ಬಂಡೀಪುರದಲ್ಲಿ ರಾತ್ರಿ ವಾಹನಗಳ ಸಂಚಾರ ನಿಷೇಧ ತೆರವು ಬೇಡ: ಪ್ರಮೋದಾದೇವಿ ಒಡೆಯರ್

ಮೈಸೂರು,ಏಪ್ರಿಲ್,14,2025 (www.justkannada.in):  ಬಂಡೀಪುರದಲ್ಲಿ ರಾತ್ರಿಯ ವೇಳೆ ವಾಹನಗಳ ಸಂಚಾರ ನಿಷೇಧ ಮುಂದುವರೆಯಬೇಕು. ನಿಷೇಧ ತೆರವುಗೊಳಿಸುವುದು ಬೇಡ ಎಂದು  ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಆಗ್ರಹಿಸಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮೋದಾದೇವಿ ಒಡೆಯರ್,  ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರ ನಿಷೇಧವಿದ್ದು, ಯಾವುದೇ ಕಾರಣಕ್ಕೂ ತೆರವಾಗಬಾರದು. ಈಗಾಗಲೇ ರಾತ್ರಿ ಒಂಬತ್ತು ಗಂಟೆಯವರೆಗೂ ವಾಹನಗಳ ಸಂಚಾರಕ್ಕೆ ಅವಕಾಶವಿದೆ. ಬೆಳಿಗ್ಗೆಯಿಂದ ರಾತ್ರಿ‌ 9 ಗಂಟೆಯವರೆಗೂ ಅವಕಾಶವಿದ್ದ ಮೇಲೆ ರಾತ್ರಿ ವೇಳೆ ಏಕೆ ಅವಕಾಶ ಕೊಡಬೇಕು. ರಾತ್ರಿ ಒಂಬತ್ತು ಗಂಟೆ ಆದ ಮೇಲೆ ಯಾರು ಓಡಾಡುವುದಿಲ್ಲ.  ರಾತ್ರಿ ವೇಳೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿದರೆ ಅರಣ್ಯ ಮತ್ತು ಪ್ರಾಣಿ ಸಂಕುಲಕ್ಕೆ ತೊಂದರೆಯಾಗುತ್ತದೆ‌. ಹಾಗಾಗಿ ಬಂಡೀಪುರ ಅರಣ್ಯದಲ್ಲಿ ರಾತ್ರಿ ವೇಳೆ ಸಂಚಾರ ನಿಷೇಧ ತೆರವು ಮಾಡಬಾರದು. ಈಗ ಇರುವ ನಿಷೇಧ ಮುಂದುವರೆಯಬೇಕು ಎಂದು ಹೇಳಿದರು.

ಎಸ್ ಪಿ ಕಚೇರಿ  ಬಳಿ ರಸ್ತೆಯಲ್ಲಿ ಮರಗಳ ಹನನ: ಪ್ರಮೋದಾದೇವಿ ಒಡೆಯರ್ ಬೇಸರ

ಮೈಸೂರಿನ ಎಸ್ ಪಿ ಕಚೇರಿ ಸನಿಹದ ರಸ್ತೆಯಲ್ಲಿ ರಾತ್ರೋರಾತ್ರಿ ಬೃಹದಾಕಾರದ ಮರಗಳನ್ನು ಕಡಿದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಮರಗಳನ್ನು ಬೆಳೆಸಲು ಹಲವಾರು ವರ್ಷಗಳ ಕಾಲ ತುಂಬಾ ಕಷ್ಟಪಡಬೇಕು. ಪರಿಸರ ನಾಶದಿಂದ ಈಗಾಗಲೇ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಎಸ್ ಪಿ ಕಚೇರಿ ಸಮೀಪದ ರಸ್ತೆಯಲ್ಲಿ ಮರಗಳನ್ನು ಉಳಿಸಿಕೊಂಡೇ ರಸ್ತೆಯನ್ನು ಅಗಲೀಕರಣ ಮಾಡಬಹುದಿತ್ತು. ರಸ್ತೆ ಅಗಲೀಕರಣ ಮಾಡುವ ನೆಪದಲ್ಲಿ ರಾತ್ರೋರಾತ್ರಿ ಮರಗಳನ್ನು ಕಡಿದಿರುವುದು ಸರಿಯಲ್ಲ. ಇದು ಪರಿಸರಕ್ಕೆ ಮಾರಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Key words: Night, traffic, Bandipur, Pramodadevi Wodeyar