ಮೈಸೂರು,ಮೇ,24,2024 (www.justkannada.in): ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ವಿಚಾರಣೆಗೆ ಒಳಪಡಿಸಿ ಎಂಬ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿ ಡಿಸಿಎಂ ಡಿಕೆ ಶಿವಕುಮಾರ್ ಪರ ಬ್ಯಾಟ್ ಬೀಸಿದ ಸಿಎಂ ಸಿದ್ದರಾಮಯ್ಯ, ಪ್ರಜ್ವಲ್ ರೇವಣ್ಣ ವಿರುದ್ದ ರೇಪ್, ಲೈಂಗಿಕ ಕಿರುಕುಳದಂತಹ ಗಂಭೀರ ಆರೋಪಗಳಿವೆ. ಈ ವಿಚಾರವನ್ನು ಡೈವರ್ಟ್ ಮಾಡಲು ಕುಮಾರಸ್ವಾಮಿ ಅವರು ಡಿಕೆಶಿ ಹೆಸರು ಹೇಳುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಅಪರಾಧಿ ಅಲ್ಲ ಆರೋಪಿ ಅಂತ ಹೇಳಿದ್ದಾರೆ. ನಾನೂ ಅದನ್ನೇ ಹೇಳುತ್ತೇನೆ. ನಾನು ಆರೋಪಿ ಅಂತಲೇ ಹೇಳುತ್ತಿರುವುದು ಎಂದು ತಿಳಿಸಿದರು.
ದೇವೇಗೌಡರ ಕುಟುಂಬದಿಂದ ಪ್ರಜ್ವಲ್ ಹೊರಹಾಕುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ದೇವೇಗೌಡರು ಹಾಗೂ ಅವರ ಮನೆಯವರಿಗೆ ಗೊತ್ತಿಲ್ಲದೇ ಮನೆಯಿಂದ ಹೋಗಿದ್ದಾನಾ..? ಪ್ರಜ್ವಲ್ ಅವರ ಕುಟುಂಬದವರ ಸಂಪರ್ಕದಲ್ಲಿ ಇಲ್ಲವಾ? ಪ್ರಜ್ವಲ್ ಪರ ಪ್ರಚಾರಕ್ಕೆ ಹೋದಾಗ ನನ್ನ ಮಗ ಎಂದಿದ್ದರು. ಆ ಹೇಳಿಕೆ ಅವರ ಸಂಪರ್ಕದಲ್ಲಿ ಇದ್ದ ಹಾಗೆ ಅಲ್ವ ? ಪ್ರಜ್ವಲ್ ವಿಚಾರ ಅವರ ಕುಟುಂಬಕ್ಕೆ ಎಲ್ಲವೂ ಗೊತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವಿಡಿಯೋ ಪ್ರಕರಣ ಕುರಿತು ಒಂದಲ್ಲ , ಎರಡು ಬಾರಿ ಪ್ರಧಾನಿಗೆ ಪತ್ರ ಬರೆದಿದ್ದೇನೆ. ಆದರೆ ಈವರಗೆ ಯಾವುದೇ ಉತ್ತರ ಬಂದಿಲ್ಲ. ಪ್ರಧಾನಿ ಕಚೇರಿಗೆ ಪತ್ರ ಬರೆದರೆ ಉತ್ತರ ಬಂದೇ ಬರುತ್ತದೆ ಎನ್ನುವ ಅಭಿಪ್ರಾಯ ನಿಮ್ಮ ತಪ್ಪು ತಿಳುವಳಿಕೆ. ಹಾಗಂತ ಪ್ರಧಾನಿ ಮೋದಿ ಸೆಲೆಕ್ಟಿವ್ ಆಗಿದ್ದಾರೆ ಅಂತ ನಾನು ಹೇಳಲ್ಲ. ಒಬ್ಬ ಸಿಎಂ ಆಡಳಿತ ಪಕ್ಷ ಪ್ರಧಾನಿಗೆ ಪತ್ರ ಬರೆದರೆ ಉತ್ತರ ಕೊಡಬೇಕಿತ್ತು. ಆದರೆ ಅವರು ಉತ್ತರ ಕೊಡುವ ಕೆಲಸ ಮಾಡಿಲ್ಲ. ಯಾಕೆ ಕೊಟ್ಟಿಲ್ಲ ಎಂಬುದನ್ನು ನೀವು ಅವರನ್ನೇ ಕೇಳಿ. ಬಿಜೆಪಿಯ ಪ್ರಹ್ಲಾದ್ ಜೋಶಿಯನ್ನು ಕೇಳಿ ಎಂದು ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟರು.
ಯತೀಂದ್ರ ಸಿದ್ದರಾಮಯ್ಯಗೆ ಪರಿಷತ್ ಟಿಕೆಟ್ ವಿಚಾರ: ವರಿಷ್ಠರು ಏನು ಮಾಡುತ್ತಾರೆ ಗೊತ್ತಿಲ್ಲ..
ಯತೀಂದ್ರ ಸಿದ್ದರಾಮಯ್ಯಗೆ ಪರಿಷತ್ ಟಿಕೆಟ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನಾನು ಕೋಲಾರದಿಂದ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೆ. ಹೈಕಮಾಂಡ್ ಕೋಲಾರ ಬೇಡ ವರುಣದಿಂದ ಸ್ಪರ್ಧೆ ಮಾಡಿ ಅಂತ ಹೇಳಿದ್ರು. ಆಗ ಯತೀಂದ್ರ ಸಿಟ್ಟಿಂಗ್ ಎಂಎಲ್ ಎ ಆಗಿದ್ರು. ಹೈಕಮಾಂಡ್ ಯತೀಂದ್ರಗೆ ಸೀಟು ಬಿಟ್ಟುಕೊಡಿ ಮುಂದೆ ನಿಮ್ಮನ್ನ ಎಂಎಲ್ ಸಿ ಮಾಡ್ತೇವೆ ಅಂತ ಹೇಳಿದರು. ಈಗ ಅವರು ಏನು ಮಾಡುತ್ತಾರೆ ಅಂತ ಗೊತ್ತಿಲ್ಲ ಎಂದರು.
ಲೋಕಸಭೆ ಚುನಾವಣೆ ಮುಗಿದ ಕೂಡಲೇ ಜಿಪಂ, ತಾಪಂ, ಬಿಬಿಎಂಪಿ ಚುನಾವಣೆ.
ಲೋಕಸಭೆ ಚುನಾವಣೆ ಮುಗಿದ ಕೂಡಲೇ ಜಿಪಂ, ತಾಪಂ, ಬಿಬಿಎಂಪಿ ಚುನಾವಣೆ ನಡೆಸಲಾಗುತ್ತದೆ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗೆ ಚುನಾವಣೆ ನಡೆಸಲು ನಾವು ತಯಾರಿದ್ದೇವೆ. ಲೋಕಸಭೆ ಚುನಾವಣೆ ನೀತಿ ಸಂಹಿತೆ ಮುಗಿದ ಕೂಡಲೇ ಚುನಾವಣೆ ಮಾಡುತ್ತೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಗತ್ಯವಾದ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಮೊದಲು ಕ್ಷೇತ್ರ ಪುನರ್ ವಿಂಗಡಣೆ ಆಗುತ್ತೆ. ನಂತರ ಮೀಸಲಾತಿ ಪ್ರಕಟಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
Key words: Prajwal, pen drive, case, CM Siddaramaiah, HDK