ಮೈಸೂರು,ಜನವರಿ,30,2021(www.justkannada.in): ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಅನ್ನದಾತರ ಪ್ರತಿಭಟನೆ ಮುಂದುವರೆದಿದ್ದು, ಮೈಸೂರಿನಲ್ಲಿ ರೈತರು ಮೌನ ಪ್ರತಿಭಟನೆ, ಉಪವಾಸ ಸತ್ಯಾಗ್ರಹ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತ ವಿರೋಧಿ ಕಾಯ್ದೆ ವಿರೋಧಿಸಿ ಮೈಸೂರಿನ ಗಾಂಧಿವೃತ್ತದಲ್ಲಿ ರೈತ ಮುಖಂಡ ಹೊಸಕೋಟೆ ಬಸವರಾಜು ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ದಲಿತ ಸಂಘರ್ಷ ಸಮಿತಿ, ಸಂವಿಧಾನ ರಕ್ಷಣಾ ವೇದಿಕೆ ಬೆಂಬಲ ವ್ಯಕ್ತಪಡಿಸಿವೆ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು, ದೆಹಲಿ ಗಲಭೆಗೆ ಕೇಂದ್ರ ಸರ್ಕಾರವೇ ಹೊಣೆ, ರೈತರ ಹೆಸರಿಗೆ ಮಸಿ ಬಳಿಯಲು ಷಡ್ಯಂತ್ರ ನಡೆಸಿದೆ ಎಂದು ಆರೋಪಿಸಿದರು.
ರೈತ ವಿರೋಧಿ ಕಾಯ್ದೆ ವಿರೋಧಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ನ್ಯಾಯಾಲಯದ ಗಾಂಧಿ ಪುತ್ಥಳಿ ಬಳಿ ಮೌನ ಪ್ರತಿಭಟನೆ ನಡೆಸಲಾಯಿತು
ಕಣ್ಣಿಗೆ ಪಟ್ಟಿ ಧರಿಸಿ ಕೇಂದ್ರ ಸರ್ಕಾರದ ವಿರುದ್ದ ಫಲಕಗಳ ಪ್ರದರ್ಶನ ಮಾಡುವ ಮೂಲಕ ಧರಣಿ ನಡೆಸಿದರು.
ರೈತರ ಹೋರಾಟಕ್ಕೆ ಜಯವಾಗಲಿ. ರೈತರ ಚಳುವಳಿ ದಮನಕ್ಕೆ ಧಿಕ್ಕಾರ. ರೈತರ ಹೋರಾಟಕ್ಕೆ ಕಪ್ಪು ಮಸಿ ಬಳಿಯಬೇಡಿ. ಮಹಾತ್ಮ ಗಾಂಧಿ ಹಾಕಿ ಕೊಟ್ಟ ಮಾರ್ಗದಲ್ಲಿ ರೈತರ ಹೋರಾಟ ಎಂಬ ಹಲವು ನಾಮಫಲಕ ಪ್ರದರ್ಶನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
Key words: Opposition – Central -Agricultural Act-Silent protest – farmers – Mysore