ದೇಶದಲ್ಲಿ ಒಂದೇ ದಿನ 2,900 ಕೊರೊನಾ ಸೋಂಕು ಪ್ರಕರಣ ಪತ್ತೆ

ಹೊಸದಿಲ್ಲಿ, ಮೇ 05, 2020 (www.justkannada.in): ದೇಶದಲ್ಲಿ ಗರಿಷ್ಠ ಕೊರೋನ ಸೋಂಕು ಪ್ರಕರಣ ಪತ್ತೆಯಲ್ಲಿ ನಾಲ್ಕು ದಿನಗಳಲ್ಲಿ ನಾಲ್ಕು ಹೊಸ ದಾಖಲೆ ನಿರ್ಮಾಣವಾಗಿದ್ದು, ಸೋಮವಾರ 2900 ಕೊರೋನ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 45 ಸಾವಿರದ ಗಡಿ ದಾಟಿದ್ದು, ತಮಿಳುನಾಡಿನಲ್ಲಿ ಒಂದೇ ದಿನ 500ಕ್ಕೂ ಹೆಚ್ಚು ಪ್ರಕರಣ ದೃಢಪಟ್ಟಿದೆ. ಇದರೊಂದಿಗೆ ಒಂದೇ ದಿನ ಗರಿಷ್ಠ ಸಂಖ್ಯೆಯ ಪ್ರಕರಣ ದಾಖಲಾದ ರಾಜ್ಯಗಳ ಪೈಕಿ ಈ ದಕ್ಷಿಣ ರಾಜ್ಯ ಎರಡನೇ ಸ್ಥಾನದಲ್ಲಿದೆ.

ಸಾವಿನ ಸಂಖ್ಯೆಯಲ್ಲಿ ಶನಿವಾರದ ಸಂಖ್ಯೆ (99)ಯ ದಾಖಲೆಯನ್ನು ಸೋಮವಾರ ಸರಿಗಟ್ಟಲಾಗಿದೆ. ಸೋಮವಾರ ಕೂಡಾ ಅಷ್ಟೇ ಸಂಖ್ಯೆಯ ಸಾವು ಸಂಭವಿಸಿದೆ. ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 1,490ಕ್ಕೇರಿದೆ. ಮಹಾರಾಷ್ಟ್ರದಲ್ಲಿ ಗರಿಷ್ಠ ಅಂದರೆ 35 ಸಾವು ಸಂಭವಿಸಿದ್ದು, ಗುಜರಾತ್‌ನಲ್ಲಿ ಒಂದೇ ದಿನ 29 ಮಂದಿ ಕೋವಿಡ್-19 ಸೋಂಕಿತರು ಕೊನೆಯುಸಿರೆಳೆದಿದ್ದಾರೆ. ಒಟ್ಟು ಗುಣಮುಖರಾದವರ ಸಂಖ್ಯೆ 12763.