ಮಂಡ್ಯ,ಮಾರ್ಚ್,5,2024(www.justkannada.in): ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ವಿರೋಧಿಸಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ ಎಸ್ ಜಲಾಶಯದ ಬೃಂದಾವನ ಗೇಟ್ ಬಳಿ ರೈತಸಂಘ ಮತ್ತು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ಇಂದಿನಿಂದ ನಾಲ್ಕು ದಿನ ಟ್ರಯಲ್ ಬ್ಲಾಸ್ಟ್ ಗೆ ನಡೆಯಲಿದ್ದು, ಈ ಸಂಬಂಧ ಹೊರ ರಾಜ್ಯದಿಂದ ತಜ್ಞರ ತಂಡ ಆಗಮಿಸಿದೆ. ಗಣಿಗಾರಿಕೆಯಿಂದ ಕೆಆರ್ಎಸ್ಗೆ ಡ್ಯಾಂಗೆ ಹಾನಿಯಾಗುತ್ತದೆ ಎಂದು ಹಲವು ಹೋರಾಟಗಳು ನಡೆದ ಪರಿಣಾಮ ಹಿಂದಿನ ಬಿಜೆಪಿ ಸರ್ಕಾರ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ನಿಷೇಧಿಸಿತ್ತು. ಬೇಬಿ ಬೆಟ್ಟ ಸೇರಿದಂತೆ ಕೆಆರ್ಎಸ್ ಡ್ಯಾಂನ 20 ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಲಾಗಿತ್ತು.
ಇದಾದ ಬಳಿಕ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ನಡೆಯಬೇಕೋ ಬೇಡವೋ, ಬೇಬಿ ಬೆಟ್ಟದ ಗಣಿಗಾರಿಕೆಯಿಂಧ ಕೆಆರ್ಎಸ್ ಅಣೆಕಟ್ಟೆಗೆ ಹಾನಿಯಾಗುತ್ತಾ ಎಂದು ತಿಳಿಯಲು ಮಾಡುವ ಉದ್ದೇಶದಿಂದ ಹೈಕೋರ್ಟ್ ಟ್ರಯಲ್ ಬ್ಲಾಸ್ಟ್ ನಡೆಸಲು ಆದೇಶ ನೀಡಿದೆ. ಹೀಗಾಗಿ ರಾಜ್ಯ ಸರ್ಕಾರ ಇಂದಿನಿಂದ 4 ದಿನ ಟ್ರಯಲ್ ಬ್ಲಾಸ್ಟ್ ನಡೆಸಲಿದೆ.
ಹೀಗಾಗಿ ಕೆಆರ್ ಎಸ್ ಡ್ಯಾಮ್ ನ ಬೃಂದಾವನ ಗೇಟ್ ಬಳಿ ರೈತ ಸಂಘ ಮತ್ತು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಬೃಂದಾವನಕ್ಕೆ ನುಗ್ಗಲು ಯತ್ನಿಸಿದ್ದಾರೆ. ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಈ ವೇಳೆ ರೈತ ಸಂಘಟನೆ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದಾರೆ.
ಟ್ರಯಲ್ ಬ್ಲಾಸ್ಟ್ ಗೆ ಆಗಮಿಸಿರುವ ತಜ್ಞರನ್ನು ವಾಪಸ್ ಕಳುಹಿಸಬೇಕು. ಈ ಟ್ರಯಲ್ ಬ್ಲಾಸ್ಟ್ ಮಾಡುವಾಗ ಕಡಿಮೆ ಸ್ಫೋಟಕ ಬಳಸಿ ಬ್ಲಾಸ್ಟ್ ಮಾಡಿ ಕೆಆರ್ ಎಸ್ ಗೆ ತೊಂದರೆ ಆಗಲ್ಲ ಎಂದು ವರದಿ ನೀಡುತ್ತಾರೆ. ಬಳಿಕ ಬೆಟ್ಟದಲ್ಲಿ ಮತ್ತೆ ಗಣಿಗಾರಿಕೆ ಆರಂಭವಾಗಿ ಅಪಾರ ಪ್ರಮಾಣದ ಸ್ಫೋಟಕ ಬಳಸಿ ಬ್ಲಾಸ್ಟ್ ಮಾಡುತ್ತಾರೆ. ಇದರಿಂದ ಕೆಆರ್ ಎಸ್ ಗೆ ಹಾನಿಯಾಗುತ್ತದೆ. ಹೀಗಾಗಿ ಟ್ರಯಲ್ ಬ್ಲಾಸ್ಟ್ ಮಾಡಬಾರದು ಎಂದು ರೈತ ಸಂಘ ಹಾಗೂ ಬಿಜೆಪಿ ಆಗ್ರಹಿಸಿದೆ.
Key words: Opposition – trail blast -Baby hills- Protest-near- KRS.