ಬೆಂಗಳೂರು:ಆ-27: ಕಾಫಿ, ಸಾಂಬಾರ ಪದಾರ್ಥ, ಕಬ್ಬು ಸೇರಿ ತೋಟಗಾರಿಕೆ ಬೆಳೆ ನಷ್ಟಕ್ಕೆ ವಿಶೇಷ ಪ್ಯಾಕೇಜ್ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡುವ ಜತೆಗೆ ಪ್ರಧಾನಿ ಬಳಿಗೆ ನಿಯೋಗದಲ್ಲಿ ತೆರಳಿ ಮನವಿ ಸಲ್ಲಿಸಲು ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಸೋಮವಾರ ಸಂಪುಟ ಸಭೆ ಬಳಿಕ ಮಾಹಿತಿ ನೀಡಿದ ಸಚಿವ ಜೆ.ಸಿ.ಮಾಧುಸ್ವಾಮಿ, ತೋಟ ಗಾರಿಕೆ ಬೆಳೆಯಿದ್ದ ಪ್ರದೇಶದಲ್ಲಿ 500-600 ಮೀಟರ್‌ನಷ್ಟು ಭೂಕುಸಿತವಾಗಿದ್ದು, ಸಾಕಷ್ಟು ಹಾನಿಯಾಗಿದೆ.
ನಿಯಮಾನುಸಾರ ಮನವಿ ಸಲ್ಲಿಸಿದರೆ ಸಿಗುವ ಪರಿಹಾರ ಬಹಳ ಕಡಿಮೆ. ಹಾಗಾಗಿ ಕಾಫಿ, ಸಾಂಬಾರ ಪದಾರ್ಥ ಇತರೆ ತೋಟಗಾರಿಕೆ ಬೆಳೆ ನಷ್ಟಕ್ಕೆ ವಿಶೇಷ ಪ್ಯಾಕೇಜ್ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ. ಸದ್ಯದಲ್ಲೇ ನಿಯೋಗದಲ್ಲಿ ಪ್ರಧಾನಿಯವರನ್ನು ಭೇಟಿ ಯಾಗಿ ಮನವಿ ಸಲ್ಲಿಸಲಾಗುವುದು. ಜತೆಗೆ ಕಾಫಿ, ಸಾಂಬಾರ ಪದಾರ್ಥ, ಕಬ್ಬು ಇತರೆ ತೋಟಗಾರಿಕೆ ಬೆಳೆಗಳನ್ನು ವಿಮಾ ವ್ಯಾಪ್ತಿಗೆ ತರಬೇಕೆಂದು ಮನವಿ ಮಾಡಲಾಗುವುದು ಎಂದು ಹೇಳಿದರು.
ನೆರೆ ಹಾವಳಿಯಿಂದ ಸಂತ್ರಸ್ತರಾದವರಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್) ಪರಿಹಾರ ಸಿಗುವ ಪ್ರಮಾಣ ಕಡಿಮೆ. ಹಾಗಾಗಿ ನಿಯಮವನ್ನು ಸ್ವಲ್ಪ ಸಡಿಲಿಸಿ ಪ್ಯಾಕೇಜ್ ನೀಡಬೇಕೆಂಬ ಬಗ್ಗೆಯೂ ಚರ್ಚೆಯಾಗಿದೆ. ಮನೆ, ತೋಟ, ಗುಡ್ಡ ಕುಸಿದು ಭಾರೀ ನಷ್ಟ ಉಂಟಾಗಿದೆ. ಹಾಗಾಗಿ ನಿಯಮಾವಳಿಗಳನ್ನು ಸರಳೀಕರಿಸಿ ನೆರವಾಗುವ ಬಗ್ಗೆ ಚರ್ಚೆಯಾಗಿದೆ ಎಂದು ತಿಳಿಸಿದರು.
ನೆರೆಯಿಂದಾಗಿ 42 ಲಕ್ಷ ಕುಟುಂಬಗಳು ಸಂತ್ರಸ್ತವಾಗಿದ್ದು, ಈ ಪೈಕಿ ತಕ್ಷಣದ ಪರಿಹಾರವಾಗಿ 10,000 ರೂ. ಪರಿಹಾರ ವಿತರಿಸಲಾಗುತ್ತಿದೆ. ಈವರೆಗೆ 1.37 ಲಕ್ಷ ಕುಟುಂಬಗಳಿಗೆ ಪರಿಹಾರ ವಿತರಿಸಲಾಗಿದೆ. ಕೇವಲ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದವರನ್ನಷ್ಟೇ ಗುರುತಿಸಿ ಅವರಿಗೆ ಪರಿಹಾರ ನೀಡಲಾಗುತ್ತಿತ್ತು. ನೆರೆ ಸಂದರ್ಭದಲ್ಲಿ ಸಂತ್ರಸ್ತರಾಗಿ ಬಳಿಕ ಸಂಬಂಧಿಗಳು, ಸ್ನೇಹಿತರ ಮನೆಗಳಲ್ಲಿ ಆಶ್ರಯ ಪಡೆದಿದ್ದವರನ್ನು ಗುರುತಿಸಿ ಪರಿಹಾರ ನೀಡುವಂತೆ ಸೂಚಿಸ ಲಾಗಿದೆ. ನೆರೆಯಿಂದ ನಿರಾಶ್ರಿತರಾದವರಿಗೆ ಕೇಂದ್ರ ಸರ್ಕಾರದ ಯೋಜನೆಯಡಿ 1.35 ಲಕ್ಷ ರೂ. ಸೇರಿ ರಾಜ್ಯ ಸರ್ಕಾರದ ನೆರವಿನೊಂದಿಗೆ 5 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪಿಂಚಣಿಯಲ್ಲಿ ಸರ್ಕಾರದ ಪಾಲು ಏರಿಕೆ: ರಾಷ್ಟ್ರೀಯ ಪಿಂಚಣಿ ಯೋಜನೆಯಡಿ (ಎನ್‌ಪಿಎಸ್) ರಾಜ್ಯ ಸರ್ಕಾರ ಶೇ.10 ಪಿಂಚಣಿ ಶುಲ್ಕ ಭರಿಸುತ್ತಿತ್ತು. ಆದರೆ ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರದ ಪಾಲಿನ ಮೊತ್ತವನ್ನು ಶೇ.14ಕ್ಕೆ ಹೆಚ್ಚಳ ಮಾಡಿದೆ. ಆ ಹಿನ್ನೆಲೆಯಲ್ಲಿ 2019ರ ಏ.1ರಿಂದ ಪೂರ್ವಾನ್ವಯವಾಗುವಂತೆ ರಾಜ್ಯ ಸರ್ಕಾರದ ಪಾಲಿನ ಪ್ರಮಾಣವನ್ನು ಶೇ.14ಕ್ಕೆ ಹೆಚ್ಚಳ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ಇದರಿಂದ ಮಾಸಿಕ 27 ಕೋಟಿ ರೂ.ನಂತೆ ವಾರ್ಷಿಕ 350 ಕೋಟಿ ರೂ. ಹೊರೆ ಬೀಳಲಿದೆ ಎಂದು ಹೇಳಿದರು.
ಟೆಂಡರ್ ಇಲ್ಲದೆ ಕೊಳವೆಬಾವಿಗೆ ಅನುಮತಿ: ಬರಪೀಡಿತ ಪ್ರದೇಶಗಳಲ್ಲಿ ಕೊಳವೆ ಬಾವಿ ಕೊರೆಸಲು ಟೆಂಡರ್ ಪ್ರಕ್ರಿಯೆ ನಡೆಸುವುದರಿಂದ ವಿಳಂಬ ವಾಗುತ್ತಿದ್ದು, ಜನ ತೊಂದರೆ ಅನುಭವಿಸುತ್ತಿರುವ ಬಗ್ಗೆ ಸಾಕಷ್ಟು ದೂರು ಬಂದಿವೆ. ಆ ಹಿನ್ನೆಲೆಯಲ್ಲಿ ಶಾಸಕರ ಅಧ್ಯಕ್ಷತೆಯ ವಿಚಕ್ಷಣ ಸಮಿತಿಯೇ 5 ಲಕ್ಷ ರೂ.ವರೆಗಿನ ವೆಚ್ಚದಲ್ಲಿ ಕೊಳವೆ ಬಾವಿ ಕೊರೆಸಲು ಅವಕಾಶ ನೀಡಿ ಟೆಂಡರ್ ವಿನಾಯ್ತಿ ಕೊಡಲಾಗಿದೆ. ತುರ್ತು ಅಗತ್ಯವಿರುವ ಕಡೆ ಟೆಂಡರ್ ಇಲ್ಲದೆ ಕೊಳವೆ ಬಾವಿ ಕೊರೆಸಲು 2020ರ ಮಾ.31ರವರೆಗೆ ಅವಕಾಶ ಕಲ್ಪಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.
ಮಧ್ಯಂತರ ಪರಿಹಾರಕ್ಕೆ ಶಿಫಾರಸು ಭರವಸೆ: ಕೇಂದ್ರ ಗೃಹ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸೇರಿ ನಾನಾ ಇಲಾಖೆಗಳು ಪ್ರತ್ಯೇಕವಾಗಿ ಮೂರು ದಿನ ನೆರೆಪೀಡಿತ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಿವೆ. ಸದ್ಯದ ಮಟ್ಟಿಗೆ 30,000 ಕೋಟಿ ರೂ ನಷ್ಟವಾಗಿರುವ ಅಂದಾಜು ಮಾಡಲಾಗಿದೆ. ಅಂದಾಜಿಗಿಂತಲೂ ಹೆಚ್ಚು ನಷ್ಟ ಉಂಟಾಗಿರುವುದು ಕಾಣುತ್ತದೆ. ಹಾಗಾಗಿ ಮಧ್ಯಂತರ ಪರಿಹಾರಕ್ಕೂ ಶಿಫಾರಸು ಮಾಡಲಾಗುವುದು ಎಂದು ಸಮೀಕ್ಷೆ ನಡೆಸುತ್ತಿರುವ ತಂಡದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ನದಿ ವಿವಾದ ಪರಿಶೀಲನೆಗೆ ಸಂಪುಟ ಸಮಿತಿ: ಕಾವೇರಿ, ಕೃಷ್ಣಾ, ಮಹದಾಯಿ ನದಿ ವಿವಾದಗಳ ಪರಿಶೀಲನೆ ಹಾಗೂ ಸಂಬಂಧಪಟ್ಟ ಯೋಜನೆಗಳ ಅನುಷ್ಠಾನಕ್ಕೆ ಗಮನ ಹರಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಾಲ್ಕು ಮಂದಿ ಸಂಪುಟ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಸಮಿತಿಯಲ್ಲಿ ಸಚಿವ ರಾದ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಆರ್.ಅಶೋಕ್ ಇರಲಿದ್ದಾರೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಬಸವರಾಜ ಬೊಮ್ಮಾಯಿ ಮಾತನಾಡಿ, ಕೃಷ್ಣಾ, ಕಾವೇರಿ, ಮಹದಾಯಿಗೆ ಸಂಬಂಧಪಟ್ಟ ನಾನಾ ಪ್ರಕರಣಗಳು ಸುಪ್ರೀಂ ಕೋರ್ಟ್‌ನಲ್ಲಿವೆ. 3-4 ವರ್ಷಗಳಿಂದ ಹಿಂದಿನ ಸರ್ಕಾರಗಳು ಇತ್ತ ಗಮನ ಹರಿಸಿಲ್ಲ. ಇದೀಗ ಉಪಸಮಿತಿಯು ಮೂರು ನದಿಗಳ ಜಲವಿವಾದಕ್ಕೆ ಸಂಬಂಧಪಟ್ಟಂತೆ ಗಮನ ಹರಿಸಲಿದೆ. ಅಂತಾರಾಜ್ಯ ಜಲ ವಿವಾದಗಳಿಗೆ ಸೀಮಿತವಾಗಿ ಕಾರ್ಯ ನಿರ್ವ ಹಿಸುವ ಉಪ ಸಮಿತಿಯು ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಿದೆ. ಈ ಉದ್ದೇಶ ಹೊರತುಪಡಿಸಿ ಇತರೆ ಯಾವುದೇ ಕಾಮಗಾರಿ ಕೈಗೊಳ್ಳುವ ಅಥವಾ ಇತರೆ ಚಟುವಟಿಕೆಯನ್ನು ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಗ್ರಾಮಗಳ ಸ್ಥಳಾಂತರಕ್ಕೆ ಒತ್ತಾಯ: ಮನೆ, ಕಟ್ಟಡಗಳ ಕುಸಿತದ ಜತೆಗೆ ಸಾಕಷ್ಟು ಕಡೆ ಸರ್ಕಾರಿ ಶಾಲಾ, ಕಟ್ಟಡಗಳಿಗೂ ಹಾನಿಯಾಗಿದ್ದು, ಬಳಕೆಗೆ ಯೋಗ್ಯವಿದೆಯೇ ಇಲ್ಲವೇ ಎಂಬ ಆತಂಕ ಮೂಡಿದೆ. ಚಿಕ್ಕಮಗಳೂರಿನಲ್ಲಿ ನದಿ ಪಾತ್ರದ ನಾಲ್ಕು ಗ್ರಾಮಗಳನ್ನು ಸ್ಥಳಾಂತರಿಸುವಂತೆ ಸ್ಥಳೀಯರು ಮನವಿ ಮಾಡುತ್ತಿದ್ದಾರೆ. ಗ್ರಾಮಗಳ ಸ್ಥಳಾಂತರವೆಂದರೆ ಮನೆಗಳನ್ನು ಸ್ಥಳಾಂತರಿಸುವುದಷ್ಟೇ ಅಲ್ಲ, ಕೃಷಿ ಭೂಮಿಯನ್ನೂ ನೀಡಬೇಕಾಗುತ್ತದೆ.
ಗ್ರಾಮದಲ್ಲಿರುವ ಆಸ್ತಿಯನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದು ಪರ್ಯಾಯ ಅರಣ್ಯ ಭೂಮಿಯನ್ನು ಸ್ಥಳಾಂತರಗೊಂಡ ಕುಟುಂಬದವರಿಗೆ ಹಂಚಿಕೆ ಮಾಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ಇದಕ್ಕೆ ದನಿಗೂಡಿಸಿದ ಸಚಿವ ಬಸವರಾಜ ಬೊಮ್ಮಾಯಿ, ಕೃಷ್ಣಾ, ಘಟಪ್ರಭಾ, ಮಲಪ್ರಭಾ, ವರದಾ ನದಿ ಪಾತ್ರದ ಜನ ಸಹ ತಮ್ಮ ಗ್ರಾಮಗಳನ್ನು ಸ್ಥಳಾಂತರಿಸುವಂತೆ ಮನವಿ ಮಾಡುತ್ತಿದ್ದಾರೆ ಎಂದರು.
ಪ್ರಮುಖ ನಿರ್ಧಾರಗಳು
* 10 ವರ್ಷಕ್ಕಿಂತ ಹೆಚ್ಚು ಹಾಗೂ ಜೀವಾವಧಿ ಶಿಕ್ಷೆಗೆ ಗುರಿಯಾದ ಕೈದಿಗಳ ಪೈಕಿ ಸನ್ನಡತೆ ಆಧಾರದಲ್ಲಿ ಮಹಿಳೆ ಸೇರಿ 140 ಕೈದಿಗಳನ್ನು ಬಿಡುಗಡೆ ಮಾಡಲು ರಾಜ್ಯಪಾಲರಿಗೆ ಶಿಫಾರಸು ಮಾಡಲು ಒಪ್ಪಿಗೆ.
* ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ 53 ಕೆರೆ ತುಂಬಿಸುವ 660 ಕೋಟಿ ರೂ. ಮೊತ್ತದ ಯೋಜನೆಗೆ ಸಮಗ್ರ ಯೋಜನಾ ವರದಿ ಸಿದ್ಧವಾಗಿತ್ತು. ಆದರೆ ಹಣಕಾಸಿನ ಕೊರತೆಯಿಂದ ನನೆಗುದಿಗೆ ಬಿದ್ದಿತ್ತು. ಇದೀಗ ಮೊದಲ ಹಂತದಲ್ಲಿ 250 ಕೋಟಿ ರೂ. ವೆಚ್ಚದಲ್ಲಿ 46 ಕೆರೆಗಳಿಗೆ ನೀರು ಹರಿಸುವ ಯೋಜನೆ ಕೈಗೆತ್ತಿಕೊಳ್ಳಲು ಅನುಮತಿ.
ಕೃಪೆ:ಉದಯವಾಣಿ