ತುಮಕೂರು,ಜೂನ್,30,2022(www.justkannada.in): ‘ಬೇಡ ಜಂಗಮ ಸಮುದಾಯ’ಕ್ಕೆ ಮೀಸಲಾತಿಗೆ ಆಗ್ರಹಿಸಿ ಬೇಡ ಜಂಗಮ ಸಮುದಾಯದಿಂದ ಇಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದ್ದು, ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ಧವರನ್ನ ಪೊಲೀಸರು ತಡೆದಿದ್ದಾರೆ.
ಉತ್ತರ ಕರ್ನಾಟಕದ ಭಾಗದಿಂದ ನೂರಾರು ಬಸ್ ಗಳಲ್ಲಿ ಪ್ರತಿಭಟನಾಕಾರರು ಬೆಂಗಳೂರಿಗೆ ಆಗಮಿಸುತ್ತಿದ್ದರು. ಈ ಮಧ್ಯೆ ಬೆಂಗಳೂರಿಗೆ ಬರುವ ಮುನ್ನವೇ ಮಾರ್ಗದಲ್ಲೇ ತುಮಕೂರಿನ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಪೊಲೀಸರು ತಡೆದಿದ್ದು,ಈ ಹಿನ್ನೆಲೆಯಲ್ಲಿ ಸುಮಾರು 8 ಕಿ.ಮೀವರೆಗೂ ಟ್ರಾಫಿಕ್ ಜಾಮ್ ಉಂಟಾಗಿದೆ.
ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ‘ಬೇಡ ಜಂಗಮ ಸತ್ಯಪ್ರತಿಪಾದನ ಸತ್ಯಾಗ್ರಹ ಹೋರಾಟ’ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಪಾಲ್ಗೊಳ್ಳಲು ಸಾವಿರಾರು ಮಂದಿ ಬುಧವಾರ ರಾತ್ರಿಯೇ ಜಮಖಂಡಿ, ರಾಯಚೂರು, ಬಾಗಲಕೋಟೆ ಸೇರಿ ಉತ್ತರ ಕರ್ನಾಟಕ ಭಾಗದಿಂದ ಬಸ್ಗಳಲ್ಲಿ ಹೊರಟಿದ್ದರು. ತುಮಕೂರಿನ ಕಳ್ಳಂಬೆಳ್ಳ ಟೋಲ್ ಬಳಿ ಹೋರಾಟಗಾರರಿದ್ದ 80ಕ್ಕೂ ಹೆಚ್ಚು ಬಸ್, ನೂರಾರು ಕ್ರೂಸರ್ ವಾಹನಗಳನ್ನು ಪೊಲೀಸರು ತಡದಿದ್ದಾರೆ.
ಹಾಗೆಯೇ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಗುಯಿಲಾಳ್ ಟೋಲ್ ಬಳಿಯೂ ಬೆಂಗಳೂರಿಗೆ ಆಗಮಿಸುತ್ತಿದ್ದವರಿಗೆ ತಡೆ ಹಾಕಲಾಗಿದೆ. ಹುಬ್ಬಳ್ಳಿ, ಧಾರಾವಾಡ, ವಿಜಯಪುರದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ಗೆ ಪ್ರತಿಭಟನಾಕಾರರು ಆಗಮಿಸುತ್ತಿದ್ದರು. ಇವರನ್ನೂ ಸಹ ಪೊಲೀಸರು ತಡೆದಿದ್ದಾರೆ.
Key words: Police -block- beda jangama- community-Bangalore