ಬೆಂಗಳೂರು,ಆ,10,2020(www.justkannada.in): ಭವಿಷ್ಯದ ದಿನಗಳಲ್ಲಿ ಇಮ್ಯುನಾಲಜಿ ಅಧ್ಯಯನವು ಅತ್ಯಂತ ಪ್ರಮುಖವಾಗಲಿದ್ದು, ಇದನ್ನು ದೃಷ್ಟಿಯಲ್ಲಿರಿಸಿಕೊಂಡು ರಾಜ್ಯದಲ್ಲಿ ಅಮೆರಿಕದ ಅಟ್ಲಾಂಟಾದ ಎಮೊರಿ ಲಸಿಕಾ ಕೇಂದ್ರದ ಸಹಯೋಗದೊಂದಿಗೆ ಇಮ್ಯುನಾಲಜಿ ಮತ್ತು ಲಸಿಕಾ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಉತ್ಸುಕವಾಗಿದೆ ಎಂದು ಐಟಿ- ಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಲಸಿಕಾ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಅಟ್ಲಾಂಟಾದ ಎಮೊರಿ ವಿಶ್ವವಿದ್ಯಾಲಯದ ಲಸಿಕಾ ಕೇಂದ್ರದ ನಿರ್ದೇಶಕ ಡಾ.ರಫಿ ಅಹಮ್ಮದ್ ಅವರೊಂದಿಗೆ ವೆಬಿನಾರ್ ಮೂಲಕ ಸೋಮವಾರ ನಡೆಸಿದ ವಿಚಾರ ವಿನಿಮಯ ಸಭೆಯಲ್ಲಿ ಡಿಸಿಎಂ ಅಶ್ವಥ್ ನಾರಾಯಣ್ ಮಾತನಾಡಿದರು.
ಲಸಿಕೆಗಳು, ಸಾಂಕ್ರಾಮಿಕ ರೋಗಗಳು, ಕ್ಯಾನ್ಸರ್ ಸಂಶೋಧನೆ ಇವೆಲ್ಲವೂ ಅಂತಿಮವಾಗಿ ‘ಇಮ್ಯುನಾಲಜಿ’ ವ್ಯಾಪ್ತಿಗೇ ಬರುತ್ತವೆ. ‘ಇಮ್ಯುನಾಲಜಿ’ ಕ್ಷೇತ್ರದಲ್ಲಿ ನಡೆಯುವ ಸಂಶೋಧನೆಗಳು ಭವಿಷ್ಯದಲ್ಲಿ ಎದುರಾಗಲಿರುವ ಸಮಸ್ಯೆಗಳಿಗೆ ಉತ್ತರ ಒದಗಿಸಬಲ್ಲವು. ಹಾಗಾಗಿ ಭವಿಷ್ಯದ ದೃಷ್ಟಿಯಿಂದ ಈಗ ಈ ಕ್ಷೇತ್ರದ ಮೇಲಿನ ಹೂಡಿಕೆಯು ಫಲಪ್ರದ ಫಲಿತಾಂಶಗಳನ್ನು ನೀಡಲಿದೆ ಎಂದು ಅವರು ವಿವರಿಸಿದರು.
ಈಗ ಇಡೀ ಜಗತ್ತೇ ‘ಇಮ್ಯುನಾಲಜಿ’ ಬಗ್ಗೆ ಆಲೋಚಿಸುತ್ತಿರುವ ಹಾಗೂ ಪರಿಣಾಮಕಾರಿ ‘ಲಸಿಕೆ’ ಗೆ ಎದುರು ನೋಡುತ್ತಿರುವ ಸಂದರ್ಭ ಇದಾಗಿದೆ. ಇಂತಹ ಸಮಯದಲ್ಲಿ ‘ಇಮ್ಯೂನಾಲಜಿ ಮತ್ತು ಲಸಿಕಾ ಸಂಶೋಧನಾ ಕೇಂದ್ರ’ದ ಸ್ಥಾಪನೆ ಅತ್ಯಂತ ಸಂದರ್ಭೋಚಿತ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಅವರು, ಕೋವಿಡ್-19 ರೋಗ ದೃಢೀಕರಣದ ಆಧುನಿಕ ವಿಧಾನಗಳ ಅಭಿವೃದ್ಧಿ ಬಗ್ಗೆಯೂ ರಾಜ್ಯ ಸರ್ಕಾರ ಗಂಭೀರವಾಗಿ ಆಲೋಚಿಸುತ್ತಿದೆ. ಇದು ಈಗಿನ ಸನ್ನಿವೇಶದಲ್ಲಿ ಸೂಕ್ಷ್ಮ ಸಂಗತಿಯೂ ಆಗಿದ್ದು, ಈ ದಿಸೆಯಲ್ಲಿ ಕೂಡ ಸಹಭಾಗಿತ್ವದಿಂದ ಹೆಚ್ಚಿನ ಪ್ರಯೋಜನವನ್ನು ನಿರೀಕ್ಷಿಸುತ್ತಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಸಂಶೋಧನೆ ಮತ್ತು ಆವಿಷ್ಕಾರಕ್ಕೆ ಪೂರಕವಾದ ವಾತಾವರಣ ಇದೆ. ಇದನ್ನು ಬಳಸಿಕೊಂಡು ಲಸಿಕೆಗಳಿಗೆ ಸಂಬಂಧಿಸಿದಂತೆ ಸಂಶೋಧನೆ, ಕ್ಲಿನಿಕಲ್ ಟ್ರಯಲ್ ಗಳು, ಸಂಶೋಧನೆಗಳ ಫಲವನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವುದು ಇತ್ಯಾದಿ ಚಟುವಟಿಕೆಗಳ ಬಗ್ಗೆ ಗಮನ ಹರಿಸುವುದು ಸದ್ಯದ ಅಗತ್ಯವಾಗಿದೆ ಎಂದರು.
ರಾಷ್ಟ್ರೀಯ ಮಟ್ಟದಲ್ಲಿ ಲಸಿಕೆಗೆ ಸಂಬಂಧಿಸಿದಂತೆ ಏನಿಲ್ಲವೆಂದರೂ ಸುಮಾರು 20 ಉತ್ಕೃಷ್ಠ ಸಂಸ್ಥೆಗಳು ಕಾರ್ಯನಿರತವಾಗಿವೆ. ಇವೆಲ್ಲವನ್ನೂ ಒಂದೆಡೆ ಕೇಂದ್ರೀಕರಿಸಿ ಲಸಿಕಾ ಸಂಬಂಧಿ ಚಟುವಟಿಕೆಗಳಿಗೆ ಒತ್ತು ನೀಡಬೇಕಾಗಿದೆ. ಇದಕ್ಕೆ ಪೂರಕವಾದ ನೀತಿಯನ್ನು ಸರ್ಕಾರ ರೂಪಿಸಲಿದೆ, ಕ್ಲಿನಿಕಲ್ ಟ್ರಯಲ್ ಗೆ ಸಂಬಂಧಿಸಿದಂತೆ ದೇಶದಲ್ಲಿ ಮುಂಚೆ ಹಲವಾರು ಕಟ್ಟುಪಾಡುಗಳಿದ್ದವು. ಆದರೆ ಅನಗತ್ಯ ಕಟ್ಟುಪಾಡುಗಳನ್ನು ಈಗ ಸಡಿಲಿಸಲಾಗಿದೆ ಎಂದು ಅಶ್ವತ್ಥ ನಾರಾಯಣ ಅವರು ತಿಳಿಸಿದರು.
ಡಾ.ರಫಿ ಅವರು ಮಾತನಾಡಿ, ಎಮೊರಿ ಲಸಿಕಾ ಕೇಂದ್ರವು ಸದ್ಯ ಅತ್ಯಂತ ನಿಖರತೆಯಿಂದ ಕೂಡಿದ ಅತ್ಯಾಧುನಿಕ ಕ್ಷಿಪ್ರ ಪರೀಕ್ಷಾ ವಿಧಾನವನ್ನು ಅಭಿವೃದ್ಧಿಪಡಿಸಿದೆ. ಇದನ್ನು ಅಟ್ಲಾಂಟಾದ ಆಸ್ಪತ್ರೆಗಳಲ್ಲಿ ಯಶಸ್ವಿಯಾಗಿ ಬಳಸಲಾಗುತ್ತಿದೆ. ಪ್ಲಾಸ್ಮಾ ಥೆರಪಿ, ಹ್ಯೂಮನ್ ಮಾಲಿಕ್ಯುಲಾರ್ ಆಂಟಿಬಾಡೀಸ್ ಇವು ಎಮೊರಿ ಕೇಂದ್ರವು ಸಂಶೋಧನಾ ಕಾರ್ಯನಿರತವಾಗಿರುವ ಇನ್ನಿತರ ಪ್ರಮುಖ ಕ್ಷೇತ್ರಗಳಾಗಿವೆ ಎಂದು ವಿವರಿಸಿದರು.
ಕರ್ನಾಟಕ ಮತ್ತು ಎಮೊರಿ ಲಸಿಕಾ ಕೇಂದ್ರದ ನಡುವೆ ಶೈಕ್ಷಣಿಕ ಸಹಭಾಗಿತ್ವ ಸಾಧಿಸಲು ಅವಕಾಶವಿದೆ. ಸದ್ಯಕ್ಕೆ ಆನ್ ಲೈನ್ ಮೂಲಕವೇ ಇದನ್ನು ಆರಂಭಿಸಬಹುದು. ಅಲ್ಲಿನ ವಿದ್ಯಾರ್ಥಿಗಳು, ಇಲ್ಲಿನ ವಿದ್ಯಾರ್ಥಿಗಳು, ಸಂಶೋಧಕರ ನಡುವೆ ಪರಸ್ಪರ ವಿಚಾರ ವಿನಿಮಯಕ್ಕೆ ಇದರಿಂದ ಅವಕಾಶವಾಗಲಿದೆ. ವಿಶೇಷವಾಗಿ ಪಿಎಚ್.ಡಿ.ವಿದ್ಯಾರ್ಥಿಗಳು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಅಧಿಕ ಪ್ರಯೋಜನವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರತಿರೋಧ ಅಧ್ಯಯನ ಕ್ಷೇತ್ರವು ಎಮೊರಿ ಲಸಿಕಾ ಕೇಂದ್ರದ ಪ್ರಮುಖ ಕಾರ್ಯಕ್ಷೇತ್ರವಾಗಿದೆ. ವಿಶೇಷವಾಗಿ ಕ್ಯಾನ್ಸರ್ ಇಮ್ಯೂನೋ ಥೆರಪಿಗೆ ಸಂಬಂಧಿಸಿದ ಸಂಶೋಧನೆಗಳಿಗೆ ಒತ್ತು ನೀಡಲಾಗಿದೆ ಎಂದರು.
ಕರ್ನಾಟಕ ಸರ್ಕಾರದೊಂದಿಗೆ ಸಹಭಾಗಿತ್ವ ಸಾಧಿಸುವುದಕ್ಕೆ ಸಂಬಂಧಿಸಿದಂತೆ ಸದ್ಯವೇ ಪ್ರಸ್ತಾವ ಸಲ್ಲಿಸುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ಕ್ಯಾನ್ಸರ್ ತಜ್ಞ ಡಾ.ವಿಶಾಲ್ ರಾವ್ ಅವರು ಹಾಜರಿದ್ದರು.
ಕೋವಿಡ್ 19 ಲಸಿಕೆ: 6 ತಿಂಗಳಲ್ಲಿ ತಾತ್ಕಾಲಿಕ ಲೈಸೆನ್ಸ್ ಸಂಭವ’
ಕೋವಿಡ್-19 ಲಸಿಕೆಗೆ ಸಂಬಂಧಿಸಿದಂತೆ ಅಮೆರಿಕದಲ್ಲಿ ಸದ್ಯಕ್ಕೆ ಮೂರು ಲಸಿಕೆಗಳ ಕ್ಲಿನಿಕಲ್ ಟ್ರಯಲ್ ಗಳು ಮುಂಚೂಣಿಯಲ್ಲಿದ್ದು, ಅವು ಫಲಪ್ರದ ಎಂಬುದು ದೃಢಪಟ್ಟರೆ ಮುಂದಿನ 6ರಿಂದ 8 ತಿಂಗಳ ಅವಧಿಯಲ್ಲಿ ತಾತ್ಕಾಲಿಕ ಪರವಾನಗಿ ಲಭ್ಯವಾಗಬಹುದು ಎಂದು ಅಟ್ಲಾಂಟಾದ ಎಮೊರಿ ವಿಶ್ವವಿದ್ಯಾಲಯದ ಲಸಿಕಾ ಕೇಂದ್ರದ ನಿರ್ದೇಶಕ ಡಾ.ರಫಿ ಅಹಮ್ಮದ್ ಸ್ಪಷ್ಟಪಡಿಸಿದರು.
ಕೋವಿಡ್-19 ಲಸಿಕೆಗಳ ಕ್ಲಿನಿಕಲ್ ಟ್ರಯಲ್ ನ ಸದ್ಯದ ಸನ್ನಿವೇಶದ ಬಗ್ಗೆ ಡಾ.ಅಶ್ವತ್ಥ ನಾರಾಯಣ ಅವರು ಕೇಳಿದ ವಿವರಣೆಗೆ ಅವರು ಹೀಗೆ ತಿಳಿಸಿದರು.
ಇವುಗಳಲ್ಲಿ ಎರಡು ಲಸಿಕೆಗಳು ಆರ್ ಎನ್ಎ ಆಧಾರಿತ ಲಸಿಕೆಗಳಾಗಿವೆ. ಒಂದೊಂದೂ ಲಸಿಕೆಗೆ 30,000 ಜನರನ್ನು ಕ್ಲಿನಿಕಲ್ ಟ್ರಯಲ್ ಗೆ ಒಳಪಡಿಸಲಾಗಿದ್ದು, ಇದು ಮೂರನೆಯ ಹಂತದಲ್ಲಿದೆ. ಟ್ರಯಲ್ ಗೆ ಒಳಪಟ್ಟವರನ್ನು ಸತತವಾಗಿ ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
30,000 ಜನರ ಮೌಲ್ಯಮಾಪನ ಹಾಗೂ ಅಂಕಿಅಂಶಗಳ ಅಧ್ಯಯನಕ್ಕೆ ಇಷ್ಟು ಸಮಯ ಹಿಡಿಯುತ್ತದೆ. ಕನಿಷ್ಠ ಶೇ 50ರಷ್ಟು ಜನರಿಗಾದರೂ ಇದು ಪರಿಣಾಮಕಾರಿ ಎಂಬುದು ದೃಢಪಟ್ಟರೆ 6ರಿಂದ 8 ತಿಂಗಳ ಅವಧಿಯಲ್ಲಿ ತಾತ್ಕಾಲಿಕ ಪರವಾನಗಿ ಸಿಗಬಹುದು ಎಂದರು.
Key words: Partnering -Emory Vaccine Center – Atlanta-Establishment – Research Center-Dr. CN Ashwath Narayan