ಪಿಎಂ ಮುದ್ರಾ ಯೋಜನೆಗೆ ತುಂಬಿತು ದಶಕ: ಯುವ, ಮಹಿಳಾ ಉದ್ಯಮಿಗಳಿಗೆ ಪುಳಕ.

ಮೈಸೂರು, ಏಪ್ರಿಲ್‌, 7,2025 (www.justkannada.in):  ದೇಶದಲ್ಲಿ ಉದ್ಯೋಗ ಕ್ರಾಂತಿ ಹಾಗೂ ಜನರನ್ನು ಉದ್ಯಮಪತಿಗಳನ್ನಾಗಿ ಮಾಡುವ ಉದ್ದೇಶದೊಂದಿಗೆ ಆರಂಭಿಸಲಾಗಿರುವ ಪಿಎಂ ಮುದ್ರಾ ಯೋಜನೆಗೆ ಈಗ ದಶಕದ ಸಂಭ್ರಮ.

ಕಳೆದ ಹತ್ತು ವರ್ಷಗಳಲ್ಲಿ ಇದು ನಡೆದು ಬಂದ ಹಾದಿ ಯಶಸ್ವಿಯಾಗಿದ್ದು, ಹಲವಾರು ಮೈಲುಗಲ್ಲು ಸೃಷ್ಟಿಸಿದೆ. ಸಮೀಕ್ಷೆ ಪ್ರಕಾರ, ದೇಶದಲ್ಲಿ ಅಂದಾಜು 6.33 ಕೋಟಿ ಸಣ್ಣ , ಅತಿ ಸಣ್ಣ ಮತ್ತು ಮಧ್ಯಮ ವ್ಯಾಪಾರ ವಹಿವಾಟುದಾರರು ಇದ್ದಾರೆ. ಇದರಲ್ಲಿ ಸುಮಾರು 4.50 ಕೋಟಿಯಷ್ಟು, ಅಂದರೆ ಶೇಕಡಾ 98% ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರ ಉದ್ದಿಮೆದಾರರು ಇದ್ದಾರೆ. ಇವರು, ತಯಾರಿಕೆ , ಸಂಸ್ಕರಣೆ, ಮಾರಾಟ ಹಾಗೂ ಸೇವಾ ಚಟುವಟಿಕೆಗಳನ್ನೂ ನಡೆಸುತ್ತಾರೆ. ದೇಶದ ಆರ್ಥಿಕತೆಗೆ ಈ ಉದ್ದಿಮೆ, ವಹಿವಾಟುದಾರರ ಕೊಡುಗೆ ಅಪಾರ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ, ಸಮಾಜಕ್ಕೆ ಬೇಕಾದ ಸಾಮಾನು, ಸರಂಜಾಮು, ಸೇವೆ ಹೆಚ್ಚಿನ ಪಾಲು ಇವರದ್ದೇ. ಹಾಗಾಗಿ ಈ ಕ್ಷೇತ್ರಕ್ಕೆ ಒತ್ತು ಕೊಡುವುದು, ಅದನ್ನವು ಉತ್ತೇಜಿಸುವುದು ಬಹಳ ಅಗತ್ಯ. ಸಮಾಜಕ್ಕೆ ಅದರಲ್ಲೂ ಯುವಕರಿಗೆ ತಿಳಿಸಬೇಕಾದ ಒಂದು ಸತ್ಯ ಅಂದರೆ, ಉದ್ಯೋಗ ಎಲ್ಲರಿಗೂ ಸಿಗಲಾರದು ಎನ್ನುವುದು. ಸಾಮರ್ಥ್ಯ, ಕೌಶಲ್ಯ ಬಳಸಿ ಹಾಗೂ ಸಿಕ್ಕ ಅವಕಾಶವನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಕೌಶಲ್ಯ ಅಭಿವೃದ್ಧಿ ಮಾಡಿದರೆ, ವ್ಯಾಪಾರ, ವಹಿವಾಟು ಮಾಡಲು, ಆದಾಯ ಗಳಿಸಲು ಸಾಧ್ಯ. ಇದನ್ನು ಕಾರ್ಯ ರೂಪಕ್ಕೆ ತರಲು ಬಂದಿರುವುದೇ ಮುದ್ರಾ ಯೋಜನೆ.

ಆರ್ಥಿಕ ಬೆಂಬಲ ಇಲ್ಲದವರಿಗೆ ಅನುಕೂಲ

ಈ ಹಿನ್ನಲೆಯಲ್ಲಿ, ಮುದ್ರಾ ಯೋಜನೆ ಮಹತ್ವ ಪಡೆದಿದೆ. ಇದರ ಮಹತ್ತರ ಉದ್ದೇಶ ಪ್ರತಿ ಒಬ್ಬ ಅರ್ಹ ಪ್ರಜೆಗೆ, ಬ್ಯಾಂಕು ಮತ್ತು ಇತರ ಹಣಕಾಸು ಸಂಸ್ಥೆಗಳ ಮೂಲಕ, ಕೈಗೆಟುಕುವ ಬಡ್ಡಿ ದರದಲ್ಲಿ, ಯಾವುದೇ ಹೆಚ್ಚುವರಿ ಭದ್ರತೆ [ಕೋಲಾಟರಲ್ ಸೆಕ್ಯೂರಿಟಿ] ಇಲ್ಲದೆ, ಆರ್ಥಿಕ ಸೌಲಭ್ಯ ದೊರೆಯಬೇಕು. ಆರ್ಥಿಕ ಬೆಂಬಲ ಇಲ್ಲದಿರುವುದು ಜನರ, ಯುವಕರ ಹಾಗೂ ಸಮಾಜದ ಹಿಂದಿಳಿಯುವಿಕೆಗೆ ಕಾರಣ ಆಗಬಾರದು. ಆರ್ಥಿಕ ಬೆಂಬಲ ಇದ್ದರೆ, ಜನ ಸಾಮಾನ್ಯರು, ಹೆಚ್ಚಾಗಿ ಯುವಕರು, ಬೇರೆಯವರಿಗಾಗಿ ದುಡಿಯುವುದರ ಬದಲು, ಸ್ವಂತ ಉದ್ಯಮಿಗಳಾಗಿ, ಪರಿಶ್ರಮಕ್ಕೆ ತಕ್ಕಂಥ ಆದಾಯ ಗಳಿಸಲು ನೆರವಾಗುತ್ತದೆ.

ಮುದ್ರಾ ಆರ್ಥಿಕ ಸಹಾಯಕ್ಕೆ ಎಲ್ಲ ವ್ಯಕ್ತಿಗಳು (Individuals), ಪ್ರೊಪ್ರೈಟರ್ (ಏಕ ಮಾಲೀಕತ್ವ ), ಪಾಲುದಾರಿಕೆ, ಪ್ರೈವೇಟ್ ಲಿಮಿಟೆಡ್/ಪಬ್ಲಿಕ್ ಲಿಮಿಟೆಡ್, ಮತ್ತು ಇತರೆ ಕಾನೂನು ಬದ್ದವಾಗಿರುವ ಸಂಸ್ಥೆಗಳು ಸಹ ಅರ್ಹರು. ಯಾವ ಬ್ಯಾಂಕು, ಹಣಕಾಸು ಸಂಸ್ಥೆಗಳಲ್ಲಿ ಸುಸ್ತಿದಾರರಾಗಿರಬಾರದು. ಇವರ ಕ್ರೆಡಿಟ್/ಉದರಿ ಇತಿಹಾಸ, ಮುಖ್ಯ, ಇವರು ಹಮ್ಮಿಕೊಳ್ಳುವ ಚಟುವಟಿಕೆ, ಲಾಭದಾಯಕವಾಗಿರಬೇಕು, ಚಟುವಟಿಗೆ ಬೇಕಾಗುವ ಜ್ಞಾನ, ತಿಳುವಳಿಕೆ ಇರಬೇಕು. ಇವರು KYC [ಗುರುತು ಮತ್ತು ವಿಳಾಸದ ದಾಖಲೆಗಳು ] ಬ್ಯಾಂಕುಗಳ ಮಾನದಂಡಕ್ಕೆ ಅನುಗುಣವಾಗಿರಬೇಕು. ಈ ಸಾಲ ಚಟುವಟಿಕೆ ಪ್ರಾರಂಭಿಸಲು ಹಾಗೂ ವಿಸ್ತರಿಸಲೂ ಲಭ್ಯವಿದೆ.

ಹಲವು ಕ್ಷೇತ್ರಗಳಲ್ಲಿ ಮುದ್ರಾ ಸಾಲ ಸೌಲಭ್ಯ

ಮುದ್ರಾ ಸಾಲಕ್ಕೆ ಎಲ್ಲ ತರಹದ ಲಾಭದಾಯಕ ಉದ್ದಿಮೆ, ವಹಿವಾಟುಗಳು ಅರ್ಹ. ತಯಾರಿಕೆ , ವ್ಯಾಪಾರ, ಸೇವೆ, ಸಂಸ್ಕರಣೆ, ವಿಂಗಡಣೆ, ಶ್ರೇಣೀಕರಣೆ, ಪ್ಯಾಕಿಂಗ್, ಸಾಗಣೆ [ಟ್ರಾನ್ಸ್ಪೋರ್ಟಷನ್], ಕೆಲವು ವ್ಯವಸಾಯ ಮತ್ತು ಸಂಬಂಧಿಸಿದ ಚಟುವಟಿಕೆ – ಉದಾಹರಣೆ ಕೋಳಿ, ಮೀನು, ಪಶುಪಾಲನೆ, ಜೇನು ಸಾಕಣಿ, ವ್ಯವಸಾಯದ ಉತ್ಮನ್ನಗಳ ಕ್ರೋಡೀಕರಿಸುವುದು, ಆಗ್ರೋ ಉದ್ದಮೆ , ಆಹಾರ ಉತ್ಪನ್ನಗಳು ಮಾರಾಟ, ವಿತರಣೆ ಇತ್ಯಾದಿ.

ಮೂರು ರೀತಿಯ ಸಾಲ ಸೌಲಭ್ಯ

ಮುದ್ರಾ ಯೋಜನೆಯಡಿ – 3 ತರಹ ಸೌಲಭ್ಯ ಇವೆ – ಶಿಶು, ಕಿಶೋರ್, ತರುಣ್. ಇವಗಳನ್ನು ಸಾಲದ ಮೊತ್ತದ ಆಧಾರವಾಗಿ ವಿಂಗಡಿಸಿದೆ. ಶಿಶು – 50000 ರೂ ವರೆಗೆ ; ಕಿಶೋರ್ – 50001- 5 ಲಕ್ಷದ ವರೆಗೆ; ತರುಣ್ – 500001 ರಿಂದ 10 ಲಕ್ಷದವರೆಗೆ ಈ ಮುಂಗಡದಲ್ಲಿ ಕೇಂದ್ರ ಸರ್ಕಾರ ತರುಣ+ ಅನ್ನುವ ಸೌಲಭ್ಯವನ್ನು ಜಾರಿ ಮಾಡಿದೆ. ಇದರಲ್ಲಿ 20,00,000 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ಸಿಗಲಿದೆ. ಈಗಾಗಲೇ ಮುದ್ರಾದಲ್ಲಿ ಸಾಲ ತೆಗೆದುಕೊಂಡು ತೀರಿಸಿದವರಿಗೆ ಇದು ಲಭ್ಯ. ಈ ಸಾಲಗಳು, ಕ್ಯಾಶ್ ಕ್ರೆಡಿಟ್ (ಅಂದರೆ ವಹಿವಾಟು ಮಾಡುವ ಖಾತೆ)/ ಅವಧಿ ಸಾಲ[ಟರ್ಮ್ ಸಾಲ] ರೂಪದಲ್ಲಿ ಲಭ್ಯ ಇರುತ್ತದೆ, ಕ್ಯಾಶ್ ಕ್ರೆಡಿಟ್ ಸಾಲದಲ್ಲಿ, ಅದೇ ಖಾತೆಯಲ್ಲಿ ವಹಿವಾಟು ಮಾಡುವಂಥ ಸೌಲಭ್ಯ ಇರತ್ತದೆ. ಅವಧಿ ಸಾಲದಲ್ಲಿ, ಸಾಲವನ್ನು ಕಂತುಗಳಲ್ಲಿ ಕಟ್ಟಬೇಕಾಗುತ್ತದೆ.

ಮುದ್ರಾ ಸಾಲವು ಕೈಗೆಟುಕುವ ಬಡ್ಡಿಯಲ್ಲಿ ಸಿಗುತ್ತದೆ. ಈಗ ಬಡ್ಡಿಯನ್ನು ರಿಸರ್ವ್ ಬ್ಯಾಂಕ್, ಬ್ಯಾಂಕುಗಳ/ಹಣಕಾಸು ಸಂಸ್ಥೆಗಳ ವಿವೇಚನೆಗೆ ಬಿಡಲಾಗಿದೆ. ಬ್ಯಾಂಕುಗಳು, ಈ ಯೋಜನೆಗಳು ಮೂಲ ಉದ್ದೇಶ ಎಲ್ಲವನ್ನೂ ಗಮನದಲ್ಲಿಟ್ಟಿಕೊಂಡು, ಕೈಗೆಟುಕುವ ಬಡ್ಡಿ ದರ ನಿಗದಿ ಮಾಡುತ್ತಾರೆ.

ಈ ಸಾಲಗಳ ಉದ್ದೇಶ ಎಲ್ಲ ಅರ್ಹ, ಆಸಕ್ತಿ ಉಳ್ಳ ಉದ್ದಿಮೆ, ವಹಿವಾಟುದಾರರಿಗೆ ಕಡಿಮೆ/ಕೈಗೆಟುಕುವ ಬಡ್ಡಿ ದರದಲ್ಲಿ ಆರ್ಥಿಕ ಸೌಲಭ್ಯ ಸಿಗಬೇಕು, ಮತ್ತು ಎಲ್ಲ ತರಹ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳಿಂದಲೂ ಲಭ್ಯ ಇರಬೇಕು ಎಂಬುದು. ಇದಕ್ಕೆ ಸಹಾಯ ಧನ ಸೌಲಭ್ಯ ಇರುವುದಿಲ್ಲ. ಆದರೆ, ಯಾವುದಾದರೂ ಸರ್ಕಾರದ ಸಹಾಯ ಧನ ಯೋಜನೆಗಳಲ್ಲಿ ಅಳವಡಿಸಿಕೊಳ್ಳಬಹುದು.

ಸಾಲದ ಮರು ಪಾವತಿ ಅತಿ ಮುಖ್ಯ

ಮುದ್ರಾ ಸಾಲದ ಮರುಪಾವತಿ ಅವಧಿ ಚಟುವಟಿಕೆ ಮೇಲೆ ಅವಲಂಬಿಸುತ್ತದೆ, ವರ್ಕಿಂಗ್ ಕ್ಯಾಪಿಟಲ್ – ಕ್ಯಾಶ್ ಕ್ರೆಡಿಟ್ ಆದರೆ, ಪ್ರತಿ ವರ್ಷ ಇದನ್ನು ನವೀಕರಿಸಬೇಕಾಗತ್ತೆ. ಅವಧಿ ಸಾಲ – ಕಂತಿನ ಸಾಲ – ಈ ಸಾಲವನ್ನು ಕಂತುಗಳಲ್ಲಿ ಮರು ಪಾವತಿಸಬೇಕಾಗುತ್ತದೆ. ಈ ಚಟುವಟಿಕೆಯಲ್ಲಿ ಬರುವ ಲಾಭ, ಹಣದ ಹರಿವು ಅವಲಂಬಿಸಿ, ಬ್ಯಾಂಕುಗಳು ಕಂತಿನ ಮೊತ್ತ ತೀರ್ಮಾನ ಮಾಡುತ್ತವೆ. ಸಾಧಾರಣ 3-5 ವರ್ಷಗಳು ಕಾಲಾವಕಾಶ ಇರುತ್ತದೆ .

ಮುದ್ರಾ ಸಾಲದ ಅರ್ಜಿಯನ್ನು ಜನಸಮರ್ಥ್ ಪೋರ್ಟಲ್ ನಲ್ಲಿ ಸಲ್ಲಿಸಬೇಕು. (ಈ ವೆಬ್‌ ವಿಳಾಸ  https://www.jansamarth.in/business-loan-pradhan-mantri-mudra-yojana-scheme). ಇಲ್ಲಿ FAQ ಕೇಳುವ ಪ್ರೆಶ್ನಗಳಿಗೆ ಉತ್ತರ, ಮತ್ತು ಪರಿಹಾರಗಳು ಲಭ್ಯ ಇವೆ.

ಬೇಕಾಗುವ ದಾಖಲೆಗಳು

ಮುದ್ರಾ ಆರ್ಥಿಕ ಸಹಾಯಕ್ಕೆ ಬೇಕಾಗುವ ದಾಖಲೆಗಳು ಈ ವೆಬ್ ಪುಟದಲ್ಲಿ ಲಭ್ಯವಿದೆ.

https://mudra.org.in/Home/AllDocuments ಬೇಕಾಗುವ ದಾಖಲೆಗಳು: ಗುರುತು ಪುರಾವೆ , ವಿಳಾಸದ ಪುರಾವೆ , ಪಾಸ್ ಪೋರ್ಟ್ ಫೋಟೋ , ವ್ಯಪಾರ ಸ್ಥಳದ ಗುರುತು ಮತ್ತು ವಿಳಾಸ, ಮಾಲೀಕರ ಒಪ್ಪಿಗೆ ಇತ್ಯಾದಿ, ಚಟುವಟಿಕೆಯ ವಿವರ, ಮೆಷಿನರಿ ಮತ್ತು ಉಪಕರಣಗಳ ಕೊಟೇಶನ್ – ಪೂರೈಕೆದಾರರ ವಿವರ, ಚಟುವಟಿಕೆಗೆ ಬೇಕಾದ ಲೈಸನ್ಸ್, ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಗಳು.

ಆಕಾಂಕ್ಷಿಗಳಿಗೆ ಯೋಜನಾ ವರದಿ/ ಚಟುವಟಿಕೆ ತಯಾರಿಕೆ ಹೇಗೆ ಮಾಡ ಬೇಕು ಎನ್ನುವ ಮಾಹಿತಿ ಬಹುಪಾಲು ಇರುವುದಿಲ್ಲ. ಅಕಾಂಕ್ಷಿಗಳು ಚಟುವಟಿಕೆಗಳಿಗೆ ಅನುಸಾರವಾಗಿ ಸಂಬಂಧಿಸಿದ ಸರ್ಕಾರದ ಇಲಾಖೆಗಳನ್ನೂ ಸಂಪರ್ಕಿಸಬಹುದು.

ಉದ್ದಿಮೆಗೆ- ಜಿಲ್ಲಾ ಕೇಂದ್ರ, ವ್ಯವಸಾಯ/ಪಶು ಸಂಗೋಪನಾ/ತೋಟಾಗಾರಿಕೆ/ಮೀನುಗಾರಿಕೆ ಚಟುವಟಿಕೆಗಳಿಗೆ ಸಂಬಂಧ ಪಟ್ಟ ಸರ್ಕಾರಿ ಇಲಾಖೆಗಳು ಮಾರ್ಗ ದರ್ಶನ ಮಾಡುತ್ತವೆ. ಜ್ಞಾನ/ಕೌಶಲ್ಯ ವೃದ್ಧಿಗೆ, ಹಲವಾರು ಪ್ರಶಿಕ್ಷಣ [ಟ್ರೈನಿಂಗ್] ಸಂಸ್ಥೆಗಳು ಜಿಲ್ಲಾಮಟ್ಟದಲ್ಲಿ ಇವೆ. ಉದ್ದಿಮೆ ವಹಿವಾಟು, ಹೇಗೆ ಮಾಡಬೇಕು ಅನ್ನುವ ಬಗ್ಗೆ ಪ್ರಶಿಕ್ಷಣ ಸೌಲಭ್ಯವಿದೆ. ಸ್ವಂತ ಉದ್ದಿಮೆ ಮಾಡುವವರಿಗೆ, ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮ ಬಹಳ ಮುಖ್ಯವಾದ ಕಾರ್ಯಕ್ರಮ. ಇದು ಒಂದು ವಹಿವಾಟನ್ನು ಹೇಗೆ ಪ್ರಾರಂಭಿಸಿ, ನಡೆಸಬೇಕು ಎಂಬುದನ್ನು ತಿಳಿಸಿಕೊಡುತ್ತದೆ.

ಮೈಸೂರಿನಲ್ಲಿವೆ ಹಲವು ತರಬೇತಿ ಸಂಸ್ಥೆಗಳು

ಮೈಸೂರಿನಲ್ಲಿ ಸಿಡಾಕ್, ರುಡ್ಸೆಟ್ JSS ಸಂಸ್ಥೆ, ಒಡಿಪಿ ಈ ತರಹ ಸಂಸ್ಥೆಗಳಲ್ಲಿ ಕೌಶಲ್ಯ ಹಾಗೂ EDP ತರಬೇತಿಗಳು ನಡೆಯುತ್ತವೆ. ಮೈಸೂರು ರುಡ್ಸೆಟ್ ಸಂಸ್ಥೆ, ಈ ಕ್ಷೇತ್ರದಲ್ಲಿ ಪ್ರಶಿಕ್ಷಣ ಕೊಡುತ್ತದೆ. ಕೋಳಿ, ಕುರಿ, ಸಾಕಣೆ, ಮಶ್ರೂಮ್ ಬೆಳೆ, ಮೆಕ್ಯಾನಿಕ್, ಡಿಟಿಪಿ, ಹೊಲಿಗೆ, ಕಾಂಡಿಮೆಂಟ್ಸ್, ಜೂಟ್ ಬ್ಯಾಗ್, ಮೊಬೈಲ್ ರಿಪೇರ್, ಈ ರೀತಿ ಹತ್ತು ಹಲವು ಚಟುವಟಿಕೆಗಳು ಮತ್ತು ಇಡಿಪಿ ಪ್ರಶಿಕ್ಷಣ ಸೌಲಭ್ಯ ಇದೆ. ಊಟ, ವಸತಿ, ಟ್ರೈನಿಂಗ್ ಉಚಿತ ಇರುತ್ತದೆ. ಬಿಪಿಎಲ್ ಕಾರ್ಡುದಾರರಿಗೆ ಆದ್ಯತೆ ಇರುತ್ತದೆ.

ಈ ಕುರಿತು ಹೆಚ್ಚಿನ ಮಾಹಿತಿ ನೀಡಿರುವ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ಮುಖ್ಯ ವ್ಯವಸ್ಥಾಪಕ ನಾಗೇಶ್‌ ವಿ.ಎನ್‌, ಆರ್ಥಿಕ ಸೌಲಭ್ಯದ ಸದ್ಬಳಕೆ ಬಹಳ ಮುಖ್ಯವಾದ ಅಂಶ. ಬ್ಯಾಂಕುಗಳ ಆರ್ಥಿಕ ಸೌಲಭ್ಯವನ್ನು ಬಂಡವಾಳವನ್ನಾಗಿ, ಮೇಲೆ ಹತ್ತುವ ಏಣಿಯನ್ನಾಗಿ ಬಳಸಬೇಕು. ಅದರ ದುರ್ಬಳಕೆ, ಸಾಲ ಸೌಲಭ್ಯ ಪಡೆದವರ ಮೇಲೆ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ನೈತಿಕವಾಗಿ ಪರಿಣಾಮ ಬೀರುತ್ತದೆ. ಸಿಬಿಲ್ ಸ್ಕೋರ್‌ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ನಾಗೇಶ್‌ ವಿವರಿಸಿದ್ದಾರೆ.

ಸಾಲದ ಸಮರ್ಪಕ ಮರುಪಾವತಿ ಬ್ಯಾಂಕುಗಳು ಮತ್ತು ಜನ ಸಾಮಾನ್ಯರ ಬಂಧವನ್ನು ಗಟ್ಟಿ ಮಾಡುತ್ತವೆ. ಬ್ಯಾಂಕುಗಳು ಸಾಲ ಸೌಲಭ್ಯ ಕೊಡಲು ಉತ್ಸುಕರಾಗುತ್ತಾರೆ, ಇದರಿಂದ ಅರ್ಹರಿಗೆ ಉದ್ದಿಮೆ, ವಹಿವಾಟುದಾರರಿಗೆ, ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಲಾಭವಾಗುತ್ತದೆ. ಸರ್ಕಾರದ ಮಹತ್ತರವಾದ ಆಶಯ ಈಡೇರುತ್ತದೆ. ಪ್ರತಿ ಒಬ್ಬ ಯುವಕ ಯುವತಿ, ಉದ್ಯೋಗಕ್ಕಾಗಿ ಪರಿತಪಿಸದೆ, ಸ್ವಂತ ಶ್ರಮದಲ್ಲಿ ಜೀವನದಲ್ಲಿ ಮೇಲೆ ಬರುವಂತಹ ಅವಕಾಶ ಸಿಗುತ್ತದೆ ಎಂದು ನಾಗೇಶ್‌ ಸ್ಪಷ್ಟಪಡಿಸಿದ್ದಾರೆ.

ಮುದ್ರಾ ಯೋಜನೆ ಈ ನಿಟ್ಟಿನಲ್ಲಿ ಉದ್ಯಮಪತಿಗಳಾಲು ಹಲವಾರು ಮಂದಿಗೆ ನೆರವಾಗಿದೆ. ಇದುವರೆಗೆ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ವತಿಯಿಂದ 5,73,000 ಫಲಾನುಭವಿಗಳಿಗೆ ಮುದ್ರಾ ಯೋಜನಯಡಿ ಆರ್ಥಿಕ ಸೌಲಭ್ಯ ನೀಡಲಾಗಿದೆ ಎಂದು ನಾಗೇಶ್‌ ಮಾಹಿತಿ ನೀಡಿದ್ದಾರೆ.

Key words: PM Mudra scheme, completes ,decade