ನಮ್ಮ ಹಿರಿಯರು ಆಲ್ ಟೈಂ ಗ್ರೇಟ್

ಮೈಸೂರು,ಡಿಸೆಂಬರ್,28,2024 (www.justkannada.in):  ನಾವು ಇವತ್ತು ರಾಕೆಟ್ ಯುಗದಲ್ಲಿರಬಹುದು, ಮಂಗಳನ ಅಂಗಳಕ್ಕೆ ಕಾಲಿಟ್ಟಿರಬಹುದು, ಚಂದ್ರನ ಕಕ್ಷೆಗೆ ಎಂಟ್ರಿ ಕೊಟ್ಟಿರಬಹುದು‌. ತಂತ್ರಜ್ಞಾನದ ಚೆಲ್ಲಾಟವಾಡುತ್ತಿರಬಹುದು. ಆದ್ರೆ ಹಿರಿಯರ ಸಾಧನೆ ಮನಸ್ಥಿತಿ ಮುಂದೆ ಇವೆಲ್ಲವೂ ತೃಣ ಸಮಾನ ಅನಿಸಿಬಿಡುತ್ತದೆ. ಈ ಬಗ್ಗೆ ನಾನು ಕೇಳಿದ್ದೆ ಓದಿದ್ದೆ ಆದ್ರೆ ಇವತ್ತು ಅದು ನನ್ನ ಸ್ವ ಅನುಭವಕ್ಕೆ ಬಂತು. ಅವರ ಚಿಂತನೆ ನಿಜಕ್ಕೂ ಅದ್ಬುತ ಅನನ್ಯ ಹಾಗೂ ಅಮೋಘ. ಇನ್ನು ಅಂದು ಅವರು ಮಾಡುತ್ತಿದ್ದ ಒಳ್ಳೆಯ ಕೆಲಸದ ಬಗ್ಗೆ ಎಂದು ಡಂಗೂರ ಹೊಡೆದುಕೊಂಡವರಲ್ಲ. ಬಲಗೈಯಲ್ಲಿ ಮಾಡಿದ ಕೆಲಸ ಎಡಗೈಗೆ ಗೊತ್ತಾಗದಂತೆ ಎಚ್ಚರವಹಿಸುತ್ತಿದ್ದರು. ಪ್ರಸ್ತುತ ಪರಿಸ್ಥಿತಿಯಲ್ಲಿ ಇದನ್ನು ನಿಜವಾಗಿಯೂ ನಾವು ಅಳವಡಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ‌. ಇದೆಲ್ಲಾ ನಾನು ಬರೆಯಲು ಕಾರಣವಾಗಿದ್ದು 1962ರ ಅದೊಂದು ಲಗ್ನಪತ್ರಿಕೆ.

ಕ್ರಿಸ್ತಶಕ 1962…….!
ಎಸ್ 1962ರ ಮೇ 10ರಂದು ನಡೆದಿದ್ದ ಮದುವೆಯ ಲಗ್ನಪತ್ರಿಕೆ. ಆ ಲಗ್ನಪತ್ರಿಕೆ ನನಗಂತೂ ಅಚ್ಚರಿಯ ಆಗರವಾಗಿತ್ತು. ಮೊದಲನೆಯದಾಗಿ ಆಗಿನ ಕಾಲದಲ್ಲೇ ಎಲ್ಲರನ್ನೂ ಆಹ್ವಾನಿಸಲು ಅಚ್ಚುಕಟ್ಟಾದ ಸುಂದರವಾದ ಲಗ್ನ ಪತ್ತಿಕೆ ಮುದ್ರಣ ಮಾಡಿದ್ದು. ಎರಡನೆಯದು ಅತ್ಯಂತ ವ್ಯವಸ್ಥಿತವಾಗಿ ಯಾವುದೇ ವ್ಯಾಕರಣ ಮುದ್ರಣ ದೋಷವಿಲ್ಲದ ಶಾಸ್ತ್ರಬದ್ದವಾಗಿ ಕನ್ನಡದಲ್ಲೇ ಮದುವೆ ಆಹ್ವಾನ ಪತ್ರಿಕೆ ಮುದ್ರಣ ಮಾಡಿಸಿದ್ದು. ಶುಭಮಸ್ತುವಿನಿಂದ ಆರಂಭವಾದ ಮದುವೆ ಆಹ್ವಾನ ಪತ್ರಿಕೆಯಲ್ಲಿ ಮೊದಲು ತಮ್ಮ ವಾಸದ ಬಡಾವಣೆ ನಂತರ ಕಾಲ ಘಳಿಗೆ ದಿನ, ದಿನಾಂಕ ಸಮಯವನ್ನು‌ ಮುದ್ರಿಸಲಾಗಿತ್ತು. ಅದರ ಕೆಳಗೆ ವಧು ವರನ ಹೆಸರು ಅವರ ತಂದೆ ತಾಯಿ ಊರು ಸೇರಿ ಎಲ್ಲವನ್ನೂ ನಮೂದಿಸಲಾಗಿತ್ತು‌. ಅದಾದ ಮೇಲೆ ಮದುವೆಯ ಸ್ಥಳದ ವಿಳಾಸದೊಂದಿಗೆ ಮದುವೆಗೆ ಆತ್ಮೀಯವಾಗಿ ಆಹ್ವಾನಿಸಲಾಗಿತ್ತು. ಇದೆಲ್ಲಕ್ಕಿಂತ ಹೆಚ್ಚಾಗಿ ನನಗೆ ಅಚ್ಚರಿ ಮತ್ತು ಗಮನ ಸೆಳೆದಿದ್ದು ಹಾಗೂ ನಮ್ಮ ಹಿರಿಯರ ಬಗ್ಗೆ ಗೌರವ ಇಮ್ಮಡಿಗೊಳಿಸಿದ್ದು ಆಹ್ವಾನ ಪತ್ರಿಕೆಯ ಕೊನೆಯ ಸಾಲುಗಳು. ಹೌದು ಕೊನೆಯಲ್ಲಿ ವಿಶೇಷ ಸೂಚನೆ ಅಂತಾ ಬರೆದು ಮುಯ್ಯಿ ವಗೈರೆ ತರಬಾರದಾಗಿ ಪ್ರಾರ್ಥನೆ ಅಂತಾ ಬರೆಯಲಾಗಿತ್ತು. ಇದು ನಿಜಕ್ಕೂ ನನಗೆ ಖುಷಿಯ ಜೊತೆಗೆ ನಮ್ಮ ಹಿರಿಯರು ಬಗ್ಗೆ ಹೆಮ್ಮೆ ಅನಿಸಿತು. ಈಗ ಕೆಲವರು ಈ ರೀತಿ ಬರೆಸಿಕೊಳ್ಳುವುದನ್ನೇ ಹೆಗ್ಗಳಿಕೆ ಪ್ರತಿಷ್ಠೆ ಹಾಗೂ ಶ್ರೀಮಂತಿಕೆಯ ಸಂಕೇತ ಅಂತಾ ಭಾವಿಸಿದ್ದಾರೆ. ಆದ್ರೆ ನಮ್ಮ ಹಿರಿಯರು ಅದನ್ನು 6 ದಶಕ ಅಂದ್ರೆ 60 ವರ್ಷದ ಹಿಂದೆಯೇ ಸ್ವಾಭಿಮಾನದ ಸಂಕೇತವಾಗಿ ಬಳಿಸಿದ್ದರು.

ಅಪರೂಪದ ಆಹ್ವಾನ ಪತ್ರಿಕೆ
ಅಂದ್ಹಾಗೆ ಈ ಆಹ್ವಾನ ಪತ್ರಿಕೆ ಮೈಸೂರಿನ ಹಿರಿಯ ವಕೀಲರು ಹಾಗೂ ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಗೌರವ ಸಂಪಾದಕರು ಆದ ಎಚ್ ಎನ್ ವೆಂಕಟೇಶ್ ಅವರ ತಂದೆ ಎಚ್ ಎನ್ ನಿಂಗೇಗೌಡ ಹಾಗೂ ಅವರ ತಾಯಿ ಲಲಿತಮ್ಮ ಅವರ ವಿವಾಹದ ಆಹ್ವಾನ ಪತ್ರಿಕೆಯಾಗಿತ್ತು. ಎಚ್ ಎನ್ ವೆಂಕಟೇಶ್ ಅವರ ತಾಯಿ ಲಲಿತಮ್ಮ ಅವರ ತಂದೆ ಎಂ ಬಿ ಬೋರೆಗೌಡರು ಈ ಆಹ್ವಾನ ಪತ್ರಿಕೆಯನ್ನು ಮುದ್ರಿಸಿದ್ದರು. ಅವರ ಸ್ವಾಭಿಮಾನಕ್ಕೊಂದು ಸಲಾಂ. ಇನ್ನು ಬೋರೇಗೌಡರ ಬಗ್ಗೆ ಹೇಳಬೇಲಾದರೆ ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ನಾಜರ್ ಆಗಿದ್ದ ಅವರು ಪ್ರಾಮಾಣಿಕತೆಗೆ ಮತ್ತೊಂದು ಹೆಸರಾಗಿದ್ದರು. ತಾವಾಯ್ತು ತಮ್ಮ ದುಡಿಮೆ ಆಯ್ತು ಅಂತಾ ಬದುಕು ಕಟ್ಟಿಕೊಂಡವರು. ಕನ್ನೇಗೌಡನ ಕೊಪ್ಪಲು ಜಯನಗರದ ನಿವಾಸಿಯಾಗಿದ್ದ ಅವರು ಎಂದೂ ಸ್ವಾಭಿಮಾನವನ್ನು ಬಿಟ್ಟುಕೊಟ್ಟವರಲ್ಲ. ಎಂದು ಪರರ ಹಣ ವಸ್ತು ಆಸ್ತಿಗಳಿಗೆ ಆಸೆಪಟ್ಟವರಲ್ಲ. ತಾವು ಮಾತ್ರವಲ್ಲ ತಮ್ಮ ಮಕ್ಕಳು ಮೊಮ್ಮಕ್ಕಳಿಗೂ ಅದೇ ಗುಣವನ್ನು ಕಲಿಸಿದ್ದರು‌‌.

ತಾತನ ಗುಣ
ಇನ್ನು ನನಗೆ ಈ ಆಹ್ವಾನ ಪತ್ರಿಕೆ ನೋಡಿದ ಮೇಲೆ ಬಹುದಿನದ ಅನುಮಾನಕ್ಕೆ ಉತ್ತರ ಸಿಕ್ಕಿತು. ನಮ್ಮ ಎಚ್ ಎನ್ ವೆಂಕಟೇಶ್ ಅಣ್ಣ ಇದುವರೆಗೂ ಸಾವಿರಾರು ಜನರಿಗೆ ಸಾವಿರಾರು ರೀತಿಯ ಸಹಾಯ ಮಾಡಿದ್ದಾರೆ. ಅದು ಆರ್ಥಿಕ ಸಹಾಯವಿರಬಹುದು, ಕಾನೂನು ಸಹಾಯವಿರಬಹುದು ಸಾಮಾಜಿಕ ಸಹಾಯವಿರಬಹುದು, ವೈಯಕ್ತಿಕ ಸಹಾಯವಿರಬಹುದು, ವೃತ್ತಿಪರ ಸಹಾಯವಿರಬಹುದು ಯಾರೇ ಯಾವುದನ್ನೇ ಕೇಳಿದರು ಇಲ್ಲ ಅನ್ನದೆ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಆದ್ರೆ ಅವರು ಮಾಡಿದ ಯಾವ ಸಹಾಯವನ್ನು ಎಲ್ಲಿಯೂ ಯಾರಿಗೂ ಹೇಳಿದವರಲ್ಲ‌. ಇನ್ನು ಇದಕ್ಕಿಂತ ಮಿಗಿಲಾಗಿ ತಾವು ಸಹಾಯ ಮಾಡಿದ್ದಕ್ಕೆ ಯಾವುದೇ ಪ್ರತಿಫಲಾಕ್ಷೆ ಬಯಸುವುದಿಲ್ಲ. ಸೂಜಿಯಷ್ಟು ಸಹಾಯ ಮಾಡಿ ಬೆಟ್ಟದಷ್ಟು ಕಿತ್ತುಕೊಳ್ಳುವವರ ನಡುವೆ ವೆಂಕಟೇಶ್ ಅಣ್ಣ ತಾವೇ ಸಹಾಯ ಮಾಡಿ ತಾವೇ ದುಡ್ಡು ಕೊಟ್ಟಿ ಕಳುಹಿಸುತ್ತಾರೆ. ಇದನ್ನು ನೋಡಿದಾಗ ಇದು ಹೇಗೆ ಅನ್ನೋ ಅನುಮಾನ ಕಾಡುತಿತ್ತು. ಇವತ್ತು ಅವರ ತಂದೆ ತಾಯಿಯ ಮದುವೆ ಪತ್ರಿಕೆಯಲ್ಲಿ ಅವರ ತಾತನ ಸಾಲುಗಳನ್ನು ನೋಡಿ ಅದಕ್ಕೆ ಉತ್ತರ ಸಿಕ್ಕಿದಂತಾಯ್ತು. ಅವರ ಮೇಲಿನ ಗೌರವ ಮತ್ತಷ್ಟು ಇಮ್ಮಡಿಯಾಯ್ತು. ತಾಯಿ ಚಾಮುಂಡೇಶ್ವರಿ ಅವರಿಗೆ ಆಯಸ್ಸು ಆರೋಗ್ಯ ಐಶ್ವರ್ಯ ಅಧಿಕಾರ ಕೊಟ್ಟು ಕಾಪಾಡಲಿ. ಶಿರಡಿ ಸಾಯಿಬಾಬಾನ ಶ್ರೀರಕ್ಷೆ ಸದಾ ಇರಲಿ.

ರಾಮ್ ಮೈಸೂರು