ಬೆಂಗಳೂರು,ನವೆಂಬರ್,4,2020(www.justkannada.in): ಕೋವಿಡ್-19 ಸಂಕಷ್ಟದ ನಡುವೆ ಇದೇ ಮೊದಲ ಬಾರಿಗೆ ವರ್ಚ್ಯುಯಲ್ (ಆನ್ ಲೈನ್) ಆಗಿ ನಡೆಯಲಿರುವ ಪ್ರತಿಷ್ಠಿತ “ಬೆಂಗಳೂರು ತಂತ್ರಜ್ಞಾನ ಮೇಳ-2020’ (ಬಿಟಿಎಸ್) ವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇದೇ 19ರಂದು ಉದ್ಘಾಟಿಸಲಿದ್ದಾರೆ ಎಂದು ಐಟಿ- ಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಬುಧವಾರ ಇಲ್ಲಿ ತಿಳಿಸಿದರು.
ಬಿಟಿಎಸ್ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದ ಡಿಸಿಎಂ ಅಶ್ವಥ್ ನಾರಾಯಣ್, ನ.19ರಿಂದ 21ರವರೆಗೆ ನಡೆಯಲಿರುವ ಮೇಳವು ಕೊರೋನಾ ಭೀತಿಯನ್ನು ಹಿಮ್ಮೆಟ್ಟಿಸಿದೆ. ಜಗತ್ತಿನೆಲ್ಲೆಡೆಯ ಉದ್ಯಮ ವಲಯದಿಂದ ಹಿಂದೆಂದಿಗಿಂತ ಹೆಚ್ಚಿನ ಸ್ಪಂದನೆ ವ್ಯಕ್ತವಾಗಿದೆ ಎಂದು ಅವರು ಹೇಳಿದರು.
ಜಗತ್ತಿನೆಲ್ಲೆಡೆ ಗಮನ ಸೆಳೆದಿರುವ “ಬೆಂಗಳೂರು ತಂತ್ರಜ್ಞಾನ ಮೇಳದ 23ನೇ ಆವೃತ್ತಿ ಇದಾಗಿದೆ. 2019ರ ನವೆಂಬರ್ ನಲ್ಲಿ ನಡೆದ ಮೇಳದ 22ನೇ ಆವೃತ್ತಿಯು 21 ದೇಶಗಳು, 253 ಅಂತರರಾಷ್ಟ್ರೀಯ ನಿಯೋಗಗಳು, 44 ವಿಚಾರ ಗೋಷ್ಠಿಗಳು ಮತ್ತು 262 ವಿಚಾರ ಪ್ರತಿಪಾದಕರಿಗೆ ಹಾಗೂ 12,350 ಸಂದರ್ಶಕರಿಗೆ ಸಾಕ್ಷಿಯಾಗಿತ್ತು. ಇದೀಗ ವರ್ಚ್ಯುಯಲ್ ಆಗಿ ನಡೆಯಲಿರುವ ಈ ಮೇಳಕ್ಕೆ ಅದಕ್ಕೂ ಹೆಚ್ಚಿನ ಸ್ಪಂದನೆ ವ್ಯಕ್ತವಾಗಿದೆ ಎಂದರು.
ರಾಜ್ಯ ಸರ್ಕಾರವು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಸಹಭಾಗಿತ್ವದಲ್ಲಿ “ಕೃತಕ ಬುದ್ಧಿಮತ್ತೆ ಸಂಶೋಧನಾ ಕೇಂದ್ರ”ವನ್ನು ಸ್ಥಾಪಿಸಲಿದೆ. ಮುಂಬರುವ ಸವಾಲುಗಳಿಗೆ ಪರಿಹಾರ ಕಂಡುಹಿಡಿಯುವಲ್ಲಿ ಕೃತಕ ಬುದ್ಧಿಮತ್ತೆ ತಾಂತ್ರಿಕತೆಯು ಮುಖ್ಯ ಪಾತ್ರ ವಹಿಸಲಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದರು.
ವ್ಯವಸಾಯ ಕ್ಷೇತ್ರದ ಸುಧಾರಣೆಗೆ ತಾಂತ್ರಿಕತೆಯನ್ನು ಪರಿಣಾಮಕಾರಿಯಾಗಿ ಬಳಸಲು ಒತ್ತು ನೀಡಲೇಬೇಕು. ರಾಜ್ಯದ ಸುಮಾರು 60ರಷ್ಟು ಜನ ಬದುಕಿಗಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಒಂದೆಡೆ ಆರ್ಥಿಕತೆ ಬೆಳೆಯುತ್ತಿದ್ದರೆ, ಮತ್ತೊಂದೆಡೆ ಕೃಷಿ ಕ್ಷೇತ್ರದ ಕೊಡುಗೆ ಕಡಿಮೆಯಾಗುತ್ತಿರುವುದು ಆಲೋಚನೆಗೀಡು ಮಾಡುವ ಅಂಶವಾಗಿದೆ. ರಾಜ್ಯದ ಜಿಡಿಪಿಗೆ ಕೃಷಿ ವಲಯದ ಕೊಡುಗೆ ಈಗ ಕೇವಲ 16ರಷ್ಟಿದೆ. ಇದು ಇನ್ನು ಐದು ವರ್ಷಗಳಲ್ಲಿ ಕನಿಷ್ಠ ಶೇ 30ರಷ್ಟವರೆಗಾದರೂ ಬೆಳೆಯಲೇಬೇಕು. ಆಗ ಮಾತ್ರ ಹಳ್ಳಿಗರ ವಲಸೆ ತಪ್ಪುವ ಜೊತೆಗೆ ಬೆಂಗಳೂರಿಗೆ ಹೊರತಾದ ಪ್ರದೇಶಗಳೂ ಬೆಳವಣಿಗೆ ಕಾಣುತ್ತವೆ ಎಂದು ಅಶ್ವತ್ ನಾರಾಯಣ ವಿವರಿಸಿದರು.
ಜೈವಿಕ ತಂತ್ರಜ್ಞಾನದ ಬೆಳವಣಿಗೆಯು ಕೃಷಿ ಹಾಗೂ ಆರೋಗ್ಯ ಸೇವೆಗಳಲ್ಲಿ ಹೆಚ್ಚಿನ ಬದಲಾವಣೆಗಳನ್ನು ಉಂಟು ಮಾಡಲಿದೆ. ಇದನ್ನು ಬಳಸಿಕೊಂಡು ಆಹಾರೋತ್ಪನ್ನಗಳ ಮೌಲ್ಯವರ್ಧನೆ, ಸಂಸ್ಕರಣೆ ಮತ್ತಿತರ ವಿಧಾನಗಳ ಮೂಲಕ ವ್ಯವಸಾಯ ಕ್ಷೇತ್ರ ಅವಲಂಬಿಸಿರುವವರಿಗೆ ಬಲ ತುಂಬುವ ಅಗತ್ಯವಿದೆ. ಹಾಗೆಯೇ ವೈದ್ಯಕೀಯ ತಂತ್ರಜ್ಞಾನ ಬಳಸಿಕೊಂಡು ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಬೇಕಾಗಿದೆ ಎಂದರು.
ಶಿಕ್ಷಣದಿಂದ ಮಾತ್ರ ಸುಸ್ಥಿರ ಬೆಳವಣಿಗೆ ಸಾಧ್ಯ. ಪೌಷ್ಟಿಕತೆ, ಪರಿಸರ, ನೈರ್ಮಲ್ಯ ಸೇರಿದಂತೆ ಯಾವುದೇ ವಿಷಯದ ಬಗ್ಗೆ ಶಿಕ್ಷಣದ ಹಂತದಿಂದಲೇ ಅರಿವು ಮೂಡಿಸಬೇಕು. ಹಾಗೆಯೇ, ಉದ್ಯಮಕ್ಕೆ ಬೇಕಾದ ಮಾನವ ಸಂಪನ್ಮೂಲವನ್ನು ಶಿಕ್ಷಣದ ಹಂತದಲ್ಲೇ ಸಜ್ಜು ಮಾಡಬೇಕು. ಇದಕ್ಕಾಗಿ ಶಿಕ್ಷಣ ಸಂಸ್ಥೆಗಳು ಹಾಗೂ ಉದ್ಯಮದ ನಡುವೆ ಹೆಚ್ಚಿನ ಸಹಭಾಗಿತ್ವ ಬೆಳೆಯಲೇಬೇಕು. ಈಗ ನಮ್ಮದು ಉದ್ಯಮ ಆಧಾರಿತ ಆರ್ಥಿಕತೆಯಾಗಿದೆ. ಮುಂಬರುವ ದಿನಗಳಲ್ಲಿ ಇದು ಸಾಂಸ್ಥಿಕ ಆಧಾರಿತ ಆರ್ಥಿಕತೆಯಾಗಿ ಬದಲಾಗಬೇಕಿದೆ ಎಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ವಿವರಿಸಿದರು.
Key words: PM modi-drive -BTS virtual fair –november- 19th – DCM Ashwaththa Narayan