ನವದೆಹಲಿ, ಏ.೦೧,೨೦೨೫: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಮಹಾರಾಷ್ಟ್ರದ ನಾಗ್ಪುರದ ಆರ್ಎಸ್ಎಸ್ ಕಚೇರಿಗೆ “ನಿವೃತ್ತಿ ಘೋಷಿಸಲು” ಹೋಗಿದ್ದರು. ಮುಂದಿನ ಪ್ರಧಾನಿ ಮಹಾರಾಷ್ಟ್ರ ರಾಜ್ಯದವರೇ ಎಂದು ಶಿವಸೇನೆ (ಯುಬಿಟಿ) ಫೈರ್ ಬ್ರಾಂಡ್ ಮುಖಂಡ ಸಂಜಯ್ ರಾವತ್ ಭವಿಷ್ಯ ನುಡಿದಿದ್ದಾರೆ.
ಮುಂಬೈನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಿವಸೇನೆಯ ಉದ್ಧವ್ ಠಾಕ್ರೆ ಬಣದ ನಾಯಕ ಸಂಜಯ್ ರಾವುತ್ ಹೇಳಿದಿಷ್ಟು..
“ಪ್ರಧಾನಿ ಮೋದಿ ತಮ್ಮ ನಿವೃತ್ತಿಯನ್ನು ಘೋಷಿಸಲು ಆರ್ಎಸ್ಎಸ್ ಕಚೇರಿಗೆ ಹೋಗಿದ್ದರು. ನನಗೆ ತಿಳಿದಿರುವಂತೆ, ಅವರು 10-11 ವರ್ಷಗಳಲ್ಲಿ ಆರ್ಎಸ್ಎಸ್ ಪ್ರಧಾನ ಕಚೇರಿಗೆ ಭೇಟಿ ನೀಡಿಲ್ಲ. ಆರ್ಎಸ್ಎಸ್ ನಾಯಕತ್ವ ಬದಲಾವಣೆ ಬಯಸಿದೆ. ಪ್ರಧಾನಿ ಮೋದಿ ಈಗ ಖುರ್ಚಿ ಖಾಲಿ ಮಾಡಬೇಕಾಗಿದೆ.
“ಪ್ರಧಾನಿ ನರೇಂದ್ರ ಮೋದಿಯವರ ಉತ್ತರಾಧಿಕಾರಿಯನ್ನು ಆರ್ಎಸ್ಎಸ್ ನಿರ್ಧರಿಸುತ್ತದೆ ಮತ್ತು ಅವರು ಮಹಾರಾಷ್ಟ್ರದವರಾಗಿರುತ್ತಾರೆ. ಅದಕ್ಕಾಗಿಯೇ ನಿಕಟ ಸಭೆಯಲ್ಲಿ ಚರ್ಚಿಸಲು ಮೋದಿಯವರನ್ನು ನಾಗ್ಪುರಕ್ಕೆ ಕರೆಸಲಾಯಿತು” ಎಂದು ಸಂಜಯ್ ರಾವತ್ ಹೇಳಿದರು.
ಸಂಜಯ್ ರಾವತ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್ ಮುಖಂಡ ಹುಸೇನ್ ದಳವಾಯಿ, ರಾವುತ್ ಅವರು ಹೇಳಿದ್ದು ಸರಿಯಾಗಿದೆ. 75 ವರ್ಷ ದಾಟಿದವರನ್ನು ಆರ್. ಎಸ್ೆಸ್. ನಿವೃತ್ತಿಗೊಳಿಸುತ್ತದೆ. ಪ್ರಧಾನಿ ಮೋದಿ ಕೂಡ ವಯಸ್ಸಾಗುತ್ತಿದ್ದಾರೆ, ಆದ್ದರಿಂದ ಅವರು ಈಗ ನಿವೃತ್ತಿಯ ಬಗ್ಗೆ ಯೋಚಿಸುತ್ತಿದ್ದಾರೆ ಎಂದಿದ್ದಾರೆ.
ನಾಗ್ಪುರಕ್ಕೆ ಪ್ರಧಾನಿ ಮೋದಿ ಭೇಟಿ
ಭಾನುವಾರ ಆರ್ಎಸ್ಎಸ್ ಪ್ರಧಾನ ಕಚೇರಿಗೆ ಭೇಟಿ ನೀಡಿದ ಪ್ರಧಾನಿ ಮೋದಿ, ನಾಗ್ಪುರದ ಆರ್ಎಸ್ಎಸ್ ಪ್ರಧಾನ ಕಚೇರಿಗೆ ಭೇಟಿ ನೀಡಿದ ಎರಡನೇ ಹಾಲಿ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಟಲ್ ಬಿಹಾರಿ ವಾಜಪೇಯಿ ಅವರು 2000ನೇ ಇಸವಿಯಲ್ಲಿ ಮೂರನೇ ಅವಧಿಗೆ ಪ್ರಧಾನಿಯಾಗಿದ್ದಾಗ ಇಲ್ಲಿಗೆ ಭೇಟಿ ನೀಡಿದ್ದರು.
ದಿವಂಗತ ಆರ್ಎಸ್ಎಸ್ ಮುಖ್ಯಸ್ಥ ಮಾಧವರಾವ್ ಗೋಲ್ವಾಲ್ಕರ್ ಅವರ ಹೆಸರಿನಲ್ಲಿರುವ ಮಾಧವ್ ನೇತ್ರಾಲಯ ಕಣ್ಣಿನ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಹೊಸ ವಿಸ್ತರಣಾ ಕಟ್ಟಡವಾದ ಮಾಧವ್ ನೇತ್ರಾಲಯ ಪ್ರೀಮಿಯಂ ಸೆಂಟರ್ಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದರು.
ನಾಗ್ಪುರ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್ಎಸ್ಎಸ್) ಭಾರತದ ಅಮರ ಸಂಸ್ಕೃತಿ ಮತ್ತು ಆಧುನೀಕರಣದ “ಆಲದ ಮರ” ಎಂದು ಬಣ್ಣಿಸಿದರು.
ಆರ್ಎಸ್ಎಸ್ ಸ್ವಯಂಸೇವಕರು ದೇಶದ ವಿವಿಧ ಭಾಗಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
key words: PM Modi, RSS office, retirement, Sanjay Raut
PM Modi went to RSS office to announce retirement: Sanjay Raut