ಬೆಂಗಳೂರು:ಜೂ-26: ಹದಿನೈದನೇ ಹಣಕಾಸು ಆಯೋಗ ಕಳೆದ 2 ದಿನಗಳಿಂದ ರಾಜ್ಯ ಪ್ರವಾಸ ಮಾಡಿ ಅವಲೋಕನ ಮಾಡಿದ್ದು, ರಾಜ್ಯ ಸರ್ಕಾರದ ಉದಾಸೀನವನ್ನು ಬೊಟ್ಟು ಮಾಡಿ ತೋರಿಸಿದೆ. ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರವೂ ಕೇಂದ್ರದಿಂದ ತನ್ನ ನಿರೀಕ್ಷೆ ಏನು ಎಂದು ಹೇಳಿಕೊಳ್ಳುತ್ತ, ಅನುದಾನ ಕೊರತೆ ಬಗ್ಗೆ ಅಸಮಾಧಾನ ಹೊರಹಾಕಿದೆ.
ಮಂಗಳವಾರ ಸಭೆ ಬಳಿಕ ಮಾಧ್ಯಮಗಳಿಗೆ ವಿವರಣೆ ನೀಡಿದ ಆಯೋಗದ ಅಧ್ಯಕ್ಷ ಎನ್.ಕೆ.ಸಿಂಗ್ ಮತ್ತು ಸದಸ್ಯರು, ತಮ್ಮ ಪ್ರವಾಸದ ಅನುಭವಗಳನ್ನು ಸೂಕ್ಷ್ಮವಾಗಿ ಬಿಡಿಸಿಟ್ಟರು. ಕರ್ನಾಟಕವನ್ನು ವಿವಿಧ ವಿಚಾರಗಳಲ್ಲಿ ಹೊಗಳುತ್ತಲೇ ನಿರ್ಲಕ್ಷ್ಯಕ್ಕೊಳಗಾದ ವಿಚಾರ ಸರಿಪಡಿಸಿಕೊಳ್ಳುವಂತೆ ಎಚ್ಚರಿಸಿರುವುದಾಗಿ ವಿವರಿಸಿದರು.
ಸಿಎಂ ಎಚ್.ಡಿ.ಕುಮಾರಸ್ವಾಮಿ, ಡಿಸಿಎಂ ಡಾ.ಜಿ.ಪರಮೇಶ್ವರ್ ಸೇರಿ ಸಂಪುಟದ ಹಲವು ಸದಸ್ಯರು ಆಯೋಗದ ಸಭೆಗೆ ಹಾಜರಾಗಿ ತಮ್ಮ ಅಹವಾಲುಗಳನ್ನು ಪ್ರಸ್ತುತಪಡಿಸಿದರು. ಈ ಬೆಳವಣಿಗೆ ಆಯೋಗಕ್ಕೂ ಖುಷಿ ತಂದಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹೆಚ್ಚು ಮಂತ್ರಿಗಳು, ಅಧಿಕಾರಿಗಳು ಪೂರ್ವ ತಯಾರಿಯೊಂದಿಗೆ ಸಭೆಗೆ ಆಗಮಿಸಿ, ಸೂಕ್ತ ರೀತಿಯಲ್ಲಿ ಅಭಿಪ್ರಾಯ ಮಂಡಿಸಿದರು ಎಂದು
ಎನ್.ಕೆ. ಸಿಂಗ್ ಶ್ಲಾಘಿಸಿದರು. ಇದೇ ವೇಳೆ ದೇಶದ ತಲಾದಾಯಕ್ಕಿಂತ ರಾಜ್ಯದ ತಲಾದಾಯ ಪ್ರಮಾಣ ಉತ್ತಮ ಮಟ್ಟದಲ್ಲಿದ್ದರೂ, ಬಡವರ ಪ್ರಮಾಣ ಹೆಚ್ಚಿರುವುದಕ್ಕೆ ಆಯೋಗ ಅತೃಪ್ತಿ ವ್ಯಕ್ತಪಡಿಸಿದೆ. ಸ್ಟಾರ್ಟ್ ಅಪ್, ಐಟಿ ಕ್ಯಾಪಿಟಲ್, ಮೆಟ್ರೋಪಾಲಿಟನ್ ಇರುವ ಕರ್ನಾಟಕ ಒಂದೆಡೆಯಾದರೆ, ಹೆಚ್ಚಿನ ಬಡವರನ್ನು ಹೊಂದಿರುವ ಕರ್ನಾಟಕ ನಮಗೆ ಕಾಣಿಸುತ್ತಿದೆ. ಈ ತಾರತಮ್ಯ ಸರಿಯಲ್ಲ ಎಂದು ಸಿಂಗ್ ಅಭಿಪ್ರಾಯಪಟ್ಟರು.
ರಾಜಸ್ಥಾನದಲ್ಲೂ ಬರವಿದ್ದರೂ ಅಲ್ಲಿ ಕೃಷಿ ಕ್ಷೇತ್ರ ಶೇ.3 ಅಭಿವೃದ್ಧಿಯಾಗಿದೆ. ಆದರೆ ಚಿರಾಪುಂಜಿ ನಂತರ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಹೊಂದಿರುವ ಕರ್ನಾಟದಲ್ಲಿ ಮಳೆಯಾಶ್ರಿತ ಕೃಷಿಗೆ ಅವಕಾಶ ಇದ್ದರೂ ಶೇ.0.3 ಪ್ರಗತಿ ಕುಂಠಿತವಾಗಿದೆ. ಇದು ಕಳವಳಕಾರಿ ಸಂಗತಿ ಎಂದು ಸಿಂಗ್ ಹೇಳಿದರು. ಹಲವು ನೀರಾವರಿ ಯೋಜನೆಗಳು ಪೂರ್ತಿಗೊಂಡಿಲ್ಲ, ಇದರ ಬಗ್ಗೆ ಸರ್ಕಾರ ಆದ್ಯತೆ ನೀಡಬೇಕಾಗಿದೆ. ಶಿಕ್ಷಣ, ಮಕ್ಕಳ ರಕ್ತಹೀನತೆ ವಿಚಾರದಲ್ಲಿ ಸರ್ಕಾರ ಇನ್ನಷ್ಟು ಮುತುವರ್ಜಿ ವಹಿಸುವ ಅಗತ್ಯವಿದೆ ಎಂದು ಆಯೋಗ ಸರ್ಕಾರಕ್ಕೆ ತಿಳಿಹೇಳಿದೆ ಎಂದರು.
ಗಮನಹರಿಸಿದ ಅಂಶಗಳು
2018-19ರಲ್ಲಿ ದೇಶದ ಜಿಡಿಪಿಗೆ ರಾಜ್ಯದ ಕೊಡುಗೆ ಶೇ.7.9 ಆಗಿತ್ತು.
2018-19ರಲ್ಲಿ ಭಾರತದ ಅಂದಾಜು ತಲಾದಾಯ ರೂ.1,26,406 ಇದ್ದರೆ ರಾಜ್ಯದ ತಲಾದಾಯ 2,07,062 ರೂ. ಆಗಿದೆ.
2016-17ರಲ್ಲಿ ಛತ್ತೀಸ್ಗಡ ಮತ್ತು ತೆಲಂಗಾಣದ ನಂತರ ಜಿಎಸ್ಡಿಪಿ ಅನುಪಾತಕ್ಕೆ ಶೇ.7.2ರ ಜತೆ ಮೂರನೇ ಅತಿ ದೊಡ್ಡ ಸ್ವಂತ ತೆರಿಗೆ ಆದಾಯ ಹೊಂದಿದೆ.
ಛತ್ತೀಸ್ಗಡ, ಅಸ್ಸಾಂ ಮತ್ತು ಮಹಾರಾಷ್ಟ್ರದ ಬಳಿಕ ನಾಲ್ಕನೇ ಅತಿ ಕಡಿಮೆ ಸಾಲ ಪಡೆದ ರಾಜ್ಯವಾಗಿದೆ.
ಬಹುತೇಕ ಎಲ್ಲ ಆರೋಗ್ಯ ಸೂಚಕಗಳಲ್ಲಿ ಅಖಿಲ ಭಾರತ ಸರಾಸರಿಗಿಂತಲೂ ಕರ್ನಾಟಕ ಉತ್ತಮ ಕಾರ್ಯಕ್ಷಮತೆ ಹೊಂದಿದೆ.
ರಾಜ್ಯದ ತೆರಿಗೆಯೇತರ ಆದಾಯ ಕೊಂಚ ಇಳಿದಿದೆ. ಬಜೆಟೇತರ ಸಾಲ 2011-12ರಲ್ಲಿದ್ದ 1,853.62 ಕೋಟಿ ರೂ.ನಿಂದ 2017-18ರಲ್ಲಿ 13,173.44ಕ್ಕೆ ಏರಿದೆ.
2018-19ರಲ್ಲಿ ಕರ್ನಾಟಕದಲ್ಲಿ 12,407.75 ಕೋಟಿ ರೂ. ಜಿಎಸ್ಟಿ ಆದಾಯದ ಕೊರತೆ ಕಂಡುಬಂದಿತ್ತು, ಇದು ಹಿಂದಿಗಿಂತ ಶೇ.23ಕ್ಕಿಂತ ಅಧಿಕ ಕೊರತೆಯಾಗಿತ್ತು.
ರಾಜ್ಯದ ಬೇಡಿಕೆ ಏನು?
್ಝ್ಯಾಟ್ನ ರಚನಾತ್ಮಕ ದರಗಳು ಜಿಎಸ್ಟಿ ದರಗಳಿಗಿಂತ ಉತ್ತಮವಾಗಿದ್ದುದರಿಂದ ಜಿಎಸ್ಟಿ ಆದಾಯ ನಿರೀಕ್ಷೆಯಂತೆ ಹೆಚ್ಚೇನೂ ಆಗಿಲ್ಲ. ್ಝೇಂದ್ರೀಯ ಪ್ರಾಯೋಜಿತ ಯೋಜನೆಗಳ ರಾಜ್ಯ ಪಾಲನ್ನು ಕಡಿತ ಮಾಡುತ್ತಿರುವುದರಿಂದ ರಾಜ್ಯದ ಮೇಲೆ ಹೊರೆ ಹೆಚ್ಚಾಗುತ್ತಿದೆ. ್ಝಸ್ಡಿಆರ್ಎಫ್ ಅನುದಾನ ಹೆಚ್ಚಿಸುವ ಅಗತ್ಯವಿದೆ. ್ಝ,42,260 ಕೋಟಿ ರೂ. ಮೊತ್ತದ ವಿಶೇಷ ಅನುದಾನ ನೀಡಬೇಕು. ್ಝದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಬೆಂಗಳೂರಿಗೆ ವಿಶೇಷ ನಿಧಿ ನೀಡಬೇಕು.
ಪ್ರಾದೇಶಿಕ ಅಸಮಾನತೆ
ಆರ್ಥಿಕ ತಜ್ಞರ ಜತೆ ಸಂವಾದ ನಡೆಸಿದ ಆಯೋಗ, ವಿವಿಧ ಕಾರ್ಯಕ್ಷಮತೆ ಸೂಚಕಗಳಲ್ಲಿ ರಾಜ್ಯಗಳನ್ನು ಉತ್ತೇಜಿಸುವ ಕುರಿತ ವಿಷಯಗಳ ಬಗ್ಗೆ ರ್ಚಚಿಸಿತು. ರಾಜ್ಯದಲ್ಲಿ ದೊಡ್ಡ ಪ್ರಮಾಣದ ಪ್ರಾದೇಶಿಕ ಅಸಮತೋಲನ ಇರುವುದನ್ನೂ ಒತ್ತಿ ಹೇಳಿದರು. ಮೂಲಸೌಕರ್ಯ ವಿಚಾರದಲ್ಲಿ ಕಂದಕವಿದೆ ಎಂಬ ಅಭಿಪ್ರಾಯ ಕೇಳಿಬಂದಿದ್ದು, ನಗರ ಸ್ಥಳೀಯ ಸಂಸ್ಥೆಗಳಿಗೆ ಹಣಕಾಸಿನ ಅಗತ್ಯ ಹೆಚ್ಚಿಸುವ ಬಗ್ಗೆ ತಜ್ಞರು ಗಮನ ಸೆಳೆದರು. ತಜ್ಞರು, ಆಯೋಗದಿಂದ 2011ರ ಜನಗಣತಿಯ ಜನಸಂಖ್ಯೆ ದತ್ತಾಂಶ ಬಳಸುವ ವಿಷಯ ಪ್ರಸ್ತಾಪಿಸಿದರು. ಬಹುತೇಕ ತಜ್ಞರು, ರಾಜ್ಯಗಳ ಪ್ರಸಕ್ತ ಅಗತ್ಯವನ್ನು ಪ್ರತಿನಿಧಿಸುವ ಇತ್ತೀಚಿನ ಜನಸಂಖ್ಯೆಯ ದತ್ತಾಂಶ ಬಳಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಅದಾಗ್ಯೂ ಉತ್ತಮವಾಗಿ ಜನಸಂಖ್ಯಾ ನಿಯಂತ್ರಣ ಮಾಡಿರುವ ರಾಜ್ಯಗಳಿಗೆ ಪೋ›ತ್ಸಾಹಕಗಳನ್ನು ವಿನ್ಯಾಸಗೊಳಿಸಬೇಕು ಎಂದಿದ್ದು ವಿಶೇಷವಾಗಿತ್ತು.
ದೇಶದ ಅಭಿವೃದ್ಧಿ ಯಲ್ಲಿ ಕರ್ನಾಟಕ ಇಂಜಿನ್ ಇದ್ದಂತೆ. ಇಲ್ಲಿ ತಲಾದಾಯ ಹೆಚ್ಚಿದ್ದರೂ ಅಸಮಾನತೆ ಇದೆ. ಕೃಷಿ, ಶಿಕ್ಷಣ, ನೀರಾವರಿ ಬಗ್ಗೆ ಹೆಚ್ಚಿನ ಒತ್ತು ಕೊಡಬೇಕಿದೆ.
| ಎನ್.ಕೆ.ಸಿಂಗ್, 15ನೇ ಹಣಕಾಸು ಆಯೋಗದ ಅಧ್ಯಕ್ಷ
ಸಬ್ಸಿಡಿಗೆ ಕೊಕ್?
ರಾಜ್ಯದಲ್ಲಿ ವಿದ್ಯುತ್ ಸಬ್ಸಿಡಿ 1200 ಕೋಟಿ ರೂ. ನೀಡಲಾಗುತ್ತಿದೆ. ಅದನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಫಲಾನುಭವಿ ಖಾತೆಗೆ ನೇರವಾಗಿ ಜಮಾ ಮಾಡುವ ಕುರಿತು ಸಭೆಯಲ್ಲಿ ಆಯೋಗ ಅಭಿಪ್ರಾಯ ವ್ಯಕ್ತಪಡಿಸಿದೆ. ಅದೇ ರೀತಿ ನೀರಿನ ಸಬ್ಸಿಡಿ ಬಗ್ಗೆಯೂ ಚರ್ಚೆಯಾಗಿದೆ.
ಕೃಪೆ:ವಿಜಯವಾಣಿ