ಕಾಶ್ಮೀರದಲ್ಲಿ ಅಭಿವೃದ್ಧಿಯ ಹೊಸಯುಗ ಆರಂಭ

ಬೆಂಗಳೂರು:ಆ-9: ಜಮ್ಮು-ಕಾಶ್ಮೀರಕ್ಕೆ ಸಂಬಂಧಪಟ್ಟಂತೆ ಡಾ.ಶ್ಯಾಮಪ್ರಸಾದ್ ಮುಖರ್ಜಿ, ಡಾ.ಬಿ.ಆರ್.ಅಂಬೇಡ್ಕರ್, ಅಟಲ್ ಬಿಹಾರಿ ವಾಜಪೇಯಿ ಕಂಡ ಕನಸು ಈಗ ನನಸಾಗಿದ್ದು ಮತ್ತೊಮ್ಮೆ ಜಮ್ಮು-ಕಾಶ್ಮೀರ ಅಭಿವೃದ್ಧಿಯ ಹೊಸ ಎತ್ತರ ತಲುಪಲಿದೆ. ಆರ್ಥಿಕಾಭಿವೃದ್ಧಿ ವೇಗ ಪಡೆಯಲಿದೆ. ವಿಧಾನಸಭೆಗೆ ಚುನಾವಣೆಯೂ ಶೀಘ್ರ ನಡೆದು, ಹೊಸ ಸರ್ಕಾರ ಸ್ಥಾಪನೆ ಆಗಲಿದೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಕಣಿವೆ ರಾಜ್ಯದ ಜನರಿಗೆ ಅಭಯಹಸ್ತ ನೀಡಿದರು. ಗುರುವಾರ ಸಂಜೆ ದೇಶವನ್ನು ಉದ್ದೇಶಿಸಿ ರೇಡಿಯೋ ಮೂಲಕ ಮಾಡಿದ ಅವರ ಭಾಷಣದ ಪೂರ್ಣಪಾಠ ಇಲ್ಲಿದೆ.

ಜಮ್ಮು-ಕಾಶ್ಮೀರ ಮತ್ತು ಲಡಾಖ್​ನಲ್ಲಿ ಹೊಸ ಯುಗ ಆರಂಭವಾಗಿದೆ. ದೇಶದ ಎಲ್ಲರಿಗೂ ಸಮಾನವಾದ ಹಕ್ಕುಗಳು ಸಿಗಲಿವೆ. ಡಾ.ಶ್ಯಾಮಪ್ರಸಾದ ಮುಖರ್ಜಿ, ಡಾ.ಬಾಬಾಸಾಹೇಬ್ ಅಂಬೇಡ್ಕರ್, ಅಟಲ್ ಬಿಹಾರಿ ವಾಜಪೇಯಿ ಅವರು ಕಂಡ ಕನಸು ನನಸಾಗಿದೆ. ಕೆಲ ಸಂಗತಿಗಳು ಸಮಯ ಕಳೆದಂತೆ ಸ್ಥಾಯಿ ಅಂದುಕೊಳ್ಳಲಾಗುತ್ತದೆ. ಹಾಗೆಯೇ, ವಿಧಿ 370ನ್ನು ಶಾಶ್ವತ ಅಂದುಕೊಳ್ಳಲಾಯಿತು. ವಿಚಿತ್ರವೆಂದರೆ, ಅದರಿಂದಾಗುವ ಹಾನಿಗಳ ಬಗ್ಗೆ ಚರ್ಚೆಯೇ ನಡೆಯುತ್ತಿರಲಿಲ್ಲ. ಹಾಗೆಯೇ, ವಿಧಿ 370ರಿಂದ ಜಮ್ಮು-ಕಾಶ್ಮೀರ ಜನರ ಜೀವನಕ್ಕೆ ಏನು ಪ್ರಯೋಜನವಾಯಿತು ಎಂಬ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿರಲಿಲ್ಲ. ದೇಶದ ಇತರೆ ಭಾಗದ ಜನರಿಗೆ ಸಿಗುತ್ತಿದ್ದ ಸೌಲಭ್ಯಗಳಿಂದ ಇವರು ದೀರ್ಘಾವಧಿ ವಂಚಿತರಾಗಿ ಉಳಿಯಬೇಕಾಯಿತು. ಕಲಂ 370 ಮತ್ತು 35ಎ ಭ್ರಷ್ಟಾಚಾರ, ಭಯೋತ್ಪಾದನೆ, ಪ್ರತ್ಯೇಕತಾವಾದ, ಕುಟುಂಬ ರಾಜಕಾರಣವನ್ನು ನೀಡಿತು. ದೇಶವಿರೋಧಿ ಭಾವನೆಗಳನ್ನು ಪ್ರಚೋದಿಸಲು ಇದನ್ನು ಅಸ್ತ್ರದಂತೆ ಬಳಸಲಾಯಿತು. 43 ಸಾವಿರ ನಿದೋಷಿ ಜನರು ತಮ್ಮ ಪ್ರಾಣ ಕಳೆದುಕೊಳ್ಳಬೇಕಾಯಿತು. ಜಮ್ಮು-ಕಾಶ್ಮೀರ ಮತ್ತು ಲಡಾಖ್ ವಿಕಾಸದ ಹಾದಿಯಲ್ಲಿ ಮುಂದುವರಿಯಲಿಲ್ಲ. ಈಗ ವಿಧಿ 370ರ ರದ್ದತಿಯಿಂದ ಇಲ್ಲಿನ ಜನರ ವರ್ತಮಾನ ರೂಪುಗೊಳ್ಳುವುದಷ್ಟೇ ಅಲ್ಲ, ಭವಿಷ್ಯವೂ ಚೆನ್ನಾಗಿ ನಿರ್ವಣವಾಗಲಿದೆ.

ಅವಕಾಶದಿಂದ ವಂಚಿತರಾದರು: ಯಾವುದೇ ಪಕ್ಷದ ಸರ್ಕಾರವಿದ್ದರೂ ಸಂಸತ್ತು ಉತ್ತಮ ಕಾನೂನುಗಳನ್ನು ರೂಪಿಸುತ್ತದೆ. ಕಾನೂನುಗಳನ್ನು ರೂಪಿಸುವಾಗ ವಿಚಾರವಿಮರ್ಶೆ, ಗಂಭೀರ ಚರ್ಚೆ ನಡೆಯುತ್ತದೆ. ಆದರೆ, ಅದೇ ಸಂಸತ್ತು ಮಾಡಿದ ಕಾನೂನು ದೇಶದ ಒಂದು ಭಾಗಕ್ಕೆ (ಜಮ್ಮು-ಕಾಶ್ಮೀರ) ಅನ್ವಯವೇ ಆಗುವುದಿಲ್ಲ ಎಂದರೆ ಏನರ್ಥ? ಇದರ ಪರಿಣಾಮ, ಕಣಿವೆ ರಾಜ್ಯದವರು ಅವಕಾಶದಿಂದ ವಂಚಿತರಾದರು. ಶಿಕ್ಷಣದ ಅಧಿಕಾರವಿದ್ದರೂ ಅಲ್ಲಿನ ಮಕ್ಕಳು ಅದರಿಂದ ದೂರವಿದ್ದರು. ಆ ಮಕ್ಕಳು ಯಾವ ಅಪರಾಧ ಮಾಡಿದ್ದರು? ‘ಸಫಾಯಿ ಕರ್ಮಚಾರಿ ಆಕ್ಟ್’ ಎಲ್ಲಡೆ ಜಾರಿಯಲ್ಲಿದೆ. ಆದರೆ, ಅದು ಜಮ್ಮು-ಕಾಶ್ಮೀರದಲ್ಲಿನ ಸಫಾಯಿ ಕರ್ಮಚಾರಿಗಳಿಗೆ ಅನ್ವಯವಾಗುತ್ತಿರಲಿಲ್ಲ. ಅಲ್ಪಸಂಖ್ಯಾತರ ಹಿತದ ರಕ್ಷಣೆಗೆ, ದಲಿತರ ಹಿತರಕ್ಷಣೆಗೆ ಅವಕಾಶ ಇರಲಿಲ್ಲ. ಚುನಾವಣೆಗೆ ಸ್ಪರ್ಧಿಸುವಾಗ ದೇಶದ ಇತರೆಡೆ ಪರಿಶಿಷ್ಟ ಜಾತಿ/ಪಂಗಡದವರಿಗೆ ಮೀಸಲಾತಿಯ ಲಾಭ ದೊರೆಯುತ್ತದೆ. ಇಲ್ಲಿ ಅದೂ ಅನ್ವಯವಾಗುತ್ತಿರಲಿಲ್ಲ.

ಈಗ ಹೊಸ ವ್ಯವಸ್ಥೆಯಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ (ಪೊಲೀಸ್ ಇಲಾಖೆ ಸೇರಿದಂತೆ) ಸೂಕ್ತ ಸೌಲಭ್ಯ ಸಿಗುವಂತೆ ಮಾಡಲಾಗುವುದು. ಎಲ್​ಟಿಸಿ, ಎಚ್​ಆರ್​ಎ, ಶಿಕ್ಷಣಕ್ಕಾಗಿ ನೆರವು, ಆರೋಗ್ಯ ಯೋಜನೆ ಸೇರಿ ಉಳಿದೆಡೆ ದೊರೆಯುತ್ತಿರುವ ಸೌಲಭ್ಯಗಳೆಲ್ಲ ಶೀಘ್ರದಲ್ಲೇ ಇಲ್ಲೂ ಕಲ್ಪಿಸಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಖಾಲಿ ಇರುವ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಲಾಗುವುದು. ಇದರಿಂದ ಯುವಕರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಸೇನೆ ಮತ್ತು ಅರೆಸೈನಿಕ ಪಡೆಯಲ್ಲಿ ಭರ್ತಿಗಾಗಿ ನೇಮಕಾತಿ ರ್ಯಾಲಿಗಳನ್ನು ಆಯೋಜಿಸಲಾಗುವುದು. ಪ್ರಧಾನಮಂತ್ರಿ ಸ್ಕಾಲರ್​ಶಿಪ್ ಯೋಜನೆ ವಿಸ್ತರಣೆ ಮಾಡಲಾಗುವುದು.

ಪಾರದರ್ಶಕ ವ್ಯವಸ್ಥೆ

ಪಾಕಿಸ್ತಾನದಿಂದ ಬಂದ ನಿರಾಶ್ರಿತರಿಗೆ ದಶಕಗಳಿಂದ ಮತದಾನದ ಸೌಲಭ್ಯ ಇರಲಿಲ್ಲ. ಅಂಥವರಿಗೆ ಮತದಾನದ ಹಕ್ಕು ಸಿಗಲಿದೆ. ನಿಮ್ಮ ಜನಪ್ರತಿನಿಧಿ ನಿಮ್ಮ ಮೂಲಕವೇ ಆಯ್ಕೆಯಾಗಲಿದ್ದಾರೆ, ನಿಮ್ಮ ನಡುವೆಯಿಂದಲೇ ಬರಲಿದ್ದಾರೆ. ಮುಖ್ಯಮಂತ್ರಿ, ಸಚಿವ ಸಂಪುಟದ ಸದಸ್ಯರು ಈ ಮುಂದೆಯೂ ಇರಲಿದ್ದಾರೆ. ಈ ಹೊಸ ವ್ಯವಸ್ಥೆಯ ಮೂಲಕ ಜಮ್ಮು-ಕಾಶ್ಮೀರ ಭಯೋತ್ಪಾದನೆ, ಪ್ರತ್ಯೇಕತಾವಾದದಿಂದ ಮುಕ್ತವಾಗಲಿದೆ ಎಂಬ ವಿಶ್ವಾಸವಿದೆ. ಭೂಮಿಯ ಸ್ವರ್ಗವಾದ ನಮ್ಮ ಜಮ್ಮು-ಕಾಶ್ಮೀರ ಮುಂದಿನ ದಿನಗಳಲ್ಲಿ ಅಭಿವೃದ್ಧಿಯ ಹೊಸ ಎತ್ತರವನ್ನು ತಲುಪಲಿದೆ. ಲಡಾಖ್​ನಲ್ಲಿ ಅಭಿವೃದ್ಧಿ ಕಾರ್ಯಗಳು ಮುಂದುವರಿಯಲಿವೆ. ಜಮ್ಮು-ಕಾಶ್ಮೀರ ವಿಧಾನಸಭೆಗೆ ಶೀಘ್ರದಲ್ಲೇ ಚುನಾವಣೆ ನಡೆಯಲಿದೆ. ಪಾರದರ್ಶಕ ವಾತಾವರಣದಲ್ಲಿ ನಿಮ್ಮ ಜನಪ್ರತಿನಿಧಿಗಳನ್ನು ಚುನಾಯಿಸುವ ಅವಕಾಶ ನಿಮಗೆಲ್ಲ ಶೀಘ್ರದಲ್ಲೇ ಸಿಗಲಿದೆ. ಜಮ್ಮು-ಕಾಶ್ಮೀರ ಮತ್ತು ಲಡಾಖ್​ನ ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣಾ ರಾಜಕೀಯಕ್ಕೆ ಬರಬೇಕೆಂದು ಆಹ್ವಾನಿಸುತ್ತೇನೆ. ನಿಮ್ಮ ಕ್ಷೇತ್ರದ ಅಭಿವೃದ್ಧಿಯ ನೇತೃತ್ವ ನೀವೇ ವಹಿಸಿರಿ. ಈ ಮೂಲಕ ಹೊಸ, ಸದೃಢ ರಾಜಕೀಯ ವ್ಯವಸ್ಥೆಯ ನಿರ್ಮಾಣ ಮತ್ತು ಭವಿಷ್ಯದ ನಿರ್ಮಾಣ ನಿಮ್ಮಿಂದಲೇ ನಡೆಯಲಿ ಎಂಬ ಆಶಯ ನನ್ನದು.

ಆ ಬಲಿದಾನಗಳು…

1965ರ ಯುದ್ಧದ ವೇಳೆ ಪುಂಛ್​ನ ಮೌಲ್ವಿ ಗುಲಾಮುದ್ದಿನ್ ಪಾಕಿಸ್ತಾನಿ ನುಸುಳುಕೋರರ ಬಗ್ಗೆ ನಮ್ಮ ಸೇನೆಗೆ ಮಾಹಿತಿ ನೀಡಿದ್ದರು. ಅವರಿಗೆ ಅಶೋಕ ಚಕ್ರದಿಂದ ಗೌರವಿಸಲಾಯಿತು. ಕಾರ್ಗಿಲ್ ಯುದ್ಧದ ವೇಳೆ ಶತ್ರುಗಳನ್ನು ಸದೆಬಡಿದ ಸೋನಮ್ ವಾಂಗ್​ಚುಕ್ ಅವರಿಗೆ ವೀರಚಕ್ರ ಪ್ರದಾನಿಸಲಾಯಿತು. ಭಯೋತ್ಪಾದಕರ ಜತೆ ಸೆಣಸಾಡಿ ಅವರನ್ನು ಹತ್ಯೆಗೈದ ವೀರನಾರಿ ರುಕ್ಸಾನಾರಿಗೆ ಕೀರ್ತಿಚಕ್ರ ನೀಡಲಾಯಿತು. ಪುಂಛ್​ನ ಔರಂಗಜೇಬ್ ಭಯೋತ್ಪಾದಕ ರೊಡನೆ ಸೆಣಸಾಡುತ್ತ ಹುತಾತ್ಮರಾದರು. ಅವರ ಇಬ್ಬರು ಸಹೋದರರು ಸೇನೆ ಸೇರಿದ್ದಾರೆ.

ಡಿಜಿಟಲ್ ಶಕ್ತಿ

ಇಲ್ಲಿನ ಯುವಕರು/ಯುವತಿಯರು ಕೌಶಲಭರಿತರಾಗಿದ್ದಾರೆ. ಸದ್ಯ, ತಂತ್ರಜ್ಞಾನದ ವಿಸ್ತಾರ ಆಗಬೇಕಿದೆ. ಡಿಜಿಟಲ್ ಶಕ್ತಿ ಹೆಚ್ಚಬೇಕಿದೆ. ಬಿಪಿಒ ಕೇಂದ್ರಗಳು, ಇತರೆ ಉದ್ಯಮಗಳು ಸ್ಥಾಪನೆಯಾಗಿ ತಂತ್ರಜ್ಞಾನ ವಿಸ್ತರಣೆ ಆದಷ್ಟು ಇವರ ಬದುಕು ಸರಳವಾಗಲಿದೆ.

ದೇಶದ ಭಾವನೆ ಗೌರವಿಸಿ

ವಿಧಿ 370 ರದ್ದತಿ ಬಗ್ಗೆ ಕೆಲವರು ಭಿನ್ನಾಭಿಪ್ರಾಯ ತೋರಿದ್ದಾರೆ. ಆ ಭಿನ್ನಾಭಿಪ್ರಾಯಗಳನ್ನು ಗೌರವಿಸುತ್ತೇವೆ, ಅದಕ್ಕೆ ಸೂಕ್ತ ಉತ್ತರ ನೀಡುತ್ತೇವೆ. ರಾಜ್ಯ ವಿಭಜನೆಗಾಗಿ ಸಂಸತ್ತಿನಲ್ಲಿ ಯಾರು ಮತ ಹಾಕಿದರು, ಯಾರು ಹಾಕಲಿಲ್ಲ ಎಂಬುದು ಈಗ ಮುಖ್ಯವಾಗುವುದಿಲ್ಲ. ವಿರೋಧ ತೋರುವವರು ಸಹ ದೇಶಹಿತ ಮುಖ್ಯವಾಗಿಸಿಕೊಂಡು ಸಹಕಾರ ನೀಡಲಿ. ದೇಶದ ಭಾವನೆಗಳನ್ನು ಗೌರವಿಸಲಿ. ಎಲ್ಲರೂ ಸೇರಿ ಒಟ್ಟಾಗಿ ಕಾರ್ಯನಿರ್ವಹಿಸಬೇಕಿದೆ. ಜಮ್ಮು-ಕಾಶ್ಮೀರ, ಲಡಾಖ್​ನ ಅಭಿವೃದ್ಧಿ 130 ಕೋಟಿ ಜನರ ಕಳಕಳಿಯ ವಿಷಯವಾಗಬೇಕಿದೆ. ಜಮ್ಮು-ಕಾಶ್ಮೀರದ ದೇಶಭಕ್ತ ಜನರೇ ಪಾಕಿಸ್ತಾನದ ಕುತಂತ್ರ ಹಾಗೂ ಪ್ರತ್ಯೇಕತಾವಾದದ ವಿರುದ್ಧ ಸಿಡಿದೆದ್ದಿದ್ದಾರೆ.

ಪ್ರವಾಸೋದ್ಯಮ ಹಬ್ ಆಗಲಿ

ಪ್ರಪಂಚದ ಅತಿ ದೊಡ್ಡ ಪ್ರವಾಸೋದ್ಯಮ ಕೇಂದ್ರವಾಗುವ ಶಕ್ತಿ ಜಮ್ಮು-ಕಾಶ್ಮೀರಕ್ಕಿದೆ. ಈ ನಿಟ್ಟಿನಲ್ಲಿ ಪೂರಕವಾದ ವಾತಾವರಣ ನಿರ್ವಿುಸಬೇಕಿದ್ದು, ಇದಕ್ಕಾಗಿ ನನಗೆ ಎಲ್ಲ ಭಾರತೀಯರ ಸಹಕಾರ ಬೇಕಿದೆ. ಹಿಂದೆಲ್ಲ ಬಾಲಿವುಡ್ ಸಿನಿಮಾಗಳ ಚಿತ್ರೀಕರಣ ಕಾಶ್ಮೀರದಲ್ಲಿ ಆಗುತ್ತಿದ್ದವು. ಈ ಮುಂದೆಯೂ, ಕಾಶ್ಮೀರ ಭಯದಿಂದ ಮುಕ್ತಗೊಂಡು ಹೊಸ ಅವಕಾಶಗಳನ್ನು ನಿರ್ವಿುಸಲಿದೆ. ಹಿಂದಿ, ತಮಿಳು, ತೆಲುಗು ಚಿತ್ರರಂಗ ಮುಂದೆ ಬಂದು, ಚಿತ್ರೀಕರಣ ನಡೆಸಲಿ, ಥೇಟರ್​ಗಳನ್ನು ಆರಂಭಿಸಲಿ.

ಲಡಾಖ್ ಇಕೋ ಟೂರಿಸಂ ಕೇಂದ್ರ

ಲಡಾಖ್ ಆಧ್ಯಾತ್ಮಿಕ ಪ್ರವಾಸೋದ್ಯಮ, ಎಡ್ವೆಂಚರ್ ಮತ್ತು ಇಕೋ ಟೂರಿಸಂನ ದೊಡ್ಡ ಕೇಂದ್ರವಾಗುವ ಸಾಮರ್ಥ್ಯ ಹೊಂದಿದೆ. ಸೌರ ವಿದ್ಯುತ್ ಉತ್ಪಾದನೆಯಲ್ಲೂ ಇದು ಬೃಹತ್ ಕೇಂದ್ರವಾವಗಬಲ್ಲದು. ಲಡಾಖ್​ಗೆ ಹೊಸ ಆಸ್ಪತ್ರೆ, ಮೂಲಸೌಕರ್ಯಗಳು ಲಭ್ಯವಾಗಲಿವೆ. ಪ್ರತಿಭೆಗಳಿಗೆ ಇಲ್ಲಿ ಕೊರತೆಯಿಲ್ಲ. ಅವಕಾಶಗಳನ್ನು ಸೃಷ್ಟಿಸಬೇಕಿದೆ ಅಷ್ಟೇ. ಆ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಲಿದ್ದೇವೆ. ಭವಿಷ್ಯದ ಲಡಾಖ್ ಅಭಿವೃದ್ಧಿಯಲ್ಲಿ ಮುಂಚೂಣಿ ಸಾಧಿಸುವಂತೆ ಮಾಡಲಾಗುವುದು.

ಆರ್ಥಿಕ ಬಲ

ರಾಜ್ಯ ವಿತ್ತೀಯ ಕೊರತೆಯಿಂದ ಬಳಲುತ್ತಿದೆ. ಇದನ್ನು ತಗ್ಗಿಸಲು ಕೇಂದ್ರ ಸರ್ಕಾರ ಯತ್ನಿಸಲಿದೆ. ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿಸುವ ನಿರ್ಣಯ ವಿವೇಚನಾಯುಕ್ತವಾಗಿದೆ. ರಾಜ್ಯಪಾಲರ ಆಳ್ವಿಕೆ ಆರಂಭವಾದಾಗಿನಿಂದ ಉತ್ತಮ ಆಡಳಿತ ಕಂಡುಬಂದಿದೆ, ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿದೆ. ನನೆಗುದಿಗೆ ಬಿದ್ದಿದ್ದ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಹಲವು ಯೋಜನೆಗಳಿಗೆ ಜೀವ ಸಿಕ್ಕಿದೆ. ಕಾರ್ಯಸಂಸ್ಕೃತಿಗೆ ಉತ್ತೇಜನ ಸಿಕ್ಕಿದೆ. ರಸ್ತೆನಿರ್ವಣ, ವಿಮಾನ ನಿಲ್ದಾಣದ ಆಧುನೀಕರಣ, ರೈಲ್ವೆ ಹಳಿಗಳ ನಿರ್ಮಾಣ ವೇಗದಿಂದ ಸಾಗಿದೆ. ಇದನ್ನು ಮುಂದುವರಿಸಲಾಗುವುದು. ಮೌಲಸೌಕರ್ಯಗಳನ್ನು ಇನ್ನಷ್ಟು ಆಧುನೀಕರಣಗೊಳಿಸಲಾಗುವುದು.

ಪಂಚಾಯತ್ ಪ್ರತಿನಿಧಿಗಳ ಮಾದರಿ ಕಾರ್ಯಗಳು

ಕಳೆದ 4-5 ತಿಂಗಳ ಹಿಂದೆ ಪಂಚಾಯತ್ ಚುನಾವಣೆಯಲ್ಲಿ ಗೆದ್ದುಬಂದವರು ತುಂಬ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಶ್ರೀನಗರಕ್ಕೆ ನಾನು ಹೋಗಿದ್ದಾಗ, ಅವರು ದೆಹಲಿಗೆ ಬಂದಾಗ ಭೇಟಿ, ಮಾತುಕತೆ ದೀರ್ಘಾವಧಿಯವರೆಗೆ ನಡೆಯಿತು. ಈ ಹೊಸ ಜನಪ್ರತಿನಿಧಿಗಳು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ, ಮಹಿಳಾ ಜನಪ್ರತಿನಿಧಿಗಳ ಆತ್ಮವಿಶ್ವಾಸ ಖುಷಿ ನೀಡಿದೆ. ಇವರೆಲ್ಲರ ಕೆಲಸ ಪ್ರಶಂಸಾರ್ಹ. ಗ್ರಾಮೀಣ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳು ವೇಗದಿಂದ ನಡೆಯುತ್ತಿವೆ. ಹೊಸ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವ ಅವಕಾಶ ಸಿಕ್ಕರೆ ಅದ್ಭುತವಾದ ಪ್ರಗತಿ ಮಾಡಬಲ್ಲರು ಎಂಬುದನ್ನು ಈ ಪಂಚಾಯತ್ ಪ್ರತಿನಿಧಿಗಳು ಸಾಬೀತು ಮಾಡಿದ್ದಾರೆ.

ಕ್ರೀಡಾ ಅಕಾಡೆಮಿ ಸ್ಥಾಪನೆ

ಪ್ರತಿಭಾವಂತ ಕ್ರೀಡಾಪುಟಗಳು ಈ ರಾಜ್ಯದಲ್ಲಿದ್ದಾರೆ ಎಂಬುದು ಗೊತ್ತು. ಆದರೆ, ಅವರಿಗೆ ತರಬೇತಿಯಾಗಲಿ, ಅವಕಾಶಗಳಾಗಲಿ ಇರಲಿಲ್ಲ. ಬರುವ ದಿನಗಳಲ್ಲಿ ಹೊಸ ಕ್ರೀಡಾ ಅಕಾಡೆಮಿ ಸ್ಥಾಪಿಸಲಾಗುವುದು. ಕ್ರೀಡಾಂಗಣಗಳನ್ನು ನಿರ್ವಿುಸಲಾಗುವುದು. ನುರಿತ ತಜ್ಞರಿಂದ ಕ್ರೀಡಾ ಪ್ರತಿಭೆಗಳಿಗೆ ತರಬೇತಿ ನೀಡಲಾಗುವುದು. ಈ ಮೂಲಕ ಕಣಿವೆ ರಾಜ್ಯದವರು ಕ್ರೀಡೆಯಲ್ಲಿ ಭಾರತದ ಕೀರ್ತಿ ಬೆಳಗಲಿದ್ದಾರೆ ಎಂಬ ವಿಶ್ವಾಸ ನನಗಿದೆ.

ಜಾಗತಿಕ ಮಾರುಕಟ್ಟೆಗೆ ಕಾಶ್ಮೀರ

ಕೇಸರಿಯ ವರ್ಣ, ಸೇಬಿನ ಸ್ವಾದ, ಕಾಶ್ಮೀರಿ ಶಾಲು, ಕಲಾಕೃತಿಗಳು, ಲಡಾಖ್​ನ ಹರ್ಬಲ್ ಔಷಧ ಇವೆಲ್ಲ ವಿಶ್ವಾದ್ಯಂತ ತಲುಪಬೇಕಿದೆ. ಲಡಾಖ್​ನಲ್ಲಿ ‘ಸೋಲೋ’ ಎಂಬ ಬಳ್ಳಿಯಿದೆ. ಕಡಿಮೆ ಆಮ್ಲಜನಕ ಇರುವ ಪ್ರದೇಶದಲ್ಲಿ ಇದು ಲಾಭದಾಯಕವಾಗಿದೆ. ಇದು ವಿಶ್ವಾದ್ಯಂತ ಮಾರಾಟವಾಗಬೇಕು. ನಾನು ಒಂದೇ ಬಳ್ಳಿಯ ಹೆಸರನ್ನು ಮಾತ್ರ ಹೇಳಿದ್ದೇನೆ. ಇಂಥ ಹರ್ಬಲ್ ಸಸಿಗಳನ್ನು ಗುರುತಿಸಿ, ಮಾರಾಟ ಮಾಡಿದರೆ ಇದರ ಲಾಭ ಅಲ್ಲಿನ ಜನರಿಗೆ ವಿಶೇಷವಾಗಿ ರೈತರಿಗೆ ಆಗಲಿದೆ. ಈ ಸ್ಥಳೀಯ ಉತ್ಪನ್ನಗಳನ್ನು ಜಗತ್ತಿನಾದ್ಯಂತ ತಲುಪಿಸಲು ಉದ್ಯಮಿಗಳು ಮುಂದೆ ಬರಬೇಕು.

ವಿಶೇಷ ಧನ್ಯವಾದ

ಜಮ್ಮು-ಕಾಶ್ಮೀರದಲ್ಲಿ ನಿಯೋಜನೆ ಆಗಿರುವ ಭದ್ರತಾ ಪಡೆ, ಸೇನಾ ಪಡೆ, ಅರೆ ಸೇನಾಪಡೆ, ಪೊಲೀಸ್ ಪಡೆಗೆ ನನ್ನ ಧನ್ಯವಾದ. ಇಲ್ಲಿನ ಪರಿಸ್ಥಿತಿಗಳನ್ನು ನಿರ್ವಹಿಸಿರುವ ಪರಿ, ಶಾಂತಿಯನ್ನು ಸ್ಥಾಪಿಸಿರುವ ರೀತಿ ಪ್ರಶಂಸನೀಯ. ನಿಮ್ಮ ಕಾರ್ಯದಕ್ಷತೆ ನನ್ನ ವಿಶ್ವಾಸ ಹೆಚ್ಚಿಸಿದೆ. ಬದಲಾವಣೆ ಸಾಧ್ಯ, ಜನರ ಹಿತರಕ್ಷಣೆ ಸಾಧ್ಯ ಎಂಬುದು ಸ್ಪಷ್ಟವಾಗಿದೆ.

| ನರೇಂದ್ರ ಮೋದಿ, ಪ್ರಧಾನಿ
ಕೃಪೆ:ವಿಜಯವಾಣಿ

ಕಾಶ್ಮೀರದಲ್ಲಿ ಅಭಿವೃದ್ಧಿಯ ಹೊಸಯುಗ ಆರಂಭ
pms-kashmir-outreach-after-scrapping-of-special-status-for-j-and-k-says-will-usher-in-a-new-era