ಬೆಂಗಳೂರು,ಮೇ,3,2021(www.justkannada.in): ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತ ಪ್ರಕರಣ ಸಂಬಂಧ ಅಧಿಕಾರಿಗಳ ಮಾಹಿತಿ ಪ್ರಕಾರ ಆಕ್ಸಿಜನ್ ಕೊರತೆಯಿಂದ ಕೇವಲ ಮೂರು ಮಾತ್ರ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್, ಚಾಮರಾಜನಗರದಲ್ಲಿ 24 ಗಂಟೆಗಳಲ್ಲೇ 24 ಮಂದಿ ಕೋವಿಡ್ ಗೆ ಸಾವಿಗೀಡಾಗಿರುವುದು ನಮಗೆ ಆಘಾತ ತಂದಿದೆ. ಮೊದಲು ಅವರಿಗೆ ಸದ್ಗತಿ ಸಿಗಲಿ. ಮೃತರ ಕುಟುಂಬಗಳ ಜೊತೆ ಸರ್ಕಾರ ಇರುತ್ತದೆ. ಈ ಕುಟುಂಬಗಳಿಗೆ ಪರಿಹಾರ ವಿಚಾರ ಸಿಎಂ ಹೇಳುತ್ತಾರೆ ಎಂದು ತಿಳಿಸಿದರು.
ರಾತ್ರಿ 12 ಗಂಟೆ ತನಕ ಆಮ್ಲಜನಕ ಡ್ರೈ ಆಗಿರಲಿಲ್ಲ. ಈ ಬಗ್ಗೆ ನಾನು ತಾಂತ್ರಿಕವಾಗಿ ಏನು ಹೇಳಲ್ಲ. ಈ ಬಗ್ಗೆ ಸಮಗ್ರ ತನಿಖೆಯಾಗಿ ಸತ್ಯಾಂಶ ಹೊರ ಬರಲಿ. ನಮ್ಮ ಹೇಳಿಕೆ ತನಿಖೆಗೆ ಅಡ್ಡಿ ಆಗಬಾರದು. ನಿನ್ನೆ ಬೆಳಗ್ಗೆ 7 ಗಂಟೆಯಿಂದ ಮಧ್ಯರಾತ್ರಿವರೆಗೆ 14 ಜನರು ಸಾವನ್ನಪ್ಪಿದ್ದಾರೆ. ಇವರು ಕೋವಿಡ್ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಮಧ್ಯರಾತ್ರಿ 12 ರಿಂದ ಬೆಳಗ್ಗೆ 3ಗಂಟೆವರೆಗೆ 3 ಸಾವನ್ನಪ್ಪಿದ್ದು, ಮುಂಜಾನೆ 3 ರಿಂದ 7ರವರೆಗೆ 7 ಜನ ಸಾವನ್ನಪ್ಪಿದ್ದು, 24 ಗಂಟೆಯಲ್ಲಿ ಒಟ್ಟು 23 ಜನರು ಸಾವಿಗೀಡಾಗಿದ್ದಾರೆ ಎಂದು ಸಚಿವ ಸುಧಾಕರ್ ತಿಳಿಸಿದರು.
123 ಮಂದಿ ಕೋವಿಡ್ ನಿಂದ ಚಿಕಿತ್ಸೆ ದಾಖಲಾಗಿದ್ದಾರೆ. 16 ಮಂದಿ ವೆಂಟಿಲೇಟರ್ ನಲ್ಲಿದ್ದು, 36 ಮಂದಿ ಎನ್.ಯು. ನಲ್ಲಿದ್ದಾರೆ. ಇನ್ನೂ ಕೆಲವರು ಕಡಿಮೆ ಆಮ್ಲಜನಕದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ ಸಚಿವ ಸುಧಾಕರ್, ಈ ದುರ್ಘಟನೆ ನನಗೆ ವೈಯಕ್ತಿಕವಾಗಿ ಒಬ್ಬ ವೈದ್ಯನಾಗಿ ಅತೀವ ದು:ಖ ತಂದಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಲಿ. ರಾಜ್ಯಕ್ಕೆ 850 ಟನ್ ಆಮ್ಲಜನಕ ಹಂಚಿಕೆಯಾಗಿದೆ. ಈ ಹಿಂದೆ 300 ಟನ್ ಮಾತ್ರ ಸಿಗುತ್ತಿತ್ತು. ಸಿಎಂ ಕೇಂದ್ರದ ಮೇಲೆ ಒತ್ತಡ ತಂದು ಅಮ್ಲಜನಕ ಹೆಚ್ಚುವರಿ ಪೂರೈಕೆ ಮಾಡಿಸಿದ್ದಾರೆ ಎಂದು ಸುಧಾಕರ್ ತಿಳಿಸಿದರು.
Key words: oxygen-chamarajanagar-death- case-Health Minister -Dr.K. sudhakar