ಬೆಂಗಳೂರು,ಆಗಸ್ಟ್,12,2022(www.justkannada.in): ಪರೇಶ್ ಮೇಸ್ತ ಕೊಲೆಯ ಆರೋಪಿಯನ್ನು ವಕ್ಫ್ ಬೋರ್ಡ್ ಉಪಾಧ್ಯಕ್ಷನನ್ನಾಗಿ ಮಾಡ ಹೊರಟಿರುವುದು ಅಕ್ಷಮ್ಯ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆಯ ಬಿಡುಗಡೆ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು…
ಚುನಾವಣೆಗಳು ಹತ್ತಿರ ಬಂದಾಗಲೆಲ್ಲ ಇದ್ದಕ್ಕಿದ್ದಂತೆ ಅಮಾಯಕರ ಕೊಲೆಗಳು ನಡೆಯುತ್ತವೆ. ಬಿಜೆಪಿ ಸರ್ಕಾರಗಳು ಬಿಕ್ಕಟ್ಟಿಗೆ ಸಿಲುಕಿಕೊಂಡಾಗಲೆಲ್ಲ ಅಹಿತಕರ ಘಟನೆಗಳು ನಡೆಯುತ್ತವೆ. ಸಂಘ ಪರಿವಾರದ ಮಾಜಿ ಮುಖಂಡರಾಗಿದ್ದ ಮಹೇಂದ್ರಕುಮಾರ್ ಅವರು ಬಿಜೆಪಿಯ ಕುರಿತು/ಸಂಘ ಪರಿವಾರದ ಕುರಿತು ಹಲವಾರು ಭಯಾನಕ ಸಂಗತಿಗಳನ್ನು ಸಮಾಜದ ಮುಂದೆ ಇಟ್ಟಿದ್ದರು. ನಾಡಿನ ಜನರು ಈ ಕುರಿತು ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.
ಇತ್ತೀಚೆಗೆ ಕೊಲೆಗಳ ಹಿಂದಿನ ರಹಸ್ಯಗಳು ಒಂದೊಂದಾಗಿ ಹೊರಗೆ ಬರುತ್ತಿವೆ. ಹೊನ್ನಾವರದಲ್ಲಿ 2017ರಲ್ಲಿ ನಡೆದಿದ್ದ ಪರೇಶ್ ಮೇಸ್ತ ಕೊಲೆಯ ಪ್ರಮುಖ ಮತ್ತು ಮೊದಲ ಆರೋಪಿ ಆಝಾದ್ ಅಣ್ಣಿಗೇರಿಯನ್ನು ರಾಜ್ಯ ಸರ್ಕಾರ ವಕ್ಫ್‍ಬೋರ್ಡ್ ಉಪಾಧ್ಯಕ್ಷನನ್ನಾಗಿ ನೇಮಕ ಮಾಡಿರುವುದು ಗಂಭೀರವಾದ ಅನುಮಾನಗಳನ್ನು ಸೃಷ್ಟಿಸಿದೆ.
ಪರೇಶ್ ಮೇಸ್ತ ಕೊಲೆಗೂ ಆಝಾದ್ ಅಣ್ಣಿಗೇರಿ ಸರ್ಕಾರಿ ನೇಮಕಾತಿಗೂ ಇರುವ ಒಳ ಒಪ್ಪಂದ ಏನು ಎನ್ನುವುದನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ಅವರು ನಾಡಿಗೆ ಸ್ಪಷ್ಟಪಡಿಸಬೇಕು ಎಂದು ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.
ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ್ದಕ್ಕಾಗಿ ರಾಜಸ್ತಾನದ ಉದಯ್‍ಪುರದಲ್ಲಿ ದರ್ಜಿ ವೃತ್ತಿಯ ಕನ್ಹಯ್ಯಲಾಲ್ ಎಂಬಾತನ ಕುತ್ತಿಗೆ ಕತ್ತರಿಸಿ ಹತ್ಯೆ ಮಾಡಿದ ಘಟನೆ ಜೂನ್‍ನಲ್ಲಿ ನಡೆದಿತ್ತು. ಅತ್ಯಂತ ಅನಾಗರಿಕವಾದ ಈ ಕೃತ್ಯದ ಪ್ರಮುಖ ಆರೋಪಿ ಬಿಜೆಪಿಯ ಸಹವರ್ತಿ/ ಕಾರ್ಯಕರ್ತ ಮತ್ತು ಬಿಜೆಪಿಗಾಗಿ ದುಡಿದಿದ್ದವನು ಎನ್ನುವ ಸಂಗತಿಯನ್ನು ಮಾಧ್ಯಮಗಳು ಬಹಿರಂಗಗೊಳಿಸಿವೆ.
2017ರಲ್ಲಿ ಪರೇಶ್ ಮೇಸ್ತ ಅವರ ಕೊಲೆಯನ್ನು ರಾಜಕೀಯವಾಗಿ ಲಾಭ ಮಾಡಿಕೊಂಡಿದ್ದು ಇದೇ ಬಿಜೆಪಿ. ನಮ್ಮ ಸರ್ಕಾರದ ಮೇಲೆ ಕೊಲೆಯ ಆರೋಪ ಹೊರಿಸಿ ಬಿಜೆಪಿ ಪರಿವಾರ ದಾಂಧಲೆ ಎಬ್ಬಿಸಿತ್ತು. ನಾನು ಪ್ರಕರಣವನ್ನು ತಕ್ಷಣ ಸಿಬಿಐಗೆ ವಹಿಸಿದ್ದೆ. ಈಗ ಅದೇ ಮೇಸ್ತ ಕೊಲೆಯ ಆರೋಪಿಯನ್ನು ಸರ್ಕಾರವೇ ವಕ್ಫ್ ಕಮಿಟಿ ಉಪಾಧ್ಯಕ್ಷನನ್ನಾಗಿ ನೇಮಿಸುವ ಮೂಲಕ ಕೋಮು ಕೊಲೆಗಳ ಹಿಂದಿನ ಪಾಂಡಿತ್ಯ ಯಾರದ್ದು ಎನ್ನುವುದು ರಾಜ್ಯದ ಜನತೆಗೆ ಅರ್ಥವಾಗುತ್ತಿದೆ.
ಬಿಜೆಪಿಯವರ ಅಧಿಕಾರ ದಾಹಕ್ಕೆ ಇನ್ನೆಷ್ಟು ಮನೆಗಳ ದೀಪ ಆರಿ ಹೋಗಬೇಕೋ ತಿಳಿಯದಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ಕೊಲೆಗಳ ಹಿನ್ನೆಲೆಯಲ್ಲಿ, ಬಿಜೆಪಿ ಸರ್ಕಾರ ಕಾರ್ಯಕರ್ತರ ಹೆಣಗಳ ಮೇಲೆ ನಿಂತಿದೆ ಎಂದು ಸ್ವತಃ ಬಿಜೆಪಿ ಮತ್ತು ಆರ್‍ಎಸ್‍ಎಸ್ ಕಾರ್ಯಕರ್ತರು ಮತ್ತು ಬೆಂಬಲಿಗರೇ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗ ಪರೇಶ್ ಮೇಸ್ತಾ ಕೊಲೆಯ ಪ್ರಮುಖ ಆರೋಪಿಯನ್ನು ಸರ್ಕಾರ ನೇಮಕ ಮಾಡಿರುವುದರ ಬಗ್ಗೆ ಸ್ವತಃ ಸ್ಥಳೀಯ ಬಿಜೆಪಿ ಕಾರ್ಯಕರ್ತರೆ ಆಕ್ರೋಶ ವ್ಯಕ್ತಪಡಿಸಿರುವುದನ್ನು ಇವತ್ತಿನ (ಆ.12) ಪತ್ರಿಕೆಗಳು ವರದಿ ಮಾಡಿವೆ. ಕಾರ್ಯಕರ್ತರ ಹೆಣಗಳ ಮೇಲೆ ಬಿಜೆಪಿ ಸರ್ಕಾರ ನಡೆಸುತ್ತಿದೆ ಎನ್ನುವ ಹಿಂದುತ್ವ ಕಾರ್ಯಕರ್ತರ ಮಾತು ಅಪ್ಪಟ ಸತ್ಯ ಎನ್ನುವುದು ಇದರಿಂದ ಸಾಬೀತಾಗಿದೆ ಎಂದು ವಾಗ್ದಾಳಿ ನಡೆಸಿದರು.
ಮಂಗಳೂರಿನಲ್ಲಿ ಇತ್ತೀಚಿಗೆ ಕೊಲೆಯಾದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರಮುಖ ಆರೋಪಿ ಶಿಯಾಬುದ್ದೀನ್ ಕೂಡ ಕ್ಯಾಂಪ್ಕೋಗೆ ಕೋಕಾ ಸರಬರಾಜು ಮಾಡುತ್ತಿದ್ದವನು, ಕ್ಯಾಂಪ್ಕೋ ಈಗ ಆರ್ ಎಸ್‍ಎಸ್ ನ ಕೇಂದ್ರವಾಗಿದೆ ಎಂಬ ಮಾಹಿತಿ ಇದೆ.
ಬಾಬು ರಾಜೇಂದ್ರ ಪ್ರಸಾದ್ ಅವರು ರಾಷ್ಟ್ರಪತಿಗಳಾಗಿದ್ದಾಗ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ಆರ್ ಎಸ್ ಎಸ್ ವೇಷ ಮರೆಸಿಕೊಂಡು ಅಹಿತಕರಕರ ಘಟನೆಗಳನ್ನು ಸೃಷ್ಟಿಮಾಡಿ ಸಾಮಾಜಿಕ ಸಂಕ್ಷೋಭೆಯನ್ನುಂಟು ಮಾಡಿಸುವ ಮೂಲಕ ದೇಶದಲ್ಲಿ ಗಲಭೆಯನ್ನೆಬ್ಬಿಸಲು ಯತ್ನಿಸುತ್ತಿದೆ ಎಂದು ಪತ್ರ ಬರೆದಿದ್ದರು.
ಆಗಿನಿಂದಲೂ ಆರ್ ಎಸ್‍ಎಸ್ ಹೀಗೇ ವರ್ತಿಸುತ್ತಿದೆ. ಹೀಗಾಗಿ ನಾಡಿನ ಯುವ ಸಮೂಹ ಬಿಜೆಪಿಯ ಈ ಒಳ ಒಪ್ಪಂದದ ಕೊಲೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ವಿನಂತಿಸುತ್ತೇನೆ. ಪರೇಶ್ ಮೇಸ್ತ ಕೊಲೆಯ ಆರೋಪಿ ಆಝಾದ್ ಅಣ್ಣಿಗೇರಿಯನ್ನು ವಕ್ಫ್ ಬೋರ್ಡ್‍ನ ನೇಮಕಾತಿಯನ್ನು ಕೂಡಲೇ ರದ್ದು ಮಾಡಬೇಕು ಹಾಗೂ ಬಿಜೆಪಿ ಸರ್ಕಾರ ಈ ಕೂಡಲೇ ಪರೇಶ್ ಮೇಸ್ತ ಪೋಷಕರ ಮತ್ತು ನಾಡಿನ ಕ್ಷಮೆ ಕೇಳಬೇಕು ಎಂದು ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ನಡೆದಿರುವ ಬಿಜೆಪಿ ಕಾರ್ಯರ್ತರ ಕೊಲೆ ಜತೆಗೆ ಎಲ್ಲಾ ಕೋಮು ಕೊಲೆಗಳನ್ನು/ ಗಲಭೆಗಳನ್ನು ಹೈಕೋರ್ಟ್‍ನ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಈ ಕೊಲೆಗಳ ಹಿಂದಿನ ನಿಗೂಢ ಮತ್ತು ಒಳ ಒಪ್ಪಂದಗಳನ್ನು ಬಹಿರಂಗಗೊಳಿಸಬೇಕು ಎಂದು ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.
Key words: Paresh Mesta’s- murder –accused- Wakf Board- Vice President-Former CM -Siddaramaiah.