ್ತಕರಿಗಾಗಲೀ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ.
ರಾಜ್ಯವು ಕೋವಿಡ್-19 ಸತತ ಲಾಕ್ ಡೌನ್ ನಿಂದಾಗಿ ರಾಜ್ಯ ಆರ್ಥಿಕ ಪರಿಸ್ಥಿತಿ ನಲುಗಿದ್ದು, ಸುಧಾರಿಸಿಕೊಳ್ಳಲು ಬಹಳಷ್ಟು ಸಮಯಾವಕಾಶ ಬೇಕಾಗಿದೆ. ಇಂಥಹ ಸಂದರ್ಭದಲ್ಲಿ ಮುಷ್ಕರ ಕೈಗೊಂಡಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆಯಲ್ಲದೇ, ಸಾರ್ವಜನಿಕರಿಗೆ ಅನಾನುಕೂಲವಾಗಲಿದೆ.
ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವ ಸಂಬಂಧ ಪರ ಹಾಗೂ ವಿರೋಧದ ಅಭಿಪ್ರಾಯಗಳು ಈಗಾಗಲೇ ಮಾದ್ಯಮದಲ್ಲಿ ವ್ಯಕ್ತವಾಗುತ್ತಿದ್ದು, ಸರ್ಕಾರದೊಂದಿಗೆ ಮುಖಾಮುಖಿ ಚರ್ಚಿಸಿ ರೈತರ ಹಾಗೂ ವರ್ತಕರ ಹಿತದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ಚರ್ಚಿಸುವುದು ಸೂಕ್ತವೆಂದು ಎಫ್.ಕೆ.ಸಿ.ಸಿ.ಐ ಸಿ ಅಧ್ಯಕ್ಷ ಆರ್ ಜನಾರ್ಧನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
key words: Opposition – APMC Act- Strike – FKCCC President- r janardhan