ಮೈಸೂರು,ಡಿಸೆಂಬರ್,20,2023(www.justkannada.in): ಸಂಸತ್ ಚಳಿಗಾಲದ ಅಧಿವೇಶನದಲ್ಲಿ ವಿಪಕ್ಷಗಳ 141 ಸಂಸದರನ್ನ ಅಮಾನತುಗೊಳಿಸಿರುವ ಕುರಿತು ಪ್ರತಿಕ್ರಿಯಿಸಿ ವಿಧಾನಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಸಂಸತ್ ಸದಸ್ಯರ ಅಮಾನತು ಕುರಿತು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪರಿಷತ್ ಸದಸ್ಯ ಎಚ್ ವಿಶ್ವನಾಥ್, ಪ್ರಶ್ನೆ ಮಾಡಿದವರನ್ನೇ ಅಮಾನತು ಮಾಡುತ್ತಿದ್ದಾರೆ. ಮೂರು ಸುತ್ತಿನ ಬೇಹುಗಾರಿಕೆ ಭೇದಿಸಿ ಒಳ ಬಂದಿದ್ದಾರೆ ಅಂದರೆ ಅದರ ಹಿಂದೆ ಯಾರಿದ್ದಾರೆ.? ಅದನ್ನ ಕೇಳಲು ಹೋದರೆ ಅಮಾನತು ಮಾಡಿದ್ದಾರೆ. ಹಾಗಾದರೇ ಸಂಸತ್ ಇರೋದು ಯಾಕೇ.? ಸಂಸತ್ ಚರ್ಚೆ ಮಾಡಲಿಕ್ಕೆ ಇರುವ ಒಂದು ವೇದಿಕೆ. ಪ್ರತಿಪಕ್ಷ ಇರುವುದೇ ಪ್ರಶ್ನೆ ಮಾಡಲು. ಆಡಳಿತ ಪಕ್ಷ ತಕ್ಕ ಉತ್ತರ ಕೊಡುವ ಸಾಮರ್ಥ್ಯ ಇರಬೇಕು. ಈ ರೀತಿಯ ಎಂದು ಆಗಿರಲಿಲ್ಲ. ಸಂಸತ್ತಿನ ವ್ಯವಹಾರ ಮಂತ್ರಿಗಳಿಗೆ ಯಾಕೆ ಇದು ಅರ್ಥ ಆಗಲಿಲ್ಲ. 141 ಸಂಸದರನ್ನು ಅಮಾನತು ಮಾಡಿದ್ದು ಸಂಸತ್ತಿಗೆ ಮಾಡಿದ ದೊಡ್ಡ ದ್ರೋಹ ಎಂದು ಕಿಡಿಕಾರಿದರು.
ಪ್ರಧಾನಮಂತ್ರಿಗೆ ಮಾಧ್ಯಮ ಎದುರು ಬಂದು ನಿಲ್ಲುವ ತಾಕತ್ತು ಇಲ್ಲ..
ಪ್ರಧಾನಮಂತ್ರಿಗೆ ಮಾಧ್ಯಮ ಎದುರು ಬಂದು ನಿಲ್ಲುವ ತಾಕತ್ತು ಇಲ್ಲ. ಇಡೀ ಜಗತ್ತಿನ ಮುಂದೆ ಭಾರತದ ಮಾನ ಬೆತ್ತಲಾಗಿದೆ. ಸಂಸತ್ತನ್ನ,ಸಂಸತ್ತಿನ ಪ್ರಶ್ನೋತ್ತರಗಳನ್ನು ದುರ್ಬಲಗೊಳಿಸುವುದು ಪ್ರಜಾಪ್ರಭುತ್ವಕ್ಕೆ ದೊಡ್ಡ ದ್ರೋಹ ಮಾಡಿದಂತೆ. ಇಂಥಾ ವ್ಯವಸ್ಥೆಯಲ್ಲಿ ಪ್ರಶ್ನೆ ಮಾಡೋದೆ ಬೇಡ ಅಂದರೆ ಹೇಗೆ.? ಇದು ನಮ್ಮ ದೇಶದ ಸಂವಿಧಾನ ವ್ಯವಸ್ಥೆಗೆ ಮಾರಕ. 141 ಜನರ ಅಮಾನತನ್ನ ವಾಪಸ್ ಪಡೆಯಬೇಕು. ಆರೋಗ್ಯಕರ ವಾತಾವರಣದಲ್ಲಿ ಚರ್ಚೆಗಳ ನಡೆಯಬೇಕು. ಭಾರತ ಸರ್ಕಾರವನ್ನ ನಾನು ಒತ್ತಾಯ ಮಾಡುತ್ತಿದ್ದೇನೆ. ಈ ಕೂಡಲೇ ಅಮಾನತು ಆದೇಶವನ್ನು ವಾಪಸ್ ಪಡೆಯಬೇಕು ಎಂದು ಹೆಚ್.ವಿಶ್ವನಾಥ್ ಆಗ್ರಹಿಸಿದರು.
ಮಲ್ಲಿಕಾರ್ಜುನ ಖರ್ಗೆ ಈ ದೇಶದ ಪ್ರಧಾನಿಯಾದರೆ ಸ್ವಾಗತ.
ಮಲ್ಲಿಕಾರ್ಜುನ ಖರ್ಗೆ ಈ ದೇಶದ ಪ್ರಧಾನಿಯಾದರೆ ನಾನು ಸ್ವಾಗತಿಸುತ್ತೇನೆ. ಮಲ್ಲಿಕಾರ್ಜುನ ಖರ್ಗೆ ಪ್ರಧಾನ ಮಂತ್ರಿಯಾಗಲು ಸಮರ್ಥವಾಗಿರುವ ವ್ಯಕ್ತಿ. ಅವರು ಸಾಮಾನ್ಯ ವ್ಯಕ್ತಿಯ ಮಗನಾಗಿ ದೊಡ್ಡ ರಾಜಕಾರಣಿಯಾಗಿ ಬೆಳೆದು ಇಂದು ಪ್ರಧಾನಿಯಾಗುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಶೋಷಿತ ಸಮುದಾಯಗಳಿಂದ ಬಂದ ಇಂತಹ ನಾಯಕರು ಆಗಬೇಕು ಎಂದು ಹೆಚ್.ವಿಶ್ವನಾಥ್ ತಿಳಿಸಿದರು.
ರಾಮಮಂದಿರ ಉದ್ಘಾಟನೆಗೆ ಅಡ್ವಾಣಿ, ಮುರಳಿ ಮನೋಹರ ಜೋಶಿ ಬರೋದು ಬೇಡ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಬಿಜೆಪಿ ಭೀಷ್ಮ ಲಾಲ್ ಕೃಷ್ಣ ಅಡ್ವಾಣಿ. ರಾಮಮಂದಿರ ಹೋರಾಟದಲ್ಲಿ ಮುಂದಿದ್ದ ನಾಯಕ. ವಯಸ್ಸಿನ ಕಾರಣಕ್ಕೆ ಅವರನ್ನು ದೂರವಿಟ್ಟು ರಾಮಮಂದಿರ ಉದ್ಘಾಟನೆ ಮಾಡೋದು ತಪ್ಪು. ದೇವೇಗೌಡರಿಗೆ ವಯಸ್ಸಾಗಿದೆ ಅವರನ್ನು ಕರೆದಿದ್ದಾರೆ. ಕಾರ್ಯಕ್ರಮಕ್ಕೆ ಅಡ್ವಾಣಿ ಬಂದ್ರೆ ಕ್ರೆಡಿಟ್ ಮೋದಿಗೆ ಸಿಗಲ್ಲ. ಹಾಗಾಗಿ ಈ ರೀತಿ ಮಾಡಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ದ ಕಿಡಕಾರಿದರು.
Key words: PM Modi – media- H. Vishwanath- demands- withdrawal – suspension – MPs.