ಬೆಂಗಳೂರು,ಫೆಬ್ರವರಿ,1,2023(www.justkannada.in): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ರಚನಾತ್ಮಕ ನೀತಿಗಳ ಪ್ರತಿಫಲನವಾಗಿದೆ. ಇದು ಸಮಾಜದ ಆಧಾರಸ್ತಂಭವಾದ ರೈತರು, ದೀನದಲಿತರು, ಮಹಿಳೆಯರು ಕುಶಲಕರ್ಮಿಗಳು, ಯುವಜನರು, ಉದ್ಯಮಿಗಳು ಮತ್ತು ತೆರಿಗೆದಾರರ ಸಬಲೀಕರಣ ಮತ್ತು ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡಿದೆ. ಇದರ ಜತೆಯಲ್ಲೇ ಶಿಕ್ಷಣ, ಕೌಶಲ್ಯ, ಮೂಲಸೌಕರ್ಯ ಮತ್ತು ವೈಜ್ಞಾನಿಕ ನಗರೀಕರಣಕ್ಕೆ ಒತ್ತು ಕೊಡುವ ಹೊಸ ದೃಷ್ಟಿಕೋನವೂ ಇದರಲ್ಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ ನಾರಾಯಣ್ ಪ್ರತಿಕ್ರಿಯಿಸಿದ್ದಾರೆ.
ಬಜೆಟ್ ಬಗ್ಗೆ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್ ಅವರು, “ರಾಜ್ಯದ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಕೊಟ್ಟಿರುವುದು ಮಧ್ಯ ಕರ್ನಾಟಕದ ಕೃಷಿ ಚಹರೆಯನ್ನೇ ಬದಲಿಸಲಿದೆ. ಇದರ ಜತೆಗೆ ಕೃಷಿ ಕ್ಷೇತ್ರಕ್ಕೆ ನೆರವು ನೀಡುವಂಥ ಸ್ಟಾರ್ಟಪ್ ಗಳ ಸ್ಥಾಪನೆಗೆ ಅಗ್ರಿ ಆಕ್ಸಿಲರೇಟರ್ ಫಂಡ್ ಸ್ಥಾಪಿಸಿರುವುದು ಸ್ವಾಗತಾರ್ಹವಾಗಿದ್ದು, ಕೃಷಿಯಲ್ಲಿ ತಂತ್ರಜ್ಞಾನದ ಪಾತ್ರ ನಿರ್ಣಾಯಕವಾಗಲಿದೆ. ಕೃಷಿಕ್ಷೇತ್ರದ ಸಾಲ ಸೌಲಭ್ಯಕ್ಕೆಂದು 20 ಲಕ್ಷ ಕೋಟಿ ರೂ. ನೀಡಿರುವುದು ಚಾರಿತ್ರಿಕವಾಗಿದೆ” ಎಂದಿದ್ದಾರೆ.
ಯುವಜನರಲ್ಲಿ ಕೌಶಲ್ಯಾಭಿವೃದ್ಧಿಗೆ ಒತ್ತು ಮುಂದುವರಿದಿದ್ದು, 30 ಸ್ಕಿಲ್ ಇಂಡಿಯಾ ಕೇಂದ್ರಗಳ ಸ್ಥಾಪನೆ ಸಕಾರಾತ್ಮಕ ಹೆಜ್ಜೆಯಾಗಿದೆ. ಶಿಕ್ಷಣದಲ್ಲಿ ಡಿಜಿಟಲೀಕರಣಕ್ಕೆ ಆದ್ಯತೆ ಕೊಟ್ಟಿರುವುದು ತಂತ್ರಜ್ಞಾನದ ಲಾಭವನ್ನು ಯುವಪೀಳಿಗೆಗೆ ತಲುಪಿಸುವ ಕ್ರಮವಾಗಿದೆ. ಇನ್ನೊಂದೆಡೆಯಲ್ಲಿ, 157 ವೈದ್ಯಕೀಯ ಕಾಲೇಜುಗಳಲ್ಲಿ ನರ್ಸಿಂಗ್ ಕಾಲೇಜುಗಳ ಸ್ಥಾಪನೆಗೆ ತೀರ್ಮಾನಿಸಿರುವುದು ಈ ಕ್ಷೇತ್ರಕ್ಕೆ ಬೇಕಾದ ಗುಣಮಟ್ಟದ ಅರೆವೈದ್ಯಕೀಯ ಸಿಬ್ಬಂದಿಯನ್ನು ಪೂರೈಸುವ ನಿಟ್ಟಿನಲ್ಲಿ ದೊಡ್ಡ ಉಪಕ್ರಮವಾಗಿದೆ ಎಂದು ಅವರು ಹೇಳಿದ್ದಾರೆ.
ಮೋದಿಯವರು ಜಾಗತಿಕ ಮಟ್ಟದಲ್ಲಿ ಪರಿಸರಸ್ನೇಹಿ ಅಭಿವೃದ್ಧಿ, ಸುಸ್ಥಿರ ಅಭಿವೃದ್ಧಿ, ಮರುಬಳಕೆ ಮಾಡಬಹುದಾದ ಇಂಧನ, ಸಿರಿಧಾನ್ಯ ಇತ್ಯಾದಿಗಳ ಮೂಲಕ ಭಾರತವನ್ನು ಪ್ರತಿಷ್ಠಾಪಿಸಿದ್ದಾರೆ. ಈ ಬಜೆಟ್ ನಲ್ಲಿ ಇವುಗಳಿಗೆ ಸೂಕ್ತ ಒತ್ತಾಸೆ ಕೊಡಲಾಗಿದೆ. ಜತೆಗೆ ಸಾಮಾಜಿಕವಾಗಿ ಭಾರತದ ಎಲ್ಲ ಸಮುದಾಯಗಳನ್ನೂ ಇದು ಒಳಗೊಂಡಿದ್ದು, ಸಬ್ ಕಾ ಸಾಥ್ ಸಬ್ ಕಾ ಪ್ರಯಾಸ್ ನೀತಿಗೆ ಅನುಗುಣವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಮೂಲಸೌಕರ್ಯ, ನಗರೋತ್ಥಾನ, ರೈಲ್ವೆ, 50 ನೂತನ ವಿಮಾನ ನಿಲ್ದಾಣಗಳು, ಪ್ರವಾಸೋದ್ಯಮ ಇವೆಲ್ಲವುಗಳಿಂದ ರಾಜ್ಯಕ್ಕೆ ಲಾಭ ಸಿಗಲಿದೆ. ಹಾಗೆಯೇ, ಜಾಗತಿಕ ಸ್ತರದಲ್ಲಿ ಸದ್ಯಕ್ಕೆ 5ನೇ ಸ್ಥಾನದಲ್ಲಿರುವ ಭಾರತದ ಆರ್ಥಿಕತೆಯು ಮತ್ತಷ್ಟು ಬಲಾಢ್ಯವಾಗಲು ಪೂರಕವಾದಂತಹ ಕ್ರಮಗಳು ಬಜೆಟ್ ನಲ್ಲಿವೆ ಎಂದು ಸಚಿವ ಅಶ್ವಥ್ ನಾರಾಯಣ್ ನುಡಿದಿದ್ದಾರೆ.
ಈ ಬಜೆಟ್ ನಲ್ಲಿ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸುವ ಮತ್ತು ಅಖಿಲ ಭಾರತ ಮಟ್ಟದ ಅಭಿವೃದ್ಧಿ ಕೇಂದ್ರಿತ ದೃಷ್ಟಿಕೋನವಿದೆ. ಆದಾಯ ತೆರಿಗೆದಾರರಿಗೆ ನಿರೀಕ್ಷಿತ ವಿನಾಯಿತಿ ಕೊಡುವ ಮೂಲಕ ಮಧ್ಯಮ/ವೇತನ ವರ್ಗದ ಆಸೆಯನ್ನು ಈಡೇರಿಸಲಾಗಿದೆ. ಜಾಗತಿಕ ಸಂದರ್ಭ ಮತ್ತು ದೇಶದೊಳಗಿನ ಅಗತ್ಯ ಎರಡನ್ನೂ ಗಮನದಲ್ಲಿ ಇಟ್ಟುಕೊಂಡು, ಆರೋಗ್ಯಕರ ಸಮತೋಲನ ಸಾಧಿಸುವ ಆಶಯವುಳ್ಳ ಬಜೆಟ್ ಆಗಿದೆ ಎಂದು ಅಶ್ವತ್ ನಾರಾಯಣ್ ವಿವರಿಸಿದ್ದಾರೆ.
Key words: perfect- budget – holistic -development -vision- Minister -Ashwath Narayan