ಗುಂಡಿಗಳಿಗೆ ಅಲಂಕರಿಸಿ ಆರತಿ ಎತ್ತಿ ಪೂಜೆ: ಎಎಪಿಯಿಂದ ವಿನೂತನ ಪ್ರತಿಭಟನೆ.

ಬೆಂಗಳೂರು,ಅಕ್ಟೋಬರ್,21,2021(www.justkannada.in): ರಸ್ತೆಗಳಲ್ಲಿರುವ ಗುಂಡಿಯ ಸುತ್ತ ರಂಗೋಲಿ ಹಾಕಿ, ಹೂವಿನಿಂದ ಅಲಂಕರಿಸಿ, ಆರತಿ ಎತ್ತಿ ಪೂಜೆ. ಅದರ ಸುತ್ತಮುತ್ತ ಸರ್ಕಾರದ ವಿರುದ್ಧ ಬರಹಗಳಿರುವ ಬೋರ್ಡ್‌ ಹಿಡಿದು ನಿಂತಿರುವ ಬಿಳಿ ಟೋಪಿಧಾರಿಗಳು. ಅವರ ಬಾಯಲ್ಲಿ ಭ್ರಷ್ಟಾಚಾರದ ವಿರುದ್ಧ ಆಕ್ರೋಶದ ಘೋಷಣೆಗಳು.

– ಇದು ಆಮ್‌ ಆದ್ಮಿ ಪಾರ್ಟಿಯು ಬೆಂಗಳೂರಿನಾದ್ಯಂತ ಹಮ್ಮಿಕೊಂಡಿದ್ದ ರಸ್ತೆಗುಂಡಿ ಹಬ್ಬ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯ. ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಹಾಗೂ ಬೆಂಗಳೂರು ನಗರದ ಅಧ್ಯಕ್ಷ ಮೋಹನ್‌ ದಾಸರಿ ನೇತೃತ್ವದಲ್ಲಿ ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ವಿನೂತನ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಎಎಪಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ, “ಬೆಂಗಳೂರಿನ ರಸ್ತೆಗಳ ದುರಸ್ತಿಗೆ ಕಳೆದ ಐದು ವರ್ಷಗಳಲ್ಲಿ ಬರೋಬ್ಬರಿ 20,060 ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರ ಖರ್ಚು ಮಾಡಿದೆ. ಆದರೆ ಇಲ್ಲಿನ ರಸ್ತೆಗಳು ಮಾತ್ರ ಶೋಚನೀಯ ಸ್ಥಿತಿಯಲ್ಲಿವೆ. ಗುಂಡಿಗಳಿಂದಾಗಿ ಅಪಘಾತಗಳು, ಸಾವುಗಳು ಸಾಮಾನ್ಯವಾಗಿದೆ. ಸರ್ಕಾರ ಬಿಡುಗಡೆ ಮಾಡಿದ ಹಣವು ಯಾರ ಜೇಬು ಸೇರಿದೆ ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕು. ರಸ್ತೆ ಅಭಿವೃದ್ಧಿ ಯೋಜನೆಗಳ ಅನುದಾನದ ಕುರಿತು ಸರ್ಕಾರ ಶ್ವೇತಪತ್ರ ಹೊರಡಿಸಬೇಕು” ಎಂದು ಆಗ್ರಹಿಸಿದರು.

ಎಎಪಿಯ ಬೆಂಗಳೂರು ನಗರಾಧ್ಯಕ್ಷ ಮೋಹನ್‌ ದಾಸರಿ ಮಾತನಾಡಿ, “ಕೇಂದ್ರ ಹಾಗೂ ರಾಜ್ಯ ಸರ್ಕಾರವು ವಾಹನ ಸವಾರರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಒಂದೆಡೆ, ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆಯನ್ನು ಹೆಚ್ಚಿಸಿ ವಾಹನ ಸವಾರರನ್ನು ಹೈರಾಣಾಗಿಸಿದೆ. ಮತ್ತೊಂದೆಡೆ, ರಸ್ತೆಗಳಿಗೆ ವಿನಿಯೋಗವಾಗಬೇಕಿದ್ದ ಹಣವನ್ನು ಜೇಬಿಗೆ ಇಳಿಸಿಕೊಂಡು ಶಾಸಕರು ಹಾಗೂ ಸಚಿವರು ಗುಂಡಿಗಳಿಗೆ ಕಾರಣವಾಗಿದ್ದಾರೆ. ಕಾಟಾಚಾರಕ್ಕೆ ಗುಂಡಿಗಳಿಗೆ ತೇಪೆ ಹಾಕಲಾಗುತ್ತಿದ್ದು, ಸಣ್ಣ ಮಳೆಗೂ ಅವು ಕಿತ್ತು ಹೋಗುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯನಗರ ಕ್ಷೇತ್ರದಲ್ಲಿ ಅರ್ಚನಾ, ಚಾಮರಾಜಪೇಟೆ ಕ್ಷೇತ್ರದಲ್ಲಿ ಜಗದೀಶ್‌ ಚಂದ್ರ, ಚಿಕ್ಕಪೇಟೆ ಕ್ಷೇತ್ರದಲ್ಲಿ ಪ್ರಕಾಶ್‌ ನಾಗರಾಜ್‌, ಗಾಂಧಿನಗರ ಕ್ಷೇತ್ರದಲ್ಲಿ ರಾಜಶೇಖರ್‌ ದೊಡ್ಡಣ್ಣ, ಗೋಪಿನಾಥ್, ಉಷಾ ಮೋಹನ್‌, ಯಲಹಂಕ ಕ್ಷೇತ್ರದಲ್ಲಿ ಸುಹಾಸಿನಿ ಫಣಿರಾಜ್‌, ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಪಲ್ಲವಿ ಚಿದಂಬರಂ, ಸಿ.ವಿ ರಾಮನ್‌ ಕ್ಷೇತ್ರದಲ್ಲಿ ಪ್ರಶಾಂತಿ, ಪುಲಿಕೇಶಿನಗರ ಕ್ಷೇತ್ರದಲ್ಲಿ ಸಶಾವಲ್ಲಿ, ಮೊಹಮ್ಮದ್‌ ಅಸದ್‌, ಮಹದೇವಪುರ ಕ್ಷೇತ್ರದಲ್ಲಿ ಅಶೋಕ್‌ ಮೃತ್ಯುಂಜಯ ಹಾಗೂ ಮುಖಂಡರಾದ ಜಗದೀಶ್‌ ಬಾಬು, ಆನಂದ್‌ ವಾಸುದೇವನ್‌, ರಾಜ್ಯ ಯುವ ಘಟಕದ ಅಧ್ಯಕ್ಷ ಮುಕುಂದ್‌ ಗೌಡ, ಬೆಂಗಳೂರು ಆಟೋ ಚಾಲಕರ ಘಟಕದ ಉಸ್ಮಾನ್‌ ಹಾಗೂ ಇನ್ನಿತರೆ ಮುಖಂಡರ ನೇತೃತ್ವದಲ್ಲಿ ರಸ್ತೆಗುಂಡಿ ಹಬ್ಬ ನೆರವೇರಿತು.

Key words: potholes – worship- Innovative -protest –AAP-bangalore

ENGLISH SUMMARY…

Potholes on Bengaluru roads: AAP takes out unique protest

Bengaluru, October 21, 2021 (www.justkannada.in): Members of the Aam Aadmi Party (AAP) today took out a unique protest against the potholes-filled roads in Bengaluru, by decorating a few potholes on the roads with rangoli, flowers, and also performed aarathi pooja.

The AAP members, led by AAP State Convener Prithvi Reddy and Bengaluru City President Mohan Dasari, took out the protest under the title ‘Rastegundi Habba’ (pothole festival) in all the assembly constituencies of the city.

Addressing the public during the protest AAP State Convener Prithvi Reddy said, “The State Government has spent a whopping sum of Rs. 20,060 crores on road repairs in Bengaluru in the last five years. But the condition of the roads in the capital city has remained the same. Road accidents and deaths have become common in the city nowadays. We demand the government to investigate so that the public will come to know where is all the taxpayers money flowing. The government should issue a white paper on the road development program funds,” he said.

Keywords: AAP/ Bengaluru/ unique protest/ pot holes