ಮೈಸೂರು,ಅಕ್ಟೋಬರ್,14,2024 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಯಶಸ್ವಿಯಾಗಿ ನಡೆದಿದ್ದು, ಈ ಮಧ್ಯೆ ಐತಿಹಾಸಿಕ ಜಂಬೂಸವಾರಿ ಮೆರವಣಿಗೆ ವೇಳೆ ಮಾಧ್ಯಮ ಪ್ರತಿನಿಧಿಗಳ ಮೇಲೆ ಪೊಲೀಸರ ದೌರ್ಜನ್ಯ ಆರೋಪ ಸಂಬಂಧ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಅವರು ಸಭೆ ನಡೆಸಿ ಮಾಹಿತಿ ಪಡೆದು ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ಸೋಮವಾರ ಬೆಳಗ್ಗೆ 11.30ಕ್ಕೆ ಅರಮನೆಯ ಸಭಾಂಗಣದ ಕೊಠಡಿಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅವರು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳ ಜತೆ ಸಭೆ ನಡೆಸಿ ಘಟನೆ ಬಗ್ಗೆ ಸದಸ್ಯರಿಂದ ಮಾಹಿತಿ ಪಡೆದರು. ಅಂತಿಮವಾಗಿ ನಡೆದಿರುವ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿ ಮುಂದೆ ಈ ರೀತಿ ಘಟನೆಗಳು ಆಗದಂತೆ ಜಿಲ್ಲಾಡಳಿತ ಎಚ್ಚರವಹಿಸುವುದಾಗಿ ಭರವಸೆ ನೀಡಿದರು. ಹಾಗೆಯೇ ದಸರಾ ಯಶಸ್ವಿಗೆ ಸಹಕಾರ ನೀಡಿದ ಮಾಧ್ಯಮ ಸ್ನೇಹಿತರಿಗೆ ಧನ್ಯವಾದ ಸಲ್ಲಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಘಟನೆ ಕುರಿತು ಕ್ರಮವಹಿಸುವಂತೆ ಡಿಸಿ ಲಕ್ಷ್ಮೀಕಾಂತ ರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾಡಳಿತ ಮತ್ತು ಪತ್ರಕರ್ತರ ನಡುವೆ ಸಮನ್ವಯತೆ ಕಾಪಾಡಿದ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್ ಮತ್ತು ತಂಡಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ಧನ್ಯವಾದ ಅರ್ಪಿಸಲಾಯಿತು.
ಈ ವೇಳೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಪ್ರದಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಸೇರಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Key words: Police, media representatives, Mysore DC, meeting