ಮೈಸೂರು,ಜೂ,23,2020(www.justkannada.in): ಕೆಆರ್ ಎಸ್ ನಲ್ಲಿ ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣದ ಸರ್ಕಾರದ ನಿರ್ಧಾರ ವಿರೋಧಿಸಿ ಜೂನ್ 30 ರಂದು ಕರ್ನಾಟಕ ಸಂಘ ಅಧ್ಯಕ್ಷ ಪ್ರೊ. ಜಯಪ್ರಕಾಶ್ ಗೌಡ ಮತ್ತು ಏಕ ಪ್ರತಿಮೆ ಸಮಿತಿ ವತಿಯಿಂದ ಸಾಂಕೇತಿಕ ಪ್ರತಿಭಟನೆ ನಡೆಯಲಿದೆ.
ಕೆಆರ್ಎಸ್ ನಲ್ಲಿ ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣದ ಸರ್ಕಾರದ ನಿರ್ಧಾರ ವಿರೋಧಿಸಿ ನಗರದ ಜಲದರ್ಶಿನಿಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಏಕಪ್ರತಿಮೆ ಹೋರಾಟ ಸಮಿತಿ ವತಿಯಿಂದ ಸಭೆ ನಡೆಯಿತು. ನಾವು ವಿಶ್ವೇಶ್ವರಯ್ಯ ವಿರೋಧಿಗಳಲ್ಲ, ನಾಲ್ವಡಿಯವರ ಪಕ್ಕ ಅವರ ಪ್ರತಿಮೆ ನಿರ್ಮಾಣಕ್ಕಷ್ಟೇ ನಮ್ಮ ವಿರೋಧ. ಸರ್ಕಾರ ವಿಶ್ವೇಶ್ವರಯ್ಯನವರ ಪ್ರತಿಮೆಗೆ ಮುಂದಾದರೆ ಹೋರಾಟ ಮುಂದುವರೆಯುತ್ತದೆ. ಕೆಆರ್ ಎಸ್ ಗೆ ನಾಲ್ವಡಿಯವರ ಹೆಸರಿದೆಯೇ ಹೊರತು ವಿಶ್ವೇಶ್ವರಯ್ಯ ಎಂಬ ಹೆಸರಿಲ್ಲ. ವಿಶ್ವೇಶ್ವರಯ್ಯನವರ ಸಾಧನೆ ಬಗ್ಗೆ ವಿಶ್ವೇಶ್ವರಯ್ಯ ನಾಲೆ ಎಂದು ಹೆಸರಿದೆ. ಆದ್ದರಿಂದ ನಾಲ್ವಡಿಯವರ ಪಕ್ಕದಲ್ಲಿ ವಿಶ್ವೇಶ್ವರಯ್ಯನವರ ಪ್ರತಿಮೆ ನಿಲ್ಲಿಸುವ ಅವಶ್ಯಕತೆ ಇಲ್ಲ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಹಾಗೆಯೇ ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣವನ್ನು ವಿರೋಧಿಸಿ ಜೂನ್ 30 ರ ಬೆಳಗ್ಗೆ11 ಗಂಟೆಗೆ ಕೆ.ಆರ್.ಎಸ್ ಅಣೆಕಟ್ಟೆ ಬಳಿ ಕರ್ನಾಟಕ ಸಂಘ ಅಧ್ಯಕ್ಷ ಪ್ರೊ. ಜಯಪ್ರಕಾಶ್ ಗೌಡ ಮತ್ತು ಏಕ ಪ್ರತಿಮೆ ಸಮಿತಿ ವತಿಯಿಂದ ಸಾಂಕೇತಿಕ ಪ್ರತಿಭಟನೆ ನಡೆಸಲು ಸಭೆಯಲ್ಲಿ ತೀರ್ಮಾನ ಮಾಡಲಾಯಿತು.
ಸಭೆಯಲ್ಲಿ ಪ್ರೊ. ನಂಜರಾಜ ಅರಸ್, ರೈತ ಸಂಘದ ಅಶ್ವತ್ ನಾರಾಯಣ್ ಅರಸ್, ಬಸವರಾಜು, ಮಾಜಿ ಮೇಯರ್ ಪುರೋಷತ್ತಮ್, ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಅರವಿಂದ್ ಶರ್ಮ ಸೇರಿದಂತೆ ಇತರರು ಭಾಗಿಯಾಗಿದ್ದರು.
Key words: Opposition – construction – statue -Vishweshwaraiah – KRS-protest – 30 June.