ನವದೆಹಲಿ:ಮೇ-30:(www.justkannada.in) ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೇರಲು ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಪ್ರಧಾನಿ ಮೋದಿ ನೂತನ ಸಂಭಾವ್ಯ ಸಚಿವರೊಂದಿಗೆ ಮಹತ್ವದ ಸಭೆ ನಡೆಸಿದರು.
ಕೇಂದ್ರದ ನೂತನ ಸಂಪುಟಕ್ಕೆ ಸೇರಲಿರುವ ಸಂಭಾವ್ಯ ಸಚಿವರಿಗೆ ಕರೆ ಮಾಡಿ ಆಹ್ವಾನಿಸಿದ್ದ ಪ್ರಧಾನಿ ಮೋದಿ, ದೆಹಲಿಯ ತಮ್ಮ ನಿವಾಸದಲ್ಲಿ ಮಹತ್ವದ ಚರ್ಚೆ ನಡೆಸಿದ್ದಾರೆ. ಈಗಾಗಲೇ ಸಂಭಾವ್ಯ ಸಚಿವರೊಂದಿಗಿನ ಸಭೆ ಮುಕ್ತಾಯವಾಗಿದೆ. ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ಸುಷ್ಮಾ ಸ್ವರಾಜ್, ಕಿರಣ್ ರಿಜಿಜು, ಪ್ರಹ್ಲಾದ್ ಪಟೇಲ್, ರಾಮದಾಸ್ ಅಠಾವಳೆ, ರಾಮ್ವಿಲಾಸ್ ಪಾಸ್ವಾನ್, ಭೂಪೇಂದ್ರ ಯಾದವ್, ಥಾವರ್ ಚಂದ್ ಗೆಹ್ಲೋಟ್, ರವಿಶಂಕರ್ ಪ್ರಸಾದ್, ವಿ ಕೆ ಸಿಂಗ್, ಮೊದಲಾದವರು ಸಭೆಯಲ್ಲಿ ಭಾಗಿಯಾಗಿದ್ದರು.
ಈ ನಡುವೆ ಅಮಿತ್ ಶಾ ಅವರು ಮೋದಿ ಸಂಪುಟ ಸೇರುವುದು ಖಚಿತವಾಗಿದ್ದು, ಅವರಿಗೆ ವಿತ್ತ ಖಾತೆ ನೀಡುವ ಸಾಧ್ಯತೆಯಿದೆ. ಸುಷ್ಮಾ ಸ್ವರಾಜ್ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡುವ ವಿಚಾರ ಇನ್ನೂ ನಿಗೂಢವಾಗಿಯೇ ಇದೆ ಎಂದು ತಿಳಿದುಬಂದಿದೆ.