ಬೆಂಗಳೂರು, ಅಕ್ಟೋಬರ್ 6,2021 (www.justkannada.in): ರಾಜ್ಯದ ಸುಮಾರು 1.76 ಕೋಟಿಗೂ ಅಧಿಕ ಸಂಖ್ಯೆಯ ವಾಹನಗಳಿಗೆ ಉನ್ನತ ಭದ್ರತಾ ನೋಂದಣಿ ಪ್ಲೇಟ್ ಗಳನ್ನು (high security registration plates (HSRP)) ಸರಬರಾಜು ಮಾಡಲು ಸಾರಿಗೆ ಇಲಾಖೆ ಒಂದೇ ಏಜೆನ್ಸಿಗೆ ಗುತ್ತಿಗೆ ನೀಡಲು ಯೋಜಿಸಿದೆ.
ಸಾಮಾನ್ಯವಾಗಿ ಸರ್ಕಾರದ ಯಾವುದೇ ಕಾಮಗಾರಿ ಅಥವಾ ಯೋಜನೆಗಳಿಗೆ ಈ ರೀತಿಯ ವಸ್ತುಗಳನ್ನು ಖರೀದಿಸುವಾಗ ಗುತ್ತಿಗೆಯನ್ನು ವಿಭಜಿಸಿ ವಿವಿಧ ಏಜೆನ್ಸಿಗಳಿಗೆ ನೀಡುವುದು ವಾಡಿಕೆ. ಇದರಿಂದ ದರ ಹಾಗೂ ಸೇವೆಯ ಗುಣಮಟ್ಟ ಎರಡರಲ್ಲೂ ಆರೋಗ್ಯಕರವಾದ ಸ್ಪರ್ಧೆಯನ್ನು ಖಾತ್ರಿಪಡಿಸಬಹುದು. ಆದರೆ ಸಾರಿಗೆ ಇಲಾಖೆಯ ಈ ನಿರ್ಧಾರದಿಂದಾಗಿ ವಾಹನಗಳ ಮಾಲೀಕರು ದುಬಾರಿ ಬೆಲೆಯನ್ನು ತೆರಬೇಕಾಗಬಹುದು.
ಇತ್ತೀಚೆಗೆ ಈ ಹೆಚ್ ಎಸ್ ಆರ್ ಪಿಗೆ ಸಂಬಂಧಿಸಿದಂತೆ ಇಲಾಖೆಯು ಅಂದಾಜು ರೂ.1000 ಕೋಟಿಯ ಗುತ್ತಿಗೆಯ ಟೆಂಡರ್ ಅನ್ನು ಕರೆದಿದ್ದು, ಇಡೀ ಯೋಜನೆಯ ಗುತ್ತಿಗೆಯನ್ನು ಒಂದೇ ಸಂಸ್ಥೆಗೆ ನೀಡುವ ನಿರ್ಧಾರದಿಂದ ಏಕಸ್ವಾಮ್ಯತೆಗೆ ದಾರಿಯಾಗಬಹುದು ಎಂಬ ಭಯ ಎದುರಾಗಿದೆ. ರಾಜ್ಯದಲ್ಲಿ ಮಾರ್ಚ್ 31, 2019ಕ್ಕೂ ಮುಂಚೆ ನೋಂದಣಿ ಆಗಿರುವ ಎಲ್ಲಾ ವಾಹನಗಳೂ ಸಹ ಮುಂದಿನ ಮೂರು ವರ್ಷಗಳಲ್ಲಿ ಕಡ್ಡಾಯವಾಗಿ ಹಳೆಯ ಸಂಖ್ಯಾ ಫಲಕದ ಜಾಗದಲ್ಲಿ ಈ ನಕಲಿಯನ್ನು ತಡೆಗಟ್ಟುವಂತಹ ಹೆಚ್‌ಎಸ್‌ಆರ್‌ಪಿ ಅನ್ನು ಅಳವಡಿಸಬೇಕಾಗಿದೆ.
ಒಂದು ವೇಳೆ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಈ ರೀತಿಯ ಹೆಚ್‌ಎಸ್‌ಆರ್‌ಪಿ ಪ್ಲೇಟ್‌ಗಳು ಲಭ್ಯವಿದ್ದರೂ ಸಹ ಜನರು ಅಲ್ಲಿಂದ ಕೊಳ್ಳುವಂತಿರುವುದಿಲ್ಲ. ಸಾರಿಗೆ ಇಲಾಖೆಯ ಪ್ರಕಾರ ರಾಜ್ಯದ ಎಲ್ಲಾ ೧.೭೬ ಕೋಟಿ ವಾಹನಗಳಿಗೂ ಸಹ ಹೆಚ್‌ಎಸ್‌ಆರ್‌ಪಿ ಪ್ಲೇಟ್‌ಗಳನ್ನು ಅಳವಡಿಸುವ ಹಕ್ಕು ಕೇವಲ ಒಂದೇ ಆಯ್ದ ಸಂಸ್ಥೆ/ ಏಜೆನ್ಸಿಗೆ ಇರಲಿದೆ. ಅದೇ ಸಂಸ್ಥೆ ನಿಗಧಿತ ಸೇವಾ ಶುಲ್ಕವನ್ನು ಪಡೆದು ರಾಜ್ಯದ ಎಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿಯೂ (ಆರ್‌ಟಿಒಗಳು) ಸಹ ಈ ಹೆಚ್‌ಎಸ್‌ಆರ್‌ಪಿ ಅಳವಡಿಸುವ ಸೌಲಭ್ಯವನ್ನು ಸ್ಥಾಪಿಸಲಿದೆಯಂತೆ.
ಪ್ರಸ್ತುತ ಮುಕ್ತ ಮಾರುಕಟ್ಟೆಯಲ್ಲಿ ಈ ಹೆಚ್‌ಎಸ್‌ಆರ್‌ಪಿ ರೂ.೫೦೦ ರಿಂದ ರೂ.೧,೦೦೦ದ ನಡುವೆ ಮಾರಾಟವಾಗುತ್ತಿದೆ. ಇದರಲ್ಲಿ ಕ್ರೋಮಿಯಂ ಆಧಾರಿತ ಹೊಲೊಗ್ರಾಂ ಇರುತ್ತದೆ. ಅದನ್ನು ವಾಹನಗಳ ಹಿಂಭಾಗ ಹಾಗೂ ಮುಂಭಾಗಗಳಲ್ಲಿ ಅಳವಡಿಸುವ ಎರಡೂ ನಂಬರ್ ಪ್ಲೇಟ್ ಗಳ ಮೇಲೆ, ನಕಲು ಮಾಡುವುದು ಸಾಧ್ಯವಾಗದಿರುವಂತೆ ಲೇಸರ್ ಬ್ರ್ಯಾಂಡಿಂಗ್ ಮೂಲಕ ಶಾಶ್ವತ ಗುರುತನ್ನು ಮೂಡಿಸುವುದರ ಜೊತೆಗೆ hot stamping ವಿಧಾನದ ಮೂಲಕ ಅಳವಡಿಸಲಾಗುತ್ತದೆ.
ಈ ಬಗ್ಗೆ ಮಾತನಾಡಿದ ಹೆಚ್ಚುವರಿ ಸಾರಿಗೆ ಆಯುಕ್ತ ನರೇಂದ್ರ ಹೋಲ್ಕರ್ ಅವರು, “ನಾವು ರಾಜ್ಯದಲ್ಲಿ ಹೆಚ್ ಎಸ್ ಆರ್‌ಪಿ ಅನ್ನು ಪರಿಚಯಿಸುವ ಆರಂಭಿಕ ಹಂತದಲ್ಲಿದ್ದೇವೆ. ಹೆಚ್‌ಎಸ್‌ಆರ್‌ಪಿ ಅಳವಡಿಸಲು ಗ್ಲೋಬಲ್ ಟೆಂಡರ್ ಹೊರಡಿಸಿದ್ದು, ಅತೀ ಕಡಿಮೆ ದರವನ್ನು ನಮೂದಿಸುವ ಬಿಡ್ಡರ್ ಅನ್ನು ಆಯ್ಕೆ ಮಾಡುತ್ತೇವೆ,” ಎಂದು ತಿಳಿಸಿದರು. “ಇದಕ್ಕಾಗಿ ಗುತ್ತಿಗೆಯನ್ನು ಹಲವು ಪ್ಯಾಕೇಜ್ ಗಳಲ್ಲಿ ವಿಭಜಿಸುವ ಅಗತ್ಯವಿಲ್ಲ. ನಾವು ಹೊರಡಿಸಿರುವ ಟೆಂಡರ್ ಅತ್ಯಂತ ಸ್ಪರ್ಧಾತ್ಮಕ ಬಿಡ್ ಆಗಿದೆ,” ಎಂದರು.
ಏಕಸ್ವಾಮ್ಯತೆ
ಸಾರಿಗೆ ಇಲಾಖೆಯ ಈ ನಡೆಯಿಂದಾಗಿ ವಾಹನಗಳಿಗೆ ಹೆಚ್ ಎಸ್ ಆರ್‌ಪಿ ಸರಬರಾಜು ಮಾಡುವಾಗ ಏಕಸ್ವಾಮ್ಯತೆಯ (monopoly) ಪ್ರಶ್ನೆ ಉದ್ಭವಿಸುತ್ತದೆ ಎನ್ನುವುದು ಭಾಗೀದಾರರ ಪ್ರಶ್ನೆಯಾಗಿದೆ. “ಈ ಯೋಜನೆಯ ಟೆಂಡರ್ ಅನ್ನು ರಾಜ್ಯದ ವಿವಿಧೆಡೆಗಳಲ್ಲಿ ಮೂರು ಅಥವಾ ನಾಲ್ಕು ಪ್ಯಾಕೇಜ್ ಗಳಲ್ಲಿ ವಿಭಜಿಸಬೇಕಿತ್ತು. ಒಬ್ಬರೇ ಗುತ್ತಿಗೆದಾರರಿಗೆ ಗುತ್ತಿಗೆ ನೀಡುವುದರಿಂದ ಏಕಸ್ವಾಮ್ಯತೆ ಉದ್ಭವಿಸುತ್ತದೆ,” ಎನ್ನುತ್ತಾರೆ ಕರ್ನಾಟಕ ರಾಜ್ಯ ಪ್ರವಾಸ ಸೇವಾದಾರರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ.
“ಇಲಾಖೆ ಈ ರೀತಿ ಯೋಜನೆಯ ಗುತ್ತಿಗೆಯನ್ನು ಒಬ್ಬರೇ ಗುತ್ತಿಗೆದಾರರಿಗೆ ನೀಡುತ್ತಿರುವುದು ಇದೇ ಮೊದಲಲ್ಲ. ಸ್ಮಾರ್ಟ್ ಕಾರ್ಡುಗಳು ಹಾಗೂ ಫಿಟ್ನೆಸ್ ಪ್ರಮಾಣಪತ್ರಗಳನ್ನು ನೀಡುವ ಸ್ವಯಂಚಾಲಿತ ವ್ಯವಸ್ಥೆಯಲ್ಲಿಯೂ ಸಹ ಇದೇ ರೀತಿ ಪದ್ಧತಿಯನ್ನು ಅನುಸರಿಸಲಾಗಿತ್ತು,” ಎಂದರು.
ಕರ್ನಾಟಕ ರಾಷ್ಟç ಸಮಿತಿಯ ಸ್ಥಾಪಕ ರವಿ ಕೃಷ್ಣಾ ರೆಡ್ಡಿ ಅವರು ತಿಳಿಸಿದಂತೆ ಸಾರ್ವಜನಿಕರ ಹಣವನ್ನು ಲೂಟಿ ಹೊಡೆಯುವುದು ಎಲ್ಲಾ ಸರ್ಕಾರಗಳ ಗುರಿ ಹಾಗೂ ಉದ್ದೇಶವಾಗಿರುವಂತಿದೆ. “ಒಬ್ಬರೇ ಗುತ್ತಿಗೆದಾರರಿಗೆ ಗುತ್ತಿಗೆ ನೀಡುವುದು ಹಗರಣವಲ್ಲದೇ ಮತ್ತೇನೂ ಅಲ್ಲ. ಕಂಪನಿ ಒಂದು ನಂಬರ್ ಪ್ಲೇಟ್ ಗೆ ರೂ.೫೦೦ ಶುಲ್ಕ ನಿಗಧಿಪಡಿಸಿದರೂ ಸಹ ರೂ.೧,೦೦೦ ಕೋಟಿ ಆದಾಯ ಗಳಿಸುತ್ತದೆ. ಇಂತಹ ಸಂದರ್ಭದಲ್ಲಿ ಸೇವಾ ಗುಣಮಟ್ಟ ಹೇಗಿರುತ್ತದೆ ಎಂಬುದನ್ನು ನೀವೇ ಅಂದಾಜಿಸಬಹುದು. ಹಲವು ಏಜೆನ್ಸಿಗಳಿಗೆ ಗುತ್ತಿಗೆ ನೀಡಿದಾಗ ಮಾತ್ರ ಸೇವಾ ಗುಣಮಟ್ಟ ಹಾಗೂ ದರಗಳಲ್ಲಿ ಸ್ಪರ್ಧೆಯನ್ನು ಖಾತ್ರಿಪಡಿಸಬಹುದು,” ಎಂದರು.
ಕೆಲವು ವಾಹನಗಳು ಈಗಾಗಲೇ ‘IND ‘ ಗುರುತು ಇರುವಂತಹ ಹಚ್ ಎಸ್ ಆರ್‌ಪಿ ನಂಬರ್ ಪ್ಲೇಟುಗಳನ್ನೇ ಹೊಂದಿವೆ. “ನನ್ನ ಬಳಿ ಒಟ್ಟು ನಾಲ್ಕು ವಾಹನಗಳಿವೆ. ಈ ಎಲ್ಲಾ ವಾಹನಗಳಿಗೂ ‘IND’ ನಂಬರ್ ಪ್ಲೇಟ್‌ಗಳನ್ನು ಅಳವಡಿಸಲು ನಾನು ಈಗಾಗಲೇ ರೂ.೨,೫೦೦ ಖರ್ಚು ಮಾಡಿದ್ದೇನೆ. ನಗರದಲ್ಲಿ ಈ ರೀತಿಯ ಸೇವೆಗಳನ್ನು ಒದಗಿಸುವ ಹಲವಾರು ಸಂಸ್ಥೆಗಳಿದ್ದರೂ ಸಹ ಸಾರಿಗೆ ಇಲಾಖೆಯು ಈ ಕೆಲಸಕ್ಕೆ ಒಂದೇ ಏಜೆನ್ಸಿಯನ್ನು ಗುರುತಿಸಲು ನಿರ್ಧರಿಸುವುದು ಬಹಳ ಗೊಂದಲಮಯವಾಗಿದೆ,” ಎನ್ನುವುದು ಹೊಸಕೆರೆಹಳ್ಳಿಯ ನಿವಾಸಿ ಶಿವಪ್ರಸಾದ್ ಅವರ ಅಭಿಪ್ರಾಯವಾಗಿದೆ.
ಬಹುಪಾಲು ಸರ್ವೀಸ್ ಸ್ಟೇಷನ್ ಗಳೂ ಸಹ ಇಂತಹ ಸೇವೆಗಳನ್ನು ಒದಗಿಸುವಲ್ಲಿ ತೊಡಗಿಸಿಕೊಂಡಿವೆ. “ನನ್ನ ಕಾರ್ ಅನ್ನು ಸರ್ವೀಸ್ ಮಾಡಿಕೊಡುವ ಏಜೆನ್ಸಿಯ ಪ್ರತಿನಿಧಿಯೊಬ್ಬರು ರೂ.೧,೦೦೦ ದರದಲ್ಲಿ ಹೆಚ್‌ಎಸ್‌ಆರ್‌ಪಿ ಅನ್ನು ಅಳವಡಿಸಿಕೊಡುವುದಾಗಿ ತಿಳಿಸಿದರು. ಈಗ ಎಲ್ಲಾ ಕಡೆ ಇದರದ್ದೇ ಮಾತು ಕೇಳಿ ಬರುತ್ತಿರುವ ಕಾರಣದಿಂದಾಗಿ ನಾನು ಅದಕ್ಕೆ ಒಪ್ಪಿದೆ,” ಎನ್ನುತ್ತಾರೆ ಮಂಗಳೂರಿನ ನಿವಾಸಿ ನಿವೇದಿತಾ ರೈ.
ಸುದ್ದಿ ಮೂಲ: ಬೆಂಗಳೂರ್ ಮಿರರ್
Key words: Opposition -Transport Department- decision – lease -HSRP – single agency.