ಬೆಂಗಳೂರು,ಮಾರ್ಚ್,18,2022(www.justkannada.in):ಭಾರತರತ್ನ ಪಂಡಿತ್ ಭೀಮಸೇನ ಜೋಶಿ ಅವರ ಜನ್ಮಶತಾಬ್ದಿಯ ಅಂಗವಾಗಿ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸಹಯೋಗದೊಂದಿಗೆ ಪುಣೆಯ ಸಂಗೀತಾಚಾರ್ಯ ಪಂ. ಡಿ.ವಿ. ಕಾಣೆ ಬುವಾ ಪ್ರತಿಷ್ಠಾನ ಮಾರ್ಚ್ 19 ಹಾಗೂ 20 ರಂದು (ನಾಳೆ, ನಾಡಿದ್ದು) ಬೆಂಗಳೂರಿನಲ್ಲಿ ಎರಡು ದಿನಗಳ ಸಂಗೀತ ಕಾರ್ಯಕ್ರಮ– ಪೂರ್ಣಾಹುತಿ ಆಯೋಜಿಸಿದೆ.
ಕೊರೊನಾ ಸೋಂಕಿನ ತೀವ್ರತೆ ತಗ್ಗಿದ ನಂತರ ನಡೆಯುತ್ತಿರುವ ಬೃಹತ್ ಸಂಗೀತ ಕಾರ್ಯಕ್ರಮ ಇದಾಗಿದೆ. ಬೆಂಗಳೂರಿನ ಎನ್.ಆರ್. ಕಾಲೋನಿಯ ರಾಮಮಂದಿರ ಸಮೀಪದ ಪತ್ತಿ ಸಭಾಂಗಣದಲ್ಲಿ 2022ಮಾರ್ಚ್ 19ರಂದು ಸಂಜೆ 5.00 ಗಂಟೆಯಿಂದ ರಾತ್ರಿ 9.30ರವರೆಗೆ ಹಾಗೂ ಮಾರ್ಚ್ 20 ರಂದು ಬೆಳಿಗ್ಗೆ 10ರಿಂದ 2 ಗಂಟೆವರೆಗೆ ಉತ್ಸವ ನಡೆಯಲಿದ್ದು, ಎಲ್ಲಾ ಸಂಗೀತ ಪ್ರೇಮಿಗಳು ಭಾಗವಹಿಸಬಹುದಾಗಿದೆ. ಉಚಿತ ಪ್ರವೇಶದ ಈ ಕಾರ್ಯಕ್ರಮದ ಉದ್ಘಾಟನೆಯು ಮಾ. 19ರ ಸಂಜೆ 5.00 ಗಂಟೆಗೆ ಕಿರ್ಲೋಸ್ಕರ್ ಫೆರಸ್ ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಆರ್.ವಿ. ಗುಮಾಸ್ತೆ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ.
ಪದ್ಮಶ್ರೀ ಪಂ. ವೆಂಕಟೇಶ ಕುಮಾರ್, ಪದ್ಮಶ್ರೀ ಪಂ. ಉಲ್ಲಾಸ್ ಕಶಾಲ್ಕರ್, ವಿದುಶಿ ಆರತಿ ಅಂಕಲೀಕರ್, ವಿದುಶಿ ಮಂಜೂಷಾ ಪಾಟೀಲ್ ಈ ಉತ್ಸವದಲ್ಲಿ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದು, ಪಂ. ಕುಮಾರ್ ಬೋಸ್ (ಸ್ವತಂತ್ರ ತಬಲಾ ವಾದನ) ಹಾಗೂ ಪಂ. ರಾಕೇಶ ಚೌರಾಸಿಯ (ಕೊಳಲು ವಾದನ) ಕೂಡ ಈ ಉತ್ಸವದ ಭಾಗವಾಗಿರುತ್ತದೆ.
ಅನೇಕ ಹೆಸರಾಂತ ಕಲಾವಿದರನ್ನು ಒಳಗೊಂಡಿರುವ ಈ ಉತ್ಸವವು ಸಂಗೀತರಸದೌತಣವೇ ಅಗಿದ್ದು, ಸಂಗೀತ ಪ್ರೇಮಿಗಳು ತಪ್ಪದೇ ಭಾಗವಹಿಸಿ ಸಂಗೀತ ಸುಧೆಯನ್ನು ಸವಿಯಿರಿ’’ ಎಂದು ಸಂಗೀತಾಚಾರ್ಯ ಪಂ. ಡಿ.ವಿ. ಕಾಣೆಬುವಾ ಪ್ರತಿಷ್ಠಾನದ ಅಧ್ಯಕ್ಷರಾದ ಗೋವಿಂದ ಬೆಡೇಕರ್, ಕಾರ್ಯದರ್ಶಿ ಮಂಜೂಷಾ ಪಾಟೀಲ್ ಕೋರಿದ್ದಾರೆ.
Key words: Pandit Bhimsen Joshi- Music-program