ಮೈಸೂರು,ಏಪ್ರಿಲ್,03,2021(www.justkannada.in) : ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್ ಕಾರಿನ ಮೇಲೆ ದಾಳಿ ಪ್ರಕರಣವನ್ನು ಖಂಡಿಸಿ ಸಂಯುಕ್ತ ಹೋರಾಟ ಕರ್ನಾಟಕ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ಶನಿವಾರ ನಗರದ ನ್ಯಾಯಾಲಯದ ಎದುರಿನ ಗಾಂಧಿ ಪ್ರತಿಮೆ ಎದುರು ಜಮಾವಣೆಗೊಂಡ ಪ್ರತಿಭಟನಕಾರರು ರಾಕೇಶ್ ಟಿಕಾಯತ್ ಕಾರಿನ ಮೇಲಿನ ದಾಳಿ ಖಂಡಿಸಿ, ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸಿದರು.
ರೈತರ ಸಮಸ್ಯೆ ಬಗೆಹರಿಸಿ ರೈತರ ಚಳುವಳಿ ಪ್ರಬಲವಾಗಿ ಬೆಳೆಯುತ್ತಿದೆ ಎಂಬುದನ್ನು ಗಮನಿಸಿ ಚಳವಳಿಯನ್ನು ಹತ್ತಿಕ್ಕಲು ಸರ್ಕಾರ ಹಲವಾರು ವಾಮಮಾರ್ಗ ಕಂಡು ಕೊಂಡಿದೆ. ಚಳವಳಿ ನೇತೃತ್ವ ವಹಿಸಿರತಕ್ಕಂತಹ ರೈತ ಮುಖಂಡರ ಮೇಲೆ ಹಲ್ಲೆ ಮಾಡುವ ಮೂಲಕ ಚಳವಳಿಯನ್ನು ಹತ್ತಿಕ್ಕುವ ಪ್ರಯತ್ನವನ್ನು ನಡೆಸುವುದು ಸರ್ಕಾರಕ್ಕಾಗಲಿ, ರಾಷ್ಟ್ರೀಯ ಪಕ್ಷಕ್ಕಾಗಲಿ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದರು.
126 ದಿನದಿಂದ ದೇಶಾದ್ಯಂತ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಕರಾಳ ಕೃಷಿ ಕಾಯ್ದೆ ವಾಪಸ್ ಪಡೆಯಿರಿ ಎಂದು ಒತ್ತಾಯ ಮಾಡುತ್ತಿದ್ದರೆ. ಆದರೆ, ಸರ್ಕಾರ ನಾಟಕೀಯವಾಗಿ ವರ್ತನೆ ತೋರುತ್ತಿದೆ ಎಂದು ಅಸಮಾಧಾನವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಹೊಸಕೋಟೆ ಬಸವರಾಜು, ಚಂದ್ರೇಗೌಡ, ಮಂಡಕಳ್ಳಿ ಮಹೇಶ್, ಮರಂಕಯ್ಯ, ಕಾರ್ಮಿಕ ಸಂಘಟನೆ ಅನಿಲ್ ಕುಮಾರ್, ಪರಿಸರವಾದಿ ಬಾನು ಮೋಹನ್, ಆನಂದೂರು ಪ್ರಭಾಕರ್ ಇತರರು ಭಾಗವಹಿಸಿದ್ದರು.
key words : Peasant-leader-Rakesh Tikayat-Attack-car-Condemnation-Protest-Mysore