ಪತ್ರಕರ್ತರ ಕ್ಷೇಮನಿಧಿಗೆ ನೂರು ಕೋಟಿ ನೀಡಲು ಒತ್ತಾಯ

ರಾಜ್ಯ ಸಮ್ಮೇಳನ ನಿರ್ಣಯ ಜಾರಿಗೆ ಕೆಯುಡಬ್ಲ್ಯೂಜೆ ಆಗ್ರಹ

ಕಲಬುರಗಿ, 24, 01, 2022 (www.justkannada.in): ಇದೇ ಜನೇವರಿ 3 ಮತ್ತು 4 ರಂದು ಕಲಬುರಗಿ ಯಲ್ಲಿ ನಡೆದ ಪತ್ರಕರ್ತರ 36ನೇ ರಾಜ್ಯ ಸಮ್ಮೇಳನದಲ್ಲಿ ತೆಗೆದುಕೊಂಡ ಮೂರು ನಿರ್ಣಯಗಳನ್ನು ಕಾರ್ಯರೂಪಕ್ಕೆ ಬರಲು ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.

ಸಮ್ಮೇಳನದ ಯಶಸ್ವಿ ಹಿನ್ನೆಲೆಯಲ್ಲಿ ಕಲಬುರಗಿ ಪತ್ರಕರ್ತರು, ಜಿಲ್ಲಾಡಳಿತ ಹಾಗೂ ಸಹಕಾರ ನೀಡಿದ ಎಲ್ಲಾ ಜನಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸಲು ಆಗಮಿಸಿದ ಅವರು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಪತ್ರಕರ್ತರ ಕ್ಷೇಮ ನಿಧಿಗೆ 100ಕೋಟಿ ನಿಧಿ ಸ್ಥಾಪನೆ, ಕಲಬುರ್ಗಿಯಲ್ಲಿ ವಾರ್ತಾ ಇಲಾಖೆಯ ನಿರ್ದೇಶನಾಲಯ ಸ್ಥಾಪನೆ ಹಾಗೂ ಸ್ಥಳೀಯ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳಿಗೆ ತಾರತಮ್ಯ ಇಲ್ಲದೆ ಜಾಹೀರಾತು ನೀಡಬೇಕು ಎಂಬ ನಿರ್ಣಯಗಳನ್ನು ಸಮ್ಮೇಳನದಲ್ಲಿ ಅಂಗೀಕರಿಸಲಾಗಿದ್ದು, ಅದನ್ನು ಜಾರಿಗೆ ತರಲು ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು ಎಂದು ಸ್ಪಷ್ಟಪಡಿಸಿದರು.

ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ಸಮ್ಮೇಳನದ ಸವಿನೆನಪುಗಳು, ಗೋಷ್ಠಿ ವಿವರ ಸೇರಿದಂತೆ ಹಲವು ವಿಷಯಗಳು ಒಳಗೊಂಡ ಸಂಚಿಕೆ ಪ್ರಕಟವಾಗಬೇಕಿರುವ ಹಿನ್ನೆಲೆಯಲ್ಲಿ ಮುಂದಿನ ಕೆಲವು ದಿನಗಳಲ್ಲೇ ಹೊರ ಬರಲಿದೆ ಎಂದು ತಿಳಿಸಿದರು.

ಕೊರೊನಾ ಸಮಯದಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ಅದರಲ್ಲೂ ಎರಡ್ಮೂರು ಸಲ ಮುಂದೂಡಲ್ಪಟ್ಟು ಕಲಬುರಗಿ ಯಲ್ಲಿ ನಡೆದ ಪತ್ರಕರ್ತರ 36ನೇ ರಾಜ್ಯ ಸಮ್ಮೇಳನ ನಿರೀಕ್ಷೆ ಮೀರಿ ಯಶಸ್ವಿಯಾಗಿದೆ.‌ ಹಿಂದಿನ ಸಮ್ಮೇಳನದಲ್ಲಿ ಭಾಗವಹಿಸಿದ್ದ, ಎರಡು ಪಟ್ಟು ಹೆಚ್ಚು ಪತ್ರಕರ್ತರು ಕಲಬುರಗಿ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಗಡಿ ಭಾಗದ ತೊಗರಿ ಬೀಡಿನಲ್ಲಿ ನಡೆದ ಸಮ್ಮೇಳನ ಹಲವು ಹೊಸತು ಮತ್ತು ಐತಿಹಾಸಿಕತೆಗೆ ಸಾಕ್ಷಿಯಾಯಿತು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.

ಬ್ರ್ಯಾಂಡ್ ಕಲಬುರ್ಗಿ ಕಾರ್ಯಕ್ರಮ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ದೃಷ್ಟಿಯಿಂದ ರೂಪಿಸಿದ ಗೋಷ್ಠಿಯಾಗಿತ್ತು.
ಅದರಲ್ಲಿ ಕಲಬುರಗಿ ಅಂದು, ಇಂದು, ಮುಂದೆ ಎಂಬ ವಿಷಯದ ಚರ್ಚೆ ಮಾದರಿಯಾಗಿ ನಡೆಯಿತು. ಇದನ್ನೆಲ್ಲ ದಾಖಲೀಕರಣ ಮಾಡುವ ಮಾಡಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಸಮ್ಮೇಳನದಲ್ಲಿ ಮೂವತ್ತು ಜಿಲ್ಲೆಯಿಂದಲೂ ಪತ್ರಕರ್ತರು ಭಾಗವಹಿಸಿದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ, ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡದ್ದು ಸಮ್ಮೇಳನ ಯಶಸ್ವಿಗೆ ಸಾಕ್ಷಿಯಾಗಿದೆ ಎಂದರು.

ಸಮ್ಮೇಳನದಲ್ಲಿ ಡಿಜಿಟಲ್‌ ಮಾಧ್ಯಮದ ಸ್ಥಿತ್ಯಂತರಗಳು, ಮಾಧ್ಯಮ ಮತ್ತು ಸರ್ಕಾರ ಹಾಗೂ ಸವಾಲುಗಳು, ಮಹಿಳೆ ಮತ್ತು ಸವಾಲುಗಳು ಗೋಷ್ಠಿಗಳಲ್ಲಿ ಗುಣಮಟ್ಟದ ಚರ್ಚೆಗಳು ನಡೆದಿವೆ ಎಂದರು.

ಸ್ಥಳಿಯ ಸಣ್ಣ ಪತ್ರಿಕೆಯಿಂದ ರಾಜ್ಯ ಮಟ್ಟದ ಪತ್ರಿಕೆಗಳ ತನಕ, ಪ್ರತಿಭಾವಂತ ಪತ್ರಕರ್ತರಿಂದ ಹಿಡಿದು ಹಿರಿಯ ಪತ್ರಕರ್ತರ ತನಕ ಗುರುತಿಸಿ ಕೆಯುಡಬ್ಲ್ಯೂಜೆ
ಪ್ರಶಸ್ತಿ ನೀಡಿ ಸನ್ಮಾನಿಸಿ ಪುರಸ್ಕರಿಸಿರುವುದು ಹೆಮ್ಮೆ ತರುವಂತಾಗಿದೆ ಎಂದು ತಗಡೂರು ವಿವರಿಸಿದರು.

ಸಮ್ಮೇಳನ ಅಚ್ಚುಕಟ್ಟಾಗಿ ನಡೆಯಲು ಸ್ಥಳೀಯರು ನೀಡಿದ ಸಹಕಾರ, ಜನಪ್ರತಿನಿಧಿಗಳು, ಜಿಲ್ಲಾಡಳಿತ ಮತ್ತು ಸಂಘ ಸಂಸ್ಥೆಗಳ ಸಹಕಾರ ಕಾರಣ.
ಪತ್ರಕರ್ತರ ಸಂಘದ ಕಲಬುರಗಿ ಜಿಲ್ಲಾ ಘಟಕ ಕೂಡ ತನ್ನ ಶಕ್ತಿ ಮೀರಿ ಸಮ್ಮೇಳನ ಅರ್ಥಪೂರ್ಣವಾಗಿಸಲು ಪ್ರಯತ್ನಿಸಿದ. ಅವರೆಲ್ಲರಿಗೂ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಭಿನಂದನೆಗಳು ಸಲ್ಲುತ್ತವೆ ಎಂದರು.

ಕಲಬುರಗಿ ಜಿಲ್ಲಾ ಸಂಘದ
ಅಧ್ಯಕ್ಷ ಭವಾನಿಸಿಂಗ್ ಠಾಕೂರ ಮಾತನಾಡಿ, ಸಮ್ಮೇಳನ ಯಶಸ್ವಿಯಾಗಲು ಎಲ್ಲರ ಸಹಕಾರ ಹಾಗೂ ಶ್ರಮದಿಂದ ಸಾಧ್ಯವಾಗಿದೆ. ರಾಜ್ಯ ಸಮಿತಿ ಕೂಡಾ ಬೆನ್ನಲುಬಾಗಿ ನಿಂತಿರುವುದು ಸಹ ಮರೆಯಲಾರದ್ದು ಎಂದು ಹೇಳಿದರು.

ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಿಂದ್ರಪ್ಪ ಅವಂಟಿ, ರಾಜ್ಯ ಸಮಿತಿ ಸದಸ್ಯರಾದ ಹಣಮಂತರಾವ ಭೈರಾಮಡಗಿ, ದೇವಿಂದ್ರಪ್ಪ ಕಪನೂರ ಸೇರಿದಂತೆ ಮುಂತಾದವರಿದ್ದರು.

ಶ್ರದ್ಧಾಂಜಲಿ:
ಇದೇ ಸಂದರ್ಭದಲ್ಲಿ ಅಪಘಾತದಲ್ಲಿ ನಿಧನರಾದ ವಿಜಯವಾಣಿ ಹಿರಿಯ ಪತ್ರಕರ್ತರಾದ ಗಂಗಾಧರ ಮೂರ್ತಿ ಹಾಗೂ ಹಾವೇರಿಯ ಹಿರಿಯ ಪತ್ರಕರ್ತ ಜಿ.ಎಂ.‌ಕುಲಕರ್ಣಿ ಅವರ ನಿಧನಕ್ಕೆ ಎರಡು ನಿಮಿಷಗಳ ಮೌನಾಚರಣೆ ಮಾಡಿ ಶ್ರದ್ದಾಂಜಲಿ ಸಲ್ಲಿಸಲಾಯಿತು.