ಬೆಂಗಳೂರು, ಜುಲೈ, 9, 2021 (www.justkannada.in): ಕರ್ನಾಟಕ ಸರ್ಕಾರ, ರಾಮನಗರ ಜಿಲ್ಲೆಯಲ್ಲಿರುವ ಮಂಚನಬೆಲೆ ಅಣೆಕಟ್ಟಿನ ಬಳಿ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಿಸುವ ಯೋಜನೆಯನ್ನು ಕೈಬಿಟ್ಟಿದ್ದು, ಇದರ ಬದಲಿಗೆ ಇಲ್ಲಿಗೆ ಬರುವ ಜನರು ಅಣೆಕಟ್ಟು ಹಾಗೂ ಸುತ್ತಲಿನ ನೈಸರ್ಗಿಕ ಸೌಂದರ್ಯವನ್ನು ಸವಿಯಲು ಸಾರ್ವಜನಿಕ-ಖಾಸಗಿ-ಪಾಲುದಾರಿಕೆಯಡಿ (ಪಿಪಿಪಿ) ಅಣೆಕಟ್ಟು ಪ್ರದೇಶದಲ್ಲಿ ಪ್ರವಾಸೋದ್ಯಮ ಮೂಲಭೂಸೌರ್ಯವನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಿದೆ.
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಸರ್ಕಾರ ಮಂಚನಬೆಲೆ ಅಣೆಕಟ್ಟು ಬಳಿ ರೂ.150 ಕೋಟಿ ವೆಚ್ಚದಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಿಸುವುದಾಗಿ ಘೋಷಿಸಿತ್ತು. ಆದರೆ, ದುಬಾರಿ ವೆಚ್ಚದ ಕಾರಣದಿಂದಾಗಿ ಇದೀಗ ಯೋಜನೆಯನ್ನು ಕೈಬಿಟ್ಟಿದೆ ಎನ್ನಲಾಗಿದೆ.
ಈ ಕುರಿತು ಮಾತನಾಡಿದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಯೊಬ್ಬರು, “ಕೋವಿಡ್ ಸಾಂಕ್ರಾಮಿಕದಂತಹ ಈ ಸಮಯದಲ್ಲಿ ಸಾಕಷ್ಟು ತುರ್ತು ಕೆಲಸಗಳು ನಡೆಯಬೇಕಾಗಿದ್ದು, ಈ ಸಂದರ್ಭದಲ್ಲಿ ಇಂತಹ ಯೋಜನೆಗೆ ನೂರಾರು ಕೋಟಿ ಖರ್ಚು ಮಾಡುವುದು ಸೂಕ್ತವಲ್ಲ ಎಂದು ಸರ್ಕಾರ ತೀರ್ಮಾನಿಸಿದೆ. ಹಾಗಾಗಿ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗದಿರುವಂತೆ ಪಿಪಿಪಿ ಮಾದರಿಯಡಿಯಲ್ಲಿ ಈ ಹೊಸ ಯೋಜನೆಯನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ,” ಎಂದರು.
ಮಂಚನಬೆಲೆ ಅಣೆಕಟ್ಟನ್ನು ಅರ್ಕಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದು, ಬೆಂಗಳೂರು ನಗರದಿಂದ 35 ಕಿ.ಮೀ.ಗಳ ದೂರದಲ್ಲಿದೆ. ವಿಶೇಷವಾಗಿ ಯುವಜನರಲ್ಲಿ ಈ ಸ್ಥಳ ವಾರಾಂತ್ಯದ ಅಚ್ಚುಮೆಚ್ಚಿನ ಪಿಕ್ನಿಕ್ ಸ್ಥಳವಾಗಿ ರೂಪುಗೊಂಡಿದೆ. “ಈ ಹಿನ್ನೆಲೆಯಲ್ಲಿ ವರ್ಷವಿಡೀ ಈ ಸ್ಥಳಕ್ಕೆ ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡಲು ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಮೂಲಭೂಸೌಕರ್ಯ ಹಾಗೂ ಸಾರಿಗೆ ಸಂಪರ್ಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಈ ಸಂಬಂಧ ವಿವರವಾದ ಯೋಜನಾ ವರದಿಯನ್ನು ಇನ್ನು ಮೂರು ತಿಂಗಳೊಳಗೆ ಸಿದ್ಧಪಡಿಸಲಾಗುವುದು,” ಎನ್ನುತ್ತಾರೆ.
ಲಭ್ಯವಿರುವ ದಾಖಲೆಗಳ ಪ್ರಕಾರ, ಅಣೆಕಟ್ಟು ಸುತ್ತಮುತ್ತಲಿನ ಪ್ರದೇಶವನ್ನು ಸಿದ್ಧಗೊಳಿಸುವ ಪ್ರಾಥಮಿಕ ಕಾಮಗಾರಿಗಳ ಪಟ್ಟಿಯು ಆದಾಯ ಗಳಿಕೆ ಕ್ರಮಗಳನ್ನು ಪ್ರಸ್ತಾಪಿಸಿದೆ. ಪ್ರವಾಸಿಗರ ಆಗಮನ ಹಾಗೂ ನಿರ್ಗಮನದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಪ್ರವಾಸಿಗರು ಅಣೆಕಟ್ಟನ್ನು ವೀಕ್ಷಿಸಲು ಹಾಗೂ ಇತರೆ ಸೌಲಭ್ಯಗಳನ್ನು ಹೊಂದಲು ಟಿಕೆಟ್ಗಳನ್ನು ಖರೀದಿಸಬೇಕಾಗುತ್ತದೆ.
ಕಾಯವ ಸ್ಥಳ, ಉದ್ಯಾನವನ, ವೀಕ್ಷಣಾ ಗೋಪುರಗಳು, ವಸ್ತುಸಂಗ್ರಹಾಲಯ, ಆಹಾರ ಮತ್ತು ಕಲೆಗಳಿಗಾಗಿ ಒಂದು ಸಂಕೀರ್ಣ, ಜಲಕ್ರೀಡೆಗಳ ಕೊಳ, ಬಹುಮಹಡಿಗಳ ಕಾರ್ ಪಾರ್ಕಿಂಗ್, ಪೊಲೀಸ್ ಹಾಗೂ ಭದ್ರತಾ ಔಟ್ಪೋಸ್ಟ್ಗಳು, ಶೌಚಾಲಯಗಳು ಒಳಗೊಂಡಂತೆ ಇನ್ನಿತರೆ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ.
“ನಿಸರ್ಗದ ಮಧ್ಯೆ ಪ್ರವಾಸೋದ್ಯಮ ಅನುಭವವನ್ನು ಒದಗಿಸಲು ಇನ್ನೂ ಅನೇಕ ಆಕರ್ಷಣೆಗಳು ಈ ಯೋಜನೆಯ ಭಾಗವಾಗಿದೆ. ಖಾಸಗಿ ಕಂಪನಿ ಹಾಗೂ ಸರ್ಕಾರ ಸಮಾಲೋಚಿಸಿದ ನಂತರ ಪ್ರವೇಶ ಶುಲ್ಕವನ್ನು ನಿರ್ಧರಿಸಲಾಗುವುದು,” ಎನ್ನುತ್ತಾರೆ ಆ ಅಧಿಕಾರಿ.
Key words: Plan – develop – area –Manchanabele Dam – tourist –PPP-model-Ramanagar