ಮೈಸೂರು, ಮಾರ್ಚ್ 27,2024 (www.justkannada.in): ಪ್ರಧಾನಿ ಮೋದಿ ಅಲೆ ಮತ್ತು ಸೋಲಿನ ಭೀತಿಯಿಂದ ಲೋಕಸಭೆ ಚುನಾವಣೆಯಲ್ಲಿ ಸಚಿವರು ಸ್ಪರ್ಧಿಸುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟೀಕಿಸಿದರು.
ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಮಾತನಾಡಿದ ಬಿವೈ ವಿಜಯೇಂದ್ರ, ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಸಚಿವರನ್ನ ಕಣಕ್ಕಿಳಿಸಬೇಕು ಎಂಬುದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಯೋಜನೆಯಾಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅಲೆಗೆ ಹೆದರಿ ಸಚಿವರು ಸ್ಪರ್ಧಿಸಲು ಮುಂದೆ ಬರಲೇ ಇಲ್ಲ. 18 ಮಂದಿ ಸಚಿವರನ್ನು ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಸಲು ಸಿಎಂ ಹಾಗೂ ಡಿಸಿಎಂ ಮುಂದಾಗಿದ್ದರು. ಆದರೆ, ಸೋಲಿನ ಭೀತಿಯಿಂದ ಸಚಿವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ಶಾಪ ಎನ್ನುವ ರೀತಿಯಾಗಿದೆ. ಕಡಿಮೆ ಅವಧಿಯಲ್ಲಿ ಸರ್ಕಾರ ಜನಪ್ರಿಯತೆ ಕಳೆದುಕೊಂಡಿದೆ. ಯಾರ ಪರವಾಗಿಯೂ ಈ ಸರ್ಕಾರವಿಲ್ಲ ಎಂದು ಜನ ಬೇಸತ್ತಿದ್ದಾರೆ. ಜನಪ್ರಿತೆ ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷವೀಗ ನಮ್ಮ ಮುಖಂಡರನ್ನು ಸೆಳೆಯುವ ಕೆಲಸ ಮಾಡುತ್ತಿದೆ ಎಂದು ವಿಜಯೇಂದ್ರ ಹರಿಹಾಯ್ದರು.
Key words: PM Modi,Ministers, BY Vijayendra