ಬೆಂಗಳೂರು,ಏಪ್ರಿಲ್,04,2021(www.justkannada.in) : ರಾಜ್ಯ ಬಿಜೆಪಿ ಸರ್ಕಾರ ತನ್ನ ಪ್ರತಿಷ್ಠೆಯನ್ನು ಬದಿಗಿಟ್ಟು ತಕ್ಷಣ ಕೆಎಸ್ಆರ್ಟಿಸಿ ಕಾರ್ಮಿಕರ ಜೊತೆ ಮಾತುಕತೆ ನಡೆಸಿ ಸಮಸ್ಯೆಯನ್ನು ಸೌಹಾರ್ದತೆಯಿಂದ ಬಗೆಹರಿಸಿ, ಸಾರಿಗೆ ವ್ಯವಸ್ಥೆಯಿಲ್ಲದೆ ಕಷ್ಟನಷ್ಟಕ್ಕಿಡಾಗಿರುವ ಜನತೆಯನ್ನು ರಕ್ಷಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.ಕೆಎಸ್ಆರ್ಟಿಸಿ ನೌಕರರ ಬೇಡಿಕೆಗಳನ್ನು ಈಡೇರಿಸಲಾಗದಿರುವುದಕ್ಕೆ ರಾಜ್ಯ ಬಿಜೆಪಿ ಸರ್ಕಾರ ನೀಡುತ್ತಿರುವ ಆರ್ಥಿಕ ಸಂಕಷ್ಟ ಸ್ವಯಂಕೃತ ಅಪರಾಧ. ತನ್ನ ದುರಾಡಳಿತ ಮತ್ತು ಕೇಂದ್ರದ ಗುಲಾಮಗಿರಿಯಿಂದಾಗಿ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಕಿಡಿಕಾರಿದ್ದಾರೆ.
ಕಾರ್ಮಿಕ ಸಂಘದ ನಾಯಕರ ಜೊತೆ ಕೂತು ಅವರ ಮನವೊಲಿಸಿ ಸಮಸ್ಯೆಯನ್ನು ಬಗೆಹರಿಸಬೇಕಾದ ರಾಜ್ಯ ಬಿಜೆಪಿ ಸರ್ಕಾರ ಖಾಸಗಿ ಬಸ್ ಓಡಿಸುವ, ಎಸ್ಮಾ ಜಾರಿಗೊಳಿಸುವ ಬೆದರಿಕೆಯೊಡ್ಡಿ ಸಂಘರ್ಷಕ್ಕೆ ದಾರಿಮಾಡಿಕೊಡುತ್ತಿರುವುದು ದುರದೃಷ್ಟಕರ ಎಂದು ಬೇಸರವ್ಯಕ್ತಪಡಿಸಿದ್ದಾರೆ.
ಕಳೆದ ಬಾರಿ ಕೆಎಸ್ಆರ್ಟಿಸಿ ನೌಕರರ ಮುಷ್ಕರದ ಸಂದರ್ಭದಲ್ಲಿ ಅವರ ಬೇಡಿಕೆಗಳ ಬಗ್ಗೆ ಸಮ್ಮತಿಸಿದಾಗಲೇ ಅದರ ಪರಿಣಾಮವನ್ನು ರಾಜ್ಯ ಬಿಜೆಪಿ ಸರ್ಕಾರ ಯೋಚಿಸಿ ನಿರ್ಧಾರ ಕೈಗೊಳ್ಳಬೇಕಿತ್ತು. ಆ ಕ್ಷಣದಲ್ಲಿ ಸುಳ್ಳು ಆಶ್ವಾಸನೆ ನೀಡಿ ನಂತರ ಮಾತು ತಪ್ಪಿರುವುದೇ ಈಗಿನ ಸಂಘರ್ಷಕ್ಕೆ ಕಾರಣ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.
ಕೊರೊನಾ ರೋಗದಿಂದ ತತ್ತರಿಸಿಹೋಗಿರುವ ರಾಜ್ಯದ ಜನತೆ ಕೆಎಸ್ಆರ್ಟಿಸಿ ನೌಕರರ ಮುಷ್ಕರದಿಂದಾಗಿ ದುಪ್ಪಟ್ಟು ಕಷ್ಟ-ನಷ್ಟಕ್ಕೀಡಾಗುತ್ತಿರುವುದಕ್ಕೆ ರಾಜ್ಯದ ಅಸಮರ್ಥ-ಭ್ರಷ್ಟ ಬಿಜೆಪಿ ಸರ್ಕಾರವೇ ಹೊಣೆಯಾಗಿದೆ ಎಂದಿದ್ದಾರೆ.

ಆಂತರಿಕ ತಿಕ್ಕಾಟ, ಅಸಾಮರ್ಥ್ಯ ಮತ್ತು ಭ್ರಷ್ಟಾಚಾರಗಳಿಂದಾಗಿ ಹಾದಿತಪ್ಪಿರುವ ರಾಜ್ಯದ ಬಿಜೆಪಿ ಸರ್ಕಾರದ ಪಾಪದ ಫಲವನ್ನು ಜನತೆ ಅನುಭವಿಸಿದಂತಾಗಿದೆ. ಇದರ ವಿರುದ್ಧ ಸ್ಪಷ್ಟ ಸಂದೇಶವನ್ನು ಉಪಚುನಾವಣೆಯಲ್ಲಿ ಮತದಾರರು ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
key words : Prestige-Immediately-KSRTC-Workers-problem-goodwill-Solve-Former CM-Siddaramaiah-Demand