ಬೆಂಗಳೂರು:ಜುಲೈ-20:(www.justkannada.in) ತಮ್ಮ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡಿದನೆಂಬ ಕ್ಷುಲ್ಲಕ ಕಾರಣಕ್ಕಾಗಿ ದುಷ್ಕರ್ಮಿಗಳಿಬ್ಬರು ಯುವ ಉದ್ಯಮಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಹಲಸೂರಿನಲ್ಲಿ ನಡೆದಿದೆ.
ಹಲಸೂರು ನಿವಾಸಿ ಶ್ರವಣ್ (25) ಹಲ್ಲೆಗೊಳಗಾದ ವ್ಯಕ್ತಿ. ಜುಲೈ 17ರಂದು ರಾತ್ರಿ 11 ಗಂಟೆ ಸುಮಾರಿಗೆ ಬಿಸಿನೆಸ್ ಮೀಟಿಂಗ್ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ಶ್ರವಣ್, ಆರ್ ಕೆ ಮಠ್ ರಸ್ತೆ ಬಳಿಯ ಗಾರ್ಬೆಜ್ ಡಂಪಿಂಗ್ ಜಾಗದಲ್ಲಿ ಮೂತ್ರ ವಿಸರ್ಜನೆಗೆಂದು ಬೈಕ್ ನಿಲ್ಲಿಸಿದ್ದಾರೆ.
ನೇಚರ್ ಕಾಲ್ ಮುಗಿಸಿ ಬೈಕ್ ಬಳಿ ಬಂದ ಶ್ರವಣ್ ನನ್ನು ಹನಿಸಿಂಗ್ ಹಾಗೂ ನವಲ್ ಕಿಶೋರ್ ಜೋಷಿ ಎಂಬ ಇಬ್ಬರು ತಡೆದು ನಿಲ್ಲಿಸಿದ್ದಾರೆ. ತಮ್ಮ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದನ್ನು ಪ್ರಶ್ನಿಸಿದ್ದಾರೆ. ಅವರನ್ನು ನಿರ್ಲಕ್ಷಿಸಿದ ಶ್ರವಣ್ ಬೈಕ್ ನತ್ತ ಹೊರಟಿದ್ದಾರೆ. ತಕ್ಷಣ ಬೈಕ್ ಕೀ ಕಿತ್ತುಕೊಂಡ ಸಿಂಗ್ ಹಾಗೂ ಜೋಷಿ, ಶ್ರವಣ್ ಜತೆ ವಾಗ್ವಾದಕ್ಕಿಳಿದಿದ್ದಾರೆ.
ಮೂವರ ನಡುವಿನ ಮಾತಿನಚಕಮಕಿ ವಿಕೋಪಕ್ಕೆ ತಿರುಗಿದೆ. ಸಿಂಗ್ ಹಾಗೂ ಜೋಷಿ ಶ್ರವಣ್ ಮೇಲೆ ಕಲ್ಲಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಸಹಾಯಕ್ಕಾಗಿ ಶ್ರವಣ್ ಕೂಗಿಕೊಂಡರೂ ತಡರಾತ್ರಿಯಾಗಿದ್ದರಿಂದ ಸುತ್ತಮುತ್ತ ಯಾರೂ ಕಾಣಿಸಿಗಲಿಲ್ಲ. ಇಬ್ಬರು ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಬಂದ ಶ್ರವಣ್, ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಘಟನೆಯಿಂದ ತುಂಬಾ ಆತಂಕಕ್ಕೀಡಾಗಿದ್ದಾಗಿ ತಿಳಿಸಿರುವ ಶ್ರವಣ್, ಬೆಂಗಳೂರು ಸೇಫ್ ಅಲ್ಲ. ಪ್ರಮುಖವಾಗಿ ರಾತ್ರಿ ವೇಳೆಯಲ್ಲಿ ಓಡಾಡುವುದು ಸುರಕ್ಷಿತವಲ್ಲವೇ ಅಲ್ಲ. ತನ್ನಪಾಡಿಗೆ ರಸ್ತೆ ಬದಿಯಲ್ಲಿ ಯುರಿನ್ ಪಾಸ್ ಮಾಡಿದ ಕಾರಣಕ್ಕೇ ಅನಗತ್ಯವಾಗಿ ಬಂದು ಜಗಳವಾಡಿ, ಹಲ್ಲೆ ನಡೆಸಿರುವುದು ನಿಜಕ್ಕೂ ಶಾಕ್ ಆಗಿದೆ ಎಂದು ತಿಳಿಸಿದ್ದಾರೆ.
ಇನ್ನು ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಿಬ್ಬರನ್ನು ಪೊಲಿಸರು ಬಂಧಿಸಿದ್ದಾರೆ. ಶ್ರವಣ್ ಅವರು ನಮ್ಮ ಮನೆಯ ಮುಂದೆ ಮೂತ್ರ ವಿಸರ್ಜನೆ ಮಾಡಿದ್ದಕ್ಕಾಗಿ ನಾವು ಪ್ರಶ್ನೆ ಮಾಡಿದೆವು. ಅದು ವಿಕೋಪಕ್ಕೆ ತಿರುಗಿ ಹಲ್ಲೆ ನಡೆಸಿದ್ದಾಗಿ ವಿಚಾರಣೆ ವೇಳೆ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.