ಹಾವೇರಿ,ಏಪ್ರಿಲ್,19,2021(www.justkannada.in): ಕೋವಿಡ್ ಮಹಾಮಾರಿ ಕುರಿತು ಜನರಿಗೆ ಮುನ್ನೆಚ್ಚರಿಕೆ ನೀಡುವುದು ನಮ್ಮ ಉದ್ದೇಶವಾಗಿರಬೇಕೇ ಹೊರತು ಕೋವಿಡ್ ಹೆಸರಿನಲ್ಲಿ ಹೆದರಿಸುವುದು ಬೆದರಿಸುವುದು ದಂಡ ಹಾಕುತ್ತೇವೆ ಎಂದು ಹೇಳುವುದು ಅಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್ ಮಹಾಮಾರಿ ಎರಡನೇ ಅಲೆಯು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಕೃಷಿ ಸಚಿವರೂ ಆಗಿರುವ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಹಿರೇಕೆರೂರಿನ ತಹಶೀಲ್ದಾರರ ಕಚೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಹೆ ಕೋವಿಡ್ ಪರಿಶೀಲನಾ ಸಭೆ ನಡೆಸಿದರು.
ಇತ್ತೀಚೆಗೆ ಕೋವಿಡ್ ಕೈಮೀರಿ ಪಸರಿಸುತ್ತಿದ್ದು, ಇದನ್ನು ನಿರ್ವಹಿಸುವುದು ಸರ್ಕಾರದ ಜೊತೆಗೆ ಜನರ ಕರ್ತವ್ಯವೂ ಆಗಿದೆ.ಸರ್ಕಾರದ ಜೊತೆಗೆ ಜನತೆ ಸ್ಪಂದಿಸುವುದು ಅತಿ ಮುಖ್ಯವಾಗಿದೆ. ಹೀಗಾಗಿ ಸರ್ಕಾರದ ನಿಯಮ ಮಾರ್ಗಸೂಚಿ ಹಾಗೂ ಕೋವಿಡ್ ಲಕ್ಷಣ,ಚಿಕಿತ್ಸೆ ಕುರಿತು ಜನರಲ್ಲಿ ಸ್ವಯಂ ಜಾಗೃತಿ ಮೂಡಿಸಲು ಅಧಿಕಾರಿಗಳು ಹೆಚ್ಚೆಚ್ಚು ಕಾರ್ಯಪ್ರವೃತ್ತರಾಗಬೇಕು. ಹೀಗಾಗಿ ಮಾಸ್ಕ್ ಧಾರಣೆ,ಸಾಮಾಜಿಕ ಅಂತರ, ಅನಾವಶ್ಯಕ ಸಭೆ ಸಮಾರಂಭ ಜನ ಸೇರುವುದು ಸೇರಿದಂತೆ ಕೋವಿಡ್ ಹರಡಲು ಸಹಕರಿಸುವುದೆಲ್ಲವನ್ನು ತಡೆಯಬೇಕು.ಈ ನಿಟ್ಟಿನಲ್ಲಿ ರಟ್ಟಿಹಳ್ಳಿ ಮತ್ತು ಹಿರೇಕೆರೂರು ಎರಡು ತಾಲ್ಲೂಕುಗಳಲ್ಲಿ ಅಧಿಕಾರಿಗಳೊಬ್ಬರ ನೇತೃತ್ವದಲ್ಲಿ ಸ್ಕ್ವಾರ್ಡ್ ರಚಿಸಬೇಕು. ಸಭೆ ಸಮಾರಂಭ ನಡೆಯುವ ಸ್ಥಳಗಳಲ್ಲಿ ಸೂಚನೆ ನೀಡಬೇಕು ಎಂದರು.
ಆಶಾ ಕಾರ್ಯಕರ್ತೆಯರು ಮನೆಮನೆಗೆ ಜಾಗೃತಿ ಮೂಡಿಸಬೇಕು. ಪೊಲೀಸ್, ಆರೋಗ್ಯ, ಶಿಕ್ಷಣ ಇಲಾಖೆ ಅಧಿಕಾರಿಗಳು ಸೇರಿದಂತೆ ತಾಲೂಕು ಆಡಳಿತ ವ್ಯವಸ್ಥೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಕಡ್ಡಾಯವಾಗಿ ಜನರು ಮಾಸ್ಕ್ ಧರಿಸುವಂತೆ ನೋಡಿಕೊಳ್ಳಬೇಕು. ಮತಕ್ಷೇತ್ರದ ಜನರಲ್ಲಿ ಕೋವಿಡ್ ಭಯಕ್ಕಿಂತ ಸುರಕ್ಷತೆ ಸ್ವಕಾಳಜಿ ಸ್ವಯಂಜಾಗೃತಿ ಮೂಡುವಂತೆ ಮಾಡಬೇಕು ಎಂದು ಸಚಿವ ಬಿ.ಸಿ.ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಬಿ.ಸಿ.ಪಾಟೀಲ್ ತಾಲೂಕು ಆಸ್ಪತ್ರೆಯಲ್ಲಿರುವ ಕೊರೋನಾ ಚಿಕಿತ್ಸೆ, ಕೋವಿಡ್ ಲಸಿಕೆ ಸಂಬಂಧ ಸೌಲಭ್ಯಗಳ ಬಗ್ಗೆ ತಾಲೂಕು ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು.
ಸಭೆಯಲ್ಲಿ ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ ಯು.ಬಿ.ಬಣಕಾರ್, ತಹಶೀಲ್ದಾರರಾದ ಕೆ.ಉಮಾ, ಗುರುಬಸವರಾಜ, ತಾಲೂಕು ವೈದ್ಯಾಧಿಕಾರಿ ಚಿದಾನಂದ, ಪಿಎಸ್ ಐಗಳಾದ ದೀಪು, ಕೃಷ್ಣಪ್ಪತೋಪೀನ, ದೇವರಾಜ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
Key words: Our aim – raise- awareness – caution- about –corona- Minister -B.C. Patil.