ಬೆಂಗಳೂರು,ಏಪ್ರಿಲ್,3,2023(www.justkannada.in): ಪಂಚಸಾಲಿ ಸಮುದಾಯಕ್ಕೆ ಮೀಸಲಾತಿಗಾಗಿ ನಡೆದ ಹೋರಾಟದಲ್ಲಿ ಪಾಲ್ಗೊಂಡಿದ್ದ ನಾಲ್ಕೈದು ನಾಯಕರು ಜಯಮೃತ್ಯುಂಜಯ ಸ್ವಾಮೀಜಿಗೆ ಕುಡಿದು ಕರೆ ಮಾಡಿ ಧಮ್ಕಿ ಹಾಕುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಶಾಸಕ ಅರವಿಂದ ಬೆಲ್ಲದ್, ಸಿಎಂ ಬೊಮ್ಮಾಯಿ ನಿರ್ಧಾರದಿಂದ ಕಾಂಗ್ರೆಸ್ ನಾಯಕರಿಗೆ ಗರ ಬಡಿದಿದೆ. ಸ್ವಾಮೀಜಿಗಳಿಗೆ ಕರೆ ಮಾಡಿ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ . ಹೋರಾಟದಲ್ಲಿದ್ದ ಮೂರ್ನಾಲ್ಕು ನಾಯಕರು ಹಿಂಸೆ ಕೊಡುತ್ತಿದ್ದಾರೆ. ಮೀಸಲಾತಿ ಒಪ್ಪಿಕೊಂಡಿದ್ದಕ್ಕೆ ಕೆಲ ಕೈ ನಾಯಕರು ಮದ್ಯ ಸೇವಿಸಿ ಫೋನ್ ಮಾಡಿದ್ದಾರೆ ಎಂದು ಆರೋಪಿಸಿದರು.
ಬಸವ ಜಯಮೃತ್ಯುಂಜಯ ಸ್ವಾಮೀಜಿ ಈ ಕುರಿತಾಗಿ ನೋವನ್ನು ತೋಡಿಕೊಂಡಿದ್ದಾರೆ. ಯಾರು ಧಮ್ಕಿ ಹಾಕುತ್ತಿದ್ದಾರೆಂದು ನಮ್ಮ ಇಡೀ ಸಮುದಾಯಕ್ಕೆ ಗೊತ್ತಿದೆ. ಮತ್ತೆ ಧಮ್ಕಿ ಹಾಕಿದರೆ ಏನು ಮಾಡಬೇಕು ಅನ್ನೋದು ನಮಗೆ ಗೊತ್ತಿದೆ. ಮೀಸಲಾತಿ ವಿಚಾರದಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿಲ್ಲ. ಇದು ಕಾಂಗ್ರೆಸ್ನವರು ಮಾಡುತ್ತಿರುವ ಅಪಪ್ರಚಾರ ಎಂದು ಕಿಡಿಕಾರಿದರು. ಮಾಜಿ ಸಚಿವ ವಿನಯ್ ಕುಲಕರ್ಣಿ ಮತ್ತು ಕಾಶಪ್ಪನವರ್ ವಿರುದ್ಧ ಪರೋಕ್ಷವಾಗಿ ಈ ಆರೋಪ ಮಾಡಿದ್ದಾರೆ ಎನ್ನಲಾಗಿದೆ.
Key words: Panchamasali -reservation –Swamiji-hreats-MLA- Arvind Bellad.