ಬೆಂಗಳೂರು,ಅಕ್ಟೊಬರ್,07,2020(www.justkannada.in) : ಈ ಬಾರಿಯ ಭೌತಶಾಸ್ತ್ರದ ನೊಬೆಲ್ ಪುರಸ್ಕಾರವನ್ನು ಗೆಲಾಕ್ಸಿ ಹಾಗೂ ಕಪ್ಪು ಕುಳಿ ಕುರಿತು ಅಧ್ಯಯನ ನಡೆಸಿದ ಮೂವರು ವಿಜ್ಞಾನಿಗಳಿಗೆ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಘೋಷಿಸಿದೆ.
ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸ್ ನೀಡುವ ಪ್ರತಿಷ್ಠಿತ ಭೌತಶಾಸ್ತ್ರದ ನೊಬೆಲ್ ಪುರಸ್ಕಾರವು ವಿಶ್ವದ ಆಳ ಗರ್ಭದಲ್ಲಿರುವ ರಹಸ್ಯಗಳನ್ನು ಅನಾವರಣ ಮಾಡಿದ ಮೂವರು ಭೌತವಿಜ್ಞಾನಿಗಳಿಗೆ ಲಭಿಸಿದೆ.
ಇಂಗ್ಲೆಂಡಿನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ರೋಜರ್ ಪೆನ್ರೋಸ್, ಆಲ್ಬರ್ಟ್ ಐನ್‌ಸ್ಟೀನ್ ಅವರ ಸಾಪೇಕ್ಷ ಸಿದ್ಧತೆವನ್ನು ಅನ್ವೇಷಿಸುವುದಕ್ಕೆ ಗಣಿತದ ವಿನೂತನ ಪದ್ಧತಿಯನ್ನು ಕಂಡುಕೊಂಡವರು. ಈ ಪದ್ಧತಿಯ ಮೂಲಕ ಕಪ್ಪು ಕುಳಿ ರೂಪ ಪಡೆಯುವ ಬಗೆಯನ್ನು ವಿವರಿಸಿದರು. ಇವರಿಗೆ ಪ್ರಶಸ್ತ್ರಿಯ ಒಂದು ಭಾಗವನ್ನು ನೀಡಲಾಗುತ್ತಿದೆ.
ಜರ್ಮನಿಯ ಮ್ಯಾಕ್ಸ್‌ಪ್ಲಾಂಕ್ ಇನ್‌ಸ್ಟ್ರಿಟ್ಯೂಟ್ ಆಫ್ ಎಕ್ಸ್‌ಟ್ರಾಟೆರಿಸ್ಟ್ರಿಯಲ್ ಫಿಸಿಕ್ಸ್‌ನಲ್ಲಿ ನಿರ್ದೇಶಕರಾಗಿರುವ ರೀನ್‌ಹಾರ್ಡ್ ಗೆಂಜೆಲ್ ಮತ್ತು ಲಾಸ್ ಏಂಜೆಲಿಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಆಂಡ್ರಿಯಾ ಘೆಜ್ ಪ್ರಶಸ್ತಿಯ ಇನ್ನೊಂದು ಭಾಗವನ್ನು ಹಂಚಿಕೊಂಡಿದ್ದಾರೆ.
ತೊಂಬತ್ತರ ದಶಕದಿಂದ ಈ ಇಬ್ಬರು ವಿಜ್ಞಾನಿಗಳು ತಮ್ಮದೇ ತಂಡದ ಮೂಲಕ ನಮ್ಮ ಸೌರಮಂಡಲವಿರುವ ಮಿಲ್ಕಿ ವೇ ಗೆಲಾಕ್ಸಿಯನ್ನು ಅಧ್ಯಯನ ಮಾಡಲಾರಂಭಿಸಿದರು. ಈ ಇಬ್ಬರು ವಿಜ್ಞಾನಿಗಳ ತಂಡವು ಗೆಲಾಕ್ಸಿಯ ಕೇಂದ್ರದಲ್ಲಿ, ಅದೃಶ್ಯವೂ ಹಾಗೂ ಅತ್ಯಂತ ಭಾರವಾದ ಕಾಯವಿರುವುದನ್ನು ಗುರುತಿಸಿತು. ಇದು ಗೆಲಾಕ್ಸಿಯ ನಕ್ಷತ್ರಗಳನ್ನು ನಿಯಂತ್ರಿಸುತ್ತದೆ ಎಂಬುದು ತಿಳಿಯಿತು.
40 ಲಕ್ಷ ಸೂರ್ಯರ ಸಾಂದ್ರತೆಯನ್ನ ಒಟ್ಟು ಮಾಡಿದರೆ ಆಗಬಹುದಾದ ದೊಡ್ಡದಾದ ಕಾಯವಿದು ಎಂಬುದನ್ನು ಗೆಂಜೆಲ್ ಮತ್ತು ಘೆಜ್ ತಂಡಗಳು ಕಂಡುಕೊಂಡವು. ವಿಶೇಷವೆಂದರೆ ಗೆಜ್ ಭೌತಶಾಸ್ತ್ರದಲ್ಲಿ ನೊಬೆಲ್ ಗೌರವಕ್ಕೆ ಭಾಜನರಾದ ನಾಲ್ಕನೆಯ ಮಹಿಳಾ ವಿಜ್ಞಾನಿಯಾಗಿದ್ದಾರೆ. 1903ರಲ್ಲಿ ಪೊಲ್ಯಾಂಡಿನ ಮೇರಿ ಸ್ಕೊಲೊಡೋಸ್ಕ್, 1963ರಲ್ಲಿ ಅಮೆರಿಕದ ಮಾರಿಯಾ ಗೋಪರ್ಟ್ ಮೇಯರ್, 2018ರಲ್ಲಿ ಕೆನಡಾದ ಡೊನಾ ಸ್ಟ್ರಿಕ್‌ಲ್ಯಾಂಡ್ ಈ ಗೌರವಕ್ಕೆ ಪಾತ್ರರಾಗಿದ್ದರು.
key words : Physics-Nobel-Prize-three-scientists