ಮೈಸೂರು,ಸೆಪ್ಟಂಬರ್,12,2022(www.justkannada.in): ಹಿಂದುಳಿದ ವರ್ಗಗಳ ಹಾಗೂ ದೀನ ದಲಿತರ ನಾಯಕರಾದ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ನಾಯಕರು ಪದೇ ಪದೇ ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ. ಹೀಗೆ ಮುಂದುವರಿಸಿದಲ್ಲಿ ಮುಂದೆ ಇದರ ಪರಿಣಾಮವನ್ನು ಬಿಜೆಪಿ ಎದುರಿಸಬೇಕಾಗುತ್ತದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷರಾದ ಬಿ.ಸುಬ್ರಹ್ಮಣ್ಯ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಸಿದ್ಧರಾಮಯ್ಯ ಅವರನ್ನು ಕಚ್ಚೆಹರುಕ ಅನ್ನಬಹುದಲ್ವಾ? ಎಂಬ ಅತ್ಯಂತ ಕೀಳು ಶಬ್ದಗಳ ಮೂಲಕ ಸಿದ್ದರಾಮಯ್ಯ ಅವರನ್ನು ನಿಂದಿಸಿದ್ದಾರೆ. ಅಲ್ಲದೇ “ಇದು ಮೈಸೂರು ಜನ ಹೇಳುತ್ತಾರೆ’’ಎಂದೂ ಹೇಳಿದ್ದಾರೆ. ಸಿದ್ದರಾಮಯ್ಯರ 75 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಮೈಸೂರಿನ ಜನ ಎಂದೂ ಹಾಗೆ ಹೇಳಿದವರಲ್ಲ. ಒಂದು ವೇಳೆ ಹೇಳಿದ್ದಾರೆ ಎನ್ನುವುದಾದರೆ ಸಿ.ಟಿ ರವಿ ಅವರು ಸಾಕ್ಷ್ಯಾಧಾರ ಕೊಡಲಿ. ಸುಖಾ ಸುಮ್ಮನೆ ಬಾಯಿಗೆ ಬಂದಂತೆ ನಾಲಿಗೆ ಹರಿಬಿಡುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಅವರು ಶಾಸಕರಾಗಿದ್ದಾಗ, ಆಗದೇ ಇದ್ದಾಗ ಹೇಗಿದ್ರು ಅಂತ ಬಿಚ್ಚಿಡಲು ನನಗೂ ಬರುತ್ತೆ ಎಂದೂ ಸಿಟಿ ರವಿ ಹೇಳಿದ್ದಾರೆ. ತಮ್ಮ ತಪ್ಪುಗಳು ನೂರೆಂಟು ಇರುವಾಗ ಏನು ಬಿಚ್ಚಿಡುತ್ತಾರೆ? ಸಾಕ್ಷ್ಯಾಧಾರ ಇದ್ದರೆ ಬಿಚ್ಚಿಡಲಿ. ಸಿದ್ದರಾಮಯ್ಯ ಅವರು ಸಿಟಿ ರವಿ ಲೂಟಿ ರವಿ ಅಂದಿದ್ದರು, ಅದಕ್ಕೆ ಬೇಕಿದ್ದರೇ ಅವರೇ ದಾಖಲೆ ಸಮೇತ ಉತ್ತರ ಕೊಡುತ್ತಾರೆ. ಬಿಜೆಪಿ ನಾಯಕರು ರಾಜಕೀಯವಾಗಿ ಏನು ಬೇಕಾದರೂ ಟೀಕೆ ಮಾಡಲಿ. ಆದರೆ, ಸಿದ್ದರಾಮಯ್ಯ ಅವರನ್ನು ವೈಯಕ್ತಿಕವಾಗಿ ಟೀಕೆ ಮಾಡುವುದು ಸರಿಯಲ್ಲ. ಇದು ಹೀಗೆ ಮುಂದುವರಿದಲ್ಲಿ ರಾಜ್ಯದ್ಯಾದಂತ ಕುರುಬ ಸಮುದಾಯ ಹಾಗೂ ಸರ್ವ ವರ್ಗಗಳ ಎಲ್ಲ ಸಂಘಟನೆಗಳನ್ನು ಒಗ್ಗೂಡಿಸಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ. ಅದರ ಪರಿಣಾಮವನ್ನು ಬಿಜೆಪಿಯೇ ಎದುರಿಸಬೇಕಾಗುತ್ತದೆ ಎಂದು ತಾಕೀತು ಮಾಡಿದ್ದಾರೆ.
ಸಿದ್ದರಾಮಯ್ಯ ಅವರ ವಿರುದ್ಧ ಮೊದಲು ಮೊಟ್ಟೆ ಹೊಡೆದ ಪ್ರಕರಣ ತನಿಖೆ ಮಾಡಿಸಬೇಕಾಗುತ್ತದೆ ಅಂತಾ ನಾಟಿ ಕೋಳಿ ಊಟ ಮಾಡಿ ದೇವಸ್ಥಾನಕ್ಕೆ ಬಂದ್ರು ಅಂತಾ ಸುಳ್ಳು ಆರೋಪ ಮಾಡಿದ್ರು. ಆಮೇಲೆ ಭದ್ರತೆ ಹೆಚ್ಚಿಸುವ ನಾಟಕ ಬಿಜೆಪಿ ಅವರು ಆಡಿದರು. ಈಗ ವೈಯಕ್ತಿಕ ದಾಳಿಗೆ ಮುಂದಾಗಿದ್ದಾರೆ. ಸಿದ್ದರಾಮಯ್ಯ ಅವರ ಅಮೃತಮಹೋತ್ಸವದ ಬಳಿಕ ಬಿಜೆಪಿಗೆ ಭಯ ಶುರುವಾಗಿದೆ. ಅದಕ್ಕಾಗಿ ಹಿಂದುಳಿದ ವರ್ಗಗಳ ನಾಯಕನನ್ನು ವೈಯಕ್ತಿಕವಾಗಿ ಕುಗ್ಗಿಸುವ ಹುನ್ನಾರ ನಡೆಯುತ್ತಿದೆ. ಬಿಜೆಪಿ ಇದನ್ನು ಇಲ್ಲಿಗೇ ಕೈಬಿಡದಿದ್ದರೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಬಿ.ಸುಬ್ರಹ್ಮಣ್ಯ ಎಚ್ಚರಿಕೆ ನೀಡಿದರು.
Key words: personal -criticism – against -Siddaramaiah – warn-bjp