ವಿಜಯಪುರ,ಏಪ್ರಿಲ್,29,2023(www.justkannada.in): ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕಿಳಿದಿದ್ದು ಸಮಾವೇಶದಲ್ಲಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ಮುಂದುವರೆಸಿದ್ದಾರೆ.
ವಿಜಯಪುರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬಡ ಜನರಿಗೆ ಸಲ್ಲಬೇಕಾದ ದುಡ್ಡನ್ನು ಲೂಟಿ ಮಾಡಲಾಗುತ್ತಿತ್ತು. ನೇರ ನಗದು ವರ್ಗಾವಣೆ ಮೂಲಕ ನಮ್ಮ ಸರ್ಕಾರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದೆ. ಈಗ ಎಲ್ಲ ಲಾಭಾಂಶವೂ ಫಲಾನುಭವಿಗಳಿಗೆ ತಲುಪುತ್ತಿದೆ. ಇಂದು ದೆಹಲಿಯಿಂದ 1 ರೂಪಾಯಿ ಬಿಡುಗಡೆಯಾದರೆ ನೂರಕ್ಕೆ ನೂರರಷ್ಟು ಫಲಾನುಭವಿಗಳಿಗೆ ತಲುಪುತ್ತಿದೆ. ಬಿಜೆಪಿ ಸರ್ಕಾರ ರೈತರ ಖಾತೆಗೆ ಹಣ ನೇರ ಜಮೆ ಮಾಡಿದೆ. ಮಧ್ಯವರ್ತಿಗಳಿಲ್ಲದೇ ರೈತರ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡಿದೆ ಎಂದರು.
ಹಾಗೆಯೇ ಕಾಂಗ್ರೆಸ್ ಘೋಷಿಸಿರುವ ಯಾವುದೇ ಸಾಲಮನ್ನಾ ಮಾಡಲಿಲ್ಲ. ರೈತರ ಸಾಲಮನ್ನಾ ಮಾಡದೇ ತಮ್ಮ ಜೇಬಿಗೆ ಹಣ ಹಾಕಿಕೊಂಡರು. ಆದರೆ ಬಿಜೆಪಿಯು ರೈತರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಎಂದು ಪ್ರಧಾನಿ ಮೋದಿ ತಿಳಿಸಿದರು.
ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ವೋಕಲ್ ಫಾರ್ ಲೋಕಲ್ ಆಗಿ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ ನೇಕಾರ ಸಮ್ಮಾನ್ ಯೋಜನೆ ಜಾರಿಗೆ ತಂದೆವು. ಕೇಂದ್ರ ಸರ್ಕಾರವೂ ಅದಕ್ಕೆ ಬೆಂಬಲ ನೀಡಿದೆ. ವಿಜಯಪುರದಲ್ಲಿ ಏರ್ಪೋರ್ಟ್ ನಿರ್ಮಾಣ ಮಾಡಿದ್ದೇವೆ. ವಿಜಯಪುರ ಜಿಲ್ಲೆಗೆ ಹೊಸ ಕೈಗಾರಿಕೆಗಳು ಬರುತ್ತಿವೆ. ಈ ಬಾರಿ ಹೊಸ ಮುಖಗಳಿಗೆ ಟಿಕೆಟ್ ನೀಡಿದ್ದೇವೆ. ಕರ್ನಾಟಕದ ಭವಿಷ್ಯಕ್ಕಾಗಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮೋದಿ ಮನವಿ ಮಾಡಿದರು.
Key words: PM-Modi -appealed – BJP candidates – win – future of Karnataka