‘ಅಪ್ಪಮಗ” ಹೊಸ ವ್ಯಾಖ್ಯಾನ ನೀಡಿದ ಪಿಎಚ್.ಡಿ ಸಾಧಕರು

ಮೈಸೂರು,ಸೆಪ್ಟೆಂಬರ್,30,2020(www.justkannada.in) :  ಮೈಸೂರು ವಿವಿಯು ನೂರನೇ ವರ್ಷದ ಘಟಿಕೋತ್ಸವದ ಸಂಭ್ರಮದಲ್ಲಿದೆ. ವಿಶೇಷ ಎನ್ನುವಂತೆ ಅಪ್ಪ,ಮಗ ಇಬ್ಬರು ಒಟ್ಟಿಗೆ ಪಿಎಚ್.ಡಿ ಪದವಿ ಮುಕ್ತಾಯಗೊಳಿಸಿದ್ದು, ಈ ಬಾರಿಯ ಘಟಿಕೋತ್ಸವದಲ್ಲಿ ಪಿಎಚ್.ಡಿ ಪದವಿ ಪಡೆಯಲು ಸಿದ್ಧರಾಗಿದ್ದಾರೆ.jk-logo-justkannada-logoಅಪ್ಪನನ್ನು ಮಕ್ಕಳು ಅನುಕರಣೆ ಮಾಡುವುದು ಸಾಮಾನ್ಯ. ಆದರೆ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ  ಪುತ್ರ ಓದುವುದನ್ನು ಕಂಡು ತಾವು ಅದರಿಂದ ಸ್ಪೂರ್ತಿಯಾಗಿ  ಪುತ್ರನೊಂದಿಗೆ ಎಂಬಿಎ ಪಡೆಯುವ ಜತೆಗೆ ಪಿಎಚ್‌.ಡಿ ಪದವಿಯನ್ನೂ ಪೂರೈಸಿರುವುದು ಅಚ್ಚರಿ ಮೂಡಿಸಿದೆ.

ನಾಗಕೃಷ್ಣ ರಾಜೆ ಅರಸ್‌ (63), ಪ್ರಮು ಕುಮಾರ್‌ ರಾಜೇ ಅರಸ್‌ ಎಂ.ಎನ್‌. (35)

PhD-achievers-given-new-definition

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸಿಂಧುವಳ್ಳಿ ಗ್ರಾಮದ ನಾಗಕೃಷ್ಣ ರಾಜೆ ಅರಸ್‌ (63 ವರ್ಷ) ಹಾಗೂ ಪ್ರಮು ಕುಮಾರ್‌ ರಾಜೇ ಅರಸ್‌ ಎಂ.ಎನ್‌. (35 ವರ್ಷ) ಒಟ್ಟಿಗೆ ಪಿಎಚ್‌.ಡಿ ಪೂರೈಸಿರುವ ತಂದೆ-ಮಗ. ಇವರಿಬ್ಬರಿಗೂ ಮ್ಯಾನೇಜ್‌ಮೆಂಟ್‌ (ಆಡಳಿತ) ವಿಷಯದಲ್ಲಿ ಡಾ.ವಿ.ಎಸ್‌.ಸೋಮನಾಥ್‌ ಮಾರ್ಗದರ್ಶನ ಮಾಡಿದ್ದಾರೆ.

ಅಕ್ಟೋಬರ್‌ನಲ್ಲಿ ನಡೆಯುವ ಘಟಿಕೋತ್ಸವದಲ್ಲಿ ಇಬ್ಬರಿಗೂ ಪಿಎಚ್‌.ಡಿ ಅವಾರ್ಡ್‌

ತಂದೆ, ಮಗ ಬೇರೆ ಬೇರೆ ವಿಷಯದಲ್ಲಿ ಮಂಡಿಸಿದ ಪಿಎಚ್‌.ಡಿ ಮಹಾ ಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿದೆ. ಅಕ್ಟೋಬರ್‌ನಲ್ಲಿ ನಡೆಯುವ ಘಟಿಕೋತ್ಸವದಲ್ಲಿ ಇಬ್ಬರೂ ಪಿಎಚ್‌.ಡಿ ಅವಾರ್ಡ್‌ ತೆಗೆದುಕೊಳ್ಳುವ ಅಪರೂಪದ ದೃಶ್ಯಕ್ಕೆ ಮೈವಿವಿ ಸಾಕ್ಷಿಯಾಗಲಿದೆ. ವಿಶೇಷವೆಂದರೆ ಅಪ್ಪ ಎಂಎಸ್ಸಿ ಹಾಗೂ ಮಗ ಎಂಬಿಎ ಓದುವಾಗ ಚಿನ್ನದ ಪದಕ ಪಡೆದಿದ್ದಾರೆ.

ಮೈಸೂರು ವಿವಿ ಇತಿಹಾಸದಲ್ಲೇ ಅಪರೂಪ

ಒಂದೇ ವಿಶ್ವವಿದ್ಯಾಲಯದಲ್ಲಿ ಅಪ್ಪ-ಮಗ ಇಬ್ಬರೂ ಪಿಎಚ್‌.ಡಿ ಪೂರೈಸಿರುವುದು ಮೈಸೂರು ವಿವಿ ಇತಿಹಾಸದಲ್ಲೇ ಅಪರೂಪ ಎನ್ನಬಹುದು. ನಾಗಕೃಷ್ಣ ರಾಜೇ ಅರಸ್‌ ತಮ್ಮ ಅನುಭವ ಮೇಲೆ ಪಿಎಚ್‌.ಡಿ ಮಾಡಿದರು. ಮಗ ಪ್ರಚಲಿತ ವಿದ್ಯಮಾನವನ್ನು ಪ್ರಬಂಧದ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದರು. ಇಬ್ಬರೂ ಬುದ್ಧಿವಂತರು. ನನ್ನ ವೃತ್ತಿ ಜೀವನದಲ್ಲಿ ಇದು ಸಂತೋಷದ ಸಂಗತಿ  ಎಂದು ಡಾ.ವಿ.ಎಸ್‌.ಸೋಮನಾಥ್‌ ಸಂತೋಷವ್ಯಕ್ತಪಡಿಸಿದ್ದಾರೆ.

ನಾಗಕೃಷ್ಣ ರಾಜೆ ಅರಸ್‌ ಅವರು 1980ರಲ್ಲೇ ಎಂಎಸ್ಸಿ ಪೂರೈಸಿದ್ದರು. ನಂತರ ಕರ್ನಾಟಕ ಸೋಫ್ಸ್‌ ಮತ್ತು ಡಿಟರ್ಜೆಂಚ್‌ ಲಿಮಿಟೆಡ್‌ಗೆ ಸೇರಿಕೊಂಡು 2017ರ ನವೆಂಬರ್‌ನಲ್ಲಿ ನಿವೃತ್ತರಾದರು. ಆರ್ಥಿಕ ಕಾರಣಕ್ಕೆ ಮುಂದೆ ಉನ್ನತ ಶಿಕ್ಷಣ ಮಾಡಲು ಸಾಧ್ಯವಾಗಿರಲಿಲ್ಲ. ಬಳಿಕ ದೂರ ಶಿಕ್ಷಣದ ಮೂಲಕ ಎಂಬಿಎ ಪ್ರವೇಶ ಪಡೆದರು.  2015ರಲ್ಲಿ ಮೈಸೂರು ವಿವಿ ವತಿಯಿಂದ ನಡೆದ ಪಿಎಚ್‌.ಡಿ ಸಾಮಾನ್ಯ ಪರೀಕ್ಷೆಯನ್ನು ಎದುರಿಸಿ ಪಾಸಾದರು. ನಂತರ ಐದು ವರ್ಷ ಸಂಶೋಧನೆ ನಡೆಸಿ, ಇದೀಗ ಪಿಎಚ್‌.ಡಿ ಪ್ರಬಂಧ ಮಂಡಿಸಿದ್ದು, ವಿವಿ ಅದನ್ನು ಅಂಗೀಕರಿಸಿದೆ.

ಬಾಲ್ಯದಿಂದ ಓದುವ, ಸಂಶೋಧನೆ ಮಾಡುವ ಆಸಕ್ತಿ ಇತ್ತು. ಕಾರ್ಖಾನೆಯಲ್ಲಿ ಕೆಲಸ ಮಾಡುವಾಗಲೂ ಸಣ್ಣಪುಟ್ಟ ಸಂಶೋಧನೆ ಮಾಡುತ್ತಿದ್ದೆ. ಇದನ್ನೇ ಸ್ಫೂರ್ತಿಯಾಗಿ ಪಡೆದುಕೊಂಡು ಪುತ್ರನೊಂದಿಗೆ  ಪಿಎಚ್‌.ಡಿ ಮುಗಿಸಿದೆ. ಇದಕ್ಕೆ ನನ್ನ ಪತ್ನಿಯ ನೆರವು ಅಪಾರ ಎಂದು ನಾಗಕೃಷ್ಣರಾಜೆ ಅರಸ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ತಂದೆಗೆ ಬಾಲ್ಯದಿಂದಲೂ ಕುಟುಂಬದಲ್ಲಿ ಉನ್ನತ ವಿದ್ಯಾವಂತ ವ್ಯಕ್ತಿಯಾಗಬೇಕೆಂಬ ಆಸೆ ಇತ್ತು. ಹಾಗಾಗಿ, ಅಮ್ಮನ ಸಹಕಾರದಿಂದ ನಾನು ಓದುವಾಗಲೇ ಎಂಬಿಎಗೆ ಸೇರಿಕೊಂಡರು. ನಂತರ ನನ್ನೊಂದಿಗೆ ಪಿಎಚ್‌.ಡಿ ವ್ಯಾಸಂಗ ಮಾಡಲು ನಿರ್ಧರಿಸಿದರು. ಇದೀಗ ನಾವಿಬ್ಬರೂ ಒಟ್ಟಾಗಿ ಪಿಎಚ್‌.ಡಿ ಪಡೆದಿರುವುದು ಹೆಮ್ಮೆಯ ಕ್ಷಣ ಎಂದು ಎಂ.ಎನ್.ಪ್ರಮು ಕುಮಾರ್ ರಾಜೇ ಅರಸ್ ತಿಳಿಸಿದರು.

key words : PhD-achievers-given-new-definition