ಬೆಂಗಳೂರು ಜೂ,17,2024 (www.justkannada.in): ಪೆಟ್ರೋಲ್-ಡೀಸೆಲ್ ಮೇಲಿನ ತೆರಿಗೆ ಹೆಚ್ಚಳದ ಬಳಿಕವೂ ಬಿಜೆಪಿ ಆಡಳಿತದ ರಾಜ್ಯಗಳಿಗಿಂತ, ದಕ್ಷಿಣ ಭಾರತದ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಇಂಧನ ಬೆಲೆ ಕಡಿಮೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಕಿ ಅಂಶಗಳ ಸಮೇತ ವಿವರಿಸಿದರು.
ಗೃಹ ಕಚೇರಿ ಕೃಷ್ಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತೆರಿಗೆ ಹೆಚ್ಚಳದ ಅನಿವಾರ್ಯತೆಯನ್ನು ಕೇಂದ್ರದ ಮೋದಿ ಸರ್ಕಾರ ಹೇಗೆ ಸೃಷ್ಟಿಸಿತು, ರಾಜ್ಯದ ಪಾಲಿನ ಹಣವನ್ನು ಕೊಡದೇ ಇರುವುದರಿಂದ ಸೃಷ್ಟಿ ಆಗಿರುವ ಪರಿಸ್ಥಿತಿಯನ್ನು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು….
2015 ರ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಅರ್ಧಕ್ಕರ್ಧ ಕಡಿಮೆ ಆದಾಗಲೂ ಅವರ ಲಾಭವನ್ನು ದೇಶದ ಜನರಿಗೆ ನೀಡದೆ ಮೋದಿ ಸರ್ಕಾರ ಇಂಧನ ಬೆಲೆಯನ್ನು ನಿರಂತರವಾಗಿ ಏರಿಸುತ್ತಾ ಹೋಗಿದ್ದರ ಅಂಕಿ ಅಂಶಗಳನ್ನು ವಿವರಿಸಿದರು.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆ ಹೆಚ್ಚಳದಿಂದ ಸಂಗ್ರಹವಾಗುವ ಅಂದಾಜು ಮೂರು ಸಾವಿರ ಕೋಟಿ ರೂಪಾಯಿಗಳು ರಾಜ್ಯದ ಖಜಾನೆಗೆ ಸಂದಾಯವಾಗುತ್ತದೆ, ಆ ಹಣ ಜನರ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗವಾಗುತ್ತದೆ ಅದು ನಮ್ಮ ಜೇಬಿಗೆ ಹೋಗುವುದಿಲ್ಲ ಎಂದರು.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ರಾಜ್ಯದ ಪ್ರತಿಯೊಂದು ಯೋಜನೆಗಳಲ್ಲಿಯೂ 40% ತೆರಿಗೆ ಹಣ ಬಿಜೆಪಿ ನಾಯಕರ ಜೇಬಿಗೆ ಹೋಗುತ್ತಿತ್ತು. ಈ ರೀತಿ ಅಂದಾಜು ಒಂದುವರೆ ಲಕ್ಷ ಕೋಟಿ ರೂಪಾಯಿಗಳಷ್ಟು ರಾಜ್ಯದ ಜನರ ಬೆವರಗಳಿಕೆಯ ತೆರಿಗೆ ಹಣವನ್ನು ಈ ಬಿಜೆಪಿ ನಾಯಕರ ತಮ್ಮ ಜೇಬಿಗೆ ತುಂಬಿಸಿಕೊಂಡಿದ್ದಾರೆ ಎಂದರು.
ಇಂತಹ ಲೂಟಿಕೋರ, ಭ್ರಷ್ಟ, ಜನವಿರೋಧಿ ಬಿಜೆಪಿ ನಾಯಕರಿಗೆ ಜನಕಲ್ಯಾಣಕ್ಕಾಗಿ ಸ್ಪಲ್ಪ ಪ್ರಮಾಣದ ತೆರಿಗೆ ಹೆಚ್ಚಿಸಿದ್ದನ್ನು ಪ್ರಶ್ನಿಸುವ ಯೋಗ್ಯತೆ ಎಲ್ಲಿದೆ ಎಂದು ಪ್ರಶ್ನಿಸಿದರು.
ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ 60 ಸಾವಿರ ಕೋಟಿ ರೂಪಾಯಿಗಳನ್ನು ವ್ಯಯ ಮಾಡುತ್ತಿದೆ. ಇಷ್ಟೂ ಹಣ ರಾಜ್ಯದ ಎಲ್ಲಾ ಜಾತಿ-ಸಮುದಾಯಗಳ ಬಡವರು ಮತ್ತು ಮಧ್ಯಮ ವರ್ಗದವರಿಗೆ ಹೋಗುತ್ತದೆ. ಸದ್ಯದ ಅಲ್ಪ ಪ್ರಮಾಣದ ಡೀಸೆಲ್-ಪೆಟ್ರೋಲ್ ತೆರಿಗೆ ಹೆಚ್ಚಳದಿಂದ ನಮಗೆ ಹೆಚ್ಚುವರಿಯಾಗಿ ಸಂಪನ್ಮೂಲ ಸಂಗ್ರಹ ಆಗುವುದು ಕೇವಲ 3 ಸಾವಿರ ಕೋಟಿ ರೂಪಾಯಿ ಮಾತ್ರ. ಆದರೆ ಗ್ಯಾರಂಟಿಗಳಿಗೆ ನಾವು ಕೊಡುತ್ತಿರುವುದು 60 ಸಾವಿರ ಕೋಟಿ ರೂಪಾಯಿ. ಹೀಗಾಗಿ ಆರ್.ಅಶೋಕ್ ಅವರ ಪೆದ್ದುತನದ ಮಾತುಗಳಿಗೆ ಅರ್ಥವಿಲ್ಲ. ಆರ್.ಅಶೋಕ್ ಗೆ ಇದೆಲ್ಲಾ ಅರ್ಥ ಆಗಲ್ಲ , ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವೂ ಇಲ್ಲ ಎಂದು ವ್ಯಂಗ್ಯವಾಡಿದರು.
ಜನರಿಗೆ ಹೆಚ್ಚಿನ ಹೊರೆಯಾಗದ ರೀತಿಯಲ್ಲಿ ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಸಂಪನ್ಮೂಲ ಕ್ರೋಢೀಕರಣದ ಉದ್ದೇಶದೊಂದಿಗೆ ಪೆಟ್ರೋಲ್, ಡೀಸೆಲ್ ಮಾರಾಟ ತೆರಿಗೆಯಲ್ಲಿ 3 ರೂ. ಗಳಷ್ಟು ಹೆಚ್ಚಿಸಲಾಗಿದೆ. ಅವರು ಇಂದು ಗೃಹ ರಾಜ್ಯ ಸರ್ಕಾರ 3 ರೂ. ಗಳಷ್ಟು ಪೆಟ್ರೋಲ್ ಡೀಸೆಲ್ ದರ ಏರಿಕೆ ಮಾಡಿದ್ದರೂ, ದಕ್ಷಿಣದ ಇತರ ರಾಜ್ಯಗಳು ಹಾಗೂ ಬಿಜೆಪಿ ಆಡಳಿತ ಇರುವ ರಾಜ್ಯಗಳಿಗಿಂತ ಕಡಿಮೆ ಇದೆ ಎಂದು ಅಂಕಿ-ಅಂಶಗಳೊಂದಿಗೆ ಸ್ಪಷ್ಟ ಪಡಿಸಿದರು.
ಕೇಂದ್ರ ಸರ್ಕಾರ ಜಿ.ಎಸ್.ಟಿ. ವ್ಯವಸ್ಥೆ ಜಾರಿಗೊಳಿಸಿದ ನಂತರ ರಾಜ್ಯ ಸರ್ಕಾರಗಳ ಸಂಪನ್ಮೂಲ ಕ್ರೋಢೀಕರಣಕ್ಕೆ ಇರುವ ಅವಕಾಶ ಸೀಮಿತಗೊಂಡಿದೆ. ಕೇಂದ್ರ ಸರ್ಕಾರ ಜಿ.ಎಸ್.ಟಿ. , ಆದಾಯ ತೆರಿಗೆ, ಕೇಂದ್ರ ಅಬಕಾರಿ ಸುಂಕ ಮೊದಲಾದ ಮೂಲಗಳಿಂದ ತೆರಿಗೆ ಸಂಗ್ರಹಿಸುತ್ತದೆ. ರಾಜ್ಯ ಸರ್ಕಾರಕ್ಕೆ ಕೇವಲ ನೋಂದಣಿ ಮತ್ತು ಮುದ್ರಾಂಕ ಶುಲ್ಕ, ವಾಹನ ತೆರಿಗೆ, ಪೆಟ್ರೋಲ್, ಡೀಸೆಲ್ ಮೇಲಿನ ಮಾರಾಟ ತೆರಿಗೆ ಹಾಗೂ ಮದ್ಯದ ಮೇಲಿನ ಮಾರಾಟ ತೆರಿಗೆ ಹೊರತು ಪಡಿಸಿ ಯಾವುದೇ ಮೂಲಗಳಿಲ್ಲ.
ಈ ಹಿನ್ನೆಲೆಯಲ್ಲಿ ಇತರ ರಾಜ್ಯಗಳ ಪೆಟ್ರೋಲ್ ಡೀಸೆಲ್ ಬೆಲೆಗೆ ಹೋಲಿಸಿದರೆ ರಾಜ್ಯದ ದರಗಳು ಕಡಿಮೆ ಇರುವುದು ಗಮನಿಸಿ, ರಾಜ್ಯ ಸರ್ಕಾರ ಅಲ್ಪ ಪ್ರಮಾಣದ ತೆರಿಗೆ ಹೆಚ್ಚಳ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟ ಪಡಿಸಿದರು.
ಈ ಬಗ್ಗೆ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಅವರಿಗೆ ಪ್ರತಿಭಟನೆ ಮಾಡುವ ನೈತಿಕ ಹಕ್ಕು ಎಲ್ಲಿದೆ ಎಂದು ಪ್ರಶ್ನಿಸಿದರು. ಡಾ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 113 ಡಾಲರ್ ಇತ್ತು. 2015 ರಲ್ಲಿ ಈ ಬೆಲೆ ಅರ್ಧಕ್ಕರ್ಧ ಕಡಿಮೆಯಾದರೂ, ಬೆಲೆ ಇಳಿಸಿ, ಜನರ ಹೊರೆ ಕಡಿಮೆ ಮಾಡುವ ಕಾಳಜಿಯನ್ನು ನರೇಂದ್ರ ಮೋದಿಯವರು ತೋರಲಿಲ್ಲ. ಬಿಜೆಪಿಯವರು ಯಾರ ವಿರುದ್ಧ ಹೋರಾಡಬೇಕು ಎಂದು ಪ್ರಶ್ನಿಸಿದರು.
ಕರ್ನಾಟಕ ರಾಜ್ಯಕ್ಕೆ ಬಿಜೆಪಿ ಸರ್ಕಾರದಿಂದ ನಿರಂತರ ಅನ್ಯಾಯವಾಗುತ್ತ ಬಂದಿದ್ದರೂ, ಬಿಜೆಪಿಯವರು ದನಿ ಎತ್ತಿಲ್ಲ? ತೆರಿಗೆ ಅನ್ಯಾಯವಾದಾಗ ಸಂಸದರು ಈ ವಿಷಯದ ಕುರಿತು ಮಾತನಾಡಿಲ್ಲ. ರಾಜ್ಯಕ್ಕೆ 15ನೇ ಹಣಕಾಸು ಆಯೋಗವು ವಿಶೇಷ ಅನುದಾನ ನೀಡುವಂತ ಶಿಫಾರಸು ಮಾಡಿದ್ದರೂ, ಕೇಂದ್ರ ಸರ್ಕಾರ ನೀಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಆಯವ್ಯಯದಲ್ಲಿ ನಿರ್ಮಲಾ ಸೀತಾರಾಮನ್ ಅವರು 5,000 ಕೋಟಿ ರೂ. ಒದಗಿಸುವುದಾಗಿ ಘೋಷಿಸಿದರೂ, ಬಿಡಿಗಾಸೂ ನೀಡಿಲ್ಲ. ಈ ವಿಷಯಗಳ ಕುರಿತು ಬಿಜೆಪಿಯವರು ದನಿ ಎತ್ತಿದ್ದಾರೆಯೇ? ಬಿಜೆಪಿಯು ಬಡವರು, ದಲಿತರ ವಿರೋಧಿ ಧೋರಣೆ ಹೊಂದಿದೆ ಎಂದು ಅವರು ನುಡಿದರು.
ಬರಗಾಲದ ಬಗ್ಗೆ ಪರಿಹಾರ ತೆಗೆದುಕೊಳ್ಳಲು ಕೋರ್ಟಿಗೆ ಹೋಗಬೇಕಾಗಿ ಬಂತು. ಕೋರ್ಟು ಸೂಚನೆ ನೀಡಿದ ನಂತರ 18 ಸಾವಿರ ಕೋಟಿ ಕೇಳಿದರೆ 3454 ಕೋಟಿ ರೂ. ಪರಿಹಾರ ನೀಡಿದ್ದಾರೆ.
ಬಿಜೆಪಿಯವರು ಬಡವರು, ದಲಿತರು, ಜನಸಾಮಾನ್ಯರ ಕಾರ್ಯಕ್ರಮಗಳ ಕಲ್ಯಾಣ ಕಾರ್ಯಕ್ರಮಗಳಿಗೆ ವಿರುದ್ಧವಿದ್ದಾರೆ. ಬಸ್ ನಲ್ಲಿ ಉಚಿತ ಪ್ರಯಾಣ, ತಿಂಗಳಿಗೆ ಎರಡು ಸಾವಿರ ನೀಡಿದರೆ ಅವರ ಆರ್ಥಿಕ ಶಕ್ತಿ ಹೆಚ್ಚಾಗುವುದಿಲ್ಲವೇ? ಉಚಿತ ವಿದ್ಯುತ್ ನೀಡಿದರೆ ಅವರಿಗೆ ಉಳಿತಾಯವಾಗುವುದಿಲ್ಲವೇ? ಹೆಚ್ಚುವರಿ ಅಕ್ಕಿ ಕೇಳಿದರೆ, ಕೊಟ್ಟಿಲ್ಲ. ಯಾರಾದರೂ ಮಾತಾಡಿದರೇ? ಎಂದು ಪ್ರಶ್ನಿಸಿದರು.
ಈ ಬೆಲೆ ಏರಿಕೆಯಿಂದ ಸುಮಾರು 3,000 ಕೋಟಿ ರೂ. ಸಂಪನ್ಮೂಲ ದೊರೆಯಲಿದೆ. ಗ್ಯಾರಂಟಿ ಯೋಜನೆಗಳಿಗೆ 60000 ಕೋಟಿ ರೂ. ಅಗತ್ಯವಿದೆ. ಸರ್ಕಾರ ಪಾಪರ್ ಆಗಿದೆ ಎಂದು ವಿರೋಧ ಪಕ್ಷದ ನಾಯಕರು ಹೇಗೆ ಹೇಳುತ್ತಾರೆ? ನಾವು ಯಾರದ್ದಾದರೂ ಸಂಬಳ ನಿಲ್ಲಿಸಿದ್ದೇವೆಯೇ? ಆಯವ್ಯಯದಲ್ಲಿ ಘೋಷಿಸಿದ ಕಾರ್ಯಕ್ರಮಗಳಿಗೆ ಅನುದಾನ ಒದಗಿಸದೇ ಸ್ಥಗಿತ ಗೊಳಿಸಿದ್ದೇವೆಯೇ ಎಂದು ಅವರು ಪ್ರಶ್ನಿಸಿದರು.
ತೈಲ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ, ಬೆಲೆ ಏರಿಕೆಯ ಹೊರತಾಗಿಯೂ ರಾಜ್ಯದ ಪೆಟ್ರೋಲ್, ಡೀಸೆಲ್ ಬೆಲೆ ನೆರೆಯ ರಾಜ್ಯಗಳು ಹಾಗೂ ಬಿಜೆಪಿ ಆಡಳಿತದ ರಾಜ್ಯಗಳಿಗಿಂತ ಕಡಿಮೆ ಎಂದು ವಿವರಿಸಿದರು.
ಈ ಬೆಲೆ ಏರಿಕೆಯಿಂದ 3000 ಕೋಟಿ ಆದಾಯ ಬರಬಹುದು. ಗ್ಯಾರಂಟಿ ಯೋಜನೆಗಳಿಗೆ 60000 ಕೋಟಿ ಬೇಕು. ಯಾರಿಗೆ ಕೊಡುತ್ತಾ ಇದ್ದೇವೆ? ಶ್ರೀಮಂತರಿಗೆ ಕೊಡುತ್ತಾ ಇದ್ದೀವಾ?ಅಂಬಾನಿ, ಅದಾನಿಗಳಿಗೆ ಸಾಲ ಮನ್ನಾ ಮಾಡ್ತಾ ಇದ್ದೀವಾ? ರೈತರ ಸಾಲ ಮನ್ನ ಮಾಡಿ ಎಂದರೆ ಒಂದು ರೂಪಾಯಿ ಸಾಲ ಮನ್ನಾ ಮಾಡಿಲ್ಲ. ಇವರಿಗೆ ನಮ್ಮನ್ನು ಪ್ರಶ್ನಿಸುವ ನೈತಿಕತೆ ಇದೆಯೇ ಎಂದು ಟೀಕಿಸಿದರು.
ಸರ್ಕಾರ ಪಾಪರ್ ಆಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಗೆ ಹೇಳುತ್ತಾರೆ? ನಾವು ಯಾರದ್ದಾದರೂ ಸಂಬಳ ನಿಲ್ಲಿಸಿದ್ದೇವೆಯೇ? ಆಯವ್ಯಯದಲ್ಲಿ ಘೋಷಿಸಿದ ಕಾರ್ಯಕ್ರಮಗಳಿಗೆ ಅನುದಾನ ಒದಗಿಸದೇ ಸ್ಥಗಿತ ಗೊಳಿಸಿದ್ದೇವೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ತೈಲ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ, ಬೆಲೆ ಏರಿಕೆಯ ಹೊರತಾಗಿಯೂ ರಾಜ್ಯದ ಪೆಟ್ರೋಲ್, ಡೀಸೆಲ್ ಬೆಲೆ ನೆರೆಯ ರಾಜ್ಯಗಳು ಹಾಗೂ ಬಿಜೆಪಿ ಆಡಳಿತದ ರಾಜ್ಯಗಳಿಗಿಂತ ಕಡಿಮೆ ಎಂದು ವಿವರಿಸಿದರು.
ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಾಗ ಪೆಟ್ರೋಲ್ ಮೇಲೆ ಕೇಂದ್ರ ಅಬಕಾರಿ ಸುಂಕ 9.48 ರೂಗಳಷ್ಟಿತ್ತು. 2020ರ ಮೇ ನಲ್ಲಿ 32.98 ರೂ.ಗಳಿಗೆ ಹೆಚ್ಚಾಗಿದೆ. ಈ ಮಟ್ಟದ ಏರಿಕೆ ವಿರುದ್ಧ ಬಿಜೆಪಿಯವರಾಗಲೀ, ಆರ್.ಅಶೋಕ್ ಆಗಲಿ ಬಾಯಿ ಬಿಟ್ಟಿಲ್ಲ. ಅವರಿಗೆ ಅರ್ಥ ಆಗಿದ್ದರೆ ತಾನೆ ಎಂದು ಛೇಡಿಸಿದರು.
ಗೋಷ್ಠಿಯಲ್ಲಿ ಸಚಿವರಾದ ಚಲುವರಾಯಸ್ವಾಮಿ, ಬೈರತಿ ಸುರೇಶ್, ಶಾಸಕರಾದ ನರೇಂದ್ರಸ್ವಾಮಿ, ಗೋಪಾಲಕೃಷ್ಣ ಬೇಳೂರು ಸೇರಿ ಹಲವರು ಉಪಸ್ಥಿತರಿದ್ದರು.
Key words: petrol, diesel, price, hike, CM Siddaramaiah