ಹಾವೇರಿ, ಆಗಸ್ಟ್,31,2021(www.justkannada.in): ಹಾವೇರಿ ಜಿಲ್ಲೆಯಲ್ಲಿ ಇರುವಂತೆ ಪಕ್ಷ ಸಂಘಟನೆ ಮೈಸೂರು ಕರ್ನಾಟಕ ಭಾಗದಲ್ಲೂ ಆಗಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ ನೋಡಿ ಬಿಜೆಪಿ ಬಂದಿದ್ದೇವೆ. ಮಾಜಿ ಸಿಎಂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಉತ್ತಮ ಕೆಲಸ ಮಾಡಿದ್ದೇವೆ. ಈಗ ಬಸವರಾಜ ಬೊಮ್ಮಾಯಿ ಅವರು ಇನ್ನೂ ವೇಗದಲ್ಲಿ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳ ನಾಯಕತ್ವದಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸೋಣ ಎಂದು ರೇಷ್ಮೆ, ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಹೇಳಿದರು.
ಹಾವೇರಿ ಜಿಲ್ಲೆಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಚಿವ ನಾರಾಯಣಗೌಡ ಪಕ್ಷದ ಜಿಲ್ಲಾ ಕಚೇರಿಗೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು ಹಾವೇರಿ ಜಿಲ್ಲೆಯಲ್ಲಿ ಪಕ್ಷವನ್ನು ಭದ್ರಕೋಟೆ ಮಾಡಿದ್ದೀರಿ, ನೀವೆಲ್ಲ ನಮ್ಮ ಭಾಗಕ್ಕೂ ಬಂದು ಪಕ್ಷ ಸಂಘಟನೆಗೆ ಮಾರ್ಗದರ್ಶನ ನೀಡಬೇಕು. ಹೆಣ್ಣುಮಕ್ಕಳೂ ಸಹಿತ ಈ ಭಾಗದಲ್ಲಿ ಪಕ್ಷ ಕಟ್ಟಲು ಹಗಲಿರುಳು ಶ್ರಮಿಸುತ್ತಾರೆ. ಅದೇ ರೀತಿ ರಾಜ್ಯದಲ್ಲಿ ಎಲ್ಲ ಸೇರಿ ಪಕ್ಷ ಕಟ್ಟುವ ಕೆಲಸ ಮಾಡಬೇಕು. ಮತ್ತೊಮ್ಮೆ ಹಾವೇರಿ ಜಿಲ್ಲೆಯಲ್ಲಿ ಎಲ್ಲ ಕ್ಷೇತ್ರದಲ್ಲಿ ಕಮಲ ಅರಳಲಿ. ನಿಮ್ಮೆಲ್ಲರ ಸಹಕಾರದಿಂದ ಮಂಡ್ಯ ಜಿಲ್ಲೆಯಲ್ಲೂ 4 ಕ್ಕೂ ಹೆಚ್ಚು ಕ್ಷೇತ್ರ ಬಿಜೆಪಿ ಗೆಲ್ಲುವಂತಾಗಲಿ ಎಂದು ಹೇಳಿದರು. ಅಲ್ಲದೆ ಮುಂಬರುವ ಜಿಲ್ಲಾಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳಲ್ಲೂ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು.
ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ ಅವರು ಮಾತನಾಡಿ, ಅತ್ಯಂತ ಕ್ರಿಯಾಶೀಲ ಸಚಿವರಲ್ಲಿ ಡಾ. ನಾರಾಯಣಗೌಡ ಅವರೂ ಒಬ್ಬರು. ರೇಷ್ಮೆ ಇಲಾಖೆಗೆ, ರೈತರಿಗೆ ಜೀವ ತುಂಬಿದ ಸಚಿವರು. ಮಾರುಕಟ್ಟೆಗೆ ಪುನಶ್ಚೇತನ ನೀಡಿದರು. ರೈತರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಅತ್ಯಂತ ಆಸಕ್ತಿಯಿಂದ ಕೆಲಸ ಮಾಡಿ, ರೈತರಿಗೆ ಸಾಕಷ್ಟು ಅನುಕೂಲ ಮಾಡಿಕೊಡುತ್ತಿದ್ದಾರೆ. ನಾರಾಯಣಗೌಡರು ರೇಷ್ಮೆ ಇಲಾಖೆ ಸಚಿವರಾದ ಮೇಲೆ ಅಧಿಕಾರಿಗಳು ಜಾಗೃತರಾಗಿದ್ದಾರೆ. ಹುಬ್ಬಳ್ಳಿ ಧಾರವಾಡದ ನಡುವೆ ಮೈಸೂರು ಸಿಲ್ಕ್ ಮಾರಾಟ ಮಳಿಗೆ ಸ್ಥಾಪಿಸುವಂತೆ ಮನವಿ ಮಾಡಿದ್ದೇನೆ. ರೇಷ್ಮೆ ಇಲಾಖೆ ಇದೆ ಅನ್ನೋದು ತಿಳಿದಿದ್ದೇ ಇವರು ಸಚಿವರಾದ ಮೇಲೆ. ಹಾವೇರಿಯಲ್ಲಿ ಕೂಡ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣ ಮಾಡಲು ಸಚಿವರು ತೀರ್ಮಾನಿಸಿದ್ದಾರೆ. ರೈತರ ಮಟ್ಟಕ್ಕೆ ಹೋಗಿ ಯೋಚಿಸುವ ಸಚಿವರು ಡಾ. ನಾರಾಯಣಗೌಡ ಅವರು. ಅವರಿಂದ ಇಲಾಖೆ ಉತ್ತಮ ಮಟ್ಟಕ್ಕೆ ಹೋಗಲಿದೆ. ಇದು ನಮ್ಮ ಪಕ್ಷಕ್ಕೂ ಹೆಮ್ಮೆ ವಿಚಾರ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯಕರ್ತರಿಂದ ಸಚಿವರು ಅಹವಾಲು ಸ್ವೀಕರಿಸಿದರು. ಶಾಸಕರಾದ ನೆಹರೂ ಓಲೆಕಾರ್, ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧ್ಯಕ್ಷ ಸಿದ್ದರಾಜ್ ಕಲಕೋಟಿ, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
Key words: Party -organization – old Mysore- like -Haveri –district- Minister – Narayana Gowda