ಭ್ರಷ್ಟಾಚಾರಿಗಳಿಂದ ಭ್ರಷ್ಟಾಚಾರಕ್ಕೋಸ್ಕರ ಪಾದಯಾತ್ರೆ – ಬಿಜೆಪಿ ಜೆಡಿಎಸ್ ವಿರುದ್ದ ಸಚಿವ ಈಶ್ವರ್ ಖಂಡ್ರೆ ಕಿಡಿ

ಮೈಸೂರು,ಆಗಸ್ಟ್,9,2024 (www.justkannada.in): ಭ್ರಷ್ಟಾಚಾರಿಗಳಿಂದ ಭ್ರಷ್ಟಾಚಾರಕ್ಕೋಸ್ಕರ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಬಿಜೆಪಿ, ಜೆಡಿಎಸ್ ವಿರುದ್ದ  ಸಚಿವ ಈಶ್ವರ್ ಖಂಡ್ರೆ ಕಿಡಿಕಾರಿದರು.

ಮೈಸೂರಿನಲ್ಲಿ ನಡೆಯುತ್ತಿರುವ ಜನಾಂದೋಲನ ಸಮಾವೇಶಕ್ಕೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ ನೀಡಿದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸೇರಿ ಸಚಿವರು ಭಾಗವಹಿಸಿದ್ದಾರೆ.

ಸಮಾವೇಶದಲ್ಲಿ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯದ ಜನರ ಮೇಲೆ ಗದಾಪ್ರಹಾರ ಮಾಡುತ್ತಿದ್ದಾರೆ. ನಾಲ್ಕು ಲಕ್ಷ ಕೋಟಿ ತೆರಿಗೆ ತೆಗೆದುಕೊಳ್ಳುತ್ತಿದ್ದಾರೆ. ಆದರೆ ಕೇಂದ್ರದಿಂದ ಬರುವ ಅನುದಾನ ಕಡಿಮೆಯಾಗಿದೆ. ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯದ ಜನತೆಗೆ ಅನ್ಯಾಯ ಮಾಡಿದ್ದಾರೆ. ಭ್ರಷ್ಟಾಚಾರಿಗಳು ಭ್ರಷ್ಟಾಚಾರಕ್ಕೋಸ್ಕರ ಬಿಜೆಪಿ, ಜೆಡಿಎಸ್ ನವರು ಪಾದಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿಯವರ ಪಾದಯಾತ್ರೆಗೆ ಜನ ಬೆಂಬಲ ಸಿಕ್ಕಿಲ್ಲ. ಯಾವ ಕಾರಣಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಪಕ್ಷೇತರ ಶಾಸಕರನ್ನ ಖರೀದಿ ಮಾಡಿದ್ದು ಬಿಜೆಪಿ. ಭ್ರಷ್ಟಾಚಾರಗಳು ನಡೆದಿರೋದು ಬಿಜೆಪಿ ಅಧಿಕಾರದಲ್ಲಿಯೇ. 2018ರಲ್ಲಿ ಬಿಜೆಪಿಯವರನ್ನ ಅಧಿಕಾರದಿಂದ ದೂರ ಇಡಲು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡೆವು. ಕುಮಾರಸ್ವಾಮಿಗೆ ಸಿಎಂ ಸ್ಥಾನ ಬಿಟ್ಟುಕೊಟ್ಟು ಔದರ್ಯ ತೋರಿದೆವು. ಆದರೆ ಬಿಜೆಪಿಯವರು 17 ಶಾಸಕರನ್ನ ಆಪರೇಷನ್ ಮೂಲಕ ಖರೀದಿ ಮಾಡಿ ಅಧಿಕಾರ ನಡೆಸಿದರು ಎಂದು ವಾಗ್ದಾಳಿ ನಡೆಸಿದರು.

ಕೋವಿಡ್ ಟೈಮ್ ನಲ್ಲಿ ಸಾಕಷ್ಟು ಜನ ಸಾವನ್ನಪ್ಪಿದ್ದರು. ಈ ಸಾವಿನಲ್ಲೂ ಬಿಜೆಪಿಯವರು ಭ್ರಷ್ಟಾಚಾರ ಮಾಡಿದರು. ಈ ಹಗರಣಗಳು ಹೊರ ಬರುತ್ತವೆ ಎಂದು ದೊಂಬರಾಟ ಆಡುತ್ತಿದ್ದಾರೆ. ರಾಜ್ಯಪಾಲರು ಬಿಜೆಪಿ ಏಜೇಂಟರಂತೆ ಕೆಲಸ ಮಾಡುತ್ತಿದ್ದಾರೆ. ಇಂತಹ ರಾಜ್ಯಪಾಲರನ್ನ ವಾಪಾಸ್ ಪಡೆದುಕೊಳ್ಳಬೇಕು. ಬಿಜೆಪಿ, ಜೆಡಿಎಸ್ ಷಡ್ಯಂತ್ರಕ್ಕೆ ಈ ಸಮಾವೇಶ ಉತ್ತರ ನೀಡಲಿದೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು.

Key words: Padayatra, corruption, BJP, JDS, Minister, Ishwar Khandre