ಬೆಂಗಳೂರು,ಮಾರ್ಚ್,7,2023(www.justkannada.in): ಬಿಜೆಪಿಯವರು ಈ ಬಾರಿ ಹಣದ ಮೂಲಕ ಅಧಿಕಾರ ಹಿಡಿಯಲು ಹೊರಟಿದ್ದಾರೆ. ಬಿಜೆಪಿಯವರ ಬಳಿ ಟನ್ ಗಟ್ಟಲೆ ಲೂಟಿ ಮಾಡಿರುವ ಹಣ ಇದೆ. ಕಳೆದ 4 ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳನ್ನೇ ಮಾಡದೆ ಬರೀ ಲೂಟಿ ಹೊಡೆದಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಆರೋಪಿಸಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಇಂದು ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು, ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು ಹೇಳಿದ್ದಿಷ್ಟು..
ಕಾಂಗ್ರೆಸ್ ಪಕ್ಷ ದೇಶದ ಎಲ್ಲಾ ಧರ್ಮಗಳನ್ನು, ಜಾತಿಯ ಜನರನ್ನು ಸಮಾನವಾಗಿ ಕಾಣುವ ಪಕ್ಷ. ಬಾಬಾ ಸಾಹೇಬರು ನೀಡಿರುವ ಸಂವಿಧಾನದವನ್ನು ಗೌರವಿಸಿ, ಅಧಿಕಾರ ಸಿಕ್ಕಾಗ ಅದರ ಧ್ಯೇಯೋದ್ದೇಶಗಳನ್ನು ಈಡೇರಿಸುವ ಕೆಲಸ ಮಾಡಿಕೊಂಡು ಬಂದಿದೆ. ಬಿಜೆಪಿ ಮತ್ತು ಜೆಡಿಎಸ್ ಗೆ ನಮ್ಮ ಸಂವಿಧಾನದ ಬಗ್ಗೆ ಗೌರವ ಇಲ್ಲ. ಗೋಲ್ವಾಲ್ಕರ್, ಸಾವರ್ಕರ್ ಅವರ ಭಾಷಣಗಳು ಮತ್ತು ಬರಹಗಳನ್ನು ನೋಡಿದರೆ ಅವರಿಗೆ ಸಂವಿಧಾನದ ಬಗ್ಗೆ ಯಾವ ಗೌರವವೂ ಇರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಬಿಜೆಪಿ ಶ್ರೀಮಂತ ಜನರ ಪಕ್ಷ, ಅವರು ತಳ ಸಮುದಾಯದ ಜನರ ಬಗ್ಗೆಯಾಗಲೀ, ನಾಡಿನ ಅಭಿವೃದ್ಧಿ ಬಗ್ಗೆಯಾಗಲೀ ಚಿಂತನೆ ಮಾಡುವುದಿಲ್ಲ ಎಂದು ದೂರಿದರು.
ಕಳೆದ ಕೆಲವು ದಿನಗಳ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡುವಾಗ “ಅಭಿವೃದ್ಧಿ ವಿಚಾರಗಳ ಬಗ್ಗೆ ಮಾತನಾಡಬೇಡಿ, ಲವ್ ಜಿಹಾದ್ ಬಗ್ಗೆ ಮಾತನಾಡಿ” ಎಂದು ಫರ್ಮಾನು ಹೊರಡಿಸಿದ್ದಾರೆ. ಎರಡು ಲೋಕಸಭಾ ಚುನಾವಣೆಯಲ್ಲಿ ಹಿಂದುತ್ವದ ವಿಚಾರಗಳನ್ನು ಇಟ್ಟುಕೊಂಡು ಭಾವನಾತ್ಮಕವಾಗಿ ಮತ ಪಡೆದಿದ್ದಾರೆ, ಆದರೆ ಈ ಚುನಾವಣೆಯಲ್ಲಿ ಹಿಂದುತ್ವ ಕೆಲಸ ಮಾಡುವುದಿಲ್ಲ ಎಂಬುದು ಅವರಿಗೆ ಅರಿವಾಗಿದೆ. ಹಾಗಾಗಿ ಈ ಬಾರಿ ಹಣದ ಮೂಲಕ ಅಧಿಕಾರ ಹಿಡಿಯಲು ಹೊರಟಿದ್ದಾರೆ. ಬಿಜೆಪಿಯವರ ಬಳಿ ಟನ್ ಗಟ್ಟಲೆ ಲೂಟಿ ಮಾಡಿರುವ ಹಣ ಇದೆ. ಕಳೆದ 4 ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳನ್ನೇ ಮಾಡದೆ ಬರೀ ಲೂಟಿ ಹೊಡೆದಿದ್ದಾರೆ.
ರಾಜ್ಯ ಗುತ್ತಿಗೆದಾರರ ಸಂಘದವರು, ರುಪ್ಸಾದವರು, ದಿಂಗಾಲೇಶ್ವರ ಶ್ರೀಗಳು ಹಾಗೂ ನಾವು ಈ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡಿದರೆ ಬೊಮ್ಮಾಯಿ ಅವರು ದಾಖಲೆ ಕೇಳುತ್ತಾರೆ, ಹಿಂದೆಯೂ ಭ್ರಷ್ಟಾಚಾರ ನಡೆದಿರಲಿಲ್ವಾ ಎಂದು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಉದಾಹರಣೆ ಎಂದರೆ ನಮ್ಮ ಸರ್ಕಾರ ಭ್ರಷ್ಟಾಚಾರದಿಂದ ರಕ್ಷಣೆ ಪಡೆಯಲು ಎಸಿಬಿ ರಚನೆ ಮಾಡಿ, ಲೋಕಾಯುಕ್ತ ಮುಚ್ಚಿದ್ದರು ಎಂದು ಸುಳ್ಳು ಹೇಳುತ್ತಿರುವುದು. ನಾವು ಲೋಕಾಯುಕ್ತವನ್ನು ಮುಚ್ಚಿಯೂ ಇರಲಿಲ್ಲ, ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿಯನ್ನೂ ತಂದಿರಲಿಲ್ಲ. ಲೋಕಾಯುಕ್ತರ ಮನೆಯಲ್ಲೇ ಭ್ರಷ್ಟಾಚಾರ ನಡೆಯುತ್ತಿತ್ತು ಎಂಬ ಬಗ್ಗೆ ವರದಿಗಳು ಬಂದಿದ್ದರಿಂದ ಎಸಿಬಿ ರಚನೆ ಮಾಡಿದ್ದೆವು, ಇದನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಎಸಿಬಿ ಬೇಡ, ರದ್ದು ಮಾಡಿ ಎಂದು ಆದೇಶ ನೀಡಿತ್ತು. ಎಸಿಬಿ ರದ್ದು ಮಾಡಿದ್ದು ಹೈಕೋರ್ಟ್, ಬಿಜೆಪಿ ಸರ್ಕಾರ ಅಲ್ಲ. ಬಿಜೆಪಿಯವರು ಚುನಾವಣೆಗೆ ಮೊದಲು ನಾವು ಅಧಿಕಾರಕ್ಕೆ ಬಂದ ಕೂಡಲೇ ಎಸಿಬಿ ರದ್ದು ಮಾಡುತ್ತೇವೆ ಎಂದು ಭರವಸೆ ನೀಡಿದ್ದರು, ಆದರೆ ಅಧಿಕಾರಕ್ಕೆ ಬಂದು 3 ವರ್ಷಗಳು ಕಳೆದರೂ ಎಸಿಬಿಯನ್ನು ರದ್ದು ಮಾಡಿರಲಿಲ್ಲ. ಯಾಕೆಂದರೆ ಇವರಿಗೂ ಎಸಿಬಿ ಬೇಕಾಗಿತ್ತು. ಬಿಜೆಪಿ ಅಧಿಕಾರದಲ್ಲಿರುವ ಅನೇಕ ರಾಜ್ಯಗಳಲ್ಲಿ ಎಸಿಬಿ ಮತ್ತು ಲೋಕಾಯುಕ್ತ ಎರಡೂ ಇವೆ. ಉತ್ತರ ಪ್ರದೇಶ, ಗೋವಾ, ಗುಜರಾತ್, ಮಧ್ಯಪ್ರದೇಶ ಇಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಎಸಿಬಿ ಮತ್ತು ಲೋಕಾಯುಕ್ತ ಹೀಗೆ ಎರಡೂ ತನಿಖಾ ಸಂಸ್ಥೆಗಳಿವೆ, ಇಲ್ಲಿ ಯಾಕೆ ರದ್ದು ಮಾಡಿಲ್ಲ? ಇವರ ಉದ್ದೇಶ ಎಸಿಬಿ ರದ್ದು ಮಾಡಿರುವುದಾಗಿರಲಿಲ್ಲ ಎಂದು ಬಿಜೆಪಿಗೆ ಸಿದ್ಧರಾಮಯ್ಯ ಟಾಂಗ್ ನೀಡಿದರು.
ಎಸಿಬಿ ರದ್ದು ಮಾಡಿ ಎಂದು ಸಲ್ಲಿಸಿದ್ದ ಮನವಿ ಬಗ್ಗೆ ರಾಜ್ಯದ ಅಡ್ವೋಕೇಟ್ ಜನರಲ್ ಅವರು ಕೋರ್ಟ್ ನಲ್ಲಿ ಹಿಂದಿನ ಸರ್ಕಾರ ಎಸಿಬಿ ರಚನೆ ಮಾಡಿರುವುದು ಸರಿ ಎಂದು ನಮ್ಮ ಸರ್ಕಾರದ ಎಸಿಬಿ ರಚನೆಯ ಸಮರ್ಥನೆ ಮಾಡಿದ್ದಾರೆ. ಬರೀ ಕರ್ನಾಟಕ ಮಾತ್ರವಲ್ಲ ದೇಶದ 16 ರಾಜ್ಯಗಳಲ್ಲಿ ಎಸಿಬಿ ಇದೆ ಎಂದು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ. ಅಡ್ವೊಕೇಟ್ ಜನರಲ್ ಅವರ ನಿಲುವು ಎಂದರೆ ಅದು ಸರ್ಕಾರದ ನಿಲುವು. ಕೋರ್ಟ್ ನಲ್ಲಿ ಎಸಿಬಿಯನ್ನು ಸಮರ್ಥಿಸಿಕೊಂಡು, ಹೊರಗೆ ನಾವು ಎಸಿಬಿ ರದ್ದು ಮಾಡಿದ್ದೇವೆ ಎಂದು ಸುಳ್ಳು ಹೇಳುವುದು ಆತ್ಮವಂಚನೆಯಾಗುತ್ತದೆ. ನಮ್ಮ ಸರ್ಕಾರದ ಅವಧಿಯಲ್ಲಿ ವಿಶ್ವನಾಥ್ ಶೆಟ್ಟಿ ಅವರು ಲೋಕಾಯುಕ್ತರಾಗಿದ್ದರು. ಲೋಕಾಯುಕ್ತ ಎಲ್ಲಿ ರದ್ದಾಗಿತ್ತು? ಎಂದು ಸಿದ್ಧರಾಮಯ್ಯ ಪ್ರಶ್ನೆ ಹಾಕಿದರು.
ಸರ್ಕಾರದ ಭ್ರಷ್ಟಾಚಾರಕ್ಕೆ ದಾಖಲೆ ಕೇಳುತ್ತಿದ್ದವರಿಗೆ ಮಾಡಾಳ್ ವಿರೂಪಾಕ್ಷಪ್ಪ ಅವರ ಮಗ ಲಂಚದ ಹಣದ ಸಮೇತ ಸಿಕ್ಕಿಬಿದ್ದಿರುವುದು ಸಾಕ್ಷಿ. ಒಬ್ಬ ಶಾಸಕನ ಮಗನ ಮನೆಯಲ್ಲಿ 8 ಕೋಟಿ ಭ್ರಷ್ಟ ಹಣ ಸಿಕ್ಕಿದೆ ಎಂದರೆ ಇನ್ನು ಇಡೀ ಸರ್ಕಾರ ಎಷ್ಟು ಲೂಟಿ ಮಾಡಿರಬಹುದು. ಈ ಪ್ರಕರಣದಿಂದ ರಾಜ್ಯದಲ್ಲಿ 40% ಕಮಿಷನ್ ನಡೆಯುತ್ತಿದೆ ಎಂಬುದು ಸಾಬೀತಾಗಿದೆ. ನಿಮ್ಮದು 40% ಕಮಿಷನ್ ಸರ್ಕಾರ ಎಂದು ಹೇಳಲು ಇದಕ್ಕಿಂತ ಬೇರೆ ಯಾವ ಸಾಕ್ಷಿ ಬೇಕು ಬೊಮ್ಮಾಯಿ ಅವರೇ? ನಿಮಗೇನಾದರೂ ನೈತಿಕತೆ ಇದ್ದರೆ ಈ ಕೂಡಲೇ ರಾಜೀನಾಮೆ ನೀಡಬೇಕು. ಸಂತೋಷ್ ಪಾಟೀಲ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಈಶ್ವರಪ್ಪ ರಾಜೀನಾಮೆ ನೀಡಿದ್ರು, ಇನ್ನೊಬ್ಬ ಗುತ್ತಿಗೆದಾರ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದರು. ಇವು ಸಾಕ್ಷಿ ಅಲ್ಲವಾ? ಎಂದು ಬಿಜೆಪಿ ಸರ್ಕಾರದ ವಿರುದ್ದ ಸಿದ್ಧರಾಮಯ್ಯ ಗುಡುಗಿದರು.
ಸರ್ಕಾರ ವಿರೂಪಾಕ್ಷಪ್ಪ ಅವರ ರಕ್ಷಣೆ ಮಾಡುತ್ತಿದೆ. ಅವರನ್ನು ಈ ಕೂಡಲೇ ಬಂಧಿಸಬೇಕು ಎಂದು ಒತ್ತಾಯ ಮಾಡುತ್ತೇನೆ. ರಾಜೀನಾಮೆ ಕೊಡಲು ಬಂದ ದಿನವೇ ಅವರ ಬಂಧನ ಆಗಬೇಕಿತ್ತು. ಈಗಲೂ ಅವರು ಬೆಂಗಳೂರಿನಲ್ಲಿದ್ದುಕೊಂಡೇ ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಇಂಥಾ ಭ್ರಷ್ಟ ಸರ್ಕಾರವನ್ನು ಕಿತ್ತುಹಾಕಲೇಬೇಕು. ಇಂದು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿರುವ ಎಲ್ಲಾ ನಾಯಕರು ಅತ್ಯಂತ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ಮುಖ್ಯವಾಗಿ ದಲಿತರು ಬಿಜೆಪಿಯ ಕಡೆಗೆ ಮುಖವನ್ನೇ ಹಾಕಬಾರದು. ಅವರು ಮನುವಾದಿಗಳು, ಬಿಜೆಪಿ ಎಂದಿಗೂ ದಲಿತರ ಹಿತದ ಬಗ್ಗೆ ಯೋಚನೆ ಮಾಡಿದ ಪಕ್ಷವಲ್ಲ ಎಂದು ಟೀಕಿಸಿದರು.
Key words: power – money-BJP – Former CM- Siddaramaiah.