ಮೈಸೂರು, ಜುಲೈ 02, 2023 (www.justkannada.in): ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ 2023-24ನೇ ಸಾಲಿನಲ್ಲಿ ಹೊಸದಾಗಿ 13 ಆನ್ಲೈನ್ ಶಿಕ್ಷಣ ಕ್ರಮಗಳನ್ನು ಪ್ರಾರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮುಕ್ತ ವಿವಿ ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ತಿಳಿಸಿದರು.
ಇಂದು ನಡೆದ ವಿವಿ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಕಳೆದ ಒಂದು ವರ್ಷದಲ್ಲಿ ನಮ್ಮ ವಿಶ್ವವಿದ್ಯಾನಿಲಯದ ಅಧ್ಯಾಪಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಸುಮಾರು 15 ಸಂಶೋಧನಾ ಪ್ರಬಂಧಗಳನ್ನು ‘Peer reviewed ಜರ್ನಲ್ ಗಳಲ್ಲಿ ಪ್ರಕಟಿಸಿದ್ದಾರೆ. ಅಂದಾಜು 231 ಸಂಶೋಧನಾ ಪ್ರಬಂಧಗಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಮಂಡಿಸಲಾಗಿದೆ. ಇಂತಹ 104 ಸಂಶೋಧನ ಸ್ಕೋಪರ್ಸ್ ನಂತಹ ಅಂತರರಾಷ್ಟ್ರೀಯ ಡೇಟಾಬೇಸ್ ನಲ್ಲಿಇಂಡೆಕ್ಸ್ ನಲ್ಲಿ ಮಂಡಿಸಲಾಗಿದೆ ಎಂದು ಹೇಳಿದರು.
ನಮ್ಮ ವಿಶ್ವವಿದ್ಯಾನಿಲಯದ ಬೋಧಕರು ಸಾರ್ವಜನಿಕ ಕೈಗಾರಿಕಾ ಸಂಸ್ಥೆಗಳಿಗೆ ಮತ್ತು ಹಲವಾರು ಉತ್ಪಾದನಾ ಸಂಸ್ಥೆಗಳಿಗೆ ಸಂಶೋಧನಾ ಸಲಹೆಗಾರರಾಗಿ ಸೇವೆ ನೀಡುತ್ತಿದ್ದಾರೆ. ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಸಂಸ್ಥೆಗಳ ಅನುದಾನಿತ ಸಂಶೋಧನಾ ಯೋಜನೆಗಳಿಗೆ ಸಂಶೋಧನಾ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಅತ್ಯುತ್ತಮ ಕಾರ್ಯದಲ್ಲಿ ನಿರತರಾಗಿರುವ ನಮ್ಮ ಬೋಧಕರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇದಲ್ಲದೆ ನಮ್ಮ ವಿದ್ಯಾರ್ಥಿಗಳು ಹಾಗೂ ಇನ್ನಿತರ ಬೋಧಕರು ಸಹ ಸಂಶೋಧನಾ ವಿನಿಮಯ ಕಾರ್ಯಕ್ರಮಗಳ ಪ್ರಯೋಜನವನ್ನು ಸಹ ಪಡೆದಿದ್ದಾರೆ. ಈ ರೀತಿಯ ಸಂಶೋಧನಾ ಏನಿಮಯ ಕಾರ್ಯಕ್ರಮಗಳಿಂದಾಗಿ ಮುಂಬರುವ ದಿನಗಳಲ್ಲಿ ಹೆಚ್ಚುವರಿ ಸಂಶೋಧನಾ Txtra Mtural Projeet ಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ತಿಳಿಸಿದರು.
ಮುಕ್ತ ವಿಶ್ವವಿದ್ಯಾನಿಲಯದ ಸಂಶೋಧನಾ ಸೂಚ್ಯಂಕವು “h index 9ಕ್ಕೆ ಏರಿಕೆಯಾಗಿದೆ. ಅಲ್ಲದೆ, ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವಾರು ಅಧ್ಯಾಪಕರುಗಳಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಮಾನ್ಯತೆ ಮತ್ತು ಗೌರವಗಳು ಲಭಿಸಿರುವುದು ಹರ್ಷದಾಯಕ ವಿಷಯವಾಗಿದೆ. ವಿಶ್ವವಿದ್ಯಾಲಯದಲ್ಲಿ ಕಳೆದ ಒಂದು ವರ್ಷದಲ್ಲಿ 27 ಕ್ಕಿಂತ ಅಧಿಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಮ್ಮೇಳನಗಳನ್ನು ಏರ್ಪಡಿಸಲಾಗಿದೆ ಹಾಗೂ ವಿವಿಧ ವಿಶ್ವವಿದ್ಯಾನಿಲಯಗಳು, ಉನ್ನತ ಶಿಕ್ಷಣ ಸಂಸ್ಥೆಗಳು, ಸಂಶೋಧನಾ ಪ್ರಯೋಗಾಲಯಗಳು ಹಾಗೂ ಕೈಗಾರಿಕಾ ಸಂಸ್ಥೆಗಳೊಡನೆ 30ಕ್ಕೂ ಅಧಿಕ ಶೈಕ್ಷಣಿಕ ಮತ್ತು ಸಂಶೋಧನೆಗಾಗಿ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.