ಮೈಸೂರು,ಡಿಸೆಂಬರ್,26,2024 (www.justkannada.in): ಕೆ ಆರ್ ಎಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರಿಡಲು ಸಹಮತ ವ್ಯಕ್ತಪಡಿಸಿರುವ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ ರಾಜ್ಯ ಬಿಜೆಪಿ ಒಬಿಸಿ ರಾಜ್ಯಾಧ್ಯಕ್ಷ ರಘು ಕೌಟಿಲ್ಯ, ಪ್ರತಾಪ್ ಸಿಂಹ ಬಕೆಟ್ ಹಿಡಿಯುವುದನ್ನು ಬಿಡಬೇಕು ಎಂದು ಹರಿಹಾಯ್ದಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಘು ಕೌಟಿಲ್ಯ, ಕೆಆರ್ ಎಸ್ ರಸ್ತೆಗೆ ಸಿದ್ದರಾಮಯ್ಯ ಹೆಸರಿಡಬೇಕು ಎಂದು ಪ್ರತಾಪ್ ಸಿಂಹ ಹೇಳಿಕೆ ನೀಡಿರುವುದು ಬಕೆಟ್ ಹಿಡಿದಂತೆಯೇ. ಪ್ರತಾಪ್ ಸಿಂಹ ಯಾವ ಉದ್ದೇಶಕ್ಕಾಗಿ ಬಕೆಟ್ ಹಿಡಿಯುತ್ತಿದ್ದಾರೋ ಗೊತ್ತಿಲ್ಲ. ಯಾರನ್ನು ಓಲೈಕೆ ಮಾಡಲು ಹೊರಟಿದ್ದಾರೋ ಗೊತ್ತಿಲ್ಲ. ಕೆ ಆರ್ ಎಸ್ ರಸ್ತೆಗೆ ಸಿದ್ದರಾಮಯ್ಯ ಹೆಸರಿಡಲು ಪ್ರತಾಪ್ ಸಿಂಹ ಆಗ್ರಹಿಸಿರುವುದು ಬಕೆಟ್ ಹಿಡಿದಂತೆ ಎಂದು ಕಿಡಿಕಾರಿದರು.
ಸಿಎಂ ಸಿದ್ದರಾಮಯ್ಯ ಅವರ ಮೇಲೆ ಈಗ ಕಳಂಕವಿದೆ. ಇಂತಹ ಸಂದರ್ಭದಲ್ಲಿ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ರಸ್ತೆ ಎಂದು ಹೆಸರಿಡಲು ಮುಂದಾಗಿರುವುದು ಸರಿಯಲ್ಲ. ಸದ್ಯಕ್ಕೆ ಮಹಾನಗರ ಪಾಲಿಕೆ ಸದಸ್ಯರು ಇಲ್ಲ. ಮಹಾನಗರ ಪಾಲಿಕೆ ಕೌನ್ಸಿಲ್ ಸಭೆ ನಿರ್ಣಯ ಕೈಗೊಳ್ಳದೇ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಆದರೂ ಕೆಲವರು ಓಲೈಕೆಗಾಗಿ ಸಿದ್ದರಾಮಯ್ಯ ರಸ್ತೆ ಎಂದು ಹೆಸರಿಡಲು ಮುಂದಾಗಿದ್ದಾರೆ. ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ತಿಳಿಸಿದರು.
ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ರಸ್ತೆ ಎಂದು ನಾಮಕರಣ ಹಾಸ್ಯಾಸ್ಪದ- ಎಂ. ಜಿ ಮಹೇಶ್
ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ವಕ್ತಾರ ಎಂ. ಜಿ ಮಹೇಶ್ ಮಾತನಾಡಿ, ಸಿಎಂ ಸಿದ್ದರಾಮಯ್ಯ, ಮುಡಾ ಹಗರಣದಲ್ಲಿ A1 ಆರೊಪಿಯಾಗಿದ್ದಾರೆ. ಅವರ ಮೇಲೆ ಲೋಕಾಯುಕ್ತಾದಲ್ಲಿ 116 ಕೇಸ್ ಗಳಿವೆ. ಸಿದ್ದರಾಮಯ್ಯ ಗುರುತರ ಆರೋಪ ಹೊತ್ತಿದ್ದಾರೆ. ನೂರಾರು ವರ್ಷಗಳ ಇತಿಹಾಸ ಇರುವ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ರಸ್ತೆ ಎಂದು ಮರುನಾಮಕರಣ ಮಾಡಲು ಕೆಲವರು ಮುಂದಾಗಿದ್ದಾರೆ. ಇದು ಹಾಸ್ಯಾಸ್ಪದ ಆಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮೈಸೂರಿನ ರಿಂಗ್ ರಸ್ತೆಗೆ ಎಸ್.ಎಂ ಕೃಷ್ಣ ಹೆಸರಿಡಲು ಶಾಸಕ ಎಲ್ ನಾಗೇಂದ್ರ ಆಗ್ರಹ
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಗರ ಘಟಕದ ಅಧ್ಯಕ್ಷ, ಮಾಜಿ ಶಾಸಕ ಎಲ್ ನಾಗೇಂದ್ರ ಮೈಸೂರಿನ ರಿಂಗ್ ರಸ್ತೆಗೆ ಎಸ್.ಎಂ ಕೃಷ್ಣ ಹೆಸರಿಡಬೇಕು. ರಿಂಗ್ ರಸ್ತೆ ನಿರ್ಮಾಣಕ್ಕೆ ಎಸ್.ಎಂ ಕೃಷ್ಣ ಅವರ ಕೊಡುಗೆ ಅಪಾರವಾಗಿದೆ. ಹಾಗಾಗಿ ಅವರ ಹೆಸರಿಡಬೇಕು ಎಂದು ನಾವು ಪಾಲಿಕೆ ಆಯುಕ್ತರಿಗೆ ಮನವಿ ಮಾಡುತ್ತೇವೆ ಎಂದರು.
ಕೆ.ಆರ್.ಎಸ್ ರಸ್ತೆಗೆ( ಪ್ರಿನ್ಸಸ್ ರಸ್ತೆ) ಸಿಎಂ ಸಿದ್ದರಾಮಯ್ಯ ಹೆಸರಿಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಲ್.ನಾಗೇಂದ್ರ, ಈ ಹಿಂದೆ ಪ್ರಿನ್ಸೆಸ್ ರಸ್ತೆ ಅಂತ ಇತ್ತು. ರಾಜಕುಮಾರಿ ಟಿಬಿ ಕಾಯಿಲೆಯಿಂದ ತೀರಿ ಹೋದ ಕಾರಣ ಯಾರು ಇನ್ನೂ ಈ ಕಾಯಿಲೆಯಿಂದ ಸಾಯಬಾರದು ಎಂದು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ 100 ಎಕರೆ ಜಾಗದಲ್ಲಿ ಪಿಕೆಟಿಬಿ ಆಸ್ಪತ್ರೆ ಕಟ್ಟಿಸಿದ್ರು. ರಾಜಕುಮಾರಿ ನೆನಪಿಗೆ ಆಸ್ಪತ್ರೆಯಿರುವ ರಸ್ತೆಗೆ ಪ್ರಿನ್ಸೆಸ್ ರಸ್ತೆ ( ರಾಜಕುಮಾರಿ ರಸ್ತೆ) ಎಂದು ನಾಮಕರಣ ಮಾಡಿದರು. ಈಗ ಅದೇ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಅಂತ ಹೆಸರಿಡಲು ಹೊರಟಿದ್ದಾರೆ. ಇಲ್ಲಿನ ಸ್ಥಳೀಯ ಶಾಸಕರೇ ಸಿದ್ದರಾಮಯ್ಯ ಹೆಸರನ್ನು ಸೂಚಿಸಿದ್ದಾರೆ.
ಸಿದ್ದರಾಮಯ್ಯ ಮೈಸೂರಿನವರು 2 ಬಾರಿ ಸಿಎಂ ಆಗಿರುವವರು ಅವರ ಬಗ್ಗೆ ಗೌರವಿದೆ. ಮೈಸೂರಿನಲ್ಲಿ ಸಾಕಷ್ಟು ಬೇರೆ ಬೇರೆ ರಸ್ತೆಗಳಿವೆ, ಬಡಾವಣೆಗಳಿವೆ. ಅಲ್ಲಿಗೆ ಸಿದ್ದರಾಮಯ್ಯ ಹೆಸರು ಇಡಲಿ ನಮ್ಮ ಅಭ್ಯಂತರ ಇಲ್ಲ. ಸಾಮಾನ್ಯವಾಗಿ ಸಾಧನೆ ಮಾಡಿದ ವ್ಯಕ್ತಿಗೆ ಮರಣ ನಂತರ ಹೆಸರು ಇಡ್ತಾರೆ. ಹೆಸರು ಬದಲಾವಣೆ ವಿಚಾರ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲ ಅನ್ನಿಸುತ್ತೆ. ಈ ವಿಚಾರ ಗೊತ್ತಾದರೆ ಅವರೇ ಒಪ್ಪಲ್ಲ ಅನ್ನಿಸುತ್ತೆ. ನಮ್ಮ ಒತ್ತಾಯ ಇಷ್ಟೇ ಆ ರಸ್ತೆಗೆ ಸಿದ್ದರಾಮಯ್ಯ ಹೆಸರು ಬೇಡ ಬೇರೆ ಯಾವುದೇ ರಸ್ತೆಗಾದರೂ ಹೆಸರಿಡಲಿ ಎಂದು ಹೇಳಿದರು.
Key words: Pratap Simha, bucket, Raghu Kautilya, mysore