ಮೈಸೂರು,ಸೆಪ್ಟಂಬರ್,27,2020(www.justkannada.in): ನಾಳೆ ನಡೆಸುತ್ತಿರುವ ಬಂದ್ ರೈತ ಸಂಘಟನೆಗಳಿಂದ ರಾಜಕೀಯ ಪ್ರೇರಿತ ಬಂದ್ ಎಂದು ಹೇಳಿಕೆ ನೀಡಿದ ಸಚಿವ ಎಸ್.ಟಿ ಸೋಮಶೇಖರ್ ವಿರುದ್ಧ ಮೈಸೂರಿನಲ್ಲಿ ರೈತ ಮುಖಂಡರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.
ಮೈಸೂರು ಸಿದ್ದಾರ್ಥನಗರದ ನೂತನ ಡಿಸಿ ಕಛೇರಿ ಬಳಿ ಜಮಾಯಿಸಿದ ರೈತ ಮುಖಂಡರು, ಎಪಿಎಂಸಿ , ಭೂ ಸುಧಾರಣಾ ತಿದ್ದುಪಡಿ ಮಸೂದೆ ವಾಪಾಸ್ ಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಅಲ್ಲದೆ ಇಂದು ಬೆಳಿಗ್ಗೆ ಸಚಿವ ಎಸ್.ಟಿ ಸೋಮಶೇಖರ್ ನೀಡಿದಂತಹ ‘ರೈತ ಸಂಘಟನೆಗಳಿಂದ ರಾಜಕೀಯ ಪ್ರೇರಿತ ಬಂದ್’ ಎಂಬ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಪೊಲೀಸರು ಪ್ರತಿಭಟನಾ ನಿರತ ರೈತ ಮುಖಂಡರನ್ಬ ಬಂಧಿಸಿದ್ದು, ಈ ಸಂದರ್ಭದಲ್ಲಿ ನಗರ ಡಿಸಿಪಿ ಡಾ.ಪ್ರಕಾಶ್ಗೌಡ- ರೈತ ಮುಖಂಡರ ನಡುವೆ ವಾಗ್ವಾದ ನಡೆಯಿತು. ಡಿಸಿ ಕಛೇರಿ ಒಳಗೆ ಬನ್ನಿ, ಸಚಿವರು ಮಾತಾಡ್ತಾರೆ ಎಂದು ಪೊಲೀಸರು ರೈತ ಮುಖಂಡರ ಮನವೊಲಿಕೆಗೆ ಯತ್ನಿಸಿದರು. ಆದರೆ ರೈತರು ಮೊದಲು ಬಂಧಿತ ರೈತರನ್ನ ಬಿಡುಗಡೆ ಮಾಡಿ ಎಂದು ಪಟ್ಟು ಹಿಡಿದರು. ಈ ಹಿನ್ನೆಲೆ ಬಂಧಿಸಿದ ರೈತರನ್ನ ಪೊಲೀಸರು ಬಿಡುಗಡೆ ಮಾಡಿದರು.
ಸಚಿವರೊಂದಿಗೆ ರೈತಮುಖಂಡರ ಮಾತುಕತೆ…
ರೈತರ ಪ್ರತಿಭಟನೆ ಬಳಿಕ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅವರ ಜತೆ ರೈತ ಮುಖಂಡರ ಮಾತುಕತೆಗೆ ವ್ಯವಸ್ಥೆ ಮಾಡಲಾಗಿತ್ತು. ನಾಳಿನ ಬಂದ್ ರಾಜಕೀಯ ಪ್ರೇರಿತ ಎಂಬ ಹೇಳಿಕೆಯಿಂದ ಆಕ್ರೋಶಗೊಂಡ ರೈತರ ಮನವೊಲಿಕೆಗೆ ಸಚಿವ ಎಸ್.ಟಿ ಸೋಮಶೇಖರ್ ಸಭೆ ನಡೆಸಿದರು. ಸಭೆಯಲ್ಲಿ ಎಪಿಎಂಸಿ, ಭೂ ಸುಧಾರಣಾ ತಿದ್ದುಪಡಿ ಮಸೂದೆ ವಿಚಾರ ಕುರಿತು ಚರ್ಚಿಸಲಾಗುತ್ತಿದೆ.
Key words: Outrage- against- ministers -Arrests – farmers leader- Mysore-released