ಬೆಂಗಳೂರು:ಆ-23:(www.justkannada.in) ವಿಕಲಚೇತನ ವೃದ್ಧ ಮಹಿಳೆಯೊಬ್ಬರ ಮನೆಗೆ ಪೊಲೀಸ್ ವೇಷದಲ್ಲಿದ್ದ ಇಬ್ಬರು ದರೋಡೆಕೋರರು ದಾಳಿ ನಡೆಸಿ, ಮಹಿಳೆಯ ಮೇಲೆ ಹಲ್ಲೆಮಾಡಿ ನಾಲ್ಕು ಲ್ಕ್ಷ ಬೆಲೆಬಾಳುವ ವಸ್ತು, ಆಭರಣಗಳನ್ನು ಲೂಟಿ ಮಾಡಿರುವ ಘಟನೆ ಚಂದ್ರಾಪುರದಲ್ಲಿ ನಡೆದಿದೆ.
ಲುರ್ಡ್ ಮೇರಿ(70) ಹಲ್ಲೆಗೊಳಗಾದ ಮಹಿಳೆ. ಮೇರಿ ಆನೆಕಲ್ ರೋಡ್ ನಲ್ಲಿ ಚಂದ್ರಾಪುರ ಬಳಿಯ ತನ್ನ ಮನೆಯಲ್ಲಿ ಒಬ್ಬರೇ ವಾಸವಾಗಿರುತ್ತಿದ್ದು, ಸೋಮವಾರ ಬೆಳಗಿನ ಜಾವ 12:30ರಿಂದ 1:30ರ ಸುಮಾರಿನಲ್ಲಿ ಈ ದರೋಡೆ ನಡೆದಿದೆ.
ದರೋಡೆಕೋರರು ಪೊಲೀಸ್ ವೇಷದಲ್ಲಿ ಮನೆಬಾಗಿಲು ತೆರೆದು ಒಳನುಗ್ಗಿದ್ದಾರೆ. ಅಲ್ಲದೇ ನೀವು ಅಂಗವಿಕಲರಿಗೆ ನೀಡುವ ಪಿಂಚಣಿ ಧನಕ್ಕೆ ಅರ್ಹರಾಗಿದ್ದೀರಿ ಹೀಗಾಗಿ ನಿಮ್ಮ ಫೋಟೋ ತೆಗೆದುಕೊಳ್ಳುವುದಾಗಿ ಮಹಿಳೆಗೆ ಹೇಳಿದ್ದಾರೆ. ಇದಕ್ಕೆ ಮಹಿಳೆ ವಿರೋಧವ್ಯಕ್ತಪಡಿಸಿದ್ದಾರೆ. ಈ ವೇಳೆ ಅವರು ಪೊಲೀಸರಲ್ಲ ದರೋದೆಕೋರರೆಂಬುದು ಮಹಿಳೆಗೆ ಅರಿವಾಗಿದೆ. ತಕ್ಷಣ ಮಹಿಳೆ ಕಿರುಚಾಡಲು ಆರಂಭಿಸಿದ್ದಾರೆ. ತಕ್ಷಣ ಆಕೆಯ ಕೈ-ಕಾಲುಗಳನ್ನು ಕಟ್ಟಿಹಾಕಿ ಒಂದೆಡೆ ಕೂರಿಸಿ, ಮನೆಯಲ್ಲಿರುವ ಹಣ, ಬಂಗಾರದ ಬಳೆ, ಕಿವಿಯೋಲೆ, ಇನ್ನಿತರ ಒಡವೆ ಸೇರಿದಂತೆ 4 ಲಕ್ಷ ಮೌಲ್ಯದ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಬೆಳಿಗ್ಗೆ 5 ಗಂಟೆವರೆಗೂ ವೃದ್ದ ಮಹಿಳೆ ಕೈ-ಕಾಲು ಬಿಡಿಸಿಕೊಳ್ಳಲಾರದೇ ನೋವಲ್ಲಿ ನರಳಿದ್ದಾರೆ. ಬಳಿಕ ನೆರೆಮನೆಯವರು ಮುಂಜಾನೆ 5 ಗಂಟೆ ವೇಳೆ ಹೊರಬಂದಾಗ ಮೇರಿ ಮನೆ ಬಾಗಿಲು ಒಡೆದಿರುವುದು ಗೊತ್ತಾಗಿದೆ. ತಕ್ಷಣ ಒಳಹೋಗಿ ನೋಡಿದಾಗ ಮೇರೆಯವರನ್ನು ಕೈ-ಕಾಲು ಕಟ್ಟಿ ಹಾಕಿದ್ದರು. ತಕ್ಷಣ ಅವರನ್ನು ಬಿಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸೆಕ್ಷನ್ 394ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಅನೆಕಲ್ ಪೊಲೀಸರು ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ.