ಮೈಸೂರು, ಜೂ.22, 2019 : (www.justkannada.in news) : ಸರಕಾರಿ ಅಧಿಕಾರಿಗಳು ಅಂದ್ರೆ ಸಮಾಜದ ಬಹುತೇಕರಲ್ಲಿ ಒಂದು ರೀತಿ ಅಸಡ್ಡೆಯ ಭಾವನೆ. ಸಾರ್ವಜನಿಕರನ್ನು ಅಲೆಸೋಕೆ ಇರುವ ಮಂದಿ, ಸ್ವಲ್ಪನೂ ಸಹಾಯ ಮಾಡರು ಎಂಬ ಧೋರಣೆ. ಆದರೆ ಎಲ್ಲರಿಗೂ ಇದು ಅನ್ವಯವಾಗದು. ಉತ್ತಮ ಕೆಲಸ ಮಾಡಿದವರನ್ನು ಜನ ನೆನೆಸಿಕೊಳ್ಳುತ್ತಾರೆ ಅನ್ನೋದಕ್ಕೆ ಇಲ್ಲೊಂದು ತಾಜ ನಿದರ್ಶನವಿದೆ.
ಮೈಸೂರು ಜಿಲ್ಲೆಯ ಮಾಲಂಗಿ ಗ್ರಾಮದಲ್ಲಿ ಈ ಹಿಂದೆ ಪಿಡಿಒ ಆಗಿದ್ದ ಮಹಿಳಾ ಅಧಿಕಾರಿಯನ್ನು ಅವರು ವರ್ಗವಾದ ಮೇಲೂ ಜನ ನೆನೆಸಿಕೊಳ್ಳುವುದು, ಅದು ಮನೆಯಲ್ಲಿ ಅಧಿಕಾರಿಯ ಫೋಟೊ ಹಾಕಿಕೊಂಡು ನೆನೆಯುವಷ್ಟರ ಮಟ್ಟಿಗೆ ಅಭಿಮಾನ ಪ್ರದರ್ಶಿಸುವುದು ತೀರ ವಿಶೇಷ.
ಇಂಥ ವಿಶೇಷ ಪ್ರೀತಿಗೆ ಪಾತ್ರವಾಗಿರುವವರು ಪಿಡಿಒ ಶೋಭಾರಾಣಿ (ಶೋಭಾದಿನೇಶ್ ).. ಇವರು2010 ರಿಂದ 2018 ರ ವರೆಗೆ ಮೈಸೂರು ಜಿಲ್ಲೆಯ ಮಾಲಂಗಿ ಗ್ರಾಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಆಗಿದ್ದರು. ಈ ವೇಳೆ ಗ್ರಾಮದ ಜನರಿಗೆ ಸರಕಾರದ ಸವಲತ್ತುಗಳನ್ನು ತಲುಪಿಸುವಲ್ಲಿ ಶ್ರಮಿಸಿ ಯಶಸ್ವಿಯೂ ಆಗಿದ್ದರು. ಈ ಕಾರಣಕ್ಕೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದರು. ಆದರೆ ಈ ಎಲ್ಲಾ ಪ್ರಶಸ್ತಿಗಳಿಗಿಂತೂ ಮಿಗಿಲಾದ ಪ್ರಶಸ್ತಿಯೊಂದು ಶೋಭಾರಾಣಿ ಅವರಿಗೆ ಮಾಲಂಗಿಯಿಂದ ವರ್ಗವಾದ ನಂತರ ಲಭಿಸಿದೆ.
ಅದೆಂದರೆ, ಮಾಲಂಗಿ ಗ್ರಾಮದ ಕೆಲ ಬಡ ಕುಟುಂಬಗಳ ಮನೆ ಗೋಡೆಯಲ್ಲಿ ಶೋಭರಾಣಿ ಅವರ ಫ್ರೇಮ್ ಹಾಕಿಸಿದ ಭಾವಚಿತ್ರ ಇರೋದು.
ಶುಕ್ರವಾರ ಮಾಲಂಗಿ ಗ್ರಾಮದಲ್ಲಿ ಊರ ಹಬ್ಬ. ನಾಲ್ಕು ವರ್ಷಕ್ಕೊಮ್ಮೆ ನಡೆಯುವ ‘ದೊಡ್ಡಮ್ಮನ ಹಬ್ಬ’ಕ್ಕೆ ಪಿಡಿಒ ಶೋಭಾರಾಣಿ ಅವರನ್ನು ಗ್ರಾಮಸ್ಥರು ಆಹ್ವಾನಿಸಿದ್ದರು. ಅವರ ಪ್ರೀತಿಗೆ ಕಟ್ಟು ಬಿದ್ದು ಶೋಭಾ ಅವರು ಅಲ್ಲಿಗೆ ತೆರಳಿದ್ದರು. ಈ ವೇಳೆ ಗ್ರಾಮದ ಕೆಲ ಮನೆಗಳಲ್ಲಿ ತಮ್ಮ ಭಾವಚಿತ್ರ ಹಾಕಿರುವುದು ಕಂಡು ಆಶ್ಚರ್ಯಗೊಂಡರು. ಮಾತ್ರಲ್ಲದೆ ಗ್ರಾಮಸ್ಥರ ಈ ಪ್ರೀತಿಗೆ ಮೂಕವಿಸ್ಮತರಾದರು.
ಈ ಬಗ್ಗೆ ಜಸ್ಟ್ ಕನ್ನಡ ಡಾಟ್ ಇನ್ ಜತೆ ಮಾತನಾಡಿದ ಪಿಡಿಒ ಶೋಭಾರಾಣಿ, ನನ್ನನ್ನು ಗ್ರಾಮಸ್ಥರು ಈ ಮಟ್ಟಿಗೆ ನೆನಪಿಸಿಕೊಳ್ಳುವಷ್ಟು ಯಾವ ಸಾಧನೆಯನ್ನು ಮಾಡಿಲ್ಲ. ಸರಕಾರದ ಸವಲತ್ತುಗಳು ಅವರಿಗೆ ತಲುಪಿಸಿದ್ದೇನೆ ಹೊರತು ಮನೆ ದುಡ್ಡನ್ನೇನು ನಾನು ನೀಡಿಲ್ಲ. ಆದರೂ ಮಾಲಂಗಿಯ ಜನ ಇಷ್ಟೊಂದು ಪ್ರೀತಿ, ಅಭಿಮಾನ ತೋರಿಸುತ್ತಿರುವುದು ನಿಜಕ್ಕೂ ಅವರ ದೊಡ್ಡಗುಣ ಎಂದರು.
——-
key words : PDO-shobarani-malangi-village-mysore