ಬೆಂಗಳೂರು,ಮಾರ್ಚ್,11,2023(www.justkannada.in): 2022-23 ನೇ ಸಾಲಿನಲ್ಲಿ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ನಿಗದಿಯಾಗಿದ್ದ ಮೌಲ್ಯಾಂಕನ ಕಾರ್ಯವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಮುಂದೂಡಿಕೆ ಮಾಡಿದೆ.
ಈ ಕುರಿತು ಆದೇಶ ಹೊರಡಿಸಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ, 2022-23ನೇ ಸಾಲಿನಲ್ಲಿ 5 ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳಿಗೆ ದಿನಾಂಕ:13.03.2023 ರಿಂದ ನಿಗದಿಪಡಿಸಲಾಗಿದ್ದ ಮೌಲ್ಯಾಂಕನವನ್ನು ಉಚ್ಚ ನ್ಯಾಯಾಲಯದ ಆದೇಶದಂತೆ ಮುಂದೂಡಲಾಗಿದೆ. ನ್ಯಾಯಾಲಯವು ಅನುಮತಿಸಿದಲ್ಲಿ ಈ ಮೌಲ್ಯಾಂಕನವನ್ನು ನಡೆಸುವ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ತಿಳಿಸಿದೆ.
2022-23ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5 ನೇ ತರಗತಿ ವಿದ್ಯಾರ್ಥಿಗಳಿಗೆ ದಿನಾಂಕ: 15.03.2023 ರಿಂದ 18.03.2023 ರವರೆಗೆ ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ದಿನಾಂಕ: 13.03.2023 ರಿಂದ 18.03.2023 ರವರೆಗೆ ಮೌಲ್ಯಾಂಕನವನ್ನು (SA-2) ನಡೆಸುವಂತೆ ಉಲ್ಲೇಖ (2) ರಲ್ಲಿ ತಿಳಿಸಲಾಗಿತ್ತು. ಆದರೆ ಉಲ್ಲೇಖ(3) ರನ್ವಯ ಮಾನ್ಯ ಉಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಸದರಿ ಮೌಲ್ಯಾಂಕನವನ್ನು ಮುಂದೂಡಲಾಗಿದೆ.
ಸದರಿ ಮೌಲ್ಯಾಂಕನಕ್ಕೆ ಸಂಬಂಧಿಸಿದಂತೆ ಪ್ರಶೋತ್ತರ ಪತ್ರಿಕೆಗಳು ಈಗಾಗಲೇ ಬ್ಲಾಕ್ ಹಂತಕ್ಕೆ ಸರಬರಾಜಾಗುತ್ತಿದ್ದು, ಗೌಪ್ಯ ಸಾಮಗ್ರಿಗಳನ್ನು ಸಂಬಂಧಿಸಿದ ಕ್ಷೇತ್ರಶಿಕ್ಷಣಾಧಿಕಾರಿಗಳು ಸ್ವೀಕರಿಸಿ, ಮುಂದಿನ ಆದೇಶದವರೆಗೆ ಭದ್ರತಾ ಕೊಠಡಿಯಲ್ಲಿ ಸುರಕ್ಷಿತವಾಗಿ ಸಂರಕ್ಷಿಸಲು ಈ ಮೂಲಕ ತಿಳಿಸಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಆದೇಶಿಸಿದೆ.
Key words: Postponement – evaluation work -scheduled – 5th and 8th class students.