ಬೆಂಗಳೂರು, ಮೇ 10, 2021 : (www.justkannada.in news ) ನನ್ನ ತಂದೆತಾಯಿಯರನ್ನು ಬಹಳ ವರ್ಷಗಳ ಹಿಂದೆಯೇ ಕಳೆದುಕೊಂಡೆ. ಅವರ ಶವಸಂಸ್ಕಾರದಲ್ಲಿ ಭಾಗವಹಿಸಿರಲಿಲ್ಲ. ಆದರೆ ಬೇರೆ ಎಲ್ಲಾ ಆಚರಣೆಗಳಲ್ಲೂ ನಾನು ಪಾಲ್ಗೊಂಡಿದ್ದೆ, ನನ್ನ ಕುಟುಂಬದ ಪದ್ಧತಿಯಂತೆ ಹೆಂಗಸರಿಗೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ. ಆದರೆ, ನಾನು ಮೇ 2 ರಂದು ನಿಜಸ್ಥಿತಿಯ ಬಗ್ಗೆ ಹೆಚ್ಚು ಅರಿಯಲು ಎರಡು ಶವಸಂಸ್ಕಾರ ಕೇಂದ್ರಗಳಿಗೆ ಭೇಟಿ ನೀಡಿದ್ದೆ. ನನಗೆ ಸೋಂಕು ತಗಲದಿರಲೆಂದು ಅಗತ್ಯವಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೆ ಅಥವಾ ಹಾಗಂದುಕೊಂಡಿದ್ದೆ.
ಬೆಂಗಳೂರಿನಲ್ಲಿ, ಕೋವಿಡ್ ವೈರಾಣುವಿನಿಂದ ಸೋಂಕಿತವಾದ ಮೃತದೇಹಗಳನ್ನು ದಹನ ಮಾಡಲು ಇರುವಂತಹ ಬಹಳಷ್ಟು ಚಿತೆಗಳನ್ನು ಸಮೂಹಮಾಧ್ಯಮಗಳಲ್ಲಿ ನಾನು ನೋಡುತ್ತಿದ್ದೇನೆ. ಸೋಂಕು ತಗಲದಿರಲೆಂದು ಕುಟುಂಬದವರು ಶವಸಂಸ್ಕಾರದಿಂದ ದೂರವೇ ಇರುತ್ತಿರುವ ಬಗ್ಗೆ ಕೇಳಿದ್ದೆ. ಚಿತಾಗಾರಗಳ ಸಿಬ್ಬಂದಿ ಮತ್ತು ಅಂಬುಲೆನ್ಸ್/ ಶವವಾಹನಗಳ ಚಾಲಕರು, ದುಃಖದಲ್ಲಿರುವ ಜನರನ್ನು ಹಣದಾಸೆಗಾಗಿ ಸುಲಿಗೆ ಮಾಡುತ್ತಿದ್ದಾರೆ. ಸರ್ಕಾರ ಇದು ಉಚಿತ ಸೇವೆ ಎಂದು ಹೇಳುತ್ತಿದ್ದರೂ ಕೋವಿಡ್ ನಿಂದ ಮರಣಹೊಂದಿದ ಮೃತದೇಹಗಳನ್ನು ವಿಲೇವಾರಿ ಮಾಡಲು ಕಡಿಮೆಯೆಂದರೂ ರೂ. 30,000 ವೆಚ್ಚವಾಗುತ್ತದೆ ಎಂಬ ವರದಿಗಳನ್ನು ಓದಿದ್ದೇನೆ.
ನನ್ನಲ್ಲಿ ಬಹಳಷ್ಟು ಪ್ರಶ್ನೆಗಳೆದ್ದವು, ಇನ್ನೂ ಹಾಗೆಯೇ ಇವೆ. ನಮ್ಮಲ್ಲಿ ಮಾನವೀಯತೆ ಉಳಿದೇ ಇಲ್ಲವೇ? ದಿನದ 24 ಗಂಟೆ, ವಾರದ ಏಳು ದಿನಗಳೂ ಹಣವನ್ನು ಎಣಿಸುತ್ತಿರುವ ಬೆಂಗಳೂರಿನ ಜಾಗತಿಕ ಬ್ರಾಂಡ್ ಹೈಟೆಕ್ ಆಸ್ಪತ್ರೆಗಳಿಗಳವರೆಲ್ಲಾ ಈಗ ಏನು ಮಾಡ್ತಾ ಇದಾರೆ? ಅಲ್ಲಿ ಆಮ್ಲಜನಕವೂ ಇಲ್ಲವೇ? ಕಳೆದ 12 ತಿಂಗಳು ವಿಷಮ ಪರಿಸ್ಥಿತಿಯಲ್ಲಿದ್ದರೂ, ಅದರಿಂದ ನಾವೇನೂ ಕಲಿಯಲಿಲ್ಲವೇ? ಹಾಗಾದರೆ ಈ ಮಹಾನಗರ, ಬಾಹ್ಯಾಕಾಶ ವಿಜ್ಞಾನದ ಸಾಧನೆಗಳ ಬಗ್ಗೆ ಬೆನ್ನುತಟ್ಟಿಕೊಳ್ಳುತ್ತಿರಬೇಕಾದರೆ, ಮೂಲಭೂತ ವೈದ್ಯಕೀಯ ಸೌಲಭ್ಯಗಳ ಬಗ್ಗೆ ಯಾಕೆ ಮೌನವಾಗಿದೆ? ಮಹಾರಾಷ್ಟ್ರದ ಪರಿಸ್ಥಿತಿಯನ್ನು ನೋಡುತ್ತಿದ್ದಾಗಲೂ, ಇಲ್ಲಿಯೂ ಅಂತಹ ವಿಷಮ ಪರಿಸ್ಥಿತಿ ಬರಬಹುದೆಂದು ಪೂರ್ವ ತಯಾರಿ ಮಾಡಿಕೊಳ್ಳಬೇಕಿತ್ತಲ್ಲವೇ? ಇಂತಹ ಬೃಹತ್ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ನಾವು ಸರ್ಕಾರವನ್ನು ದೂಷಿಸುತ್ತಾ ಕಾಲಹರಣ ಮಾಡುತ್ತಿದ್ದೇವಾ? ಇಂತಹ ಅನೇಕ ಪ್ರಶ್ನೆಗಳು ನನ್ನ ಮುಂದಿವೆ.
ನಾನೋರ್ವ ಪತ್ರಕರ್ತೆಯಾಗಿ, ಸಾಮೂಹಿಕ ಶವಸಂಸ್ಕಾರಗಳನ್ನು ಹಲವಾರು ಗಂಟೆಗಳ ಕಾಲ, ದಿನಗಟ್ಟಲೆ ಮಾಡುತ್ತಿರುವ ಜನರೊಂದಿಗೆ ಮಾತನಾಡಲು ಬಯಸಿದ್ದೆ. ಸ್ಮಶಾನಗಳಲ್ಲಿ ಕೆಲಸ ಮಾಡುವವರು ಜಾಗತಿಕ ಪಿಡುಗಿನ ಈ ಪರಿಸ್ಥಿತಿಯಲ್ಲಿ ವಾರಗಟ್ಟಲೆ ಕೆಲಸಮಾಡಿ ಬದುಕುಳಿಯಬಲ್ಲರು ಎಂದಾದರೆ, ಕುಟುಂಬದವರು ಮತ್ತು ಸ್ನೇಹಿತರು ದೂರ ನಿಂತಾದರೂ ತಮ್ಮ ಪ್ರೀತಿಪಾತ್ರರಿಗೆ ವಿದಾಯ ಹೇಳಬಹುದಲ್ಲವೇ? ಶವಸಂಸ್ಕಾರ ಮಾಡುತ್ತಿರುವ ಅಂಬುಲೆನ್ಸ್ ಚಾಲಕರು ಅಂತಹ ಅಪಾಯಕಾರಿ ವಾತಾವರಣದಲ್ಲಿ ಪ್ರತಿನಿತ್ಯ ಕೆಲಸ ಮಾಡುತ್ತಿದ್ದಾರೆ. ಆದರೆ ಬಹುತೇಕರು ಮನೆಯಲ್ಲೇ ಇದ್ದರೂ ಸೋಂಕಿತರಾಗಿದ್ದಾರೆ, ಉಸಿರಾಡಲಾಗದೆ ಸಾಯುತ್ತಿದ್ದಾರೆ. ಅವರ ಬಡತನ ಅವರನ್ನು ಮೃತ ದೇಹಗಳನ್ನು ವಿಲೇವಾರಿ ಮಾಡುವಂತಹ ಕೆಲಸಕ್ಕೆ ದೂಡಿದೆಯೇ?
ಅವತ್ತು ಭಾನುವಾರ ಬೆಳಿಗ್ಗೆ 7 ಗಂಟೆ. ನನ್ನ ಬೈಕನ್ನು ಬನಶಂಕರಿಯಲ್ಲಿರುವ ವಿದ್ಯುತ್ ಚಿತಾಗಾರದ ಕಡೆ ಓಡಿಸಿದೆ. ಆ ಚಿತಾಗಾರ ಕೋವಿಡ್ ನಿಂದ ಮರಣ ಹೊಂದಿದವರ ಶವಸಂಸ್ಕಾರ ಮಾಡುವುದಕ್ಕೇ ಮೀಸಲು. ನನ್ನ ಸ್ನೇಹಿತ ಮತ್ತು ಸಮಾಜಸೇವಕ ಕಿರಣಕುಮಾರ್ ಪಿ ಎಲ್ ಎನ್ನುವವರು, ಮಹಾದೇವನೆಂಬ ಅಂಬುಲೆನ್ಸ್ ಚಾಲಕನನ್ನು ದೂರವಾಣಿಯಲ್ಲೇ ನನಗೆ ಪರಿಚಯಿಸಿದ್ದರು. ಮಹಾದೇವ ಕಳೆದ ಹತ್ತು ದಿನಗಳಿಂದ ಚಿತಾಗಾರವನ್ನೇ ತನ್ನ ಮನೆ ಮಾಡಿಕೊಂಡಿದ್ದಾನೆ. ನಾನು ಅಲ್ಲಿಗೆ ತಲುಪಿದ ಕೂಡಲೇ ಮಹಾದೇವ ಫೋನ್ ಮಾಡಲು ಹೇಳಿದ್ದ. ಆದರೆ ಆತನ ಫೋನ್ ಸ್ವಿಚ್ಆಫ್ ಆಗಿತ್ತು. ಅಂಬುಲೆನ್ಸ್ ಮತ್ತು ಶವವಾಹನಗಳಾಗಿ ಮಾರ್ಪಡಿಸಲ್ಪಟ್ಟ ಪ್ರವಾಸೀ ವ್ಯಾನುಗಳು, ಶೋಕದಲ್ಲಿರುವ ಕುಟುಂಬದವರು, ಬಿ ಬಿ ಎಂ ಪಿ ನೌಕರರು, ಭದ್ರತಾ ಸಿಬ್ಬಂದಿ-ಹೆಂಗಸರೂ ಗಂಡಸರೂ, ಪುರೋಹಿತರು, ಮತ್ತೆ ಅನೇಕರು ಆ ಆವರಣದಲ್ಲಿ ಕಂಡರು. ಅಲ್ಲಿನ ವಿಲಕ್ಷಣ ಮೌನದಿಂದಾಗಿ ನನಗೆ ಯಾರೊಂದಿಗೂ ಮಾತುಕತೆಯಾಡಲು ಹಿಂಜರಿಕೆಯಾಯಿತು. ಒಬ್ಬ ತರುಣ ನನ್ನ ಬಳಿ ಬಂದು ತಾನೇ ಮಹಾದೇವ ಎಂದು ಪರಿಚಯಿಸಿಕೊಂಡ. ಅವನು ನನ್ನನ್ನು ಹೇಗೆ ಗುರುತು ಹಿಡಿದ ಎಂಬುದು ನನಗೆ ತಿಳಿಯದು.
ಅವನು, ಮೊದಲು, “ ಕ್ಷಮಿಸಿ “ ಎಂದು ಹೇಳಿ, “ನನ್ನ ಫೋನ್ ಆಫ್ ಆಗಿ ಬಿಟ್ಟಿದೆ. ರಾತ್ರೆಯೆಲ್ಲಾ ಫೋನ್ ಕಾಲ್ ಗಳು ಬರ್ತಾನೇ ಇರುತ್ತೆ, ಬ್ಯಾಟರಿ ಹೋಗಿಬಿಟ್ಟಿದೆ….. ಈಗ ಚಾರ್ಜ್ ಆಗ್ತಾ ಇದೆ” ಅಂದ. ಅವನ ಅನುಮತಿ ಪಡೆದು ಅವನ ಅನುಭವಗಳನ್ನು ಕೇಳುತ್ತಾ ಅದನ್ನು ವಿಡಿಯೋ ಮಾಡತೊಡಗಿದೆ. ಅವನ ಪ್ರಕಾರ ಪ್ರತೀದಿನ 30/40 ಮೃತದೇಹಗಳನ್ನು ಆಸ್ಪತ್ರೆಯಿಂದ ಚಿತಾಗಾರಕ್ಕೆ ಸಾಗಿಸಲಾಗುತ್ತಿದೆ. ಎಲ್ಲಾ ಕುಟುಂಬಗಳೇನೂ ಕೋವಿಡ್ ನಿಂದ ಮರಣ ಹೊಂದಿದ ಮೃತದೇಹಗಳನ್ನು ಹಾಗೆಯೇ ಬಿಟ್ಟು ಹೋಗುವುದಿಲ್ಲ. “ಕೆಲವರು ಫೊನ್ ಮಾಡಿ ನೀವೇ ಎಲ್ಲಾ ಮಾಡಿಬಿಡಿ ಅಂತಾರೆ. ನನ್ನ ಹಂಗೆ ಬಹಳ ಜನ ಡ್ರೈವರುಗಳು ಈ ಕೆಲಸ ಮಾಡ್ತಿದ್ದಾರೆ. ನಾವೂ ಬಾಡಿ ತೆಗೊಂಡು ಹೋಗಿ ಚಿತೆಯಲ್ಲಿಡ್ತೀವಿ.” ಆತ ಹೇಳಿದ.
ಅವನು ಈಗಿನ ಹೆಚ್ಚುವರಿ ಕೆಲಸದ ಹೊರೆಯನ್ನು ಹೇಗೆ ನಿಭಾಯಿಸುತ್ತಾನೆ? “ ಇದೊಂದು ಚಾಲೆಂಜೇ. ಹಗಲು -ರಾತ್ರಿ ಕೆಲಸ ಮಾಡುವುದು ಅಭ್ಯಾಸ ಆಗಿಬಿಟ್ಟಿದೆ. ಬಾಡಿ ಸಾಲಾಗಿಟ್ಟಿರುವುದನ್ನು ನೋಡಿದರೆ ಮನಸ್ಸಿಗೆ ತುಂಬಾ ಬೇಜಾರಾಗುತ್ತೆ. ಇಲ್ಲಿ ಊಟ ನೀರು ಸಿಗೋದೂ ಕಷ್ಟಾನೇ, ಯಾರೋ ಮಧ್ಯಾಹ್ನದ ಊಟ ತಂದುಕೊಡ್ತಿದಾರೆ. ಇದರಿಂದ ತುಂಬಾ ಅನುಕೂಲ ಆಗಿದೆ. ಈಗ ಲಾಕ್ ಡೌನ್ ಆಗಿದೆ, ಹೋಟೆಲ್ಲೂ ಮುಚ್ಚಿಬಿಟ್ಟಿದೆ,” ಆತ ತನ್ನ ಮೂಗಿನ ಮೇಲೆ ಮುಖಗವಸನ್ನು ಎಳೆದುಕೊಳ್ಳುತ್ತಾ ಹೇಳಿದ.
ಒಂದು ಮೃತದೇಹದ ಸಂಸ್ಕಾರ ಮಾಡುವುದಕ್ಕಾಗಿ ಅವನು ಎಷ್ಟು ಹಣ ತೆಗೆದುಕೊಳ್ಳಬಹುದು? “ ನನ್ನ ಮಾಲೀಕರು ನನಗೆ ತಿಂಗಳಿಗೆ ರೂ. 10000 ಸಂಬಳ ಕೊಡ್ತಾರೆ. ಕೋವಿಡ್ ಬಾಡಿ ವಿಲೇವಾರಿ ಮಾಡೋಕೆ ಜನ ಸ್ವಲ್ಪ ಟಿಪ್ಸ್ ಕೊಡ್ತಾ ಇದಾರೆ. ನಾನಾಗೇ ಹಣ ಕೇಳ್ತಾ ಇಲ್ಲ, ಹಾಗೆ ಕೇಳಬಾರದು, ಅದು ಒಳ್ಳೆಯದಲ್ಲ,”ಎಂದು ಹೇಳಿದ..
ಒಬ್ಬ ಅಂಬುಲೆನ್ಸ್ ಚಾಲಕನಿಗೆ ಒಂದು ಶವವನ್ನು ಸಾಗಿಸಲು ಒಂದು ಪಿ.ಪಿ.ಇ.ಕಿಟ್ ದೊರೆಯುತ್ತದೆ. ಬೆಂಗಳೂರು ಮಹಾನಗರಪಾಲಿಕೆ ಕೋವಿಡ್ ಸೋಂಕಿಗೆ ಬಲಿಯಾದವರ ಮೃತದೇಹ ಸಾಗಿಸುವುದಕ್ಕೆ ಮತ್ತು ಶವಸಂಸ್ಕಾರಕ್ಕೆ ಶುಲ್ಕ ವಿಧಿಸುವುದಿಲ್ಲ. ಅಲ್ಲಿ ಚಿತೆಗಾಗಿ ದೊಡ್ಡ ಸರದಿಸಾಲೇ ಇತ್ತು. ಖಾಸಗಿ ಅಂಬುಲೆನ್ಸ್ ನಿರ್ವಾಹಕರು ಮಾತ್ರ ರೂ.2000 ದಿಂದ ರೂ.3000ದ ವರೆಗೆ ಮತ್ತು ಕಾಯುವ ಸಮಯಕ್ಕಾಗಿ ಸ್ವಲ್ಪ ಹಣ ಕೇಳುತ್ತಾರೆ. ಒಂದು ಮೃತದೇಹಕ್ಕೆ ರೂ.4000ಕ್ಕಿಂತ ಹೆಚ್ಚು ವೆಚ್ಚವಾಗುವುದಿಲ್ಲ. ಕೆಲವು ಚಾಲಕರು ಸಿಕ್ಕಾಪಟ್ಟೆ ಹಣ ಕೇಳ್ತಾರೆ ಅನ್ನೋದನ್ನು ಅವನು ಒಪ್ಪಿಕೊಳ್ಳುತ್ತಾನೆ. “ ಕೆಲವರು ಎಲ್ಲಾ ಜವಾಬ್ದಾರಿ ಡ್ರೈವರ್ ಗೆ ವಹಿಸಿಬಿಡುತ್ತಾರೆ. ಕೆಲವೊಮ್ಮೆ ಬಾಡಿ ಇಟ್ಟುಕೊಂಡು ಸಂಜೆಯಿಂದ ಬೆಳಗಿನ ತನಕ ಕಾಯಬೇಕಾಗುತ್ತೆ. ಆಗ ಬಾಡಿಯನ್ನು ವೆಹಿಕಲ್ ಫ್ರೀಜರಿನಲ್ಲಿ ಇಡಬೇಕಾಗುತ್ತೆ. ಇದಕ್ಕೆ ದುಡ್ಡು ಜಾಸ್ತಿಯಾಗುತ್ತೆ. ಪೂಜೆ ಸಾಮಾನಿಗೆ ರೂ. 3000, ಪುರೋಹಿತರಿಗೆ ರೂ.4000 ಚಟ್ಟಕ್ಕೆ ರೂ.2000 ಬೇಕಾಗುತ್ತೆ. ಜೊತೆಗೆ ಪ್ರಯಾಣದ ಖರ್ಚು…. ಪೇಪರ್, ಟಿ ವಿ ಯಲ್ಲಿ ಬೆಲೆ ಜಾಸ್ತಿ ಅಂತ ಬಂದ ಮೇಲೆ, ರೇಟ್ ಸ್ವಲ್ಪ ಕಡಿಮೆ ಮಾಡಿದಾರೆ.”. ಮಹಾದೇವ ವಿವರಿಸಿದ.
32 ವರ್ಷದ ಮಹಾದೇವ ಎಸ್ ಎಸ್ ಎಲ್ ಸಿ ಮುಗಿಸಿದ್ದಾನೆ. ಆತ ಕಳೆದ 11 ವರ್ಷಗಳಿಂದ ಅಂಬುಲೆನ್ಸ್ ಚಾಲಕ. ಚಾಲಕನೆಂದೇ ತನಗೆ ಹುಡುಗಿ ಸಿಗ್ತಿಲ್ಲ ಎಂದು ಹೇಳಿದ. ಮತ್ತೊಮ್ಮೆ ಕೇಳಿದೆ, ಈ ಕೆಲಸದಲ್ಲಿ ಅವನು ಎಷ್ಟು ಸುರಕ್ಷಿತ ಎಂದು. “ಮ್ಯಾಡಮ್, ನಿಮ್ಮ ಹತ್ತಿರ ಸತ್ಯ ಹೇಳ್ತೀನಿ, ಕೇಳಿ. ಈ ಸ್ಯಾನಿಟೈಸರಿನಿಂದ ನಾನು ಆರಾಮಾಗಿದೀನಿ,” ಅಂತ ಅವನು ನಸುನಗುತ್ತಲೇ ಹೇಳಿದ. ನಾನು ಯಾವ ಸ್ಯಾನಿಟೈಸರ್ ಉಪಯೋಗಿಸ್ತೀ ಎಂದು ಕೇಳಿದಾಗ “ನನ್ನ ಸ್ಯಾನಿಟೈಸರ್ ರಮ್. ದಿನಾ ಮಲ್ಕಳ್ಳೋ ಮೊದಲು ಗಟ ಗಟ ಕುಡೀತೀನಿ. ಅದೇ ನಂಗೆ ಆರಾಮ. ಮೊದಲು 90 ಎಂ.ಎಲ್, ಈಗ 180 ಎಂ.ಎಲ್ ತೆಗೋತೀನಿ. ಈ “ಸ್ಯಾನಿಟೈಸರ್” ತೆಗೆಳ್ಳೋದಕ್ಕೇ ನನಗೆ ರಾತ್ರಿ ಒಳ್ಳೇ ನಿದ್ದೆ ಬರುತ್ತೆ. ನನ್ನ ತರಹ ನನ್ನ ಫ್ರೆಂಡ್ಸ್ ತೆಗೋತಾರೆ. ಹಾಗಂತ, ಇಲ್ಲಿ ಕೆಲಸಮಾಡೋರೆಲ್ಲರೂ ಕುಡಿಯಲ್ಲ.” ಅವನು ಹೇಳಿದ. ಆದರೂ ನಾನು ಹೇಳಿದೆ, ಶಿಷ್ಟಾಚಾರ ಪಾಲಿಸಬೇಕು ಅಂತ. ಅವನಿಗೆ ಕೇಳಿಸಿತೋ ಬಿಡ್ತೋ ಗೊತ್ತಿಲ್ಲ.
ಅವನು ಮತ್ತೆ ಮುಂದುವರಿಸಿ ಹೇಳಿದ, ಈ ಸೋಂಕಿನಿಂದ ಇಬ್ಬರು ಡ್ರೈವರ್ ಸತ್ತಿದ್ದು ಬಿಟ್ಟರೆ, ಡ್ರೈವರುಗಳಲ್ಲಿ ಬೇರೆ ಯಾರಿಗೂ ಸೋಂಕಾಗಿಲ್ಲ ಮತ್ತು ಸತ್ತಿಲ್ಲ. ಹೊಟ್ಟೆಪಾಡಿಗೆ ಅವನಿಗೆ ಕೆಲಸ ಬೇಕು, ಹಾಗಾಗಿ ತನ್ನ ಕೆಲಸವನ್ನು ಸಮರ್ಥಿಸಿಕೊಳ್ಳುತ್ತಿದ್ದಾನಾ?ನನಗೆ ಗೊತ್ತಾಗ್ತಾ ಇಲ್ಲ.
ನಾವು ಮಾತಾಡುತ್ತಿರುವಾಗ ಗೋಪೀನಾಥ ಎಂಬ ವ್ಯಕ್ತಿ ಅಲ್ಲಿಗೆ ಬಂದು ನಿಂತ. ಸಪೂರವಾಗಿ ಕಾಣುವ ಮೈಸೂರಿನ ಆ ಮನುಷ್ಯ ಕಳೆದ 35 ವರ್ಷಗಳಿಂದ ಅದೇ ಸ್ಮಶಾನದಲ್ಲಿ ಕೆಲಸ ಮಾಡುತ್ತಿದ್ದ. ಆತ ತಾನಾಗೇ ತನ್ನ ಅನುಭವಗಳನ್ನು ಹೇಳತೊಡಗಿದ. ನಿಜಾ ಹೇಳ್ತೀನಿ ಕೇಳಿ, ಎಂದ, “ಕಳೆದ 12 ದಿವಸಗಳಲ್ಲಿ ಕೆಲಸ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಎರಡು ವಾರದ ಹಿಂದೆ, 8 ರಿಂದ 9 ಬಾಡಿ ಬರೋದು ಇಲ್ಲಿ. ಈಗ 30 ಬರುತ್ತೆ. ಜಾಸ್ತೀನೇ ಆಗ್ತಾ ಇದೆ..” ಅವನು ಗಾರ್ಡ್ ತರಹ ಡ್ರೆಸ್ ಹಾಕಿಕೊಂಡಿರುವ ಒಬ್ಬ ಹುಡುಗ ಮತ್ತು ಹುಡುಗಿ ಕಡೆ ಕೈ ತೋರಿಸಿ, “ ಅವರು ಹೆಣಗಳ ಲೆಕ್ಕ ಇಡ್ತಿದಾರೆ” ಅಂದ.
ಆತ ಮುಖಗವಸು ಮತ್ತು ಕೈಗವಸು ಎರಡೇ ಹಾಕಿಕೊಂಡಿದ್ದ. ಇಷ್ಟೇ ಸಾಕಾ ನಿಮ್ಮ ಕೆಲಸಕ್ಕೆ? ಕೋವಿಡ್ ವೈದ್ಯಕೀಯ ಸಿಬ್ಬಂದಿ ಕಡೆಯವರು ಯಾರೂ ನಿಮಗೆ ಮುಂಜಾಗ್ರತೆ ತೆಗೆದುಕೊಳ್ಳಲು ಹೇಳಿಲ್ಲವೇ ಅಂತ ಕೇಳಿದಾಗ. “ಡಾಕ್ಟರ್, ಗೀಕ್ಟರ್ ಯಾರೂ ಏನೂ ಹೇಳಿಲ್ಲ. ನಮಗೆ ಪಿ ಪಿ ಇ ಕಿಟ್, ಕೈಗವಸು, ಮುಖಗವಸು ಎಲ್ಲಾ ಕೊಟ್ಟಿದ್ದಾರೆ. ಇಷ್ಟು ಸಾಕು ಅಂತ ಹೇಳಿದಾರೆ. ನಾವು ಒಳಗಡೆ ಇದ್ದಾಗ ಪಿಪಿಇ ಕಿಟ್ ಹಾಕ್ಕೋತ್ತೀವಿ..” “ಅಲ್ಲಿ ಹೆಣ ಸುಡೋಕೆ ನಾನೂ ಸೇರಿ 6 ಜನ ಇದೀವಿ”, ಗೋಪೀನಾಥ ಹೇಳಿದ.
ಅವನಿಗೆ ತನ್ನ ಆರೋಗ್ಯದ ಬಗ್ಗೆ ತುಂಬಾ ಕಾಳಜಿ ಇದ್ದಂತೆ ಕಾಣಲಿಲ್ಲ. ಆದರೆ ಮೃತಶರೀರದ ಜೊತೆಗೆ ಅಲ್ಲಿಗೆ ಬರುತ್ತಿರುವ ಪುಟ್ಟಮಕ್ಕಳ ಬಗ್ಗೆ ಅವನಿಗೆ ಕಳಕಳಿ ಇತ್ತು. “ಬಾಡಿ ಜೊತೆಗೆ ನಾಲ್ಕು ಜನ ಮಾತ್ರ ಬರೋಕೆ ಬಿಬಿಎಂಪಿಯವರು ಬಿಡ್ತಾರೆ. ಆದರೆ ನಮಸ್ಕಾರ ಮಾಡಬೇಕು ಅಂತ ಹೆಚ್ಚುಜನ ಬರ್ತಾರೆ. ನಿನ್ನೆ ಒಬ್ರು ಮಕ್ಕಳನ್ನು ಕರೆದುಕೊಂಡು ಬಂದಿದ್ದರು. ಅವರಿಗೇನಾದರೂ ಸೋಂಕಾದ್ರೆ ಏನು ಗತಿ? ಈಗ ಹಂಗಿಲ್ಲಲ್ವಾ? ನಾಳೆಯಿಂದ ನಾವು ಕಟ್ಟುನಿಟ್ಟಾಗಿರ್ತೀವಿ. ಮಕ್ಕಳನ್ನಂತೂ ಬಿಡಲ್ಲ” ಆತ ಹೇಳಿದ.
ಮನಸ್ಸಿನ ಮತ್ತು ಕೆಲಸದ ಒತ್ತಡ ಇದ್ದಕ್ಕಿದ್ದಂತೆ ಹೆಚ್ಚಾಗಿದೆಯಲ್ಲಾ? ಅದನ್ನು ಅವನು ಹೇಗೆ ನಿಭಾಯಿಸುತ್ತಾನೆ? “ ಹೌದು ಎರಡೂ ಜಾಸ್ತಿಯಾಗಿದೆ. ಬಹಳ ಸುಸ್ತಾಗುತ್ತೆ. ರಾತ್ರಿ 2.30ಕ್ಕೆ ಮಲ್ಕೋತೀನಿ, ಬೆಳಿಗ್ಗೆ 5 ಗಂಟೆಗೇ ಕೆಲಸಕ್ಕೆ ಬರ್ತೀನಿ. ರಾತ್ರಿ ಬಾಡಿಗಳನ್ನು ತುಂಬ್ಕೊಂಡು ಅಂಬುಲೆನ್ಸುಗಳು ಇಲ್ಲಿ ಬಂದು ನಿಂತಿರುತ್ತವೆ. ಇಲ್ಲಿ ಸುತ್ತಮುತ್ತಲ ಮನೆಯವರು ಅದಕ್ಕೆ ತಕರಾರು ಮಾಡ್ತಾರೆ. ಹಾಗಾಗಿ ಬೆಳಿಗ್ಗೆ 6 ಗಂಟೆಗೇನೇ ಸ್ವಿಚ್ ಆನ್ ಮಾಡಿಬಿಡ್ತೀವಿ. ನಾನು ಬಿಬಿಎಂಪಿಯ ನೌಕರ, ನನಗೆ ಸಂಬಳ ಬರುತ್ತೆ. ಜನ ಕೈಗಿಷ್ಟು ದುಡ್ಡು ಕೊಡುತ್ತಾರೆ. ಅವರು ರೂ.10 ಅಥವಾ ಅದಕ್ಕಿಂತ ಸ್ವಲ್ಪ ಜಾಸ್ತಿ ಕೊಡಬಹುದು, ಕೆಲವರು ಏನೂ ಕೊಡಲ್ಲ. ಆದರೆ, ನಾವು ಯಾರೂ ಏನೂ ಕೇಳಿ ಇಸ್ಕೊಳ್ಳಲ್ಲ. ಕೊಟ್ಟರೆ ಇಸ್ಕೊತ್ತೀವಿ.” ಎಂದು ಹೇಳಿದ.
ಕುಟುಂಬದವರಿಗೆ ಇಲ್ಲಿ ಬೂದಿ ಸಂಗ್ರಹ ಮಾಡುವುದು ಈ ಸಂದರ್ಭದಲ್ಲಿ ಕಷ್ಟ ಆಗಲ್ಲವಾ? ಇಲ್ಲಿ ಬಹಳ ಮೃತದೇಹಗಳು ಬರೋದ್ರಿಂದ ಬೂದಿ ತುಂಬಿಸಿಟ್ಟ ಮಣ್ಣಿನ ಕೊಡ ಅದಲು ಬದಲು ಆಗೋದಿಲ್ಲವೇ? ಗೋಪೀನಾಥ ಹೇಳುವಂತೆ, ಒಂದು ಮೃತದೇಹವನ್ನು ದಹನ ಮಾಡಲು ಹೆಚ್ಚೆಂದರೆ ಒಂದೂವರೆ ಗಂಟೆ ಬೇಕಾಗಬಹುದು. ಆವಾಗಲೇ ನಾವು ಬೂದಿ ಸಂಗ್ರಹಿಸಿ ಮಣ್ಣಿನ ಕೊಡಗಳಲ್ಲಿ ತುಂಬಿಸಿ, ಮೃತರ ಹೆಸರು ಮತ್ತು ಬಿಬಿಎಂಪಿ ನಂಬರು ಬರೆದು ತೆಗೆದಿಟ್ಟಿರುತ್ತೇವೆ. ಇದರಿಂದ ತೊಂದರೆ ಆಗ್ತಾ ಇಲ್ಲ. ಆ ಮಣ್ಣಿನ ಕೊಡ ಯಾರಿಗೆ ಸೇರಬೇಕೋ ಅವರಿಗೇ ಸೇರುತ್ತೆ.” ಆತ ವಿವರಿಸಿದನು.
ಮನು ಮತ್ತು ಸಂತೋಷ್ ಎಂಬ ಇಬ್ಬರು ಯುವ ಅಂಬುಲೆನ್ಸ್ ಚಾಲಕರು, ನನ್ನೊಂದಿಗೆ ಮಾತಾಡಲು ತಾವಾಗಿಯೇ ಬಂದರು. ಅವರು ಮಾತಾಡಲು ತಯಾರಿದ್ರು, ಆದರೆ ಫೋಟೋ ತೆಗೆಯೋದು ಬೇಡ ಅಂದರು. ಮನುಗೆ, ಅವನ ಸಣ್ಣ ಮಕ್ಕಳು, ಈ ಚಿತ್ರವನ್ನು, ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಟಿ ವಿ ಯಲ್ಲಿ ನೋಡುವುದು ಇಷ್ಟವಿರಲಿಲ್ಲ. ನಾನು ಟಿ ವಿ ಚಾನಲ್ಲಿನವಳು ಅಲ್ಲವೆಂದು ಅವನಿಗೆ ಮನವರಿಕೆ ಆದ ನಂತರ ಫೋಟೋ ತೆಗೆಯಲು ತಾನಾಗಿಯೇ ಮುಂದೆ ಬಂದ.
“ನಾನು ಒಬ್ಬ ಡ್ರೈವರ್. ಹೋದ ವರ್ಷ ನನಗೇನೂ ಸಂಪಾದನೇನೆ ಇರಲಿಲ್ಲ. ಸಂಸಾರ ನೋಡ್ಕೊಳ್ಳಬೇಕು, ಈಗ ದುಡ್ಡು ಮಾಡ್ಬೇಕು ನಾನು…” ಅವನೂ ಮತ್ತೂ ಹೇಳಿದ, “ ಜನ ಅಳೋದನ್ನು ನೋಡಿದರೆ ಕಣ್ತುದಿಗೇ ನೀರು ಬರುತ್ತೆ. ಇದು ನನ್ನ ಕೆಲಸ ಅಷ್ಟೇ,” ಅವನು ವಿವರಿಸಿದನು. ಸಂತೋಷ್ ಸಹ ಹೀಗೇ ಹೇಳಿದ. ಅವರಿಬ್ಬರೂ ಸಮರ್ಥನೆ ಮಾಡಿಕೊಂಡರು, ಮೃತದೇಹಗಳಿಂದ ವೈರಾಣುಗಳು ಹರಡುವುದಿಲ್ಲ ಎಂದು. ಹಾಗಾಗಿ, ಅವರಿಗೆ ಅಲ್ಲಿ ಕೆಲಸ ಮಾಡಲು ಯಾವ ಭಯ ಇಲ್ಲ ಅಂತ. ಮನುವನ್ನು ಚಹಕ್ಕೆಂದು ಕರೆಯಲು, ಇನ್ನಿಬ್ಬರು ಜೊತೆಗೂಡಿ ಅಲ್ಲಿಗೆ ಬಂದರು.
ನಾನು ಚಹಾಕ್ಕೆಂದು ಮನು ಮತ್ತು ಸಂತೋಷ್ ಗೆ ರೂ.100 ಕೊಟ್ಟೆ. ಮನು ಸಂಕೋಚದಿಂದಲೇ ಅದನ್ನು ತೆಗೆದುಕೊಂಡ, ಆದರೆ ಸಂತೋಷನಿಗೆ ಆ ಹಣ ಪಡೆಯುವುದು ಸರಿ ಎನಿಸಲಿಲ್ಲ. ಆ ನಾಲ್ವರು ಯುವಕರು ಹರಟೆ ಹೊಡೆಯುತ್ತಾ ಅಲ್ಲಿಂದ ಹೊರಟುಹೋದರು. ಅವರು ಹೋಗ್ತಾ ಇರುವಾಗ ನನಗೆ ಗುಡ್ ಬೈ ಹೇಳಲು ಮರೆಯಲಿಲ್ಲ. ಪಕ್ಕದಲ್ಲೇ ಒಂದು ಸ್ಮಶಾನವಿದೆ, ಅಲ್ಲಿ ಮೃತದೇಹಗಳನ್ನು ಹೂಳುವುದು ಮಾತ್ರ. ಅಲ್ಲಿ ಕೋವಿಡ್ ಮೃತದೇಹಗಳನ್ನು ಹೂಳಲು ಅನುಮತಿ ಇರಲಿಲ್ಲ.
ಇದೆಲ್ಲಾ ನೋಡಿದಾಗ ನನಗೆ ಅನಿಸಿದ್ದು, ಜನರಿಗೆ ಈ ಒತ್ತಡವನ್ನು ತಾಳಿಕೊಳ್ಳಲು ಅದ್ಭುತ ಸಾಮರ್ಥ್ಯವಿದೆ ಮತ್ತು ಬದುಕಲು ಉದ್ದೇಶ ಇದ್ದರೆ ಏನು ಬೇಕಾದರೂ ಮಾಡಲು ತಯಾರಿರ್ತಾರೆ, ಎಂದು. ಇಂತಹ ಸಮಯದಲ್ಲಿ ಮುಂಚೂಣಿಯಲ್ಲಿರುವ ಕೆಲಸಗಾರರನ್ನೇ (ವೈದ್ಯಕೀಯ ಸಿಬ್ಬಂದಿ)ಕ್ವಾರಂಟೈನ್ ಮಾಡುವಂತಹ ಪರಿಸ್ಥಿತಿ ಇರುವಾಗ, ಸರ್ಕಾರವಾಗಲೀ, ಬಿ.ಬಿ.ಎಂ.ಪಿ.ಯಾಗಲೀ ಯಾವ ಲೋಪದೋಷಗಳಿಲ್ಲದಂತೆ ಕಾರ್ಯನಿರ್ವಹಿಸಬೇಕೆಂದು ನಿರೀಕ್ಷಿಸುವುದು ಸರಿಯಲ್ಲ.
ಮಹಾದೇವ, ನನಗೆ ಟಿ ಆರ್ ಮಿಲ್ಸ್ ಬಯಲು ಸ್ಮಶಾನಕ್ಕೆ-ಹಿಂದೂ ರುದ್ರಭೂಮಿ –ಹೋಗಲು ಸರಿಯಾದ ಮಾರ್ಗ ಹೇಳಿದ. ಅದು ಚಾಮರಾಜಪೇಟೆಯಲ್ಲಿದೆ. ಅಲ್ಲಿ ಕೋವಿಡ್ ಮತ್ತು ಕೋವಿಡ್ ಅಲ್ಲದ ಮೃತದೇಹಗಳಿಗೆ ಪ್ರತ್ಯೇಕ ಪ್ರವೇಶ ದ್ವಾರವಿದೆ.
ಕಟ್ಟಿಗೆಗಳ ರಾಶಿ
ನಾನು ಬೆಳಿಗ್ಗೆ 8.30ರ ಹೊತ್ತಿಗೆ ಅಲ್ಲಿ ತಲುಪಿದೆ. ಅಲೆಮಾರಿಯೊಬ್ಬ ಗದ್ದಕ್ಕೆ ಮುಖಗವಸು ತಗಲಿಸಿಕೊಂಡು ಗೇಟಲ್ಲೇ ಸುಮ್ಮನೇ ಕೂತಿದ್ದ. ತನ್ನ ಸುತ್ತಲಿನ ವಾತಾವರಣದ ಬಗ್ಗೆ ಅವನಿಗೆ ಪರಿವೆಯೇ ಇರಲಿಲ್ಲ. ಅದೊಂದು ವಿಶಾಲವಾದ ರುದ್ರಭೂಮಿ, ಅಲ್ಲಿ ಸಾಕಷ್ಟು ಹಳೆಯ ಮರಗಳಿದ್ದವು. ಅಲ್ಲಿ ಕೋವಿಡ್ ಮತ್ತು ನಾನ್-ಕೋವಿಡ್ ವಿಭಾಗದ ಎರಡೂ ಚಿತೆಗಳಲ್ಲಿ ಇನ್ನೂ ಕಟ್ಟಿಗೆಗೆ ಬೆಂಕಿಕೊಟ್ಟಿರಲಿಲ್ಲ. ಹಾಗಾಗಿ ಅಲ್ಲೇನೂ ಅಹಿತಕರ ವಾಸನೆ ಬರುತ್ತಿರಲಿಲ್ಲ. ಅಲ್ಲೊಂದು ನೀರವ ಖಾಲಿತನವಿತ್ತು. ಅಲ್ಲಿಯ ಸಿಬ್ಬಂದಿಯೊಬ್ಬರು ರಶೀದಿ ಬರೆಯುವುದರಲ್ಲಿ ಮುಳುಗಿದ್ದರು.
ಜನರು ಅಲ್ಲಿನ ಸಿಬ್ಬಂದಿಯ ಹಿಂದೆ ಮುಂದೆ ಸುಳಿದಾಡುತ್ತಾ, ಪ್ರಶ್ನೆಗಳನ್ನು ಕೇಳುತ್ತಾ, ಅವರ ಪ್ರೀತಿಪಾತ್ರರ ಮೃತದೇಹಗಳು ಯಾವಾಗ ಬರುತ್ತದೆ ಎಂಬುದಕ್ಕೆ ಕಾಯುತ್ತಾ ಇದ್ದರು. ಅಲ್ಲಿನ ಸಿಬ್ಬಂದಿಯನ್ನು ಹೊರತುಪಡಿಸಿದರೆ, ಬೇರೆ ಯಾರಿಗೂ ತಾಳ್ಮೆ ಇದ್ದಂತೆ ಕಂಡುಬರಲಿಲ್ಲ. ಮಹಾನಗರ ಪಾಲಿಕೆ ಒಂದು ವ್ಯವಸ್ಥೆ ಮಾಡಿಕೊಂಡು ಅದರಂತೆ ಮೃತದೇಹಗಳನ್ನು ಕಳುಹಿಸುತ್ತಿರುವುದರಿಂದ, ಮೃತದೇಹಗಳು ಬರುವುದು ತಡವಾಗುತ್ತಿದೆ, ಇದು ಅನಿವಾರ್ಯ. ಅಲ್ಲಿ ಯಾರೂ ಬಿಕ್ಕಿ ಬಿಕ್ಕಿ ಅಳೋದು ಅಥವಾ ಜೋರಾಗಿ ಅಳೋದು ಕಾಣಲಿಲ್ಲ.
ಕೋವಿಡ್ ಅಲ್ಲದ ವಿಭಾಗದಲ್ಲಿ, ಒಬ್ಬ ಯುವಕ ಹಿಂದಿನ ರಾತ್ರಿ ಮೃತದೇಹವನ್ನು ಸುಟ್ಟಿರುವ ಜಾಗದ ಫೋಟೋ ಅಥವಾ ವಿಡಿಯೋ ತೆಗೆಯುತ್ತಿದ್ದ. ಈ ದಿನಗಳಲ್ಲಿ, ಅಂತ್ಯಕ್ರಿಯೆಗಳೂ ಸೇರಿದಂತೆ ಎಲ್ಲವನ್ನೂ ಡಿಜಿಟಲ್ ಆಗಿ ದಾಖಲಿಸಲಾಗುತ್ತಿದೆ! ಬೂದಿ ತೆಗೆದುಕೊಂಡು ಹೋಗಲು ಬಂದವರೂ ಅಲ್ಲಿದ್ದರು. ಈ ಇಕ್ಕಟ್ಟಾದ, ಜಾಗದಲ್ಲಿ, ಡಜನುಗಟ್ಟಲೆ ಮೃತದೇಹಗಳು ಸುಟ್ಟು ಬೂದಿಯಾಗಿರಬೇಕು. ಅಲ್ಲಿ ಮೃತದೇಹಗಳ ಬೂದಿಯೊಂದಿಗೆ ಕಟ್ಟಿಗೆಯ ಬೂದಿಯ ರಾಶಿಯೂ ಇತ್ತು. ಅಲ್ಲಿ ಯಾರ ಹತ್ತಿರ ಹೋಗಿ ಮಾತನಾಡಲು ನನಗೆ ಧೈರ್ಯವಾಗಲಿಲ್ಲ. ಅಲ್ಲಿ ಎರಡು ಕೆಲಸ ನಡೆಯುತ್ತಾ ಇತ್ತು. ಜನರು ಒಂದೋ ಬೂದಿ ಸಂಗ್ರಹಿಸುತ್ತಿದ್ದರು, ಇಲ್ಲವೇ ಪುರೋಹಿತರೊಂದಿಗೆ ಮಾತಾಡುತ್ತಿದ್ದರು.
ಹಿಂದಿನ ದಿನ ಅಲ್ಲಿ ಬಿಟ್ಟುಹೋಗಿದ್ದ ಹೂಗಳು ಮತ್ತಿತರ ಕಸ ತೆಗೆದು ಸ್ವಚ್ಛಗೊಳಿಸುತ್ತಿದ್ದ ಯುವಕನೊಬ್ಬ, ನಾನು ಫೋಟೋ ತೆಗೆಯುತ್ತಿರುವುದನ್ನು ನೋಡಿದ. “ನೀವ್ಯಾಕೆ ಫೋಟೋ ತೆಗೆಯುತ್ತಿದ್ದೀರಿ” ಎಂದು ದೊಡ್ಡ ದನಿಯಲ್ಲಿ ಕೇಳಿದ. “ನೀವು ಮೀಡಿಯಾದವರಾ? ಈ ಮೀಡಿಯಾದವರು ಈಗಾಗಲೇ ಬಹಳ ತೊಂದರೆ ಕೊಟ್ಟಿದ್ದಾರೆ.” ನಾನು ಅವನ ಹತ್ತಿರ ಹೋಗಿ, ಸುಳ್ಳೇ ಹೇಳಿದೆ. “ನಮ್ಮ ಸಂಬಂಧಿಕರೊಬ್ಬರ ಮೃತದೇಹದ ಶವಸಂಸ್ಕಾರವನ್ನು ನಿನ್ನೆ ಇಲ್ಲಿ ಮಾಡಿತ್ತು. ನಾನು ಅಮೇರಿಕಾದಲ್ಲಿರುವ ಸಂಬಂಧಿಕರಿಗೆ ಫೋಟೋ ಕಳಿಸಬೇಕಾಗಿದೆ. ಆ ಜಾಗ ಎಲ್ಲಿ ಅಂತ ನನಗೆ ಗೊತ್ತಾಗ್ತಾ ಇಲ್ಲ”. ಕೂಡಲೇ ಶಾಂತನಾದ ಆತ, “ ಅದು ಕೋವಿಡ್ ಬಾಡೀನಾ ಅಥವಾ ನಾನ್- ಕೋವಿಡ್ ಬಾಡೀನಾ” ಎಂದು ಕೇಳಿದ. ನಾನು ಉತ್ತರ ಕೊಡುವ ಮೊದಲೇ ಎರಡೂ ಜಾಗಗಳನ್ನು ತೋರಿಸಿದ. ನಾನು ಅವನಿಗೆ ಧನ್ಯವಾದ ಹೇಳಿ ಕೋವಿಡ್ ವಿಭಾಗದ ಕಡೆ ಹೋದೆ.
ಒಂದು ತಗಡಿನ ಸೂರಿನಡಿ ಕಬ್ಬಿಣದ ಚೌಕಟ್ಟು(Frame)ಗಳಲ್ಲಿ ಸುಡಲು ವ್ಯವಸ್ಥೆ ಇದೆ. ಕಳೆದ ಎರಡು ವಾರಗಳಲ್ಲಿ ನೂರಾರು ಮೃತದೇಹಗಳನ್ನು ಸಾಮೂಹಿಕವಾಗಿ ಸುಟ್ಟಿರಬಹುದು, ಅಲ್ಲಿ ಯಾರೂ ಬೂದಿ ಸಂಗ್ರಹಿಸಲು ಬಂದಂತೆ ಕಾಣಲಿಲ್ಲ. ಅಲ್ಲಿಯ ಸಿಬ್ಬಂದಿ ಆ ಸ್ಥಳವನ್ನು ನೀರು ಹಾಕಿ ಸ್ವಚ್ಛಗೊಳಿಸುತ್ತಿದ್ದರು. ಕಟ್ಟಿಗೆಯ ರಾಶಿ ಸಿದ್ಧವಾಗಿತ್ತು.
ಅಲ್ಲಿದ್ದ ಕಸಗುಡಿಸುತ್ತಿದ್ದವರೊಬ್ಬರನ್ನು ಕೇಳಿದೆ, ಅಲ್ಲಿ ಕೆಲಸ ಮಾಡುತ್ತಿರುವವರು ಯಾರೂ ಯಾಕೆ ಸುರಕ್ಷತೆ ಕ್ರಮ ತೆಗೆದುಕೊಂಡಿಲ್ಲ, ಎಂದು. “ ಕೋವಿಡ್ ರೋಗಿ ಸಾಯುವಾಗ ವೈರಸ್ಸುಗಳೂ ಸತ್ತುಹೋಗುತ್ತವೆ. ಹಾಗಾಗಿ ಅದರ ಬಗ್ಗೆ ಏನೂ ಚಿಂತೆ ಮಾಡಬೇಕಾಗಿಲ್ಲ. ಕೆಲಸ ಮಾತ್ರ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ,” ಆತ ಹಿಂದಿಯಲ್ಲಿ ಹೇಳಿದ. ಏನೂ ಮಾತಾಡದೆ ಸುಮ್ಮನೆ ಬೂದಿ ಮತ್ತು ಕಸ ತೆಗೆದು ಸ್ವಚ್ಛಮಾಡುತ್ತಿರುವ ಸುಮಾರು ಒಂದು ಡಜನ್ ವಾರಿಯರುಗಳನ್ನು ಅಲ್ಲಿ ನೋಡಿದೆ. ಅದು ಅವರಿಗೆ ಒಂದು ಉದ್ಯೋಗವಾಗಿತ್ತು ಅಷ್ಟೇ. ಈ ಪರಿಸ್ಥಿತಿಯಲ್ಲಿ ಭಾವನೆಗಳಿಗೆ ಅಲ್ಲಿ ಜಾಗವಿದ್ದಂತೆ ಕಾಣಲಿಲ್ಲ. ಅವರ ಸುರಕ್ಷತೆಗಾಗಿ ನಾನು ಪ್ರಾರ್ಥಿಸಿದೆ. ನಾನು ಬೇರೆ ಏನು ಮಾಡಲು ಸಾಧ್ಯ?
ಈ ಸಾಮೂಹಿಕ ಶವಸಂಸ್ಕಾರ ನೋಡಿದಾಗ ನನಗೆ ವಾರಾಣಸಿಯ ದಶಾಶ್ವಮೇಧ ಘಾಟ್ ನೆನಪಾಯಿತು. 2016 ರಲ್ಲಿ ಗಂಗಾನದಿಯಲ್ಲಿ ನನ್ನ ತಾಯಿಯ ಅಸ್ತಿವಿಸರ್ಜನೆಯನ್ನು ಮಾಡಲು ನಾನಲ್ಲಿಗೆ ಹೋಗಿದ್ದೆ. ಒಂದು ಸಂಜೆ, ನನ್ನ ಮೂವರು ಸ್ನೇಹಿತೆಯರು ಮತ್ತು ನಾನು ದೋಣಿಯೊಂದರಲ್ಲಿ ಗಂಗಾರತಿಯನ್ನು ನೋಡುತ್ತಾ ಕುಳಿತಿದ್ದೆವು. ಅದೇ ಹೊತ್ತಿಗೆ ಸ್ವಲ್ಪ ದೂರದಲ್ಲಿ ಕಡಿಮೆಯೆಂದರೂ, 12 ಮೃತದೇಹಗಳನ್ನು ಬೆಂಕಿಯಲ್ಲಿ ದಹನ ಮಾಡುತ್ತಿರುವುದನ್ನು ನಾವು ನೋಡಬಹುದಾಗಿತ್ತು. ನನ್ನ ಕಲಾವಿದೆ ಸ್ನೇಹಿತೆ ಸುರೇಖಾ ಆ ದೃಶ್ಯಗಳನ್ನು ಸೆರೆ ಹಿಡಿಯುತ್ತಿರುವಾಗ, ನಾನು ಆ ಕಡೆ ನೋಡುವ ಧೈರ್ಯ ಮಾಡಲೂ ಇಲ್ಲ. ಅದೇ ಸಮಯದಲ್ಲಿ ಹೊಸದಾಗಿ ಮದುವೆಯಾದ ದಂಪತಿ ಗಂಗೆಗೆ ಪೂಜೆ ಮಾಡುತ್ತಿರುವುದನ್ನು ಸಹ ನೋಡಿದೆವು.
ಒಂದು ದಿನ ನನ್ನ ಬೆಂಗಳೂರಿನಲ್ಲಿ ಈ ರೀತಿಯ ಶವಸಂಸ್ಕಾರದ ಘಾಟುಗಳನ್ನು ನೋಡುತ್ತೇನೆಂದು ನಾನು ಆಗ ಕಲ್ಪಿಸಿಕೊಂಡಿರಲೂ ಇಲ್ಲ. ಆದರೆ, ವಾರಾಣಸಿಯಂತೆಯೇ, ಇಲ್ಲಿಯೂ ಜೀವನ ಹೀಗೆಯೇ ಮುಂದೆ ಸಾಗುತ್ತಿರಬೇಕು. ಮೃತದೇಹಗಳನ್ನು ಸುಡುವ ಕಬ್ಬಿಣದ ಚೌಕಟ್ಟು (Frame)ಗಳು ಸುಟ್ಟು ಕರಗಿ ಹೋಗುವ ಮೊದಲೇ ಈ ರೀತಿಯ ಸಾವು ಕಡಿಮೆಯಾಗಲಿ ಎಂದು ಹಾರೈಸುವೆ. ಈ ಫ್ರೇಮ್ ಗಳು ಕೆಲಸದ ಹೊರೆಯಿಂದ ಈಗಾಗಲೇ ದಣಿದುಹೋಗಿವೆ.
( ಬನಶಂಕರಿ ವಿದ್ಯುತ್ ಚಿತಾಗಾರದ ತುರ್ತು ದುರಸ್ತಿ ಕಾರ್ಯ ನಿರ್ವಹಿಸಬೇಕಾಗಿರುವುದರಿಂದ ಮೇ 10ರಿಂದ ಅದು ಕಾರ್ಯ ನಿರ್ವಹಿಸುವುದಿಲ್ಲವೆಂದು ಬೆಂಗಳೂರು ಮಹಾನಗರ ಪಾಲಿಕೆ ತಿಳಿಸಿದೆ.)
– ಆಶಾ ಕೃಷ್ಣಸ್ವಾಮಿ, ಹಿರಿಯ ಪತ್ರಕರ್ತರು, ಬೆಂಗಳೂರು.
ಕನ್ನಡಕ್ಕೆ: ಕೆ.ಪದ್ಮಾಕ್ಷಿ
KEY WORDS : Pandemic Diary – Surviving In The Ashes-Asha Krishnaswamy
ENGLISH SUMMARY :
Aashawada in Times of +ves – Part 3 : Surviving In The Ashes
-By Asha Krishnaswamy
I lost my parents many years ago. Except for the cremation, I engaged in all of the ceremonies. Women in my family are not allowed to attend funerals. It is a custom we follow. However, on May 2, I visited two cremation centres in Bengaluru to learn more about the truth on the ground. I had taken all necessary measures to avoid putting myself in danger.
Multiple funeral pyres to burn the covidvirus-affected bodies have been seen in the media in Bengaluru. I’ve heard that families are keeping off funerals in order to avoid contracting an infection. There have been several reports that crematoria attendants and ambulance/hearse drivers prey on the distraught people’s emotions in order to make money. Despite the government’s claims that it is offering a free service, it has been reported that disposing of a COVID-19 dead body costs at least Rs 30,000.
Many questions arose in my mind, and they continue to do so. Is humanity dead? What happened to Bengaluru’s global brand hi-tech hospitals, which keep track of money 24 hours a day, seven days a week? How is it that even high-flow oxygen is running out? Is there nothing we’ve learnt in the last 12-odd months? So this city can just brag about space science and not basic medical services? Is the government unprepared to deal with a crisis akin to that of Maharashtra? And in the midst of a mega-crisis, are we, the citizens, just blaming the government and twiddling our thumbs?
As a journalist, I wanted to speak with those who have been performing mass rituals for hours together. What makes families and friends not even bid farewell to their loved ones standing at a safe distance if men in funeral ground can work and survive for weeks in this pandemic situation? How do the staff and the drivers survive in such dangerous environments while the majority of people stay indoors and still get Covidized or even choke to death? Is poverty alone making them manage the dead bodies?
It was 7 a.m. I rode my bike to the Banashankari electric crematorium. It is a COVID victim cremation facility. Over the phone, my friend and good Samaritan Kiran Kumar P L introduced me to Mahadeva, an ambulance driver who had literally made the crematorium his home for the past ten days. He’d told me to call him when I arrived. However, he had turned off his phone. Ambulances and tourist vans that had been converted into hearses, grieving families, BBMP employees, security personnel – both men and women, priests, and others were all seen on the premises. I was hesitant to strike up a conversation because of the eerie silence. A young man approached me with a smiling face and introduced himself as Mahadeva. I’m not sure how he figured out who I was.
“I’m sorry,” he said first. “My phone has gone out of service. There are too many phone calls… It’s charging right now.”
I began making a video of his experience in recent days with his permission. According to him, 30/40 bodies are transferred daily from hospitals to the crematorium. “Not every family is abandoning COVID hit bodies. At the same time, many people have entrusted the last rites work to me over the phone. There are a lot of drivers here doing similar job. We are also assisting in transporting and shifting the body to the furnace,” he explained.
How is he coping with the workload? “It is a challenge and has become a routine to work day and night. It’s depressing to see the bodies forming a line here. Food and water have been provided by some volunteers for the past four days. That gives me a great comfort. It would have been difficult otherwise because hotels are closed due to the lockdown,” he said, pulling a cotton face mask up over his nose.
How much money can he make by taking care of a body? “I receive a monthly salary of Rs 10,000 from my owner. People are now giving me some small amount of money for dealing with the COVID bodies. I don’t demand anything because it’s unfair,” he explained.
An ambulance driver receives one PPE kit for each body shifting. The BBMP does not charge for COVID victims’ transportation and cremation. It has hired a good number of vehicles this time. However, there is a long line to get a furnace slot. Private ambulance operators, on the other hand, charge between Rs 2,000 and 3,000, plus a small waiting fee. According to Mahadeva, the total cost will likely not exceed Rs 4,000 per body. He does admit, however, that some drivers charge exorbitant rates. “Sometimes, families entrust the entirety of the last rites work to drivers. It is expensive to keep a body in a freezer overnight or in a van for several hours. On average, pooje items cost Rs 3,000, priests cost around Rs 4,000, and chatta (bamboo poles) cost Rs 2,000. In addition, travel costs must be factored in. “After the media brought attention to the high cost of cremation, the charges were reduced,” Mahadeva pointed out.
Mahadeva, 32, has completed SSLC. He has been an ambulance driver for the past 11 years. He is unmarried. He cannot find an alliance because of his profession, he claims. Finally, I asked him how safe he feels. “Madam, let me be candid with you. I am safe because of sanitizer,” he said with a grin. “Every night, I guzzle sanitizer – er, rum. And that is providing me with security. It used to be 90 ml, but now it’s 180 ml. I get good night sleep. Because of the ‘sanitizer’, my friends and I have been able to work without a break now. By the way, not everyone on duty here boozes,” he added. I just mumbled that he should follow the protocol.
He claimed that, with the exception of two, none of the COVID drivers had become ill or died as a result of the infection. Is he attempting to reassure himself that he will be able to earn a living? I’m not sure.
Flow Increasing
Gopinath, the furnace attendant, joined us during our conversation. The frail-looking person from Mysuru has been working in the same funeral home for the past 33years. Earlier he was a gravedigger in the adjoining ground. He began to narrate his experience. In a matter-of-fact tone, he stated that his work had increased exponentially in the past 12 days. “Previously, I used to handle 8 to 9 bodies on average. There are now about 30 bodies. The flow is only increasing,” he added and pointed towards a young lady and man in uniform clothes and said, “They are on duty here now to count the bodies.”
Is he comfortable handling COVID victim bodies while wearing only a face mask and a pair of gloves? Has he been advised by medical personnel to be cautious? “There is no such thing as health advice. We have all been given a PPE (personal protective equipment) kit, gloves, and a mask. We’ve been told that these are adequate. There are 5 more employees on furnace duty,” Gopinath mentioned.
He isn’t overly concerned about his health. He is concerned, however, about young children who accompany the corpse. “The BBMP allows for four people with a dead body. However, more people come here to pay their respects. A family had brought their children the day before. What if they develop medical conditions? The situation is different now. We are going to be strict with visitors beginning today,” he said.
How has he dealt with the sudden increase in mental and work pressure? “There’s no doubt about it: it’s exhausting. I go to bed at around 2.30 a.m. and am back on duty at 5 a.m. During the night, ambulances containing bodies are parked on the premises. The public in the vicinity of the crematorium has objected to ambulances being parked on public roads. So from 6 am, we keep the furnce. I am a BBMP employee, so I am paid. People also leave us tips. They may give you Rs 10 or more, or they may give you nothing at all. We don’t ask,” he explained.
How simple is it for the family to gather the ashes? Is the rush causing ash pots to become mixed up? According to Gopinath, the maximum time for burning a body is 1 hour 30 minutes. “Right away, we collect the ashes and place them in pots with the name and BBMP number. There is no misidentification. We give the pot to the families who come to collect it,” he explained.
Manu and Santosh, two more young ambulance-turned-hearse van drivers, volunteered to speak with me. Both of them were not prepared to be photographed. Manu stated that he did not want his young children to see his images on social media or anywhere else. However, he later volunteered to be photographed as he realised that I was not from a TV channel.
“I have to work as a driver. I barely made any money in the last year. Now I have work. I have to earn…” he said, his face expressionless. He continued to add, “When I see people crying here, sometime I get emotional. Otherwise, I am not disturbed. “I’m doing my job,” he explained. Santosh, too, made a similar point. They both insisted that it’s because dead bodies cannot spread the virus, they are not afraid to work. Two more people joined in to take Manu out for tea.
I offered Manu and Santosh Rs 100 to have tea. Manu hesitantly accepted it, whereas Santosh saw no reason to accept it. All four were heard chatting, laughing and walking away from the premises. They even bid me goodbye when I was starting my bike. Next to the electric crematorium is a burial ground where Covid bodies are not permitted.
I believe that people have incredible strength to withstand pressure and see a reason to live. It may be unreasonable to expect the government or BBMP to perform flawlessly at this time, when its frontline workers are being quarantined.
Mahadeva had guided me to the TR Mills open cremation ground – Hindu Rudrabhoomi. It’s in Chamarajapete. It has separate entry for Covid and non-Covid bodies.
Pyres Pileup
I arrived around 8.30 a.m. A vagabond was resting at the gate with a mask on his chin. He was unaware of his surrounding environment. It’s a large funeral ground with a lot of old trees. Pyres had not yet been lit in either division. As a result, there was no foul odour. There was an unsettling emptiness. A staff member was preoccupied with paperwork.
People were seen hovering around the staff, asking him questions, waiting for the bodies of their loved ones to arrive. Except for the staff, no one did appear to be patient. The arrival of bodies at the funeral ground has been staggered by BBMP. No one was sobbing or wailing, as far as I could tell.
In the non-Covid division, I saw a young person taking a photo or video of a location where a body had been burned the night before. But alas! Everything, including the last rites, is digitally documented nowadays. There were people to collect the ashes. Dozens of bodies must have been melted in the open, congested designated makeshift area. There were piles of human ashes amidst wood ashes. I didn’t dare to approach anyone there. People have either been collecting ashes or conversing with priests and buying pooje items.
A young man who was cleaning up the previous day’s leftover flowers etc., noticed me taking photos. He asked, “Why are you photographing?” in a loud voice. “Are you a member of the media? The media has already caused problems for us.” I walked up to him. I lied. “My relative’s body was cremated yesterday. I had to send the photos to the family in the US. I can’t seem to find it.” He immediately calmed down and asked, “Was it a covid or non-covid?” Before I could respond, he showed me the designated locations for both. I thanked him and moved towards the covid section.
Two rows of metal cradle-like structures were located beneath the metal shelters. They could have burned hundreds of bodies. There was hardly anyone around to collect the ashes. Those on duty were cleaning the place with water. Stacks of logs were kept ready for the day. I noticed a man gathering a discarded bed sheet.
I asked one of the attendants as to why no one on duty was wearing safety gear. They were all wearing cotton cloth masks, of course. “When a COVID patient dies, the viruses die too. So there’s nothing to be worried about. Only the workload has risen,” he explained in Hindi before leaving. I counted at least a dozen such silent warriors clearing the ashes and garbage. . It’s just a job for them. There is no room for turning emotional in this situation. I prayed for their safety. Is there anything else I can do?
The mass cremation of bodies reminded me of Varanasi’s Dashashwanedha ghat. In 2016, I travelled to scatter my mother’s ashes in river Ganga. One evening, three of my friends and I were sitting in a boat, watching Ganga aarti. From a distance, we could see at least 12 bodies being burned at the same time. I didn’t want to see those scenes while my artist friend Surekha was talking about death and bodies. At the same time, we saw newlywed couples offering pooje to the river.
I never imagined that one day I would see the burning ghats in nanna Bengaluru. But, just like in Varanasi, life must go on. I fervently hope the flow stops before the metal frames of the furnaces melt. These frames are currently overburdened.
(The BBMP has announced that the Banashankari crematorium will be inoperable from May 10 due to repairs.)